ಬೆಂಗಳೂರು,ಜ.10– ಈ ಹಿಂದೆ ಅನಿವಾರ್ಯ ಮತ್ತು ಅಗತ್ಯವಿದ್ದಾಗ ಮಾತ್ರ ಸುಗ್ರೀವಾಜ್ಞೆ ತರಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಈಗ ಎಲ್ಲ ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತರುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ಬಿಜೆಪಿ ಸರ್ಕಾರದ ಐದು ಕಾಯ್ದೆಗಳು ಅಸಂಖ್ಯಾತ ಸುಳ್ಳುಗಳು ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ತಾವು ಮುಖ್ಯಮಂತ್ರಿಯಾಗಿದ್ದಾಗ ಕೃಷಿಕರಲ್ಲದವರಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಆದರೂ ಸಿದ್ದರಾಮಯ್ಯನವರೇ ಭೂಸುಧಾರಣಾ ಕಾಯ್ದೆಯ 79ಎ ಮತ್ತು 79 ಬಿಗೆ ತಿದ್ದುಪಡಿ ತರಲು ಹೊರಟಿದ್ದರು ಎಂದು ಅಪಪ್ರಚಾರ ಮಾಡುತ್ತಿದ್ದಾರೆ.
ವಿರೋಧ ಪಕ್ಷವಾಗಿ ಕಾಂಗ್ರೆಸ್ ನಿಲುವು ಏನು ಎಂಬುದನ್ನು ಕಿರುಹೊತ್ತಿಗೆಯಲ್ಲಿ ಉಲ್ಲೇಖ ಮಾಡಿದ್ದೇವೆ. ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆಗಳಿಗೆ ತಿದ್ದುಪಡಿ, ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ತಂದಿದೆ. ಕಾಯ್ದೆಗಳು ರೈತರಿಗೆ ಮಾರುಕವಾಗುವುದಿಲ್ಲ ಒಳಿತಾಗುತ್ತದೆ ಎಂದು ಹೇಳುತ್ತಾರೆ.
ಇವುಗಳಲ್ಲಿ ಯಾವುದು ಸತ್ಯ? ಯಾವುದು ಸುಳ್ಳು ಎಂಬ ಅಂಶಗಳನ್ನು ಸೇರಿಸಿ ಕಿರುಹೊತ್ತಿಗೆ ತಂದಿದ್ದೇವೆ. ಬಿಜೆಪಿಯ ಉದ್ದೇಶ ಎಪಿಎಂಸಿಯನ್ನು ಪೂರ್ಣವಾಗಿ ಮುಗಿಸಿಬಿಡುವುದು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಲ್ಲಾ ಕೃಷಿ ನಿಯಂತ್ರಿತ ಮಾರುಕಟ್ಟೆಯನ್ನು ರದ್ದು ಮಾಡುವುದಕ್ಕೆ ಇದು ಸರಿಯಾದ ಸಮಯ ಎಂದು ಹೇಳುತ್ತಾರೆ ಎಂದು ಆರೋಪಿಸಿದರು.
ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಯಾರು ಬೇಕಾದರೂ ಕೃಷಿ ಮಾಡಬಹುದು. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೇ ಭೂ ಒಡೆಯ ಎಂದು ಮಾಡಿದ್ದರು. ಆಗ ಸಾವಿರಾರು ಗೇಣಿದಾರರು ಭೂ ಮಾಲೀಕರಾದರು.
ಈ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಯಾರು ಬೇಕಾದರೂ ಜಮೀನು ಖರೀದಿಸಬಹುದಾಗಿದೆ. ಉದ್ಯಮಿಗಳಾದ ಅದಾನಿ, ಅಂಬಾನಿ ಸೇರಿದಂತೆ ಯಾರೂ ಬೇಕಾದರೂ ಭೂಮಿ ಖರೀದಿಸಬಹುದಾಗಿದೆ. ಇದು ಫ್ಲಡ್ ಗೇಟ್ ತೆರೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಳ್ಳುವನೇ ಭೂಮಿಯ ಒಡೆಯ. ಆದರೆ ಈಗ ಸಣ್ಣ ರೈತರು ಜಮೀನನ್ನು ಮಾರಾಟ ಮಾಡಿ ದೊಡ್ಡ ಕಂಪನಿಯ ಮುಂದೆ ಕೆಲಸ ಮಾಡಲು ಹೋಗುವಂತಾಗುತ್ತಿದೆ. ಇದು ರಿಯಲ್ ಎಸ್ಟೇಟ್‍ಗೆ ಅನುಕೂಲವಾಗುತ್ತದೆ ಎಂದು ಟೀಕಾ ಪ್ರಹಾರ ನಡೆಸಿದರು.