ಶಿವಮೊಗ್ಗ: ಭಾರತ ದೇಶಕ್ಕೆ ಬಿಜೆಪಿ ಪಕ್ಷವೇ ಡೇಂಜರ್ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ, ಕಾಂಗ್ರೆಸ್ ಜಾಹಿರಾತಿಗೆ ಪ್ರತಿಯಾಗಿ ಬಿಜೆಪಿಯವರು ಕಾಂಗ್ರೆಸ್ ಡೇಂಜರ್ ಎಂಬ ಜಾಹಿರಾತು ಬಿಡುಗಡೆ ಮಾಡಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ ಮಾತನಾಡಿದರು.
ಹೆಣ್ಣುಮಕ್ಕಳಿಗೆ ಉಚಿತ ಬಸ್ ಸೌಲಭ್ಯ , ಉಚಿತ ವಿದ್ಯುತ್, ಅನ್ನಭಾಗ್ಯ ಯೋಜನೆಗಳು ಡೇಂಜರ್ ಆಗುತ್ತವೆಯೇ? ಸಮಾಜವನ್ನು ಒಡೆಯುವಂತಹ ಕಾರ್ಯಗಳು, ಮತಗಳ ಧ್ರುವೀಕರಣ ಮಾಡುವುದು ಅಪಾಯಕಾರಿಯೇ ಹೊರತು, ವಿವಿಧತೆಯಲ್ಲಿ ಏಕತೆಯನ್ನು ತರುವುದು ಡೇಂಜರ್ ಅಲ್ಲ. ದೇಶಕ್ಕೆ ಬಿಜೆಪಿ ಪಕ್ಷವೇ ಡೇಂಜರ್ ಹೊರತು, ಕಾಂಗ್ರೆಸ್ ಪಕ್ಷ ಅಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಇದ್ದರೆ, ಭ್ರಷ್ಟಾಚಾರ ಹೆಚ್ಚಾಗಲಿದೆ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾನೂನು ಪ್ರಕಾರ ರೇಡ್ ಮಾಡುವುದನ್ನು ನಾವು ಎಂದೂ ವಿರೋಧಿಸುವುದಿಲ್ಲ. ಆದರೆ ಬಿಜೆಪಿಯಲ್ಲಿ ಶ್ರೀಮಂತರಿಲ್ಲವೇ, ಯಡಿಯೂರಪ್ಪ , ವಿಜಯೇಂದ್ರ ಭ್ರಷ್ಟಾಚಾರ ಮಾಡಿಲ್ಲವೇ ? ಶೋಭಾ ಕರಂದ್ಲಾಜೆ, ಅಶೋಕ್, ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಿಜೆಪಿಯವರ ಮೇಲೆ, ಅವರ ಮೇಲೆ ರೇಡ್ ಗಳು ಏಕೆ ಆಗುತ್ತಿಲ್ಲ. ಆದಾಯ ತೆರಿಗೆಯನ್ನು ಸರಿಯಾಗಿ ಕಟ್ಟದವರ ಮೇಲೆ ಕ್ರಮವಾಗಲಿ, ಆದರೆ ಒಬ್ಬರ ಮೇಲೆ ರೇಡ್ ಮಾಡಿ ಮತ್ತೊಬ್ಬರನ್ನು ಬಿಡುವ ಬದಲು, ಆದಾಯಮೀರಿ ಆಸ್ತಿ ಸಂಪಾದಿಸಿದ ಎಲ್ಲರ ಮೇಲೆ ಕಾನೂನು ಕ್ರಮವಾಗಬೇಕು ಎಂದರು.
ಇದನ್ನು ಓದಿ : ಪ್ರವೇಶ ಶುಲ್ಕ ಪಡೆದ ಯೋಗ ಶಿಬಿರಗಳಿಗೆ ʼಸೇವಾ ತೆರಿಗೆʼ ಪಾವತಿಸಬೇಕು ಎಂದು ಪತಂಜಲಿ ಯೋಗಪೀಠಕ್ಕೆ ಸೂಚಿಸಿದ ಸುಪ್ರೀಂಕೋರ್ಟ್
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಯಡಿಯೂರಪ್ಪನವರ ಹೇಳಿರುವ ಬಗ್ಗೆ ಉತ್ತರಿಸಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಯಡಿಯೂರಪ್ಪನವರು ಈ ರೀತಿ ಹೇಳಿದ್ದರು. ಆದರೆ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಗೆದ್ದಿತು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಶಿವಮೊಗ್ಗವನ್ನೂ ಸೇರಿದಂತೆ 20 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ಪಕ್ಷ ನಕಾರಾತ್ಮಕ ವಿಷಯಗಳನ್ನು ಅವಲಂಬಿಸದೇ, ಸದಾ ತನ್ನ ಶಕ್ತಿಯನ್ನು ಅವಲಂಬಿಸಿಯೇ ಚುನಾವಣೆಯನ್ನು ಗೆಲ್ಲುತ್ತೇವೆ ಎಂದರು.
ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರು ಯಾವ ಆಧಾರದ ಮೇಲೆ ಇಂತಹ ಹೇಳಿಕೆಯನ್ನು ನೀಡಿದ್ದಾರೆ ಎಂಬುದನ್ನು ಮಾಧ್ಯಮದವರು ಪ್ರಶ್ನಿಸಬೇಕು. ಈ ಬಾರಿ ಗ್ಯಾರಂಟಿಗಳಿಗೆ 36 ಸಾವಿರ ಕೋಟಿ ಹಾಗೂ ಮುಂದಿನ ವರ್ಷ 52009 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದ್ದು, 1.20 ಲಕ್ಷ ಕೋಟಿ ರೂ.ಗಳನ್ನು ಅಭಿವೃದ್ಧಿಗೆ ಮೀಸಲಿರಿಸಿದೆ. ಕುಮಾರಸ್ವಾಮಿಯವರು ಕೇವಲ ರಾಜಕೀಯಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಆಗಿ ಹೇಳಿದರು.
ಇದನ್ನು ನೋಡಿ : ನರೇಂದ್ರ ಮೋದಿ ಹೆಸರಿಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಪ್ರಚಾರ ಮಾಡಲು ಸಾಧ್ಯವಿಲ್ಲವೆ? Janashakthi Media