ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಪ್ರಸಕ್ತ ಸಾಲಿನ ಆಯವ್ಯಯ ರಾಜ್ಯ ಸರ್ಕಾರದ ಅಭಿವೃದ್ಧಿ ವಿರೋಧಿ ಬಜೆಟ್ ಎಂದು ಘೋಷಣೆ ಕೂಗಿದ ಬಿಜೆಪಿ ಸದಸ್ಯರು ವಿಧಾನಸೌಧ ದ್ವಾರದ ಎದುರು ನಡೆಸಿದ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಭಿತ್ತಿಪತ್ರ ಪ್ರದರ್ಶಿಸಿ ಆಕ್ರೋಶ ಹೊರಹಾಕಿದರು. ಉಪ್ಪು
ವಿಧಾನಸಭಾ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಆರಂಭಿಸುತ್ತಿದ್ದಂತೆ ಬಜೆಟ್ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಸದಸ್ಯರು ವಿಧಾನಸಭೆ ಪ್ರವೇಶದ್ವಾರದ ಬಳಿ ಆಗಮಿಸಿ ಪ್ರತಿಭಟನೆ ನಡೆಸಿದರು. ಬಜೆಟ್ ಅಭಿವೃದ್ಧಿ ವಿರೋಧಿಯಾಗಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ, ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, “ಸಿದ್ದರಾಮಯ್ಯ ಅವರು ಇವತ್ತು ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ಅಲ್ಲಿ ರಾಜಕೀಯ ಸ್ಕೋಪ್ ಇರೋದಿಲ್ಲ, ಜನರ ದೃಷ್ಟಿಯಿಂದ ಬಜೆಟ್ ಮಾಡುತ್ತಾರೆ ಅಂದುಕೊಂಡಿದ್ದೆವು. ಪದೇ ಪದೆ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡುತ್ತಾರೆ. ಕೇಂದ್ರ ಸರ್ಕಾರವನ್ನು ತೆಗಳುತ್ತಾರೆ. 15ನೇ ಹಣಕಾಸು ಆಯೋಗದಲ್ಲಿ ಸಿಎಂ ಆಗಿದ್ದವರು ಯಾರು? ನೀವೇ ಹೋಗಿ ಒಪ್ಪಿಗೆ ಕೊಟ್ಟಿದ್ದೇಕೆ? ಕುಣಿಯಲು ಬಾರದವ ನೆಲ ಡೊಂಕು ಎಂದಂತೆ ಕೇಂದ್ರವನ್ನು ಟೀಕೆ ಮಾಡುತ್ತಿದ್ದೀರಿ. ಆಡಳಿತ ನಡೆಸಲು ಆಗಿಲ್ಲ ಎಂದರೆ ಅಧಿಕಾರ ಬಿಟ್ಟು ಕೆಳಗಿಳಿಯಿರಿ” ಎಂದು ಸಿಟ್ಟು ಹೊರ ಹಾಕಿದರು.
“ಸಿಎಂ ಸಿದ್ದರಾಮಯ್ಯ ಅವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು. 7 ಕೋಟಿ ಜನರ ಮೇಲೆ ಸಾಲದ ಹೊರೆ ಹಾಕಿದ್ದಾರೆ. 1 ಲಕ್ಷ ಕೋಟಿ ಸಾಲ ದಾಟಿಸಿದ ಮೊದಲ ಸಿಎಂ ಸಿದ್ದರಾಮಯ್ಯ. ಕೃಷಿ ಕ್ಷೇತ್ರಕ್ಕೆ ಅನ್ಯಾಯ ಮಾಡಿದ್ದಾರೆ. ಬೆಂಗಳೂರಿಗೆ ಸುರಂಗ ಮಾರ್ಗ ಕೊಟ್ಟಿದ್ದಾರೆ. ಕೆಂಪಣ್ಣ ಆರೋಪಿಸಿದ್ದ 50 ಪರ್ಸೆಂಟ್ ಹಣ ಇಡೋಕೆ ಈ ಸುರಂಗ ಮಾರ್ಗ ಮಾಡಿರಬೇಕು. ಒಟ್ಟಾರೆಯಾಗಿ ಉಪ್ಪು ಹುಳಿ ಇಲ್ಲದ ಬಜೆಟ್” ಎಂದು ವಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದರು.