ಕೈಕಾಲುಗಳನ್ನು ಸೇರಿಸಿ ಕಟ್ಟಿಹಾಕಿರುವ, ಮುಖ ಸುಟ್ಟಿರುವ ರಕ್ತಸಿಕ್ತವಾದ ಯುವತಿಯೊಬ್ಬರ ಶವದ ವಿಡಿಯೊವೊಂದು ವಾಟ್ಸಪ್‌ನಲ್ಲಿ ಹರಿದಾಡುತ್ತಿದ್ದು, “Love jihad incident in UP(ಯುಪಿಯಲ್ಲಿ ಲವ್ ಜಿಹಾದ್) ಹಿಂದೂ ಹೆಣ್ಣು ಮಕ್ಕಳೇ ದಯವಿಟ್ಟು ನೋಡಿ ನಮ್ಮ ಅಬ್ದುಲ್ಲ ಎಲ್ಲರ ಅಂತ ಅಲ್ಲ ಎನ್ನುವವರು ನೋಡಿ” ಎಂಬ ಒಕ್ಕಣೆಯೊಂದಿಗೆ ವೈರಲ್ ಮಾಡಲಾಗುತ್ತಿದೆ. ಮುಖ್ಯವಾಗಿ ಇದನ್ನು ಬಿಜೆಪಿ ಬೆಂಬಲಿಗರು ತಮ್ಮ ವಾಟ್ಸಪ್ ಗ್ರೂಪ್‌ಗಳಲ್ಲಿ ವೈರಲ್ ಮಾಡುತ್ತಿದ್ದಾರೆ.
ನೀಲಿ ಬಣ್ಣದ ಬಟ್ಟೆ ಧರಿಸಿರುವ ಯುವತಿಯ ಕೈ-ಕಾಲುಗಳನ್ನು ಬಡಿಗೆಯೊಂದಕ್ಕೆ ಸೇರಿಸಿ ಕಟ್ಟಿಹಾಕಿರುವ ಸ್ಥಿತಿಯಲ್ಲಿ ಇದೆ. ಮೃತದೇಹದ ಮುಖವನ್ನು ಭಾಗಶಃ ಸುಟ್ಟುಹಾಕಲಾಗಿದ್ದು, ಮೃತದೇಹದ ಬಳಿ ಹೊಗೆ ಎದ್ದೇಳುತ್ತಿರುವುದು ಕೂಡಾ ವಿಡಿಯೊದಲ್ಲಿದೆ. ಅಷ್ಟೆ ಅಲ್ಲದೆ, ಮೃತದೇಶ ಬಿದ್ದಿರುವ ಸ್ಥಳದಲ್ಲಿ ಧಾರಾಳವಾಗಿ ರಕ್ತವೂ ಹರಿದಿದ್ದು ವಿಡಿಯೊದಲ್ಲಿ ಕಾಣುತ್ತಿದೆ. ಈ ವಿಡಿಯೊವನ್ನು ಕೋಮು ಹೇಳಿಕೆಯೊಂದಿಗೆ ಬಿಜೆಪಿ ಬೆಂಬಲಿಗರು ತಮ್ಮ ವಾಟ್ಸಪ್ ಗ್ರೂಪ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಲವ್ ಜಿಹಾದ್
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಜಿ20 ಕಾರ್ಯಕ್ರಮದ ವೇಳೆ ‘ರಘುಪತಿ ರಾಘವ ರಾಜಾ ರಾಮ್’ ಭಜನೆಯಿಂದ ‘ಅಲ್ಲಾಹ್’ ಪದ ಮೋದಿ ತೆಗೆದುಹಾಕಿದರೆ?
ಜನಶಕ್ತಿ ಮೀಡಿಯಾದ ವಾಟ್ಸಪ್ ನಂಬರ್ +91 6361 984 022 ಗೆ ಈ ವಿಡಿಯೊ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡುವಂತೆ ಕೋರಿಕೆಗಳು ಬಂದಿದ್ದು, ಬಿಜೆಪಿ ಬೆಂಬಲಿಗರ ವಾಟ್ಸಪ್ ಗ್ರೂಪ್‌ಗಳಲ್ಲಿ ಇದನ್ನು ಕೋಮು ಹೇಳಿಕೆಯೊಂದಿಗೆ ಹರಡುತ್ತಿರುವ ಬಗ್ಗೆ ಕೂಡಾ ದೂರಲಾಗಿದೆ.
