ಮೈಸೂರು: ಮೈಸೂರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಇಂದು ( ಜೂನ್ 29, ಬುಧವಾರ) ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಲ್ಲಿನ ಮೆಟ್ರೋಪೋಲ್ ವೃತ್ತದಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಯುವ ಮೋರ್ಚಾ ಮುಖಂಡರು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಕಿರಣ್ ಗೌಡ ಮಾತನಾಡಿ, ‘ಎಂ.ಲಕ್ಷ್ಮಣ ಅವರು ಮೈಸೂರು ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಬನ್ನಿ ಎಂದು ಸಂಸದ ಪ್ರತಾಪ ಸಿಂಹ ಅವರಿಗೆ ಸವಾಲು ಹಾಕಿದ್ದಾರೆ. ಸಿದ್ದರಾಮಯ್ಯ, ಎಚ್.ಸಿ.ಮಹದೇವಪ್ಪ ಅವರೊಂದಿಗೆ ಚರ್ಚೆ ನಡೆಸಲು ಪ್ರತಾಪ ಸಿಂಹ ಸಿದ್ಧರಿದ್ದಾರೆ. ಇದುವರೆಗೂ ಜನರಿಂದ ಆಯ್ಕೆಯಾಗದ ಎಂ.ಲಕ್ಷ್ಮಣ ಅವರೊಂದಿಗೆ ನಾವೇ ಚರ್ಚೆ ನಡೆಸಲಿದ್ದೇವೆ’ ಎಂದರು.
‘ಪ್ರತಾಪಸಿಂಹ ಸೇರಿದಂತೆ ಪಕ್ಷದ ಮುಖಂಡರ ವಿರುದ್ಧ ಲಕ್ಷ್ಮಣ್ ಹಗುರವಾಗಿ ಮಾತನಾಡುತ್ತಿದ್ದಾರೆ. ಮೂರು ಚುನಾವಣೆಗಳನ್ನು ಸೋತಿರುವ ಅವರಿಗೆ ಸಂಸದರಿಗೆ ಸವಾಲು ಹಾಕುವ ಅರ್ಹತೆಯಿಲ್ಲ. ಮೈಸೂರು ಅಭಿವೃದ್ಧಿಗೆ ಸಂಸದರ ಕೊಡುಗೆಯನ್ನು ನಾವೇ ವಿವರಿಸುತ್ತೇವೆ’ ಎಂದರು. ನಂತರ ಕುರ್ಚಿಗಳನ್ನು ಹೊತ್ತ ಕಾರ್ಯಕರ್ತರು ಕಾಂಗ್ರೆಸ್ ಭವನದತ್ತ ತೆರಳಲು ಮುಂದಾದರು. ಉದ್ವಿಗ್ನತೆ ನಿಯಂತ್ರಿಸಲು ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಮೋದಿ ಮೈಸೂರು ನಗರವನ್ನು ಪ್ಯಾರಿಸ್ ಮಾಡುತ್ತೇವೆ ಅಂದಿದ್ದರು. ಮೈಸೂರನ್ನು ಸಿಂಗಪುರ ಮಾಡುತ್ತೇವೆ ಅಂತಾ ನೀವು ಹೇಳಿದ್ರಿ. ಆ ರೀತಿ ಹೇಳಿಯೇ ಇಲ್ಲ ಅಂತಾ ಸ್ಪಷ್ಟನೆ ನೀಡಲು 8 ವರ್ಷ ತೆಗೆದುಕೊಂಡಿದ್ದೀರಾ? ನನ್ನ ಬಳಿ ದಾಖಲೆ ಇದೆ, ನಿಮ್ಮ ಕಚೇರಿಗೆ ಬಂದು ದಾಖಲೆ ಕೊಡುತ್ತೇನೆ. ಮೈಸೂರು – ಮಡಿಕೇರಿ ನಡುವೆ ರೈಲು ಮಾರ್ಗ ನಿರ್ಮಿಸುತ್ತೇವೆ ಅಂತಾ ರೈಲು ಬಿಟ್ಟಿರಿ, ಎಲ್ಲಿ ಆ ರೈಲು? ಸುಳ್ಳೇ ನಿಮ್ಮ ಮನೆ ದೇವರು. ಸುಳ್ಳು ಹೇಳುವುದರಲ್ಲಿ ನೀವು ಎಕ್ಸ್ ಪರ್ಟ್. ನೀವು ಸುಳ್ಳು ಹೇಳುವುದರಲ್ಲಿ 3 ಪಿಎಚ್‌ಡಿ ಮಾಡಿದ್ದೀರಾ ಅಂತ ಲಕ್ಷ್ಮಣ್ ಪ್ರತಾಪ್ ಸಿಂಹಗೆ ಟಾಂಗ್ ನೀಡಿದ್ದರು.
ಚರ್ಚೆಗೆ ಸಿದ್ದವಾಗಿತ್ತು ವೇದಿಕೆ : ಜೂನ್ 29ರ ಮಧ್ಯಾಹ್ನ 12 ಗಂಟೆಗೆ ಮೈಸೂರು ಸಂಸದರ ಕಚೇರಿಯಲ್ಲಿ ಚರ್ಚೆಗೆ ಸಿದ್ದ. ಸಂಸದರ ಜಲದರ್ಶಿನಿಯ ಕಚೇರಿ ಬಳಿ ದಾಖಲೆ ಸಮೇತ ಹಾಜರಾಗುವೆ. ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರರಾಗಿ ಪ್ರತಾಪ್ ಸಿಂಹ ಎದುರು ಚರ್ಚೆಗೆ ಬರುತ್ತಿದ್ದೇನೆ. ಎರಡನೇ ಬಾರಿಗೆ ಆಹ್ವಾನ ನೀಡುತ್ತಿದ್ದೂ ಈ ಬಾರಿ ಪಲಾಯನ ಮಾಡಬೇಡಿ. ಜನರಿಗೆ ಸತ್ಯ ಹೇಳಲು ಯಾರಾದರೇನು.? ಚರ್ಚೆಗೆ ಬನ್ನಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಮಣ್ ಸವಾಲು ಹಾಕಿದರು. ಇವರ ಸವಾಲನ್ನು ಬಿಜೆಪಿ ಒಪ್ಪಿಕೊಂಡಿತ್ತು. ಅದರಂತೆ ಇಂದು ಎರಡು ಪಕ್ಷಗಳು ಸಿದ್ದತೆಯನ್ನು ನಡೆಸಿಕೊಂಡಿದ್ದವು. ಆದರೆ ಗಲಾಟೆಗಳಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಪೊಲೀಸರು ಈ ಚರ್ಚೆಗೆ ಅವಕಾಶ ನೀಡಿರಲಿಲ್ಲ. ಬಿಜೆಪಿ ಕಾಂಗ್ರೆಸ್ ಕಚೇರಿ ಬಳಿ ಗಲಾಟೆ ಮಾಡಲು ಸಿದ್ದತೆ ಮಾಡಿಕೊಂಡಿದ್ದರಿಂದ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.