ಹೊಸದಿಲ್ಲಿ: ದ್ವೇಷ ಭಾಷಣ ಮಾಡಿದ್ದಕ್ಕೆ ದೇಶಾದ್ಯಂತ ಹಲವಾರು ಸಂಸದರು ಮತ್ತು ಶಾಸಕರ ವಿರುದ್ಧ ಸುಮಾರು 107 ಪ್ರಕರಣಗಳು ದಾಖಲಾಗಿದೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ನ್ಯೂ) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯು ಹೇಳಿದೆ. ಒಟ್ಟು ದ್ವೇಷಭಾಷಣ ಪ್ರಕರಣದಲ್ಲಿ 40%ದಷ್ಟು ಪ್ರಕರಣಗಳು ಬಿಜೆಪಿಗೆ ಸಂಬಂಧಿಸಿದ್ದು, ಅದರಲ್ಲೂ ಅತಿ ಹೆಚ್ಚು ದ್ವೇಷದ ಭಾಷಣಗಳ ಪಟ್ಟಿಯಲ್ಲಿ ಉತ್ತರ ಪ್ರದೇಶವು ಅಗ್ರಸ್ಥಾನದಲ್ಲಿದೆ ಎಂದು ವರದಿ ಉಲ್ಲೇಖಿಸಿದೆ.
ತಾವು ಸ್ಪರ್ಧಿಸಿದ ಕೊನೆಯ ಚುನಾವಣೆಗೆ ಮುನ್ನ ರಾಜಕಾರಣಿಗಳು ಸಲ್ಲಿಸಿದ ಸ್ವಯಂ ಪ್ರಮಾಣ ಪತ್ರಗಳನ್ನು ವಿಶ್ಲೇಷಿಸಿ ಸಂಗ್ರಹಿಸಿದ ವರದಿಯಲ್ಲಿ ಒಟ್ಟು 107 ಸಂಸದರು ಮತ್ತು ಶಾಸಕರು ದ್ವೇಷ ಭಾಷಣ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ ಎಂದು ವರದಿಯು ಬಹಿರಂಗಪಡಿಸಿದೆ.
ಇದನ್ನೂ ಓದಿ: ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನ್ಯೂಸ್ ಕ್ಲಿಕ್ ಸಂಸ್ಥಾಪಕ; ಸೋಮವಾರ ವಿಚಾರಣೆ
ದ್ವೇಷ ಭಾಷಣದ ಆರೋಪ ಎದುರಿಸುತ್ತಿರುವ ಅತಿ ಹೆಚ್ಚು ಸಂಸದರು ಮತ್ತು ಶಾಸಕರನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಪ್ರಕರಣ ದಾಖಲಾಗಿರುವ 33 ಹಾಲಿ ಸಂಸದರ ಪೈಕಿ 22 ಮಂದಿ ಬಿಜೆಪಿಗೆ ಸೇರಿದ್ದಾರೆ. ಉಳಿದಂತೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ), ಎಐಎಂಐಎಂ, ಎಐಯುಡಿಎಫ್, ಡಿಎಂಕೆ, ಎಂಡಿಎಂಕೆ, ಪಟ್ಟಾಲಿ ಮಕ್ಕಳ್ ಕಚ್ಚಿ, ಶಿವಸೇನೆ (ಉದ್ಧವ್ ಠಾಕ್ರೆ), ವಿದುತಲೈ ಚಿರುತೈಗಲ್ ಕಚ್ಚಿ ಮತ್ತು ಒಬ್ಬ ಪಕ್ಷೇತರ ಸಂಸದ ಸೇರಿದಂತೆ ಇತರ ಪಕ್ಷಗಳ ಸಂಸದರು ಕೂಡ ದ್ವೇಷಭಾಷಣ ಮಾಡಿದ್ದಾಗಿ ಪ್ರಕರಣ ದಾಖಲಾಗಿವೆ.
ಅಷ್ಟೆ ಅಲ್ಲದೆ, ದ್ವೇಷ ಭಾಷಣ ಮಾಡಿದ್ದಕ್ಕೆ ಪ್ರಕರಣಗಳು ದಾಖಲಾಗಿರುವ 74 ಶಾಸಕರ ಪೈಕಿ 20 ಮಂದಿ ಬಿಜೆಪಿಗೆ ಸೇರಿದವರಾಗಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್, ಎಎಪಿ, ಸಮಾಜವಾದಿ ಪಕ್ಷ, ವೈಎಸ್ಆರ್ ಕಾಂಗ್ರೆಸ್ ಪಕ್ಷ, ಡಿಎಂಕೆ, ಆರ್ಜೆಡಿ, ತೃಣಮೂಲ ಕಾಂಗ್ರೆಸ್, ಶಿವಸೇನೆ, ಎಐಯುಡಿಎಫ್, ಎಐಎಂಐಎಂ, ಸಿಪಿಐ(ಎಂ), ಎನ್ಸಿಪಿ, ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ, ಟಿಡಿಪಿ, ತಿಪ್ರಾ ಮೋಥಾ ಪಾರ್ಟಿ, ಬಿಆರ್ಎಸ್ ಮತ್ತು ಇಬ್ಬರು ಪಕ್ಷೇತರ ಶಾಸಕರು ದ್ವೇಷ ಭಾಷಣದ ಆರೋಪಗಳನ್ನು ಎದುರಿಸುತ್ತಿದ್ದಾರೆ.
ದ್ವೇಷ ಭಾಷಣದ ಪ್ರಕರಣಗಳಲ್ಲಿ ಸಿಲುಕಿರುವ ಏಳು ಹಾಲಿ ಸಂಸದರೊಂದಿಗೆ ಉತ್ತರ ಪ್ರದೇಶವು ಪಟ್ಟಯಲ್ಲಿ ಮೊದಲ ಸ್ಥಾನದಲ್ಲಿದೆ. ತಮಿಳುನಾಡು ನಾಲ್ಕನೇ ಸ್ಥಾನದಲ್ಲಿದ್ದು, ಬಿಹಾರ, ಕರ್ನಾಟಕ ಮತ್ತು ತೆಲಂಗಾಣದ ತಲಾ ಮೂವರು, ಅಸ್ಸಾಂ, ಗುಜರಾತ್, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಇಬ್ಬರು ಸಂಸದರು ದ್ವೇಷಭಾಷಣದ ಆರೋಪ ಎದುರಿಸುತ್ತಿದ್ದಾರೆ. ಜಾರ್ಖಂಡ್, ಮಧ್ಯಪ್ರದೇಶ, ಕೇರಳ, ಒಡಿಶಾ ಮತ್ತು ಪಂಜಾಬ್ ರಾಜ್ಯಗಳ ತಲಾ ಒಬ್ಬ ಸಂಸದರ ವಿರುದ್ಧ ದ್ವೇಷಭಾಷಣ ಪ್ರಕರಣಗಳು ದಾಖಲಾಗಿದೆ.
ಇದನ್ನೂ ಓದಿ: ಕೇರಳ | ನ್ಯೂಸ್ ಕ್ಲಿಕ್ ಮಾಜಿ ಉದ್ಯೋಗಿಯ ನಿವಾಸದ ಮೇಲೆ ದಾಳಿ ನಡೆಸಿ ಲ್ಯಾಪ್ಟಾಪ್ ಮೊಬೈಲ್ ವಶಕ್ಕೆ ಪಡೆದ ದೆಹಲಿ ಪೊಲೀಸ್
ಶಾಸಕರ ವಿರುದ್ಧ ದಾಖಲಾದ ದ್ವೇಷ ಭಾಷಣ ಪ್ರಕರಣದಲ್ಲಿ, ಬಿಹಾರ ಮತ್ತು ಉತ್ತರ ಪ್ರದೇಶವು ತಲಾ ಒಂಬತ್ತು ಶಾಕಕರೊಂದಿಗೆ ಮುಂಚೂಣಿಯಲ್ಲಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣ ತಲಾ ಆರು ಶಾಸಕರನ್ನು ಹೊಂದಿದ್ದು, ಅಸ್ಸಾಂ ಮತ್ತು ತಮಿಳುನಾಡು ತಲಾ ಐವರನ್ನು ಹೊಂದಿದೆ. ದೆಹಲಿ, ಗುಜರಾತ್ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ನಾಲ್ಕು ಶಾಸಕರು ಮತ್ತು ಜಾರ್ಖಂಡ್ ಮತ್ತು ಉತ್ತರಾಖಂಡದಲ್ಲಿ ತಲಾ ಮೂವರು ಶಾಸಕರ ವಿರುದ್ಧ ದ್ವೇಷಭಾಷಣ ಪ್ರಕರಣ ದಾಖಲಾಗಿದೆ. ಕರ್ನಾಟಕ, ಪಂಜಾಬ್, ರಾಜಸ್ಥಾನ ಮತ್ತು ತ್ರಿಪುರಾದಲ್ಲಿ ತಲಾ ಇಬ್ಬರು ಶಾಸಕರಿದ್ದು, ಮಧ್ಯಪ್ರದೇಶ ಮತ್ತು ಒಡಿಶಾದಲ್ಲಿ ತಲಾ ಒಬ್ಬ ಶಾಸಕರು ದ್ವೇಷ ಭಾಷಣದ ಆರೋಪ ಎದುರಿಸುತ್ತಿದ್ದಾರೆ.
ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ನ್ಯೂ) ವರದಿಯು, ದ್ವೇಷದ ಭಾಷಣವು ಕೋಮು ಸೌಹಾರ್ದದ ಮೇಲೆ ಪ್ರಭಾವ ಬೀರುತ್ತದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದೆ. ಚುನಾವಣೆಯ ಮೊದಲು, ಚುನಾವಣೆ ಸಮಯದಲ್ಲಿ ಹಾಗೂ ನಂತರ ದ್ವೇಷ ಭಾಷಣ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಅಭ್ಯರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವರದಿ ಶಿಫಾರಸು ಮಾಡಿದೆ.
ಭಾರತೀಯ ದಂಡ ಸಂಹಿತೆ ಮತ್ತು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯಲ್ಲಿ ದ್ವೇಷ ಭಾಷಣದ ವಿರುದ್ಧ ಹೊಸ ಕಾನೂನು ತರಬೇಕಿದೆ ಎಂದು ವರದಿ ಪ್ರತಿಪಾದಿಸಿದೆ. “ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮವನ್ನು ದುರುಪಯೋಗಪಡಿಸಿಕೊಂಡಿದೆ. ಹಾಗಾಗಿ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಕಾನೂನುಬಾಹಿರ ಹೇಳಿಕೆಗಳನ್ನು ಮೇಲ್ವಿಚಾರಣೆ ಮಾಡಬೇಕಿದೆ ಮತ್ತು ತಪ್ಪಿತಸ್ಥರೆಂದು ಕಂಡುಬಂದ ವ್ಯಕ್ತಿಗಳಿಗೆ ದಂಡ ವಿಧಿಸಬೇಕಿದೆ” ಎಂದು ವರದಿ ಸೂಚಿಸಿದೆ.
ವಿಡಿಯೊ ನೋಡಿ: ಚುನಾಯಿತ ಸರ್ವಾಧಿಕಾರ ಪ್ರಭುತ್ವದಿಂದ ” ನ್ಯೂಸ್ ಕ್ಲಿಕ್ ಮೇಲೆ ದಾಳಿ”, ಅಪಾಯದಲ್ಲಿರುವ ಭಾರತದ ಪ್ರಜಾಪ್ರಭುತ್ವ