ಫ್ಯಾಕ್ಟ್‌ಚೆಕ್
ಕೀ ವರ್ಡ್‌ಗಳನ್ನು ಬಳಸಿ ಈ ಬಗ್ಗೆ ನಾವು ಇಂಟರ್‌ನೆಟ್‌ನಲ್ಲಿ ಹುಡುಕಾಡಿದಾಗ, ಪಶ್ಚಿಮ ಬಂಗಾಳದ ಭಾರತ – ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಗಡಿಯ ಸಮೀಪದ ಸ್ವರೂಪನಗರದಲ್ಲಿ ಇದೇ ರೀತಿಯಲ್ಲಿ ಮಹಿಳೆಯೊಬ್ಬರ ಶವವೊಂದು ಸಿಕ್ಕಿರುವ ಹಲವು ವರದಿಗಳು ನಮಗೆ ಲಭ್ಯವಾಗಿದೆ. ನಮ್ಮ ಹುಡುಕಾಟದಲ್ಲಿ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲಯ ಬಸಿರ್ಹತ್ ಪೊಲೀಸ್ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಯುವತಿಯ ಶವ ಸಿಕ್ಕಿರುವುದು ನಮಗೆ ಖಚಿತಗೊಂಡಿದೆ. ಜೊತೆಗೆ ಕೊಲೆಯ ಆರೋಪಿಯೊಬ್ಬನನ್ನು ಬಂಧಿಸಿರುವ ಬಗ್ಗೆ ಕೂಡಾ ವರದಿಗಳು ಹೇಳಿವೆ.
ಈ ಘಟನೆಯನ್ನು ಇಂಡಿಯನ್ ಎಕ್ಸ್‌ಪ್ರೆಸ್, ಎನ್‌ಡಿಟಿವಿ, ನ್ಯೂಸ್18, ನ್ಯೂಸ್‌ನೈನ್‌ಲೈವ್ ಸೇರಿದಂತೆ ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಎನ್‌ಡಿಟಿವಿ ಈ ಕೊಲೆಯ ಬಗ್ಗೆ ವಿಡಿಯೊ ವರದಿಯನ್ನು ಕೂಡಾ ಮಾಡಿದೆ. ಅದನ್ನು ಕೆಳಗೆ ನೋಡಬಹುದು. ಈ ವಿಡಿಯೊದಲ್ಲಿರುವ ದೃಶ್ಯಗಳಿಗೂ ಬಿಜೆಪಿ ಬೆಂಬಲಿಗರು ವಾಟ್ಸಪ್‌ಗಳಲ್ಲಿ ವೈರಲ್ ಮಾಡುತ್ತಿರುವ ವಿಡಿಯೊ ಒಂದೇ ಆಗಿದೆ ಎಂಬುವುದು ಇಲ್ಲಿ ಖಚಿತವಾಗುತ್ತದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಆರೆಸ್ಸೆಸ್ ಅನ್ನು ನಿಷೇಧಿಸಿತೆ ಕೆನಡಾ ಸರ್ಕಾರ?
ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದಂತೆ, “ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಭಾರತ-ಬಾಂಗ್ಲಾದೇಶದ ಗಡಿಯ ಬಳಿ ಗಂಟಲು ಸೀಳಿ ಮತ್ತು ಮುಖವನ್ನು ಗುರುತಿಸಲಾಗದಷ್ಟು ಸುಟ್ಟ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ” ಎಂದು ಪೊಲೀಸ್ ಹೇಳಿಕೆಯನ್ನು ಉಲ್ಲೇಖಿಸಿ ಹೇಳಿದೆ.
ಅಲ್ಲದೆ, ವರದಿಯು, “ಕೊಲೆಯಾದ ಮಹಿಳೆಯು ಬಾಂಗ್ಲಾದೇಶದ ಪ್ರಜೆಯಾಗಿದ್ದು, ಮುಂಬೈನ ಬ್ಯೂಟಿ ಪಾರ್ಲರ್‌ನಲ್ಲಿ ಉದ್ಯೋಗಿಯಾಗಿದ್ದಾರೆ. ಊರಿಗೆ ಹಿಂದಿರುಗುತ್ತಿದ್ದಾಗ ಆಕೆಯನ್ನು ಹಣಕ್ಕಾಗಿ ಕೊಲ್ಲಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ಕಂಡುಬಂದಿದೆ ಎಂದು ಬಸಿರ್‌ಹತ್ ಪೊಲೀಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೋಬಿ ಥಾಮಸ್ ಎಸ್‌ಕೆ ತಿಳಿಸಿದ್ದಾರೆ” ಎಂದು ಹೇಳಿದೆ.
