ಪ್ರದರ್ಶನ ಬೇಡ ಎಂದರೂ ಪಟ್ಟು ಹಿಡಿದು ಹುತಾತ್ಮ ಸೈನಿಕನ ತಾಯಿಯ ಫೋಟೋ ಕ್ಲಿಕ್ ಮಾಡಿದ ಬಿಜೆಪಿ ಸಚಿವ | ರಣಹದ್ದು ಎಂದ ಕಾಂಗ್ರೆಸ್

ಲಕ್ನೋ: ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ಎನ್‌ಕೌಂಟರ್‌ ವೇಳೆ ಹುತಾತ್ಮರಾದ ಸೈನಿಕನ ದುಃಖತಪ್ತ ತಾಯಿಯೊಂದಿಗೆ ಬಿಜೆಪಿ ಫೋಟೋ ಕ್ಲಿಕ್ ಮಾಡಿ ಅದರ ಲಾಭ ಮಾಡಲು ತೊಡಗಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ. ಇಂತಹ “ಸಾರ್ವಜನಿಕ ಪ್ರದರ್ಶನ” ದಿಂದ ದೂರವಿರುವಂತೆ ಹುತಾತ್ಮ ಸೈನಿಕನ ತಾಯಿ ಮನವಿ ಮಾಡಿದ ಹೊರತಾಗಿಯೂ ಬಿಜೆಪಿ ನಾಯಕರು ಪಟ್ಟು ಹಿಡಿದು ಫೋಟೋ ಕ್ಲಿಕ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊವನ್ನು ವಿರೋಧ ಪಕ್ಷದ ನಾಯಕರು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಕ್ಯಾಪ್ಟನ್ ಶುಭಂ ಗುಪ್ತಾ ಅವರ ತಾಯಿ “ಇದನ್ನು ಸಾರ್ವಜನಿಕ ಪ್ರದರ್ಶನ ಮಾಡದಿರಿ” ಎಂದು ಹೇಳುವುದು ದಾಖಲಾಗಿದೆ. ಅದಾಗ್ಯೂ, ಉತ್ತರ ಪ್ರದೇಶದ ಸಚಿವ ಯೋಗೇಂದ್ರ ಉಪಾಧ್ಯಾಯ ಅವರು ಫೋಟೋಗೆ ಪೋಸ್‌ ಕೊಟ್ಟು ಅವರಿಗೆ ಚೆಕ್ ಹಸ್ತಾಂತರಿಸಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: ರೈತ-ಕಾರ್ಮಿಕ-ದಲಿತರ 72 ಗಂಟೆಗಳ ಮಹಾಧರಣಿ ಭಾನುವಾರದಿಂದ ಪ್ರಾರಂಭ

ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡ ಕಾಂಗ್ರೆಸ್ ಪಕ್ಷವು ಬಿಜೆಪಿಯ ನಾಯಕರನ್ನು “ರಣಹದ್ದುಗಳು” ಎಂದು ಕರೆದಿದೆ.

ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಇದು ಹೃದಯಹೀನ ನಡೆ ಎಂದು ಬಣ್ಣಿಸಿದ್ದಾರೆ, “ಪ್ರದರ್ಶನ ಬೇಡ” ಎಂದು ದುಃಖತಪ್ತ ತಾಯಿ ಮನವಿ ಮಾಡುತ್ತಿದ್ದಾರೆ, ಆದರೂ ಸಚಿವರು ತಮ್ಮ ಫೋಟೋ ಕ್ಲಿಕ್‌ ಮಾಡುವುದನ್ನು ಮುಂದುವರೆಸಿದ್ದಾರೆ, ಎಂತಹ ನಾಚಿಕೆಗೇಡು ಇದು? ಹುತಾತ್ಮರ ಕುಟುಂಬ ಕ್ಯಾಮೆರಾಗಳು ಇಲ್ಲದೆ ಶಾಂತಿಯಿಂದಲೂ ಅವರನ್ನು ದುಃಖಿಸಲು ನಾವು ಅನುಮತಿಸುತ್ತಿಲ್ಲ” ಎಂದು ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ, “ಬಿಜೆಪಿಯ ‘ಬಿ’ ಅಕ್ಷರದ ಅರ್ಥ ಬೇಶರಮ್(ನಾಚಿಕೆ ಇಲ್ಲದವರು) ಮತ್ತು ‘ಪಿ’ ಅಕ್ಷರದ ಅರ್ಥ ‘ಪ್ರಚಾರ'” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾನೂನು ರಚನೆಗೆ ರಾಜ್ಯಪಾಲರು ಅಡ್ಡಿಪಡಿಸಬಾರದು: ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು

