ರಾಯಚೂರು: ಚುನಾವಣೆಗೂ ಮುನ್ನ ಯಾತ್ರೆಯನ್ನು ಆರಂಭಿಸಿರುವ ಭಾರತೀಯ ಜನತಾ ಪಕ್ಷವು ಇಂದಿನಿಂದ ಬಿಜೆಪಿ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದೆ. ಇಂದು(ಅಕ್ಟೋಬರ್ 11) ರಾಯಚೂರು ತಾಲ್ಲೂಕಿನ ತಾಲ್ಲೂಕಿನ ಗಿಲ್ಲೆಸೂಗೂರು ಸರ್ಕಾರಿ ಶಾಲೆ ಬಳಿ ಹಮ್ಮಿಕೊಳ್ಳಲಾಗಿದೆ. ಈ ನಡುವೆ ಕಾರ್ಯಕ್ರಮದ ನಿಮಿತ್ತ ಶಾಲೆ ಆವರಣದಲ್ಲಿ ನಿರ್ಮಿಸಲಾಗಿದ್ದ 7 ಅಡಿ ಎತ್ತರ 80 ಅಡಿ ಉದ್ದದ ಸುಸಜ್ಜಿತ ತಡೆಗೋಡೆಯನ್ನು ಕೆಡವಲಾಗಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಜನ ಸಂಕಲ್ಪ ಯಾತ್ರೆ ನಡೆಯಲಿದ್ದು, 50 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಹೀಗಾಗಿ ಜನರಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ಶಾಲಾ ತಡೆಗೋಡೆಯನ್ನು ನೆಲಸಮಗೊಳಿಸಲಾಗಿದೆ. ತಡೆಗೋಡೆ ಕೆಡವಿದ್ದಕ್ಕೆ ಸ್ಥಳೀಯರು ತೀರ್ವತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದೆರಡು ಗಂಟೆಗಳ ಕಾಲ ನಡೆಯುವ ಕಾರ್ಯಕ್ರಮಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ತಡೆಗೋಡೆಯನ್ನು ನೆಲಸಮಗೊಳಿಸುವುದು ಎಷ್ಟು ಸರಿ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಬಿಜೆಪಿ ಸಂಕಲ್ಪ ಯಾತ್ರೆ ಒಟ್ಟು 26 ದಿನಗಳ ಕಾಲ ನಡೆಯಲಿದ್ದು ಅಕ್ಟೋಬರ್ 11ರಿಂದ ಡಿಸೆಂಬರ್ 25ರವರೆಗೆ ಹಮ್ಮಿಕೊಳ್ಳಲಾಗಿದೆ.
ವಾರದಲ್ಲಿ ಮೂರು ದಿನ ಆರು ಕ್ಷೇತ್ರಗಳಲ್ಲಿ ಯಾತ್ರೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಂಡ 50 ಕ್ಷೇತ್ರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಂಡ 50 ಮತ್ತು ಅರುಣ್ ಸಿಂಗ್ 25 ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಡಿಸೆಂಬರ್ 25 ರೊಳಗೆ ಒಟ್ಟು 125 ಕ್ಷೇತ್ರ ಯಾತ್ರೆ ನಡೆಯಲಿದೆ ಎನ್ನಲಾಗಿದೆ.