ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅನುಪಸ್ಥಿತಿಯಲ್ಲಿ ಶಿವಮೊಗ್ಗ ನಗರದಲ್ಲಿ ಬಿಜೆಪಿ ಶಾಸಕ ಎಸ್‌ಎನ್ ಚನ್ನಬಸಪ್ಪ ಶಕ್ತಿ ಯೋಜನೆಗೆ ಚಾಲನೆ ನೀಡಿದರು. ಈ ಮೂಲಕ ಸರ್ಕಾರದ ಯೋಜನೆಗೆ ಅಧಿಕೃತ ಚಾಲನೆ ನೀಡಿದ ಬಿಜೆಪಿಯ ಏಕೈಕ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಾಸಕ ಚನ್ನಬಸಪ್ಪ, ” ರಾಜ್ಯ ಸರ್ಕಾರ ವಿಶೇಷವಾದ ಸೌಲಭ್ಯ ಹೆಣ್ಣುಮಕ್ಕಳಿಗೆ ನೀಡಿದೆ. ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿರೋದಕ್ಕೆ ನಾನು ಹಾರ್ದಿಕ ಅಭಿನಂದನೆ ಸಲ್ಲಿಸುತ್ತೇನೆ. ಸುರಕ್ಷಿತ ಪ್ರಯಾಣ ಮಾಡಬೇಕು, ಸರ್ಕಾರಕ್ಕೆ ಸವಾಲುಗಳಿವೆ, ಸಮಸ್ಯೆಗಳೂ ಇವೆ. ಇವನ್ನೆಲ್ಲಾ ಸರಿ ಮಾಡಿಕೊಂಡು ಹೋಗಬೇಕು” ಎಂದರು.
ಸರ್ಕಾರದ ಯೋಜನೆಯಾದ ಶಕ್ತಿ ಯೋಜನೆಗೆ ಒಬ್ಬ ಜನಪ್ರತಿನಿಧಿಯಾಗಿ ಚಾಲನೆ ನೀಡಿದ್ದೇನೆ. ನಾನು ಗೆದ್ದರಿವ ಪಕ್ಷ ಬೇರೆ ಇರಬಹುದು. ನಾವೆಲ್ಲ ಸರ್ಕಾರದ ಪ್ರತಿನಿಧಿಗಳು, ಹಾಗಾಗಿಶಿಷ್ಟಾಚಾರವನ್ನು ಕಾಪಾಡುವುದು ನನ್ನ ಜವಾಬ್ದಾರಿ, ಹಾಗಾಗಿ ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ : ಶಕ್ತಿ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದು: ರಾಜ್ಯದಲ್ಲಿ ಇನ್ಮುಂದೆ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ
ಚಾಲನೆ ನೀಡದ ತಪ್ಪಿಕೊಂಡ ವಿಜಯೇಂದ್ರ : ತಾಲೂಕು ಕೇಂದ್ರಗಳಲ್ಲಿ ಅಲ್ಲಿನ ಶಾಸಕರು ಉದ್ಘಾಟಿಸಲು ಅವಕಾಶ ನೀಡಲಾಗಿತ್ತು. ಶಿಕಾರಿಪುರದಲ್ಲಿ ಮಾತ್ರ ಶಾಸಕ ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗೆ ಚಾಲನೆ ನೀಡದೇ ತಪ್ಪಿಸಿಕೊಂಡರು. ತಹಸೀಲ್ದಾರ್ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಸಾಗರದಲ್ಲಿ ಗೋಪಾಲಕೃಷ್ಣ ಬೇಳೂರು ಯೋಜನೆಗೆ ಚಾಲನೆ ನೀಡಿದರು.
ಬಸ್ ಚಲಾಯಿಸಿದ ಶಾಸಕಿ: ಶಕ್ತಿ’ ಯೋಜನೆಗೆ ಕೋಲಾರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಭಾನುವಾರ ಕೆಜಿಎಫ್ ಶಾಸಕಿ ರೂಪಕಲಾ ಚಾಲನೆ ನೀಡಿದ್ದು, ಈ ವೇಳೆ ರಾಬರ್ಟಸನ್‌ಪೇಟೆಯ ಕುವೆಂಪು ಬಸ್ ನಿಲ್ದಾಣದಿಂದ ಸ್ವಲ್ಪ ದೂರ ಬಸ್ ಚಲಾಯಿಸಿ ನೆರೆದಿದ್ದವರ ಗಮನ ಸೆಳೆದರು.
ಶಕ್ತಿ ಯೋಜನೆಗೆ ಶಾಸಕಿ ರೂಪಕಲಾ ಚಾಲನೆ ನೀಡುತ್ತಿದ್ದಂತೆ, ಅಲ್ಲಿದ್ದ ಕಾರ್ಯಕರ್ತರು ಬಸ್ ಚಲಾಯಿಸುವಂತೆ ಕೇಳಿಕೊಂಡಿದ್ದಾರೆ. ಕೊನೆಗೆ ಎಲ್ಲರ ಒತ್ತಾಯಕ್ಕೆ ಮಣಿದ ಶಾಸಕಿ ಬಸ್ ಚಲಾಯಿಸಲು ಮುಂದಾದರು.