“ಕ್ಯಾಪ್ಟನ್ ಶುಭಂ ಗುಪ್ತಾ ಅವರು ರಾಜೌರಿ ಸೆಕ್ಟರ್‌ನಲ್ಲಿ ನಡೆದ ಎನ್‌ಕೌಂಟರ್ ವೇಳೆ ಕರ್ತವ್ಯದಲ್ಲಿದ್ದಾಗ ಜೀವ ತ್ಯಾಗ ಮಾಡಿದ್ದಾರೆ. ಅವರ ತಾಯಿ ದುಃಖಿಸುತ್ತಿದ್ದಾರೆ ಮತ್ತು ಮಗನ ಪಾರ್ಥಿವ ಶರೀರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಅವರ ಅಸಹನೀಯ ದುಃಖದ ನಡುವೆ, ಯುಪಿ ಸರ್ಕಾರದ ಬಿಜೆಪಿ ಸಚಿವ ಯೋಗೇಂದ್ರ ಉಪಾಧ್ಯಾಯ ಅವರು ನಾಚಿಕೆಯಿಲ್ಲದೆ ಹೀಗೆ ನಡೆದುಕೊಂಡಿದ್ದಾರೆ” ಎಂದು ಅವರು ಹೇಳಿದ್ದಾರೆ.

ಬುಧವಾರ ಮತ್ತು ಗುರುವಾರ ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ನಡೆದ ಭಯೋತ್ಪಾದಕರೊಂದಿಗಿನ ಎರಡು ದಿನಗಳ ಎನ್‌ಕೌಂಟರ್‌ನಲ್ಲಿ ಉತ್ತರ ಪ್ರದೇಶದ ಆಗ್ರಾದ ಕ್ಯಾಪ್ಟನ್ ಶುಭಂ ಗುಪ್ತಾ ಸೇರಿದಂತೆ ಐವರು ಸೇನಾ ಸಿಬ್ಬಂದಿ ಹತರಾಗಿದ್ದರು. ಸರ್ಕಾರಿ ವಕೀಲರ ಪುತ್ರರಾಗಿರುವ ಕ್ಯಾಪ್ಟನ್ ಗುಪ್ತಾ ಅವರು 2015 ರಲ್ಲಿ ಸೈನ್ಯಕ್ಕೆ ಸೇರಿದ್ದರು. 2018 ರಲ್ಲಿ 9 ಪ್ಯಾರಾ ಎಸ್‌ಎಫ್ (ವಿಶೇಷ ಪಡೆಗಳು) ಎಂದು ಹೆಚ್ಚು ಜನಪ್ರಿಯವಾಗಿರುವ ಸೇನೆಯ ಎಲೈಟ್ ಪ್ಯಾರಾಚೂಟ್ ರೆಜಿಮೆಂಟ್‌ನ ಒಂಬತ್ತನೇ ಬೆಟಾಲಿಯನ್‌ಗೆ ನಿಯೋಜಿಸಲ್ಪಟ್ಟರು.

ಭಯೋತ್ಪಾದಕರೊಂದಿಗಿನ ಸಂಘರ್ಷದಲ್ಲಿ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್, ಕ್ಯಾಪ್ಟನ್ ಶುಭಂ ಗುಪ್ತಾ, ಹವಾಲ್ದಾರ್ ಅಬ್ದುಲ್ ಮಜೀದ್, ಲ್ಯಾನ್ಸ್ ನಾಯಕ್ ಸಂಜಯ್ ಬಿಶ್ತ್ ಮತ್ತು ಪ್ಯಾರಾಟ್ರೂಪರ್ ಸಚಿನ್ ಲಾರ್ ಹುತಾತ್ಮರಾಗಿದ್ದಾರೆ. ಈ ವೇಳೆ ಲಷ್ಕರ್-ಎ-ತೊಯ್ಬಾದ ಅಗ್ರ ಕಮಾಂಡರ್ ಸೇರಿದಂತೆ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಅಧಿಕಾರಿಗಳು ಹತ್ಯೆ ಮಾಡಿದ್ದಾರೆ.

ವಿಡಿಯೊ ನೋಡಿ: ನೇಜಾರು ಹತ್ಯೆ ಪ್ರಕರಣ :ಕೊಲೆಗಾರನ ಹಿನ್ನೆಲೆ ತನಿಖೆಯಾಗಲಿ, ಕೋಮುವಾದದ ವಾಸನೆಯೂ ಬಡಿಯುತ್ತಿದೆ Nejaru murder case

Donate Janashakthi Media

Leave a Reply

Your email address will not be published. Required fields are marked *