ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯು ತನ್ನ ಶಾಲೆಗಳ ತರಗತಿಯ ಪ್ರವೇಶ ದ್ವಾರದಲ್ಲಿ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ” ಎನ್ನುವ ವಾಕ್ಯದ ಬದಲಿಗೆ “ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ” ಎಂಬ ಪದವನ್ನು ಬದಲಾಯಿಸುವ ನಿರ್ಧಾರವು ಸೋಮವಾರ ಉಭಯ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ವಿಧಾನಸಭೆ ಮತ್ತು ಪರಿಷತ್‌ನಲ್ಲಿ ಪ್ರತಿಪಕ್ಷ ಬಿಜೆಪಿ ಶಾಸಕರು ಇಲಾಖೆ ವಾಕ್ಯವನ್ನು ಬದಲಾವಣೆ ಮಾಡಿದ್ದಕ್ಕಾಗಿ ತೀವ್ರ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಸಚಿವರಿಂದ ವಿವರವಾದ ಹೇಳಿಕೆ ನೀಡುವಂತೆ ಒತ್ತಾಯಿಸಿ ಪರಿಷತ್ತಿನಲ್ಲಿ ಎಂಎಲ್‌ಸಿಗಳು ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಶೂನ್ಯವೇಳೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪಕ್ಷದ ಶಾಸಕ ಬಿ.ವೈ.ವಿಜಯೇಂದ್ರ ಮತ್ತು ಎಂಎಲ್‌ಸಿ ಎನ್.ರವಿಕುಮಾರ್ ಅವರು ಕ್ರಮವಾಗಿ ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ವಿಜಯೇಂದ್ರ ಮಾತನಾಡಿ, ಇಲಾಖೆ ನಡೆಸುತ್ತಿರುವ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ‘ಧೈರ್ಯವಾಗಿ ಪ್ರಶ್ನಿಸಿ’ ಎಂಬ ಪದಗಳನ್ನು ಬದಲಾಯಿಸಲು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮರಾಠರಿಗೆ 10% ಮೀಸಲಾತಿ | ಮಹಾರಾಷ್ಟ್ರ ವಿಧಾನಸಭೆ ಸರ್ವಾನುಮತದಿಂದ ಅಂಗೀಕಾರ
ವಾಕ್ಯಗಳ ಬದಲಾವಣೆ ಮೂಲಕ ಸರ್ಕಾರ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಕಂದಾಯ ಸಚಿವ ಕೃಷ್ಣ ಬೈರೇಗೌಡ, “ಕಾಂಗ್ರೆಸ್ ಸರ್ಕಾರಕ್ಕೆ ಕುವೆಂಪು ಅವರನ್ನು ಗೌರವಿಸುವ ಪಾಠ ಬಿಜೆಪಿಯಿಂದ ಬೇಕಾಗಿಲ್ಲ. ಪಠ್ಯಪುಸ್ತಕದಿಂದ ಕುವೆಂಪು ಅವರ ಅಧ್ಯಾಯವನ್ನು ತೆಗೆದುಹಾಕಿದ್ದು ನೀವೇ (ಬಿಜೆಪಿ). ಇಲ್ಲಿ ರಾಜಕೀಯವನ್ನು ಏಕೆ ತರುತ್ತೀರಿ” ಎಂದು ಪ್ರಶ್ನಿಸಿದ್ದಾರೆ.
“ವಿಧಾನಸೌಧದಲ್ಲಿ ‘ಸರಕಾರಿ ಕೆಲಸ ದೇವರ ಕೆಲಸ’ ಎಂಬ ಘೋಷವಾಕ್ಯವಿದೆ. ಅದನ್ನೂ ತೆಗೆದುಹಾಕಲಾಗುತ್ತದೆಯೇ? ವಸತಿ ಶಾಲೆಗಳಲ್ಲಿ ಪದಗಳನ್ನು ಬದಲಾಯಿಸಲು ಅವರು (ಅಧಿಕಾರಿ) ಯಾರು ಮತ್ತು ಅವರಿಗೆ ಈ ಅಧಿಕಾರ ಕೊಟ್ಟವರು ಯಾರು” ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
ಇದನ್ನೂ ಓದಿ: ಅಮಿತ್ ಶಾ ವಿರುದ್ಧದ ಹೇಳಿಕೆ ವಿವಾದ | ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಜಾಮೀನು
ಶೂನ್ಯವೇಳೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲು ಅವಕಾಶ ನೀಡದಿದ್ದಾಗ ಬಿಜೆಪಿ ಸದಸ್ಯರು ಪರಿಷತ್ತಿನ ಬಾವಿಯಲ್ಲೇ ಪ್ರತಿಭಟನೆ ನಡೆಸಿದ್ದಾರೆ. ಸರಿಯಾದ ಪ್ರಕ್ರಿಯೆಯ ನಂತರ ಅದನ್ನು ಬೇರೆ ನಿಬಂಧನೆಯಡಿಯಲ್ಲಿ ಚರ್ಚೆಗೆ ತೆಗೆದುಕೊಳ್ಳುವಂತೆ ಅವರನ್ನು ಕೇಳಲಾಯಿತು. ಈ ನಡುವೆ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರ ಮನವಿಯನ್ನು ತಿರಸ್ಕರಿಸಲಾಯಿತು. ಒಂದು ಹಂತದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎಂಎಲ್‌ಸಿಗಳು ಪರಸ್ಪರರ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಸದನದಲ್ಲಿ ತೀವ್ರ ಗದ್ದಲದ ಉಂಟಾದ ಕಾರಣ ಸದನವನ್ನು ಮುಂದೂಡಲಾಯಿತು.
ಅದಾಗ್ಯೂ, ಶಾಲೆಯ ಪ್ರವೇಶ ದ್ವಾರದಲ್ಲಿ ವಾಕ್ಯಗಳ ಬದಲಾವಣೆ ಮಾಡಿರುವುದನ್ನು ರಾಜ್ಯದ ಹಲವಾರು ಚಿಂತಕರು ಸ್ವಾಗತಿಸಿದ್ದಾರೆ. ಜೊತೆಗೆ ಬಿಜೆಪಿಗೆ ಪ್ರಶ್ನೆ ಕೇಳುವ ಬಗ್ಗೆ ಮತ್ತು ಪ್ರಶ್ನೆಯ ಬಗ್ಗೆ ಅಷ್ಟೊಂದು ಭಯ ಯಾಕೆ ಎಂದು ಪ್ರಶ್ನಿಸಿದ್ದಾರೆ.
ವಿಡಿಯೊ ನೋಡಿ: ‘ಮಂಡ್ಯ ನೆಲಕ್ಕೆ ಕಿವಿಗೊಟ್ಟು ಆಲಿಸಿದಾಗ…’ – ಹಿರಿಯ ಸಾಹಿತಿ ದೇವನೂರ ಮಹಾದೇವ ಭಾಷಣ Janashakthi Media