ಬಿಜೆಪಿ ಸರಕಾರಗಳು ರೈತಾಪಿ ಜನರ ಮೇಲೆ ದಮನಚಕ್ರ ನಿಲ್ಲಿಸಬೇಕು -ಸಿಪಿಐಎಂ ಆಗ್ರಹ

ದೇಶವ್ಯಾಪಿ ಮುಷ್ಕರ ಮತ್ತು ಪ್ರತಿಭಟನೆಗಳ ಭಾರೀ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ  ಸಿಪಿಐಎಂ ಪೊಲಿಟ್ ಬ್ಯುರೊ

ದೆಹಲಿ : ದೇಶಾದ್ಯಂತ ಕಾರ್ಮಿಕರು, ರೈತಾಪಿಗಳು, ಕೃಷಿ ಕೂಲಿಕಾರರು ಕೇಂದ್ರ ಸರಕಾರದ ದೇಶ-ವಿರೋಧಿ ಜನ-ವಿರೋಧಿ ಧೋರಣೆಗಳ ವಿರುದ್ಧ, ನಿರ್ದಿಷ್ಟವಾಗಿ, ವ್ಯಾಪಕ ಪ್ರಮಾಣದ ಖಾಸಗೀಕರಣ ಮತ್ತು ರಾಷ್ಟ್ರೀಯ ಆಸ್ತಿಗಳ ಲೂಟಿ, ಕಾರ್ಮಿಕ ಕಾನೂನುಗಳ ರದ್ಧತಿ ಮತ್ತು ಹೊಸ ಕೃಷಿ ಕಾನೂನುಗಳ ವಿರುದ್ಧ ಯಶಸ್ವೀ ಪ್ರತಿಭಟನೆಗಳನ್ನು ನಡೆಸಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಅವರೆಲ್ಲರನ್ನು ಅಭಿನಂದಿಸಿದೆ. ಕೇಂದ್ರೀಯ ಕಾರ್ಮಿಕ ಸಂಘಟನೆಗಳು ನವಂಬರ್ 26ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದವು. ರೈತ ಮತ್ತು ಕೃಷಿ ಕೂಲಿಕಾರ ಸಂಘಟನೆಗಳು ನೀಡಿದ ಕರೆಯಂತೆ, ತಮ್ಮ ಪ್ರತಿಭಟನೆಗಳನ್ನು  ಇಂದು ಕೂಡಾ ಮುಂದುವರೆಸಿದ್ದಾರೆ.

ದೆಹಲಿಯ ಜಂತರ್ – ಮಂತರ್ ನಲ್ಲಿ ನಡೆದ ಅಖಿಲ ಭಾರತ ಮುಷ್ಕರದ ದೃಶ್ಯ

ಈ ಪ್ರತಿಭಟನೆಗಳು, ತೀವ್ರ ದಮನಚಕ್ರ, ಬೆದರಿಕೆಗಳು ಮತ್ತು ದೇಶಾದ್ಯಂತ ಹಲವಾರು ಮುಖಂಡರು, ಕಾರ್ಯಕರ್ತರುಗಳ ಬಂಧನಗಳು, ಅದೂ ವಿಶೇಷವಾಗಿ ಬಿಜೆಪಿಯ ಆಳ್ವಿಕೆಯ ರಾಜ್ಯಗಳಲ್ಲಿ ನಡೆದರೂ, ಅವನ್ನೆಲ್ಲ ಲೆಕ್ಕಿಸದೆ ಯಶಸ್ವಿಯಾಗಿ ನಡೆದಿವೆ. ಸಂಸತ್ತಿನ ಎದುರು ಪ್ರತಿಭಟನೆ ನಡೆಸಲು ದಿಲ್ಲಿಯತ್ತ ಬರುತ್ತಿದ್ದ ರೈತರು ಮತ್ತು ಕೃಷಿ ಕೂಲಿಕಾರರು ಅಲ್ಲಿಗೆ ತಲುಪದಂತೆ ತಡೆಯಲು ದಿಲ್ಲಿಗೆ ಬರುವ ಎಲ್ಲ ರಾಷ್ಟ್ರೀಯ ಹೆದ್ದಾರಿಗಳ ಪ್ರವೇಶ ಸ್ಥಳಗಳಲ್ಲಿ ಭಾರೀ ತಡೆಗೋಡೆಗಳನ್ನು ಹಾಕಲಾಗಿದೆ. ಪ್ರತಿಭಟನಾಕಾರರ ಮೇಲೆ, ಅಶ್ರುವಾಯು ಪ್ರಯೋಗಿಸಲಾಗಿದೆ, ಅಲ್ಲಿ ಚಳಿಗಾಳಿ ಬೀಸುತ್ತಿದ್ದರೂ ಭಾರೀ ಪ್ರಮಾಣದಲ್ಲಿ ಜಲಪ್ರಹಾರ ನಡೆಸಲಾಗಿದೆ. ಅಲ್ಲೆಲ್ಲಾ ಪ್ರತಿಭಟನಾಕಾರರು ಹೆದ್ದಾರಿಗಳನ್ನು ಅಡ್ಡಗಟ್ಟಿದ್ದಾರೆ.

ಕೇಂದ್ರ ಸರಕಾರ ಮತ್ತು ದಿಲ್ಲಿ ಸುತ್ತಲಿನ ಬಿಜೆಪಿ ರಾಜ್ಯ ಸರಕಾರಗಳು ತಮ್ಮ ಈ ದಮನವನ್ನು ನಿಲ್ಲಿಸಬೇಕು ಮತ್ತು ರೈತರು ಮತ್ತು ಕೃಷಿ ಕೂಲಿಕಾರರು ನವಂಬರ್ 27ರಂದು ಕೃಷಿ ಕಾನೂನುಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವ ತಮ್ಮ ಸಂವಿಧಾನಿಕ ಖಾತ್ರಿಗಳನ್ನು ಚಲಾಯಿಸಲು ಬಿಡಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ.

ಬೆಂಗಳೂರಿನಲ್ಲಿ ನಡೆದ ಮುಷ್ಕರದಲ್ಲಿ ಬೆಂಬಲ ನೀಡಿದ್ದ ಅಟೋ ಚಾಲಕರ ಸಂಘಟನೆಯ ಹೋರಾಟ ದೃಶ್ಯ

ಕಾರ್ಮಿಕ ಸಂಘಗಳು ಕರೆ ನೀಡಿರುವ ಸಾರ್ವತ್ರಿಕ ಮುಷ್ಕರಕ್ಕೆ ದೇಶಾದ್ಯಂತ ಅಪಾರ ಸ್ಪಂದನೆ ದೊರೆತಿದೆ. ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಮುಷ್ಕರ ಈ ಬಾರಿ ಹೆಚ್ಚು ಪರಿಣಾಮಕಾರಿಯಾಗಿತ್ತು. ಎಲ್ಲ ಪ್ರಮುಖ ಬಂದರುಗಳು, ಹೆಚ್‌.ಎ.ಎಲ್, ಬಿ.ಹೆಚ್‌.ಇ.ಎಲ್, ಬಿ.ಇ.ಎಂ.ಎಲ್, ಬಿ.ಇ.ಎಲ್, ವಿಶಾಖಪಟ್ಟಣಂ, ಸೇಲಂ ಮತ್ತು ಬೊಕಾರೊದ ಉಕ್ಕು ಸ್ಥಾವರಗಳು, ಕಲ್ಲಿದ್ದಲು ಮತ್ತು ಕಬ್ಬಿಣದ ಗಣಿಗಳು, ವಿದ್ಯುತ್ ವಲಯ, ಸಾರ್ವಜನಿಕ ಸಾರಿಗೆ, ಟ್ರಕ್‌ಗಳೂ ಸೇರಿದಂತೆ ರಸ್ತೆ ಸಾರಿಗೆ ವಲಯಗಳ ನೌಕರರು, ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು, ಬೀಡಿ ಕಾರ್ಮಿಕರು, ಅಂಗನವಾಡಿ, ಆಶಾ, ಮಧ್ಯಾಹ್ನದ ಉಟ ಮುಂತಾದ ಸ್ಕೀಮ್ ಕಾರ್ಮಿಕರು , ಜತೆಗೆ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳು, ಐಟಿ ನೌಕರರ ವಿಭಾಗಗಳು ಹಾಗೂ ದೇಶಾದ್ಯಂತ ಕೇಂದ್ರ ಮತ್ತು ರಾಜ್ಯಸರಕಾರಿ ನೌಕರರು ಮುಷ್ಕರದಲ್ಲಿ ಭಾಗವಹಿಸಿದರು ಎಂದು ಪೊಲಿಟ್‌ ಬ್ಯುರೊ ಹೇಳಿದೆ.

