ಹೈದರಾಬಾದ್: ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ನೀಡಿರುವ 4% ಮೀಸಲಾತಿಯನ್ನು ರದ್ದುಡಿಸುತ್ತೇವೆ ಎಂದು ಕೇಂದ್ರ ಸಚಿವ, ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ ಕ್ರಿಶನ್ ರೆಡ್ಡಿ ಭಾನುವಾರ ಹೇಳಿದ್ದಾರೆ. ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಮರು ಅನುಭವಿಸುತ್ತಿರುವ ಕೋಟಾವನ್ನು ಹಿಂದುಳಿದ ವರ್ಗಗಳಿಗೆ ಮರಳಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅದಿಲಾಬಾದ್ ಮತ್ತು ಪೆದ್ದಪಲ್ಲಿ ಜಿಲ್ಲೆಗಳಿಂದ ಬಿಆರ್‌ಎಸ್ ಮತ್ತು ಇತರ ಪಕ್ಷಗಳ ಹಲವಾರು ನಾಯಕರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿದ ನಂತರ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಿಶನ್ ರೆಡ್ಡಿ, ನವೆಂಬರ್ 3ರಿಂದ ಬಿಜೆಪಿಯಿಂದ ಪ್ರಚಾರ ಕಾರ್ಯ ತೀವ್ರಗೊಳ್ಳಲಿದ್ದು, ಕೇಂದ್ರದ ಹಲವು ಸಚಿವರು, ಮುಖಂಡರು ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳ | ಸ್ಫೋಟ ಪ್ರಕರಣ: 3 ಸಾವು, ಹಮಾಸ್ ದೂಷಿಸಿ ಜನರಿಂದ ಛೀಮಾರಿ ಹಾಕಿಸಿಕೊಂಡ ಬಿಜೆಪಿ
ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳ ನಾಯಕನನ್ನು ಮುಖ್ಯಮಂತ್ರಿ ಮಾಡುವುದಾಗಿ ಸೂರ್ಯಪೇಟ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಘೋಷಿಸಿದ್ದನ್ನು ಉಲ್ಲೇಖಿಸಿದ ಕಿಶನ್ ರೆಡ್ಡಿ, ಇದು ತೆಲಂಗಾಣದಲ್ಲಿ ಕ್ರಾಂತಿಯನ್ನು ತರಲಿದೆ ಎಂದು ಹೇಳಿದ್ದಾರೆ.
“ಹಿಂದುಳಿದ ವರ್ಗಗಳ ಸಮುದಾಯದ ಮುಖ್ಯಮಂತ್ರಿಗಾಗಿ ಹಲವು ಸಮುದಾಯವು ಬೇಡಿಕೆ ಸಲ್ಲಿಸುತ್ತಿವೆ. ಆದರೆ ಅಧಿಕಾರದಲ್ಲಿರುವ ಪಕ್ಷಗಳು ಯಾವಾಗಲೂ ಹಿಂದುಳಿದ ವರ್ಗಗಳಿಗೆ ಮೋಸ ಮಾಡುತ್ತಿವೆ. ಈಗ ಬಿಜೆಪಿ ಅವರ ಕನಸನ್ನು ನನಸಾಗಿಸುತ್ತದೆ. ಸ್ವಾತಂತ್ರ್ಯ ಸಿಕ್ಕ ನಂತರ ಬಿಜೆಪಿ ಮೊದಲ ಬಾರಿಗೆ ಹಿಂದುಳಿದ ವರ್ಗ ಸಮುದಾಯದ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಿದೆ. ಅವರು ಅತ್ಯಂತ ಬದ್ಧತೆಯಿಂದ ದೇಶದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದಾರೆ” ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.
“ಹಿಂದುಳಿದ ವರ್ಗಗಳ ನಾಯಕನನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಬಿಜೆಪಿ ನೀಡಿದ ಭರವಸೆಗೆ ಸಾರ್ವಜನಿಕರಿಂದ ಭಾರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಹಲವಾರು ಹಿಂದಿಳಿದ ವರ್ಗಗಳ ಸಂಘಟನೆಗಳು ಬಿಜೆಪಿಯನ್ನು ಬೆಂಬಲಿಸಿ ನಿರ್ಣಯಗಳನ್ನು ಅಂಗೀಕರಿಸುತ್ತಿವೆ. ಸಾರ್ವಜನಿಕರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡ ಇತಿಹಾಸ ಬಿಜೆಪಿಗಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆಂಧ್ರಪ್ರದೇಶ ರೈಲು ದುರಂತ| ಮೃತರ ಸಂಖ್ಯೆ 11ಕ್ಕೆ ಏರಿಕೆ; ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಮೊದಲ ಸಚಿವ ಸಂಪುಟದಲ್ಲಿ ಯಾವುದೇ ಮಹಿಳೆಯನ್ನು ಸಚಿವರನ್ನಾಗಿ ಮಾಡಲು ವಿಫಲರಾಗಿದ್ದಾರೆ. ಹಿಂದುಳಿದ ವರ್ಗಗಳ ಉಪ ಯೋಜನೆ ಜಾರಿಗೆ ತಂದಿಲ್ಲ. ಹಿಂದುಳಿದ ವರ್ಗಗಳಿಗೆ ಅವರ ಪಾಲಿನ ಮೀಸಲಾತಿ ನೀಡಲು ಕಾಂಗ್ರೆಸ್ ವಿಫಲವಾಗಿದೆ. ಅವರಿಗೆ ಮೀಸಲಾದ ಮೀಸಲಾತಿಯನ್ನು ಕಸಿದುಕೊಳ್ಳುವಲ್ಲಿ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (MIM) ಅನ್ನು ಬೆಂಬಲಿಸಿದೆ ಎಂದು ಕಿಶನ್ ರೆಡ್ಡಿ ಆರೋಪಿಸಿದ್ದಾರೆ.
ಅಲ್ಪಸಂಖ್ಯಾತರ ಮೀಸಲಾತಿ ಹೆಸರಲ್ಲಿ ಹಿಂದುಳಿದ ವರ್ಗಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಟೀಕಿಸಿದ ಅವರು, ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಅಲ್ಪಸಂಖ್ಯಾತರ ಮೀಸಲಾತಿಯನ್ನು ರದ್ದುಪಡಿಸುತ್ತೇವೆ ಎಂದು ಘೋಷಿಸಿದ್ದಾರೆ.
ವಿಡಿಯೊ ನೋಡಿ: ಪ್ಯಾಲಿಸ್ತೇನ್ ಪರ ಪ್ರತಿಭಟನೆ ಮಾಡುವುದು ಅಪರಾಧವೆ?