ನ್ಯೂಸ್18 ಈ ಘಟನೆಯನ್ನು ವರದಿ ಮಾಡಿದ್ದು ಅದರಲ್ಲಿ, “ಯುವತಿಯನ್ನು ಬಾಂಗ್ಲಾದೇಶದ ‘ಸುಮಾಯಾ ಅಖ್ತರ್’ ಎಂದು ಗುರುತಿಸಲಾಗಿದೆ. ಅವರು ಢಾಕಾದ ಶ್ಯಾಮ್‌ಪುರ ಪ್ರದೇಶದ ನಿವಾಸಿಯಾಗಿದ್ದಾರೆ. 20ರ ಹರೆಯದ ಯುವತಿಯು ಮುಂಬೈನ ಬ್ಯೂಟಿ ಪಾರ್ಲರ್‌ನಲ್ಲಿ ಉದ್ಯೋಗಿಯಾಗಿದ್ದು, ಮನೆಗೆ ಹಿಂದಿರುಗುತ್ತಿದ್ದಾಗ ಹಣಕ್ಕಾಗಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ” ಎಂದು ಹೇಳಿದೆ.
ಇಷ್ಟೆ ಅಲ್ಲದೆ, ಬಸೀರ್ಹತ್ ಪೊಲೀಸ್ ಜಿಲ್ಲೆಯ ಟ್ವಿಟರ್ ಅಕೌಂಟ್‌ನಲ್ಲಿ ಕೂಡಾ ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಜೊತೆಗೆ ಯುವತಿಯ ಮೃತದೇಹದ ಚಿತ್ರವನ್ನು ಹಾಗೂ ಕೊಲೆ ಆರೋಪಿಯ ಬಂಧನದ ಬಗ್ಗೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.
অজ্ঞাতপরিচয় ব্যাক্তি বাংলাদেশী নাগরিক।
এরপর ঘটনার 48 ঘণ্টার মধ্যে এলাকা থেকে অপরাধীকে গ্রেফতার করে স্বরূপ নগর থানা।
বসিরহাট জেলা পুলিশ অভিনন্দন জানায় পুরো টিমকে যাদের পরিশ্রম ও বুদ্ধিমত্তায় সম্ভব হয় এই সাফল্য …(2/2) pic.twitter.com/FdJmFDyie8— Basirhat Police District (@BasirhatD) October 1, 2023
ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಈ ವೈರಲ್ ವಿಡಿಯೊದಲ್ಲಿ ತೆವಳುತ್ತಿರುವವರು ಮುಸ್ಲಿಂ ಅಲ್ಲ, ಅದು ಯುಪಿಯದ್ದೂ ಅಲ್ಲ!
ಬಸೀರ್ಹತ್ ಪೊಲೀಸ್ ಜಿಲ್ಲಾ ಪೊಲೀಸರು ಹಂಚಿಕೊಂಡಿರುವ ಮೃತದೇಹದ ಚಿತ್ರ ಮತ್ತು ವೈರಲ್ ವಿಡಿಯೊದ ಯುವತಿಯ ಮೃತದೇಹದಲ್ಲಿನ ಬಟ್ಟೆಯನ್ನು ಗಮನಿಸಿದರೆ ಅವರೆಡೂ ಒಂದೇ ಯುವತಿಯದ್ದೆಂದು ನಮಗೆ ಖಚಿತವಾಗುತ್ತದೆ.
