ಬಿಜೆಪಿ ತೊರೆಯಲಿದ್ದಾರೆಯೇ ಹಳ್ಳಿಹಕ್ಕಿ; ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಭೇಟಿ ಮಾಡಿದ ಎಚ್‌.ವಿಶ್ವನಾಥ್‌

ನವದೆಹಲಿ: ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಪಕ್ಷದ ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌, ತಮ್ಮ ಪಕ್ಷದ ಸರಕಾರ ಹಾಗೂ ಸಚಿವರನ್ನು ಟೀಕಿಸುತ್ತಲೇ ಇರುತ್ತಾರೆ. ಸದ್ಯ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ರಾಜಕೀಯವಾಗಿ ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ. ಇದಕ್ಕೆ ಪೂರಕವೆಂಬತೆ ದೆಹಲಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಜಿ ಸಂಸದ, ಹಾಲಿ ವಿಧಾನಪರಿಷತ್ ಸದಸ್ಯ ಎಚ್‌.ವಿಶ್ವನಾಥ್ ಭೇಟಿ ಮಾಡಿರುವ ಹಿನ್ನೆಲೆಯಲ್ಲಿ ಮತ್ತೆ ಪಕ್ಷಾಂತರ ಮಾಡುತ್ತಾರೆ ಎಂಬ ಸುದ್ದಿ ದಟ್ಟವಾಗಿದೆ. ಸ್ವಪಕ್ಷದವರ ವಿರುದ್ಧ ಸದಾ ಕಿಡಿಕಾರುವ ವಿಶ್ವನಾಥ್, ಇದೀಗ ಸದ್ದಿಲ್ಲದೆ ಮರಳಿ ಕಾಂಗ್ರೆಸ್ ಸೇರುವ ಲಕ್ಷಣಗಳು ಕಾಣುತ್ತಿವೆ. ದೆಹಲಿಯಲ್ಲಿ ನಡೆದ ಈ ಅನಿರೀಕ್ಷಿತ ಬೆಳವಣಿಗೆಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಹೂಗುಚ್ಛ ನೀಡಿ ಶುಭ ಹಾರೈಸಿದ್ದಾರೆ. ಇದು ಬರೀ ಶುಭ ಹಾರೈಕೆಯ ಭೇಟಿಯಲ್ಲ. ಇದರ ಹಿಂದೆ ಪಕ್ಷಾಂತರದ ರಾಜಕೀಯ ಲೆಕ್ಕಚಾರಗಳು ಅಡಗಿವೆ.

ಜೆಡಿ(ಎಸ್‌) ಪಕ್ಷ ತೊರೆದು ಬಿಜೆಪಿ ಪಕ್ಷಾಂತರ ಮಾಡಿದ ಬಳಿಕ ನಡೆದ ಹುಣಸೂರು ಉಪಚುನಾವಣೆಯಲ್ಲಿ ಎಚ್‌.ವಿಶ್ವನಾಥ್ ಸೋತ ಬಳಿಕ ಅವರನ್ನು ಸಮಾಧಾನಪಡಿಸಲೆಂದೇ ಬಿಜೆಪಿ ಅವರಿಗೆ ಸಾಹಿತ್ಯ ಕೋಟಾದಲ್ಲಿ ವಿಧಾನ ಪರಿಷತ್ ಸದಸ್ಯನಾಗಿ ಮಾಡಿತ್ತು. ಇದೀಗ ಎಚ್‌.ವಿಶ್ವನಾಥ್ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿರುವುದು ಬಿಜೆಪಿ ತೊರೆಯುವುದು ಸಹಿನವಾಗಿದೆ ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆಯಿಂದ ಬೇಸತ್ತು ಕಾಂಗ್ರೆಸ್ ತೊರೆದಿದ್ದ ಎಚ್‌.ವಿಶ್ವನಾಥ್ ಏಕಾಏಕಿ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ತೀವ್ರ ಕುತೂಹಲ ಮೂಡಿಸಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಅವರು ಕಾಂಗ್ರೆಸ್‌ನಲ್ಲಿ ಮೂಲೆ ಗುಂಪಾದರು. ಹೀಗಾಗಿ ಬಳಿಕೆ ಜೆಡಿ(ಎಸ್‌) ಪಕ್ಷ ಸೇರಿ, 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಎಚ್‌.ವಿಶ್ವನಾಥ್‌ ಗೆಲುವನ್ನು ಸಾಧಿಸಿದರು. ನಂತರ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ತಮಗೆ ಸಚಿವ ಸ್ಥಾನ ಸಿಗಬಹುದೆಂದು ಕಾದು ಕುಳಿತರು. ಆದರೆ ಅದು ಸಾಧ್ಯವಾಗಲಿಲ್ಲ. ಅದಾದ ಆಪರೇಷನ್ ಕಮಲ ಹೆಸರಿನಲ್ಲಿ ನಡೆದ ಬೆಳವಣಿಗೆಯಲ್ಲಿ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದರು. ಆ ನಂತರ ನಡೆದ ಉಪಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿದರಾದರೂ ಬಿಜೆಪಿ ಅಭ್ಯರ್ಥಿಗೆ ಜನ ಮಣೆಹಾಕಲಿಲ್ಲ. ವಿಶ್ವನಾಥ್‌ ಸೋಲು ಅನುಭವಿಸಿದರು.

ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಎಚ್.ವಿಶ್ವನಾಥ್ ಅವರು ಬಿಜೆಪಿಗೆ ವಿದಾಯ ಹೇಳುವ ಲಕ್ಷಣಗಳು ಗೋಚರಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ. ಹೀಗಾಗಿ ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್‌ಗೆ ಹೋಗಿ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದಾರೆ ಅಥವಾ 2024ರ ಲೋಕಸಭಾ ಚುನಾವಣೆ ಎದುರಿಸಲಿದ್ದಾರೆ. ಆದರೆ, ಅವರು ಹೆಚ್ಚು ದಿನ ಬಿಜೆಪಿಯಲ್ಲಿ ಉಳಿಯಲ್ಲ ಎಂಬುದಂತು ಖಾತರಿಯಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *