ಬೆಂಗಳೂರು: ಬರ ಅಧ್ಯಯನ ಪ್ರವಾಸ ಎಂದು ಬಿಜೆಪಿ ನಾಯಕರು ಹೊಸ ನಾಟಕ ಶುರುಮಾಡಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಪ್ರವಾಸದಿಂದ ಬಿಜೆಪಿ ನಾಯಕರು ಏನು ಕಡಿದು ಕಟ್ಟೆ ಹಾಕಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ.ಬಿಜೆಪಿ ನಾಯಕರ ಬರ ಅಧ್ಯಯನ ಪ್ರವಾಸದ ವಿರುದ್ಧ ಕಿಡಿಕಾರಿದ ಅವರು, ಈ ಬಗ್ಗೆ ಶುಕ್ರವಾರ ಸರಣಿ ಟ್ವೀಟ್ ಮಾಡಿದ್ದಾರೆ .
ಜನಪರ ಕಾಳಜಿಯಿಂದ ರಾಜ್ಯದ ಬಿಜೆಪಿ ನಾಯಕರು ಈ ಅಧ್ಯಯನ ಪ್ರವಾಸ ಮಾಡುತ್ತಿಲ್ಲ. ಬದಲಿಗೆ ಕಳೆದು ಹೋಗಿರುವ ಅವರ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬರ ಅಧ್ಯಯನ ಪ್ರವಾಸದ ಪ್ರಹಸನ ಮಾಡುತ್ತಿದ್ದಾರಷ್ಟೇ’ ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ನಿಯಮದ ಅನುಸಾರ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು. ಅದರೆ ಪರಿಹಾರದ ಹಣ ಇಲ್ಲಿಯವರೆಗೂ ಬಿಡುಗಡೆಯಾಗಿಲ್ಲ. ಯಾಕೆಂದರೆ ಪ್ರಧಾನಿ ಮೋದಿ ಸರ್ಕಾರಕ್ಕೆ ಕರ್ನಾಟಕ ನೆನಪಾಗುವುದು ಚುನಾವಣಾ ಸಂದರ್ಭದಲ್ಲಿ ಮಾತ್ರ. ಕರ್ನಾಟಕ ಸಂಕಷ್ಟದಲ್ಲಿದ್ದಾಗಲೆಲ್ಲಾ ಕೇಂದ್ರ ಕೈ ಕೊಡುವುದು ಸಾಮಾನ್ಯ ಸಂಗತಿ. ಬಿಜೆಪಿ ನಾಯಕರು ಬರ ಅಧ್ಯಯನಕ್ಕಾಗಿ ರಾಜ್ಯ ಪ್ರವಾಸ ಮಾಡುವುದು ಬಿಟ್ಟು ದೆಹಲಿ ಪ್ರವಾಸ ಮಾಡಲಿ. ಆಗಲಾದರೂ ಕೇಂದ್ರ ಪರಿಹಾರ ಹಣ ಬಿಡುಗಡೆ ಮಾಡಬಹುದೇನೋ’ ಎಂದು ಕುಟುಕಿದ್ದಾರೆ.
‘ಸುಮಾರು 65 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆ ಕಲ್ಯಾಣ ಕರ್ನಾಟಕದಲ್ಲಿ ಇದ್ದು, ಈ ಅಸಮತೋಲನ ಸರಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ 65 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪ್ರಸಕ್ತ ವರ್ಷದಿಂದಲೇ ಪ್ರಾರಂಭಿಸಲು ಯೋಜಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳ ಕಟ್ಟಡಗಳನ್ನು ದುರಸ್ತಿ ಮಾಡುವುದು ನಮ್ಮ ಆದ್ಯತೆಗಳಲ್ಲಿ ಪ್ರಮುಖವಾಗಿದೆ’ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.