‘ಲವ್ ಜಿಹಾದ್’ ಎಂಬ ಕಾಲ್ಪನಿಕ ಅಪರಾಧವನ್ನು ಮುಸ್ಲಿಂ ದ್ವೇಷಕ್ಕಾಗಿ ಬಿಜೆಪಿ ಹಾಗೂ ಸಂಘಪರಿವಾರ ನಿರಂತರವಾಗಿ ತೇಲಿ ಬಿಡುತ್ತಲೆ ಇವೆ. ಆದರೆ ಲವ್ ಜಿಹಾದ್ ಎಂಬ ಅಪರಾಧವೆ ಇಲ್ಲ ಹಾಗೂ ಈ ರೀತಿಯ ಅಪರಾಧ ಎಲ್ಲೂ ವರದಿಯಾಗಿಲ್ಲ ಎಂಬುವುದನ್ನು ಸ್ವತಃ ಮೋದಿ ಸರ್ಕಾರವೆ ಒಪ್ಪಿಕೊಂಡಿದೆ. ಆದರೂ ಮುಸ್ಲಿಂ ದ್ವೇಷವನ್ನು ಹರಡಲು ಸಂಘಪರಿವಾರ ಮತ್ತು ಬಿಜೆಪಿ ಇದನ್ನು ನಿರಂತರವಾಗಿ ಹೇಳಿಕೊಳ್ಳುತ್ತಿವೆ. ಲವ್ ಜಿಹಾದ್
ಒಟ್ಟಿನಲ್ಲಿ ಹೇಳುವುದಾದರೆ, ”ಉತ್ತರ ಪ್ರದೇಶದಲ್ಲಿ ನಡೆದ ಲವ್ ಜಿಹಾದ್ ಘಟನೆ” ಎಂದು ವಾಟ್ಸಪ್‌ನಲ್ಲಿ ಹರಿದಾಡುತ್ತಿರುವ, ಕೈಕಾಲುಗಳನ್ನು ಸೇರಿಸಿ ಕಟ್ಟಿಹಾಕಿರುವ, ಮುಖ ಸುಟ್ಟಿರುವ ರಕ್ತಸಿಕ್ತವಾದ ಯುವತಿಯೊಬ್ಬರ ಶವದ ವಿಡಿಯೊ ಪಶ್ಚಿಮ ಬಂಗಾಳದ ಭಾರತ – ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಗಡಿಯ ಸಮೀಪದ ಸ್ವರೂಪನಗರದ್ದಾಗಿದೆ. ಹತ್ಯೆಗೀಡಾದ ಯುವತಿಯ ಹೆಸರು ‘ಸುಮಾಯಾ ಅಖ್ತರ್‘ ಎಂದು ವರದಿಯಾಗಿದ್ದು, ಅವರು ಬಾಂಗ್ಲಾದೇಶದ ಢಾಕಾದ ಶ್ಯಾಮ್‌ಪುರ ಪ್ರದೇಶದ ನಿವಾಸಿಯಾಗಿದ್ದಾರೆ. 20ರ ಹರೆಯದ ಯುವತಿಯು ಮುಂಬೈನ ಬ್ಯೂಟಿ ಪಾರ್ಲರ್‌ನಲ್ಲಿ ಉದ್ಯೋಗಿಯಾಗಿದ್ದು, ಮನೆಗೆ ಹಿಂದಿರುಗುತ್ತಿದ್ದಾಗ ಹಣಕ್ಕಾಗಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ವಿಡಿಯೊಗೂ ಉತ್ತರ ಪ್ರದೇಶಕ್ಕೂ ಹಾಗೂ ಕಾಲ್ಪನಿಕ ಅಪರಾಧವಾದ ಲವ್ ಜಿಹಾದ್‌ಗೂ ಸಂಬಂಧವಿಲ್ಲ. ಇದನ್ನು ಬಿಜೆಪಿಯ ವಾಟ್ಸಪ್ ಗ್ರೂಪ್‌ಗಳಲ್ಲಿ ಮುಸ್ಲಿಂ ದ್ವೇಷ ಹರಡುವ ಉದ್ದೇಶದಿಂದ ಹಂಚಿಕೊಳ್ಳಲಾಗುತ್ತಿದೆ.
ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.
ವಿಡಿಯೊ ನೋಡಿ: “ಬಿಜೆಪಿ ತೊಲಗಿಸಿ, ಮಹಿಳೆಯರನ್ನು ರಕ್ಷಿಸಿ, ದೇಶ ಉಳಿಸಿ”ಅಕ್ಟೋಬರ್ 5ರಂದು ಮಹಿಳೆಯರ ‘ಮಹಾ ಧರಣಿ’ Janashakthi Media