ಬೆಳಗಾವಿ: ಹಿಂದೂ ಧರ್ಮಕ್ಕೆ ಸಂಕಟ ಬಂದಾಗ ರಾಜಕಾರಣಿಯಾಗಲೀ, ಸರಕಾರವಾಗಲೀ ಮುಂದೆ ಬರುವುದಿಲ್ಲ. ಹಿಂದೂ ಕಾರ್ಯಕರ್ತರೇ ತಲವಾರು ಹಿಡಿದುಕೊಳ್ಳಬೇಕು. ಆಗ ಮಾತ್ರ ನಮ್ಮ ಧರ್ಮ ರಕ್ಷಣೆ ಸಾಧ್ಯ ಎಂದು ಆಂಧ್ರ ಪ್ರದೇಶ ಭಾಗ್ಯನಗರದ ಬಿಜೆಪಿ ಶಾಸಕ ರಾಜಾಸಿಂಗ್ ಠಾಕೂರ್ ಹೇಳಿದರು.
ತಾಲೂಕಿನ ನಾವಗೆ ಬಳಿಯ ಗಣೇಶಬಾಗ್‌ನಲ್ಲಿ ರವಿವಾರ ಧನಂಜಯ ಜಾಧವ ಮಿತ್ರ ಪರಿವಾರದಿಂದ ಹಮ್ಮಿಕೊಂಡಿದ್ದ “ಹಿಂದೂ ಸಮ್ಮಿಲನ, ಸ್ನೇಹ ಭೋಜನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶ-ಧರ್ಮಕ್ಕಾಗಿ ಸಂಘಟಿತರಾಗಿ ಕೆಲಸ ಮಾಡಬೇಕು. ದೇಶದಲ್ಲಿ ಮೋದಿ ಸರಕಾರ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇದೆ. ಆದರೂ ಸಂಕಟ ಬಂದಾಗ ಯಾರೂ ಮುಂದೆ ಬರುವುದಿಲ್ಲ ಎಂದು ಹೇಳಿದರು.
ಕರ್ನಾಟಕ ಸರಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿರುವುದು ಉತ್ತಮ ಬೆಳವಣಿಗೆ. ಕರ್ನಾಟಕದಲ್ಲಿರುವ ಮದರಸಾಗಳನ್ನು ನಿಷೇಧಿಸಬೇಕು. ಮದರಸಾಗಳಲ್ಲಿ ಉಗ್ರರ ಉತ್ಪಾದನೆ ಆಗುತ್ತಿದೆ ಎಂದು ಉತ್ತರ ಪ್ರದೇಶ ಶಾಸಕರು ಹಾಗೂ ಗುಪ್ತಚರ ಇಲಾಖೆ ಅ ಧಿಕಾರಿಗಳು ಹೇಳಿದ್ದಾರೆ. “ಹಮ್ ದೋ ಹಮಾರೆ ದೋ’ ಯೋಜನೆಯನ್ನು ನಾವು ಮಾತ್ರ ಯಾಕೆ ಅಳವಡಿಸಿಕೊಳ್ಳಬೇಕು. ಉತ್ತರ ಪ್ರದೇಶದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರಕಾರಿ ಸೌಲಭ್ಯ ಕಡಿತಗೊಳಿಸಲಾಗುತ್ತಿದೆ. ಇದನ್ನು ಎಲ್ಲ ರಾಜ್ಯಗಳಲ್ಲಿಯೂ ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.
ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಇರದಿದ್ದರೆ ಭಾರತೀಯರ ಗತಿ ಏನು ಎಂದು ಅಸಾದುದ್ದೀನ್ ಒವೈಸಿ ಕೇಳುತ್ತಿದ್ದಾನೆ. ಮೋದಿ, ಯೋಗಿಗಿಂತ ಮುಂಚೆ ನೀನು ಜೀವಂತ ಇರುತ್ತಿಯಾ ಎಂದು ಯೋಚನೆ ಮಾಡು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈಗಾಗಲೆ ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವ ಬೆನ್ನಲ್ಲೆ ರಾಜಾಸಿಂಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿರುವುದು ಭಯದ ವಾತಾವರಣವನ್ನು ಸೃಷ್ಟಿಸಿದೆ. ಬೆಳಗಾವಿಯಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.