ಯಾದಗಿರಿ: ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಭಗವಂತ ಖೂಬಾ ಕೇಂದ್ರ ರಸಗೊಬ್ಬರ, ರಾಸಾಯನಿಕ ಖಾತೆ ರಾಜ್ಯ ಸಚಿವರಾದ ಮೇಲೆ ರಾಜ್ಯದ ಪ್ರವಾಸದಲ್ಲಿರುವ ಖೂಬಾ ಅವರಿಗೆ ಬಿಜೆಪಿ ಪಕ್ಷವು ಜನಾಶೀರ್ವಾದ ಯಾತ್ರೆಯನ್ನು ಕೈಗೊಂಡಿತ್ತು ಈ ಸಂದರ್ಭದಲ್ಲಿ ಯಾದಗಿರಿಗೆ ಭಗವಂತ ಖೂಬಾ ಆಗಮಿಸಿದಾಗ ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತ ಕೋರಲಾಗಿತ್ತು. ಈ ಘಟನೆ ಕುರಿತು ತನಿಖೆ ನಡೆಸಿದ ಪೊಲೀಸ್ ಇಲಾಖೆಯ ಅಧಿಕಾರಿಗಳು ಮೂವರು ಕಾನ್ಸ್‌ಟೇಬಲ್‌ಗಳನ್ನು ಅಮಾನತು ಮಾಡಿದೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನೆನ್ನೆ ರಾತ್ರಿ ಯಾದಗಿರಿ ಗ್ರಾಮೀಣ ಠಾಣೆಯ ಪೊಲೀಸರು ಮೊನಪ್ಪ, ಶರಣಪ್ಪ, ನಿಂಗಪ್ಪ, ದೇವಿಂದ್ರಪ್ಪ ಎಂಬುವವರನ್ನು ಬಂಧಿಸಿದ್ದಾರೆ. ಘಟನೆ ಕುರಿತು ಎಫ್‌ಐಆರ್ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಗ್ರಾಮೀಣ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ವೀರೇಶ್, ಸಂತೋಷ್, ಮೆಹಬೂಬ್ ಅಮಾನತುಗೊಂಡಿದ್ದಾರೆ. ಪೊಲೀಸರ ಸಮ್ಮುಖದಲ್ಲಿಯೇ ನಾಲ್ವರು ನಾಡ ಬಂದೂಕು ಮೂಲಕ ಗಾಳಿಯಲ್ಲಿ ಗುಂಡು ಹಾರಿಸಿದ್ದರು.
ಜನಾಶೀರ್ವಾದ ಯಾತ್ರೆ ಮೂಲಕ ಯಾದಗಿರಿ ಜಿಲ್ಲೆಯ ಯರಗೊಳ ಗ್ರಾಮಕ್ಕೆ ಆಗಮಿಸಿದ ಭಗವಂತ ಖೂಬಾ ಅವರಿಗೆ ಬುಧವಾರದಂದು ಸ್ವಾಗತಿಸುವ ಭರದಲ್ಲಿ ನಾಡಬಂದೂಕಿನಿಂದ ಗುಂಡು ಹಾರಿಸಿ ಸ್ವಾಗತಲಾಯಿತು. ಈ ಘಟನೆಗೆ ಸಾರ್ವಜನಿಕರಿಂದ ತೀವ್ರ ವಿರೋಧವೂ ವ್ಯಕ್ತವಾಗಿದೆ.
ಗುಂಡು ಹಾರಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲರೂ ರೈತರಾಗಿದ್ದಾರೆ. ಅವರು ಬೆಳೆ ನಾಶ ಮಾಡುವ ಪ್ರಾಣಿಗಳನ್ನು ಓಡಿಸಲು ನಾಡ ಬಂದೂಕು ಹಿಡಿದುಕೊಂಡು ಕಾವಲು ಕಾಯುತ್ತಿದ್ದವರು. ಮಾಜಿ ಸಚಿವ ಬಾಬೂರಾವ್ ಚಿಂಚಿನಸೂರ ಮತ್ತು ಯಾದಗಿರಿ ಶಾಸಕ ವೆಂಕಟರೆಡ್ಡಿ ಬಂದೂಕಿನಿಂದ ಸ್ವಾಗತಿಸಲು ಸೂಚಿಸಿದ ಕಾರಣ ಗುಂಡು ಹಾರಿಸಿದ್ದರು ಎಂಬ ಮಾಹಿತಿ ಇದೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಸಿದ ಭಗವಂತ ಖೂಬಾ ನಾಡಬಂದೂಕು ಮೂಲಕ ಗುಂಡು ಹಾರಿಸಿ ಸ್ವಾಗತ ಮಾಡಲಿಲ್ಲ. ಘಟನೆಯನ್ನು ತಿರುಚಬೇಡಿ. ಗುಂಡು ಹಾರಿಸಿದ್ದರೆ ನಾನೇ ಕರೆದು ಮಾತನಾಡುತ್ತಿದ್ದೆ. ತಪ್ಪು ಮಾಡಿದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಗುಂಡು ಹಾರಿಸುವ ಘಟನೆ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಗುಂಡು ಹಾರಿಸಿ ಸ್ವಾಗತಿಸುವುದು ಯಾವ ಸಂಸ್ಕೃತಿ ಎಂದು ಪ್ರಶ್ನೆ ಮಾಡಿದ್ದಾರೆ. ಗುಂಡು ಅಲ್ಲಿ ಸೇರಿದ್ದ ಜನರಲ್ಲಿ ಯಾರಿಗಾದರೂ ತಗುಲಿದ್ದರೆ ಯಾರು ಜವಾಬ್ದಾರಿಯಾಗುತ್ತಿದ್ದರು. ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.
ಮಾಜಿ ಸಚಿವ ಬಾಬೂರಾವ್ ಚಿಂಚಿನಸೂರ ಮತ್ತು ಇತರ ನಾಯಕರು ಕೈಯಲ್ಲಿ ಬಂದೂಕು ಹಿಡಿದುಕೊಂಡಿರುವ ಬಗ್ಗೆ ಫೋಟೋಗಳ ಮೂಲಕ ಸಾಬೀತಾಗಿರುವುದರಿಂದ ಕೂಡಲೇ ಅವರ ಮೇಲೆಯೂ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಗುತ್ತಿದೆ.