ಬೆಂಗಳೂರು: ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ವಿರುದ್ಧ ಲಸಿಕೆ ದುರ್ಬಳಕೆ ಆರೋಪ ಕೇಳಿ ಬಂದ ನಂತರ ಈಗ ಸಿ.ವಿ.ರಾಮನ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ರಘು ಅವರ ವಿರುದ್ಧವೂ ಲಸಿಕೆ ದುರ್ಬಳಕೆ ಆರೋಪ ಕೇಳಿ ಬಂದಿದೆ. ಆದರೆ ಮತ್ತೊಂದೆಡೆ ಕೋವಿಡ್ ಲಸಿಕೆಗಳನ್ನು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಮಾತ್ರ ನೀಡಲಾಗುತ್ತಿದೆ.
ಈ ಘಟನೆ ನಡೆದಿರುವುದು ಭುವನೇಶ್ವರಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ. ಭಾನುವಾರದಂದು ಸಾರ್ವಜನಿಕರಿಗೆ ಉಚಿತ ಲಸಿಕೆ ಕಾರ್ಯಕ್ರಮ ನಿಗದಿಯಾಗಿತ್ತು. ಅದಾಗಲೇ, 300 ಜನರಿಗೆ ನಿಗದಿತ ಟೋಕನ್‌ಗಳನ್ನು ವಿತರಣೆ ಮಾಡಿದ್ದರು ಮತ್ತು ಸ್ಥಳದಲ್ಲೇ ನೋಂದಣಿಯನ್ನು ಮಾಡಿಕೊಂಡಿದ್ದರು. ಬೆಳಗ್ಗೆಯಿಂದಲೇ ನೂರಾರು ಮಂದಿ ಲಸಿಕಾ ಕೇಂದ್ರಕ್ಕೆ ಆಗಮಿಸಿದ್ದರು.
ಇದನ್ನು ಓದಿ: ಲಸಿಕೆ ಮಾರಾಟ ಪ್ರಕರಣ – ಶಾಸಕ ರವಿ ಸುಬ್ರಮಣ್ಯ ವಿರುದ್ದ ದೂರು ದಾಖಲು
ಸುಮಾರು 10.30 ಗಂಟೆಯಾದರೂ ಲಸಿಕೆ ನೀಡದ ಅಧಿಕಾರಿಗಳು ಸಿದ್ದರಿರಲಿಲ್ಲ. ಕಾದು ಕಾದು ಸುಸ್ತಾದ ಜನರು ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ. ಸಮೀಪದ ಓಂ ಶಕ್ತಿ ಕಲ್ಯಾಣ ಮಂಟಪದ ಕಡೆ ತೆರಳಲು ಮುಂದಾದರು. ಸ್ಥಳೀಯ ಶಾಸಕರ ಆದೇಶದ ಮೇರೆಗೆ ಆರೋಗ್ಯ ಕೇಂದ್ರದಲ್ಲಿ ಉಚಿತ ಲಸಿಕೆ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಟೋಕನ್ ನೀಡಿರುವವರನ್ನು ಬಿಟ್ಟು, ಶಾಸಕ ಎಸ್ ರಘು ಅವರು ತಮ್ಮ ಒಡೆತನದ ಓಂ ಶಕ್ತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರು, ಅವರ ಸಂಬಂಧಿಕರಿಗೆ ಲಸಿಕೆ ನೀಡಲಾಗುತ್ತಿತ್ತು. ಇದು ಸರಕಾರದ ಉಚಿತ ಲಸಿಕಾ ಕಾರ್ಯಕ್ರಮ. ಆದರೆ, ಶಾಸಕರು ಉಚಿತವಾಗಿ ನೀಡಲು ಹೇಗೆ ಸಾಧ್ಯ? ತಮ್ಮ ಪಕ್ಷದ ಕಾರ್ಯಕರ್ತರಿಗೆ ಲಸಿಕೆ ನೀಡುವ ಮೂಲಕ ಅಕ್ರಮ ಎಸಗಲಾಗುತ್ತಿದೆ. ಈ ಸಂಬಂಧ ಬ್ಯಾನರ್ ಕೂಡ ಹಾಕಿಸಿದ್ದಾರೆ. ಅಲ್ಲಿ ಸೇರಿದ್ದವರು ಅಂತರ ನಿಯಮವನ್ನೂ ಗಾಳಿಗೆ ತೂರಿದ್ದಾರೆʼʼ ಎಂದು ಸಾರ್ವಜನಿಕರು ಆರೋಪಿಸಿದರು.
ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಕ್ಕೆ ಏನು ಹೇಳುತ್ತೀರಿ ಎಂದು ಮಾಧ್ಯಮ ಪ್ರತಿನಿಧಿ ಕೇಳಿದಾಗ ಶಾಸಕ ರಘು ಅವರ ಬೆಂಬಲಿಗರು ಮಾಧ್ಯಮ ಪ್ರತಿನಿಧಿಯನ್ನು ತಡೆದು ಹೆದರಿಸಲು ಮುಂದಾದರು. ತಮ್ಮ ವಿರುದ್ಧ ಆರೋಪ ಮಾಡುವವರು ತೊಂದರೆ ಅನುಭವಿಸಿ ಸಾಯುತ್ತಾರೆ. ಸಿ ವಿ ರಾಮನ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ರಘು ಪ್ರತಿಕ್ರಿಯೆ ನೀಡಿರುವ ವರದಿಯಾಗಿದೆ.