ಬಿಜೆಪಿ ಯುವ ಮುಖಂಡನ ಹತ್ಯೆ : ಪುತ್ತೂರು, ಸುಳ್ಯ ಬಂದ್‌ಗೆ ಕರೆ – ಖಾಕಿ ಕಟ್ಟೆಚ್ಚರ

ಪುತ್ತೂರು: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ದ.ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರ್(32) ಕೊಲೆಗೆ ಸಂಬಂಧಿಸಿದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಹಿಂದುತ್ವ ಸಂಘಟನೆಗಳು ಬುಧವಾರ ಸುಳ್ಯ, ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಸ್ವಯಂ ಪ್ರೇರಿತ ಬಂದ್ ನಡೆಸುವಂತೆ ಕರೆ ನೀಡಿವೆ.

ಈ ನಡುವೆ ಪುತ್ತೂರು, ಬೆಳ್ಳಾರೆ, ಸುಳ್ಯ ಭಾಗದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಪ್ರವೀಣ್ ಅವರ ಮೃತ ಶರೀರವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಬೆಳ್ಳಾರೆಗೆ ಮೆರವಣಿಗೆ ಮೂಲಕ‌ ಕೊಂಡೊಯ್ಯಲು ಸಂಘಟನೆಗಳು ನಿರ್ಧರಿಸಿವೆ. ಪರಿಸ್ಥಿತಿ ಹತೋಟಿಯಲ್ಲಿಡುವ ನಿಟ್ಟಿನಲ್ಲಿ ಪುತ್ತೂರು, ಸುಳ್ಯ, ಕಡಬ ತಾಲೂಕಿನಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.

ಮಂಗಳವಾರ ರಾತ್ರಿ ಪ್ರವೀಣ್ ನೆಟ್ಟಾರ್ ಅವರ ಮೃತ ಶರೀರವನ್ನು ಪುತ್ತೂರು ಪ್ರಗತಿ ಆಸ್ಪತ್ರೆಯಿಂದ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸುವ ಸಂದರ್ಭ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳು ಬಾರದೆ ಶವ ಕೊಂಡೊಯ್ಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಜಿಲ್ಲಾ ಎಸ್ ಪಿ ಹೃಷಿಕೇಶ್ ಸೋನಾವಣೆ, ಉಪ ವಿಭಾಗದ ಸಹಾಯಕ ಆಯುಕ್ತರಾದ ಗಿರೀಶ್ ನಂದನ್, ಡಿವೈಎಸ್ ಪಿ ಗಾನಾ ಪಿ. ಕುಮಾರ್ ಅವರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು.

ಆದರೆ ಪ್ರತಿಭಟನಾಕಾರರು ಪಟ್ಟು ಸಡಿಲಿಸದೇ ಇದ್ದ ಕಾರಣ ತಡರಾತ್ರಿ ಒಂದೂವರೆ ಗಂಟೆ ಹೊತ್ತಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಪುತ್ತೂರಿಗೆ ಆಗಮಿಸಿ ಮುಖಂಡರ ಜತೆ ಮಾತುಕತೆ ನಡೆಸಿದರು. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಆಶ್ವಾಸನೆ ನೀಡಿದರು. ಪ್ರವೀಣ್ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಬೇಕೆಂದು ಈ ಸಂದರ್ಭದಲ್ಲಿ ಪ್ರತಿಭಟ‌ನಾಕಾರರು ಆಗ್ರಹಿಸಿದರು. ಜಿಲ್ಲಾಧಿಕಾರಿಯವರ ಮಾತುಕತೆ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಗಿದ್ದು, ಶವವನ್ನು ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು.

ಇಂದು ಪುತ್ತೂರಿನಿಂದ ಮೆರವಣಿಗೆ ಮೂಲಕ ಶವವನ್ನು ಕೊಂಡೊಯ್ದು ಬೆಳ್ಳಾರೆ ಸಮೀಪದ ನೆಟ್ಟಾರ್ ಎಂಬಲ್ಲಿರುವ ಪ್ರವೀಣ್ ಮನೆಯ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಉದ್ದೇಶಿಸಲಾಗಿದೆ. ಪುತ್ತೂರು, ಬೆಳ್ಳಾರೆ, ಸುಳ್ಯದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಬೆಳ್ಳಾರೆಯ ಶಿಕ್ಷಣ ಸಂಸ್ಥೆಗಳು ಮುಂಜಾಗರೂಕತಾ ಕ್ರಮವಾಗಿ ರಜೆ ಘೋಷಿಸಿವೆ.

Donate Janashakthi Media

Leave a Reply

Your email address will not be published. Required fields are marked *