ಬಿಜೆಪಿ ಐಟಿ ಸೆಲ್ ಮುಖ್ಯಸ್ಥನ ಸುಳ್ಳು ಟ್ವೀಟ್‍ ಟ್ಯಾಗ್ ಮಾಡಿದ ಟ್ವಿಟ್ಟರ್

 

  • ಪಂಜಾಬ್‍ ರೈತರ ಮೇಲೆ ಪೊಲೀಸರ ಲಾಠಿ ಪ್ರಹಾರ ಘಟನೆ ಫೇಕ್‍ ಎಂದು ಸುಳ್ಳು ಟ್ವೀಟ್‍ ಮಾಡಿದ್ದ ಮಾಳವೀಯ

ನವದೆಹಲಿ: ತನ್ನ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹರಿದಾಡುವುದನ್ನು ತಡೆಯಲು ಪ್ರಬಲ ವ್ಯವಸ್ಥೆ ರೂಪಿಸುತ್ತಿರುವ ಟ್ವಿಟ್ಟರ್ ಅಮೆರಿಕ ಅಧ್ಯಕ್ಷರ ಟ್ವೀಟ್ಗಳನ್ನೇ ಟ್ಯಾಗ್ ಮಾಡಿದ್ದುಂಟು. ಇದೀಗ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರ ಟ್ವೀಟ್ ಅನ್ನೂ ಟ್ಯಾಗ್ ಮಾಡಿದೆ. ರೈತರ ಪ್ರತಿಭಟನೆಯನ್ನು ಪ್ರಾಪಗ್ಯಾಂಡ ಎಂಬಂತೆ ಬಿಂಬಿಸಲು ಅಮಿತ್ ಮಾಳವೀಯ ಮಾಡಿದ ಕೆಲ ಟ್ವೀಟ್ಗಳು ಸತ್ಯಕ್ಕೆ ದೂರವಾಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಟ್ವಿಟ್ಟರ್ ಕ್ರಮ ಕೈಗೊಂಡಿದೆ.

ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ ದೃಶ್ಯವೊಂದನ್ನು ರಾಹುಲ್ ಗಾಂಧಿ ಲಗತ್ತಿಸಿ ಟ್ವೀಟ್ ಮಾಡಿದ್ದರು. ಇದನ್ನ ಉಲ್ಲೇಖಿಸಿ ಅಮಿತ್ ಮಾಳವೀಯ ಅವರು, ರಾಹುಲ್ ಗಾಂಧಿ ವಿಶ್ವಾಸಾರ್ಹವಲ್ಲದ ವಿಪಕ್ಷ ನಾಯಕ ಎಂದು ಪ್ರತ್ಯಾರೋಪ ಮಾಡಿ ಟ್ವೀಟ್ ಮಾಡಿದ್ದರು. ಪಂಜಾಬ್ ರೈತನ ಮೇಲೆ ಪೊಲೀಸರು ಲಾಠಿ ಹೊಡೆದಿಲ್ಲ. ವಯಸ್ಸಾಗಿರುವ ಅವರನ್ನು ಹಾಗೆಯೇ ಬಿಟ್ಟು ಕಳುಹಿಸಿದರು ಎಂದು ಮತ್ತೊಂದು ಫೋಟೋವನ್ನು ಆ ಟ್ವೀಟ್​ನಲ್ಲಿ ಮಾಳವೀಯ ಲಗತ್ತಿಸಿದ್ದರು. ಆದರೆ, ವಾಸ್ತವವದಲ್ಲಿ ಆ ದೃಶ್ಯದಲ್ಲಿ ಪೊಲೀಸರು ಆ ಹಿರಿಯ ರೈತನ ಮೇಲೆ ಲಾಠಿ ಹೊಡೆದಿರುವುದು ವಾಸ್ತವ ಎಂಬುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರ ಆ ಟ್ವೀಟನ್ನು ಟ್ವಿಟ್ಟರ್ ಟ್ಯಾಗ್ ಮಾಡಿದೆ.

ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದೇನು?: “ಇದು ನಿಜಕ್ಕೂ ಬೇಸರ ತರಿಸುವ ಫೋಟೋ. ಜೈ ಜವಾನ್ ಜೈ ಕಿಸಾನ್ ಎಂಬುದು ನಮ್ಮ ಸ್ಲೋಗನ್ ಆಗಿದೆ. ಆದರೆ, ಪ್ರಧಾನ ಮಂತ್ರಿ ಅವರ ಅಹಂಕಾರವು ರೈತನ ವಿರುದ್ಧ ಯೋಧ ತಿರುಗಿ ನಿಲ್ಲುವಂತಾಗಿದೆ” ಎಂದು ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಅದರಲ್ಲಿ ಸಿಆರ್​ಪಿಎಫ್​ನ ಜವಾನನೊಬ್ಬ ವಯೋವೃದ್ಧ ರೈತನಿಗೆ ಹೊಡೆಯಲು ಲಾಠಿ ಎತ್ತಿರುವ ಚಿತ್ರವೊಂದನ್ನು ಆ ಟ್ವೀಟ್​ನಲ್ಲಿ ಸೇರಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಮಿತ್ ಮಾಳವೀಯ, ಆ ದೃಶ್ಯದಲ್ಲಿ ವೃದ್ಧ ರೈತನಿಗೆ ಪೊಲೀಸರು ಏನೂ ಮಾಡಲಿಲ್ಲ ಎಂದು ವಾದಿಸಿ ಒಂದು ವಿಡಿಯೋ ತುಣಕೊಂದನ್ನ ಹಾಕಿದ್ದರು. ಆದರೆ, ಆ ವಿಡಿಯೋ ತುಣುಕು ಎಡಿಟ್ ಆಗಿದ್ದು, ಪೂರ್ಣ ದೃಶ್ಯ ಇರಲಿಲ್ಲ. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಆ ದೃಶ್ಯದ ಪೂರ್ಣ ಚಿತ್ರಣ ಬಂದಿತು. ಅದರಲ್ಲಿ ಪೊಲೀಸರು ಆ ವೃದ್ಧನ ಮೇಲೆ ಲಾಠಿ ಹೊಡೆದಿರುವುದು ಸ್ಪಷ್ಟವಾಗಿ ತೋರಿದೆ.

ಆ ದೃಶ್ಯದಲ್ಲಿದ್ದ ರೈತನನ್ನು ಸುಖದೇವ್ ಸಿಂಗ್ ಎಂದು ಗುರುತಿಸಲಾಗಿದೆ. ಸದ್ಯ ಹರಿಯಾಣ-ದೆಹಲಿ ಗಡಿಭಾಗದಲ್ಲಿರುವ ಅವರನ್ನು ಕೆಲ ಮಾಧ್ಯಮ ಪ್ರತಿನಿಧಿಗಳು ಸಂಪರ್ಕಿಸಿ ವಿಚಾರಿಸಿವೆ. ಅವರ ಅಂಗೈ, ಬೆನ್ನು ಮತ್ತು ತೋಳಿಗೆ ಪೆಟ್ಟು ಬಿದ್ದಿದೆ. ನನಗೆ ಪೆಟ್ಟು ಬಿದ್ದಿಲ್ಲ ಅಂತಾರೆ. ಇಲ್ಲಿ ನೋಡಿ ಗಾಯಗಳಾಗಿರುವುದು ಎಂದು ಆ ವೃದ್ಧ ರೈತ ಹೇಳಿದರೆಂದು ಬೂಮ್ ತಾಣ ವರದಿ ಪ್ರಕಟಿಸಿದೆ.

ಉದ್ದೇಶಪೂರ್ವಕವಾಗಿ ವಿಡಿಯೋ ಟ್ರಿಮ್ ಮಾಡಿ ತಪ್ಪಾಗಿ ಬಿಂಬಿಸಿದ ಕಾರಣಕ್ಕೆ ಅಮಿತ್ ಮಾಳವೀಯ ಅವರ ಆ ಟ್ವೀಟನ್ನು ಟ್ವಿಟ್ಟರ್ ಟ್ಯಾಗ್ ಮಾಡಿದೆ.

ಅಮಿತ್ ಮಾಳವೀಯ ಅವರಿಗೂ ವಿವಾದಗಳಿಗೂ ಇರುವ ನಂಟು ಹೊಸದೇನಲ್ಲ. ಕೆಲ ದಿನಗಳ ಹಿಂದಷ್ಟೇ ಅವರು ಪಂಜಾಬ್ ರೈತರ ಪ್ರತಿಭಟನೆಗಳನ್ನ ಮಾವೋವಾದಿ, ಖಲಿಸ್ತಾನಿಗಳ ಪ್ರಾಪಗಾಂಡ ಎಂದು ಆರೋಪಿಸಿದ್ದರು. ಇದು ರೈತರ ಸಮಸ್ಯೆಯಲ್ಲಿ ಕೇವಲ ರಾಜಕೀಯ ಮಾತ್ರವಾಗಿದ್ದು, ದೆಹಲಿಯಲ್ಲಿ ಸುಡಲು ಈ ಸಂಚು ರೂಪಿಸಲಾಗಿದೆ ಎಂದು ಮಾಳವೀಯ ನ. 20ರಂದು ಟ್ವೀಟ್ ಮಾಡಿದ್ದರು.

 

 

 

 

 

 

 

 

Donate Janashakthi Media

Leave a Reply

Your email address will not be published. Required fields are marked *