 

ಕೇರಳದಲ್ಲಿ ಬಂದ್ ತರಹದ ಸ್ಥಿತಿಯೇ ಏರ್ಪಟ್ಟಿತು. ಸುಮಾರು 1.6 ಕೋಟಿ ಕಾರ್ಮಿಕರು ಮತ್ತು ರೈತಾಪಿ ಜನಗಳು ಪ್ರತಿಭಟನೆಗಳಲ್ಲಿ ಭಾಗವಹಿಸಿದರು. ಪಶ್ಚಿಮ ಬಂಗಾಲದಲ್ಲಿ ಆಳುವ ಟಿಎಂಸಿ ಪಕ್ಷದ ಗೂಂಡಾಗಳು ಮುಷ್ಕರನಿರತ ಕಾರ್ಮಿಕರ ಮೇಲೆ ಹಲ್ಲೆಗಳನ್ನು ನಡೆಸಿದರೂ ಮುಷ್ಕರ ಭಾರೀ ಯಶಸ್ಸು ಕಂಡಿದೆ. ಸಣಬು ಮಿಲ್ಲುಗಳು, ಖಾಸಗಿ ಬಸ್ ಸಾರಿಗೆ, ಉಕ್ಕು ಕಾರ್ಖಾನೆಗಳಲ್ಲಿ ಸಂಪೂರ್ಣ ಮತ್ತು ಸಿಮೆಂಟ್, ಬ್ಯಾಂಕುಗಳು, ವಿಮಾವಲಯ, ಅಲ್ಲದೆ ಸರಕಾರೀ ನೌಕರ ವಲಯದಲ್ಲಿ 80ಶೇ.ದಷ್ಟು ಮುಷ್ಕರ ನಡೆದಿದೆ. ತ್ರಿಪುರಾದಲ್ಲಿ, ಆಳುವ ಬಿಜೆಪಿ ಸರಕಾರದ ಹಲ್ಲೆಗಳು ಮತ್ತು ಎಲ್ಲ ಅಂಗಡಿ ಮುಗ್ಗಟ್ಟುಗಳು ತೆರೆದಿರಬೇಕು, ಎಂದಿನಂತೆ ಕೆಲಸ ನಡೆಸಬೇಕು ಎಂಬ ನಿರ್ದೇಶನದ ಹೊರತಾಗಿಯೂ, ಬಿಜೆಪಿಯ ಸಮಾಜಘಾತುಕ ವ್ಯಕ್ತಿಗಳ ಹಲ್ಲೆಗಳನ್ನೂ ಪ್ರತಿರೋಧಿಸಿ ಪ್ರತಿಭಟನೆ ಸುಮಾರಾಗಿ ಬಂದ್ ಆಗಿಯೇ ಪರಿಣಮಿಸಿತು. ಅದೇ ರೀತಿಯಲ್ಲಿ ಬಿಜೆಪಿ ಆಳ್ವಿಕೆಯ ಅಸ್ಸಾಂ, ಕರ್ನಾಟಕ, ಬಿಹಾರ ಮತ್ತಿತರ ಕಡೆಗಳಲ್ಲೂ ಪ್ರತಿಭಟನೆ ದೊಡ್ಡ ಯಶಸ್ಸು ಕಂಡಿದೆ.

ಬಿಜೆಪಿ ಹತೋಟಿಯಲ್ಲಿರುವ ಕೇಂದ್ರ ಸರಕಾರ ಮತ್ತು ರಾಜ್ಯಸರಕಾರಗಳು ಹರಿಯಬಿಟ್ಟಿರುವ ದಮನವನ್ನು ಬಲವಾಗಿ ಖಂಡಿಸುತ್ತ, ಸಿಪಿಐ(ಎಂ) ಪೊಲಿಟ್‌ಬ್ಯುರೊ, ಭಾರತದ ದುಡಿಯುವ ಜನಗಳ, ಅನ್ನದಾತರು, ಕೃಷಿ ಕೂಲಿಕಾರರು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಇಂತಹ ವ್ಯಾಪಕ ಕ್ರೋಧವನ್ನು ಮತ್ತು ಪ್ರತಿಭಟನೆಯನ್ನು ನೋಡಿದ ಮೇಲಾದರೂ ಕೇಂದ್ರ ಸರಕಾರ ಮತ್ತು ಪ್ರಧಾನ ಮಂತ್ರಿಗಳು, ಈಗ ತಮ್ಮ ರಾಷ್ಟ್ರ-ವಿರೋಧಿ ಮತ್ತು ಕಾರ್ಮಿಕ-ವಿರೋಧಿ ಧೋರಣೆಗಳ ಮರುಪರಿಶೀಲನೆ ನಡೆಸಬೇಕು ಎಂದಿದೆ. ಏಕೆಂದರೆ ಇವು ನಮ್ಮ ಕೋಟ್ಯಂತರ ಜನಗಳ ಜೀವನೋಪಾಯಗಳನ್ನು ಹಾಳುಗೆಡವಿವೆ ಮತ್ತು ದೇಶದ ಮೇಲೆ ಅಪಾರ ಸಂಕಟಗಳನ್ನು ಹೇರಿವೆ ಎಂದು ಅದು ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *