ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಸ್ವಲ್ಪ ಮುನ್ನಡೆ : ತಮಿಳುನಾಡು, ಕೇರಳ | ಭಾಗ -01

 – ವಸಂತರಾಜ ಎನ್.ಕೆ

ಪ್ರಧಾನವಾಗಿ ಉತ್ತರದ ಹಿಂದಿ ಪ್ರದೇಶಗಳ ಮತ್ತು ಪಶ್ಚಿಮ ಪ್ರದೇಶದ ಪಕ್ಷವೆಂದು ಹೆಸರಾಗಿದ್ದ ಬಿಜೆಪಿ/ಎನ್.ಡಿ.ಎ ಆ ಪ್ರದೇಶಗಳಲ್ಲಿ ಪ್ರಾಬಲ್ಯ ಕಳೆದಕೊಂಡು, ದಕ್ಷಿಣ ಮತ್ತು ಪೂರ್ವದ ಪ್ರದೇಶಗಳಲ್ಲಿ ಗಮನಾರ್ಹವಾಗಿ ವಿಸ್ತರಿಸಿರುವುದು ಈ ಚುನಾವಣೆಯ ಪ್ರಮುಖ ಬೆಳವಣಿಗೆ. ಬಿಜೆಪಿ ಮತ್ತು ಅದರ ನಾಯಕತ್ವದ ಎನ್.ಡಿ.ಎ ಕೂಟಕ್ಕೆ ದಕ್ಷಿಣದ ರಾಜ್ಯಗಳಲ್ಲಿ ಸೀಟು ಮತ್ತು ಮತಗಳಿಕೆ ಎರಡರಲ್ಲೂ ಸ್ವಲ್ಪ ಮುನ್ನಡೆಯಾಗಿದೆ. ವಿಶೇಷವೆಂದರೆ ಇಂಡಿಯಾ ಕೂಟ ಸಹ ಸೀಟು ಮತ್ತು ಮತಗಳಿಕೆ ಎರಡರಲ್ಲೂ ಮುನ್ನಡೆ ಕಂಡಿದೆ. ಆದರೆ ಇವೆರಡರ ಮುನ್ನಡೆ ಪ್ರಾದೇಶಿಕ ಪಕ್ಷಗಳಾದ ಬಿ.ಆರ್.ಎಸ್ ಮತ್ತು ವೈ.ಎಸ್.ಆರ್ ಕಾಂಗ್ರೆಸ್ ಮತ್ತು ಬಿ.ಆರ್.ಎಸ್ ಪಕ್ಷಗಳ ಭಾರೀ ನಷ್ಟದಿಂದ ಬಂದಿದೆ. ಎನ್.ಡಿ.ಎ (ತೆಲುಗು ದೇಶಂ-ಬಿಜೆಪಿ ಕೂಟ) ಗೆ ಆಂಧ್ರ ಪ್ರದೇಶದಲ್ಲಿ ಸ್ವೀಪ್ ಆದರೆ, ತೆಲಂಗಾಣದಲ್ಲಿ ಉತ್ತಮ ಮುನ್ನಡೆಯಾಗಿದೆ. ಕೇರಳ, ತಮಿಳುನಾಡುಗಳಲ್ಲಿ ಮತಪ್ರಮಾಣ ಹೆಚ್ಚಿಸಿಕೊಂಡು ಗಮನಾರ್ಹ ಮಟ್ಟ ಮುಟ್ಟಿದೆ. ಕೇರಳದಲ್ಲಿ ಮೊದಲ ಬಾರಿ ಖಾತೆ ತೆರೆದಿದೆ. ಕರ್ನಾಟಕದಲ್ಲಿ ಮಾತ್ರ ಸೀಟು, ಮತಪ್ರಮಾಣ ಎರಡರಲ್ಲೂ ಕಳೆದುಕೊಂಡಿದ್ದರೂ, ದೊಡ್ಡ ಕೂಟದ ಸ್ಥಾನವನ್ನು ಉಳಿಸಿಕೊಂಡಿದೆ. ಇಂಡಿಯಾ ಕೂಟ ತಮಿಳುನಾಡು, ಕೇರಳಗಳಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಂಢು, ತೆಲಂಗಾಣ, ಕರ್ನಾಟಕ ಗಳಲ್ಲಿ ಅದರ ವಿಧಾನಸಬಾ ವಿಜಯದ ಮುಂದುವರಿಕೆಯಾಗಿ ನಿರೀಕ್ಷಿತವಾಷ್ಟು ಅಲ್ಲದಿದ್ದರೂ, ಉತ್ತಮ ಮುನ್ನಡೆ ಸಾಧಿಸಿದೆ. ಆಂಧ್ರದಲ್ಲಿ ಸ್ಥಗಿತಗೊಂಡಿದೆ. ದಕ್ಷಿಣ

ದಕ್ಷಿಣದ ರಾಜ್ಯಗಳಲ್ಲಿ ಒಟ್ಟು 131 ಸೀಟುಗಳು ಇದ್ದು, ಅದರಲ್ಲಿ ಎನ್.ಡಿ.ಎ ಕೂಟ 2019ರಲ್ಲಿ ಗಳಿಸಿದ್ದಕ್ಕಿಂತ 16 ಹೆಚ್ಚು ಸೀಟುಗಳನ್ನು ಗಳಿಸಿ 50 ಸೀಟುಗಳಿಗೆ ಏರಿದೆ.. ಸೀಟು ಹೆಚ್ಚಳಕ್ಕೆ ಮುಖ್ಯ ಕಾರಣ ತೆಲುಗು ದೇಶಂ ಜತೆ ಮೈತ್ರಿ. ಇಂಡಿಯಾ ಕೂಟ 76 ಸೀಟುಗಳನ್ನು ಗಳಿಸಿದ್ದು 13 ಹೆಚ್ಚು ಸೀಟುಗಳನ್ನು ಗಳಿಸಿದೆ. ಎನ್.ಡಿ.ಎ ಕೂಟ ಈ ದಕ್ಷಿಣದ ರಾಜ್ಯಗಳಲ್ಲಿ ಶೇ 7.6 ಮತ ಹೆಚ್ಚಿಸಿಕೊಂಡು ಶೇ.36.7 ಮತ ಗಳಿಸಿದೆ. ಇಂಡಿಯಾ ಕೂಟ ಶೇ.7.1 ರಷ್ಟು ಮತಗಳಿಕೆ ಹೆಚ್ಚಿಸಿಕೊಂಡು ಶೇ. 40.4 ಮತ ಗಳಿಸಿದೆ. ಇತರರು ಶೇ.14.7 ಮತ ಕಳೆದುಕೊಂಡು ಶೇ. 22.8 ಮತ ಗಳಿಸಿದ್ದಾರೆ. ಬಿಜೆಪಿ ದಕ್ಷಿಣದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಮುನ್ನಡೆ ಸಾಧಿಸಿದ್ದರೂ, ಇಂಡಿಯಾ ಕೂಟ ಈಗಲೂ ಅತಿ ದೊಡ್ಡ ಕೂಟವಾಗಿ ಮುಂದುವರೆದಿದೆ. ಇಲ್ಲಿ ಇತರರಲ್ಲಿ ಬಿ.ಆರ್.ಎಸ್ ಮತ್ತು ವೈ.ಎಸ್.ಆರ್ ಕಾಂಗ್ರೆಸ್ ಪ್ರಧಾನವಾಗಿ ಬರುತ್ತವೆ. ದಕ್ಷಿಣ

ದಕ್ಷಿಣದ ರಾಜ್ಯಗಳ ಸೀಟು-ಮತಪ್ರಮಾಣ ಗಳಿಕೆ

ತಮಿಳುನಾಡು

ತಮಿಳುನಾಡು ಚುನಾವಣೆಗಳಲ್ಲಿ ಹಿಂದಿನಂತೆ ಡಿಎಂಕೆ ನಾಯಕತ್ವದ ಇಂಡಿಯಾ ಕೂಟ, ಒಂದು ಸೀಟನ್ನು ಕಿತ್ತುಕೊಂಡು 39ರಲ್ಲಿ 39 ಸೀಟುಗಳ ‘ಕ್ಲೀನ್ ಸ್ವೀಪ್’ ಮಾಡಿದೆ. ಆದರೆ ಅದರ ಮತಗಳಿಕೆಯ ಪ್ರಮಾಣದಲ್ಲಿ ಶೇ.6.2ರಷ್ಟು ಕಡಿಮೆಯಾಯಿತು ಎಂಬುದನ್ನು ಗಮನಿಸಬೇಕು. ಎನ್.ಡಿ.ಎ ಮತ್ತು ಎಐಎಡಿಎಂಕೆ ಕೂಟ ಇವೆರಡೂ ಶೂನ್ಯ ಸಂಪಾದನೆ ಮಾಡಿವೆ. ಆದರೆ (ಅನುಕ್ರಮವಾಗಿ) ಶೇ 18.3 ಮತ್ತು ಶೇ. 23 ಮತ ಗಳಿಸಿವೆ. ಚುನಾವಣಾ-ಪೂರ್ವ ಸರ್ವೇಗಳು ಮತ್ತು ಎಕ್ಸಿಟ್ ಪೋಲುಗಳು ಇವೆರಡೂ ಕೂಟಕ್ಕೆ 6 ಸೀಟುಗಳಿಕೆಯ ಭವಿಷ್ಯ ನುಡಿದಿದ್ದು ಸುಳ್ಳಾಗಿದೆ. ಎನ್.ಡಿ.ಎ ಶೇ.3.3 ಮತಗಳಿಕೆ ಮತ್ತು ಇತರರು ಶೇ.2.9ರಷ್ಟು ಮತಗಳಿಕೆ ಏರಿಸಿಕೊಂಡರೆ, ಎಐಎಡಿಎಂಕೆ ಕೂಟ ಶೇ.0.2 ಮತ ಕಳೆದುಕೊಂಡಿದೆ. ದಕ್ಷಿಣ

ಇಂಡಿಯಾ ಕೂಟದ ಭಾಗವಾಗಿ ಡಿಎಂಕೆ 22, ಕಾಂಗ್ರೆಸ್ 9, ಸಿಪಿಐ 2, ಸಿಪಿಐ(ಎಂ) 2, ವಿಸಿಕೆ 2, ಐಯುಎಂಎಲ್ ಮತ್ತು ಎಐಎಡಿಎಂಕೆ ತಲಾ 1 ಸೀಟು ಸ್ಪರ್ಧಿಸಿ ಎಲ್ಲ ಸೀಟುಗಳನ್ನು ಭಾರೀ ಅಂತರದಿಂದ ಗೆದ್ದವು. ಕೇವಲ3 ಕ್ಷೇತ್ರಗಳಲ್ಲಿ ಅಂತರ 50 ಸಾವಿರಕ್ಕಿಂತ ಕಡಿಮೆಯಿತ್ತು. ಎನ್.ಡಿ.ಎ ಕೂಟದಲ್ಲಿ ಬಿಜೆಪಿ 23, ಪಿಎಂಕೆ 10, ಟಿಎಂಸಿ(ಎಂ) 3, ಎಎಂಎಂಕೆ 2, ಪಕ್ಷೇತರ 1 ಸೀಟುಗಳನ್ನುಸ್ಪರ್ಧಿಸಿ ಎಲ್ಲ ಸೀಟುಗಳಲ್ಲಿ ಸೋತವು. ಬಿಜೆಪಿ 9, ಪಿಎಂಕೆ, ಎಎಂಎಂಕೆ, ಪಕ್ಷೇತರ ತಲಾ 1 ರಂತೆ ಎನ್.ಡಿ.ಎ 12 ಸೀಟುಗಲ್ಲಿ ಎರಡನೆ ಸ್ಥಾನದಲ್ಲಿದ್ದವು. ಡಿಎಂಡಿಕೆ 3, ಎಐಎಡಿಎಂಕೆ 24 ಸೀಟುಗಳಲ್ಲಿ ಎರಡನೆ ಸ್ಥಾನದಲ್ಲಿದ್ದವು. ಈ ಮೂರು ಕೂಟಗಳಲ್ಲದೆ ಸ್ಪರ್ಧಿಸಿದ್ದ ಇತರ ಪಕ್ಷಗಳಲ್ಲಿ ಪ್ರಮುಖವಾಗಿ ಬಿ.ಎಸ್.ಪಿ ಮತ್ತು ಎನ್.ಟಿ.ಕೆ ಎಲ್ಲ 39 ಸೀಟುಗಳಲ್ಲಿ, ಎನ್.ಎಂ.ಕೆ 12 ಸೀಟುಗಳಲ್ಲಿ ಸ್ಪರ್ಧೆಯಲ್ಲಿದ್ದವು. ಇವುಗಳಲ್ಲಿ ಎನ್.ಟಿ.ಕೆ ಶೇ. 8.2 ಮತ ಪಡೆಯಿತು. ಇತರ ಪಕ್ಷಗಳ ಮತಗಳಿಕೆ ಶೇ.2.9ರಷ್ಟು ಹೆಚ್ಚಾಯಿತು. ಆದರೆ ಎಐಎಡಿಎಂಕೆ ಕಳೆದ ಬಾರಿ ಎನ್.ಡಿ.ಎ ಕೂಟದಲ್ಲಿ ಇದ್ದಿದ್ದರಿಂದ ಮತಗಳಿಕೆ ಏರಿಕೆ ಇಳಿಕೆ ಯನ್ನು ಅರ್ಥೈಸುವುದರಲ್ಲಿ ಸಮಸ್ಯೆಗಳಿವೆ.

ತಮಿಳುನಾಡು- ಸೀಟು-ಮತಪ್ರಮಾಣ

2019ರ ಚುನಾವಣೆಗಳಲ್ಲಿ ಈ ಬಾರಿಯ ಎಐಎಡಿಎಂಕೆ ಕೂಟ ಎನ್.ಡಿ.ಎ ಕೂಟದ ಭಾಗವಾಗಿತ್ತು. ಆದರೆ ಎಐಎಡಿಎಂಕೆ ಯಲ್ಲಿದ್ದ ಒಪಿ.ಎಸ್ ಇ.ಪಿ.ಎಸ್ ಬಣಗಳ ಸಂಘರ್ಷದಲ್ಲಿ ಮೂಗು ತೂರಿಸಿ (ಒ.ಪಿ.ಎಸ್ ಪರ ವಹಿಸಿ) ಪಕ್ಷವನ್ನು ಇಬ್ಬಾಗ ಮಾಡಿ ತನ್ನ ಬಾಲಂಗೋಚಿ ಮಾಡಿ ಮುಗಿಸುವ ಪ್ರಯತ್ನ ಮತ್ತು ಬಿಜೆಪಿ ಹೊಸ ನಾಯಕ ಅಣ್ಣಾಮಲೈ ಎಐಡಿಎಂಕೆ ಸೇರಿದಂತೆ ದ್ರಾವಿಡ ಚಳುವಳಿ ಮತ್ತು ಪಕ್ಷಗಳ ನಾಯಕರನ್ನು ಕೆಟ್ಟದಾಗಿ ಮೂದಲಿಸಿದ್ದು ಎಐಡಿಎಂಕೆ ಕೂಟ ಎನ್.ಡಿ.ಎ ಕೂಟದಿಂದ ಹೊರಬರುವಂತೆ ಮಾಡಿತು. ಇದರ ಫಲವಾಗಿ ತಮಿಳುನಾಡಿನಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಟ್ಟಿತು. ಇದು ಇಂಡಿಯಾ ಕೂಟಕ್ಕೆ ಪ್ರಯೋಜನಕಾರಿಯೇ ಆಯಿತು. 12 ಕ್ಷೇತ್ರಗಳಲ್ಲಿ ಎಐಎಡಿಎಂಕೆ ಮತ್ತು ಎನ್.ಡಿ.ಎ ಕೂಟ ಗಳ ಮತಗಳನ್ನು ಸೇರಿಸಿದರೆ ಅಂಕಗಣಿತದ ದೃಷ್ಟಿಯಿಂದ ಇಂಡಿಯಾ ಕೂಟದ ಮತಗಳಿಗಿಂತ ಹೆಚ್ಚಿತ್ತು. ಅಂದರೆ ಎನ್.ಡಿ.ಎ ಮತ್ತು ಎಐಎಡಿಎಂಕೆ ಕೂಟಗಳು ಒಂದಾಗಿದ್ದಿದ್ದರೆ ಬರಿಯಯ ಅಂಕಗಣಿತದ ದೃಷ್ಟಿಯಿಂದ ಇಂಡಿಯಾ ಕೂಟದ ಸ್ವೀಪ್ ಕಷ್ಟವಿತ್ತು. ಆದರೆ ಅವರು ಸೇರಿದ್ದರೆ ಎಐಎಡಿಎಂಕೆ ಕೂಟಕ್ಕೆ , ಗಮನಾರ್ಹ ಪ್ರಮಾಣದ ಸೆಕ್ಯುಲರ್ ಮತ್ತು ಬಿಜೆಪಿ ಕೋಂಉವಾಧ-ವಿರೋಧಿ ಮತಗಳ ನಷ್ಟದ ಸಾಧ್ಯತೆಯೂ ಇತ್ತು ಎಂಬುದನ್ನು ಪರಿಗಣಿಸಬೇಕು.

ಇದನ್ನು ಓದಿ : ಸಂಪತ್ತು ತೆರಿಗೆಗೆ ವಿರೋಧ – ವರ್ಗ ಅಜೆಂಡಾವನ್ನು ಮರೆ ಮಾಚಲು ಧಾವಿಸಿದ ಬಿಜೆಪಿ

ಬಿಜೆಪಿ ಕರುಣಾನಿಧಿ, ಜಯಲಲಿತಾ ರಂತಹ ಹಿರಿಯ ನಾಯಕರ ನಿಧನಾ ನಂತರ ದ್ರಾವಿಡ ಪಕ್ಷಗಳ ಕಾಲ ಮುಗಿಯಿತು. ಅವು ಅಪ್ರಸ್ತುತವಾಗಿವೆ. ದ್ರಾವಿಡ ಪಕ್ಷಗಳು ಭ್ರಷ್ಟ, ಪರಿವಾರವಾದಿ ಪಕ್ಷಗಳು. ಅವು ಸನಾತನ ಹಿಂದೂ ಧರ್ಮದ ವಿರುದ್ಧ, ಅದನ್ನು ಒಡೆಯಲು ಪ್ರಯತ್ನಿಸುತ್ತಿವೆ ಬಿಜೆಪಿ ಯೇ ಇವೆಲ್ಲವನ್ನು ತಡೆಯಲು ಉತ್ತಮ ಬದಲಿ ಪಕ್ಷ ಎಂದೆಲ್ಲ ಅಬ್ಬರದ ಪ್ರಚಾರ ಮಾಡಿತು. ಪ್ರಧಾನಿ ಹಲವು ಬಾರಿ ಭೇಟಿ ಕೊಟ್ಟು ಹಲವಾರು ಸಭೆಗಳನ್ನು ಮಾಡಿದರು. ರಾಜ್ಯದಲ್ಲಿ ಖಾತೆ ತೆರೆಯಲು ಬಿಜೆಪಿ ಶತಪ್ರಯತ್ನ ನಡೆಸಿತು. ಆದರೆ ವಿಫಲವಾಯಿತು

ಇಂಡಿಯಾ ಕೂಟ ಬಿಜೆಪಿ ಕೇಂದ್ರ ಸರಕಾರದ ವೈಫಲ್ಯ, ಜನರ ಆರ್ಥಿಕ ಸಂಕಟಗಳು, ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ದಾಳಿ, ರಾಜ್ಯದ ಆರ್ಥಿಕ ಸ್ವಾಯತ್ತತೆ, ಆರ್ಥಿಕ ಒಕ್ಕೂಟವಾದದ ಮೇಲೆ ದಾಳಿ, ಕೋಮುವಾದಿ ಫ್ಯಾಸಿಸಂ ಅಪಾಯದ ಕುರಿತು ಬಿರುಸಿನ ಪ್ರಚಾರ ನಡೆಸಿತು. ಇಂಡಿಯಾ ಕೂಟದಲ್ಲಿ ಎಡಪಕ್ಷಗಳ ಪಾಲುಗೊಳ್ಳುವಿಕೆ ಡಿಎಂಕೆ, ಕಾಂಗ್ರೆಸ್ ನಾಯಕರ ಜತೆ, ಎಡ ಪಕ್ಷಗಳ ನಾಯಕರ ಪಾಲುಗೊಳ್ಳುವಿಕೆ ಚುನಾವಣಾ ಪ್ರಚಾರಕ್ಕೆ ತೀವ್ರ ಮೊನಚು ಕೊಟ್ಟಿತು. ಬಹುಶಃ ದೇಶಧಲ್ಲೇ ಇಂಡಿಯಾ ಕೂಟವು ಪರಿಣಾಮಕಾರಿ ಪ್ರಚಾರ, ಬಿರುಸಿನ ಪೈಪೋಟಿ, ಪೂರ್ಣ ಐಕ್ಯತೆ ಪ್ರದರ್ಶಿಸಿದ ರಾಜ್ಯವಿದು.

ಕೇರಳ

ಕೇರಳದಲ್ಲಿ ಕಳೆದ ಬಾರಿಯಂತೆ ಹೆಚ್ಚು ಕಡಿಮೆ (1 ಸೀಟು ಕಳೆದುಕೊಂಡಿದೆ) ಯು.ಡಿ.ಎಫ್ ‘ಕ್ಲೀನ್ ಸ್ವೀಪ್’ ಮಾಡಿದೆ. ಅದರ ಮತಗಳಿಕೆ ಶೇ. 45.1 ಇದ್ದು, ಮತಪ್ರಮಾಣದಲ್ಲಿ ಸ್ವಲ್ಪ (ಶೇ.3 ರಷ್ಟು) ಕಡಿತವಾಗಿದೆ. ಕಳೆದ ಬಾರಿಯಂತೆ ಎಲ್.ಡಿ.ಎಫ್ 1 ಸೀಟು ಪಡೆದಿದೆ. ಅದರ ಮತಗಳಿಕೆ ಶೇ. 33.4 ಇದ್ದು, ಸ್ವಲ್ಪ ಪ್ರಮಾಣದಲ್ಲಿ (ಶೇ.2.4ರಷ್ಟು) ಕಡಿತವಾಗಿದೆ. ಬಿಜೆಪಿ/ಎನ್.ಡಿ.ಎ ಮೊದಲ ಬಾರಿಗೆ ಖಾತೆ ತೆರೆದಿದೆ. ಶೇ.4.4 ರಷ್ಟು ಮತ ಹೆಚ್ಚಿಸಿಕೊಂಡು ಗಮನಾರ್ಹ ಶೇ. 19.2 ಮತಗಳಿಸಿದೆ.

ಕೇರಳ – ಸೀಟು-ಮತಪ್ರಮಾಣ

ಯು.ಡಿ.ಎಫ್ ನಿಂದ ಕಾಂಗ್ರೆಸ್ 16 ಸೀಟು ಸ್ಪರ್ಧಿಸಿ 14 ಗೆದ್ದಿದೆ. ಮುಸ್ಲಿಂ ಲೀಗ್ 2 ಸೀಟು ಸ್ಪರ್ಧಿಸಿ ಎರಡನ್ನೂ ಗೆದ್ದಿದೆ. ಆರ್.ಎಸ್.ಪಿ ಮತ್ತು ಕೇರಳ ಕಾಂಗ್ರೆಸ್ (ಮಣಿ) ತಲಾ 1 ಸೀಟು ಸ್ಪರ್ಧಿಸಿ ಎರಡನ್ನೂ ಗೆದ್ದಿದೆ. ಎಲ್.ಡಿ.ಎಫ್ ನಿಂದ ಸಿಪಿಐ(ಎಂ) 15 ಸೀಟು ಸ್ಪರ್ಧಿಸಿ 1 ಸೀಟು ಗೆದ್ದಿದೆ. ಸಿಪಿಐ 4 ಮತ್ತು ಬೆಂಭಲಿತ ಪಕ್ಷೇತರರು 2 ಸೀಟು ಸ್ಪರ್ಧಿಸಿ ಯಾವ ಸೀಟೂ ಗೆಲ್ಲಲಿಲ್ಲ. ಬಿಜೆಪಿ 16 ಸೀಟು ಸ್ಪರ್ಧಿಸಿ 1 ಸೀಟು ಗೆದ್ದಿದೆ. ಭಾರತ ಧರ್ಮ ಜನ ಸೇನಾ 4 ಸೀಟು ಸ್ಪರ್ಧಿಸಿ ಯಾವುದನ್ನು ಗೆದ್ದಿಲ್ಲ. ಬಿಜೆಪಿ 1 ಸೀಟಿನಲ್ಲಿ (ತಿರುವನಂತಪುರ) ಎರಡನೇ ಸ್ಥಾನ ಪಡೆದಿದೆ. ಉಳಿದ 18 ಸೀಟುಗಳಲ್ಲಿ ಎಲ್.ಡಿ.ಎಫ್ 2ನೇ ಸ್ಥಾನದಲ್ಲಿದೆ.

ಕೇರಳದ ಜನ ಯಾವತ್ತೂ ವಿಧಾನಸಭೆ ಮತ್ತು ಲೋಕಸಭೆಯ ಚುನಾವಣೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಮತದಾನ ಮಾಡುತ್ತಾರೆ. ಕೇರಳದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮತ ನಿರ್ಣಾಯಕ. ವಿಧಾನಸಭಾ ಚುನಾವಣೆಯಲ್ಲಿ ಒಮ್ಮೆ ಎಲ್.ಡಿ.ಎಫ್ ಒಮ್ಮೆ ಯು.ಡಿ.ಎಫ್ ಆಯ್ಕೆಯಾಗುತ್ತಾರೆ. ಇವರ ನಡುವೆ ಯಾವತ್ತೂ ನೇರ ಸ್ಪರ್ಧೆಯಿರುತ್ತದೆ. ಈ ಸ್ಪರ್ಧೇಯಲ್ಲಿ ಎಲ್.ಡಿ.ಎಫ್ ಸ್ವಲ್ಪ ಮುಂದೆನೇ ಇರುತ್ತದೆ. ಬಿಜೆಪಿ ನಾಯಕತ್ವದ ಎನ್.ಡಿ.ಎ ಯ ಮುಸ್ಲಿಂ-ವಿರೋಧಿ ಕೋಮು ಧ್ರುವೀಕರಣದ ರಾಜಕಾರಣ ನಿಧಾನವಾಗಿಯಾದರೂ ಬೇರೂರುತ್ತಿದ್ದು ಅದು ಚುನಾವಣೆಯಿಂದ ಚುನಾವಣೆಗೆ ಬಲಗೊಳ್ಳುತ್ತಿದೆ. ಇವು ಕೇರಳದ ವಾಸ್ತವ ಸಂಗತಿಗಳು.

ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಅಲ್ಪಸಂಖ್ಯಾತ-ವಿರೋಧಿ ಕೋಮುವಾದಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬಾರದು ಎಂಬ ಕೇರಳದ ಸೆಕ್ಯುಲರ್ ಮತ್ತು ಅಲ್ಪಸಂಖ್ಯಾತರ ದೃಢನಿರ್ಧಾರದ ಪ್ರಯೋಜನ ಕಾಂಗ್ರೆಸ್/ಯು.ಡಿ.ಎಫ್ ಗೆ ಆಗಿತ್ತು. ಕಳೆದ ಬಾರಿ ರಾಹುಲ್ ಗಾಂಧಿ ಕೇರಳದಿಂದ ಸ್ಪರ್ಧೆ ಮಾಡಿದ್ದುಅದಕ್ಕೆ ಪೂರಕವಾಗಿತ್ತು. ಇದರ ಜತೆಗೆ ಬಿಜೆಪಿಯ ಮುಸ್ಲಿಂ-ದ್ವೇಷದ ಸತತ ಪ್ರಯತ್ನದಿಂದ ಕೋಮುವಾದಿ ಧ್ರುವೀಕರಣದ ಪ್ರಕ್ರಿಯೆ ಸಹ ಸಾಗಿತ್ತು. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಪಕ್ಷಗಳ ಕೋಮುವಾದಿ ಹಾಗೂ ಕಮ್ಯುನಿಸ್ಟ್ -ದ್ವೇಷಗಳ ನೀತಿ ಮತ್ತು ಪ್ರಚಾರ ಇದಕ್ಕೆ ನೀರೆರೆದಿದೆ. ಇದರ ಜತೆಗೆ ಬಿಜೆಪಿ ಚರ್ಚಿನ ಒಂದು ವಿಭಾಗವನ್ನು ಬಳಸಿಕೊಂಡು ಕೆಲವು ಕ್ರಿಶ್ಚಿಯನ್ ಜನವಿಭಾಗಗಳಲ್ಲಿ ಮುಸ್ಲಿಂ-ದ್ವೇಷವನ್ನು ಹರಡಿದೆ. ಸ್ವತಃ ಪ್ರಧಾನಿ ಅವರೇ ಒಬ್ಬ ಬಿಷಪ್ ರನ್ನು ಭೇಟಿ ಮಾಡಿ ಇದಕ್ಕೆ ಕುಮ್ಮಕ್ಕು ಕೊಟ್ಟಿದ್ದರು. ಇದನ್ನು ಬಳಸಿಕೊಂಡು ಮುಸ್ಲಿಂ ಕೋಮುವಾದಿ ಶಕ್ತಿಗಳು ತಮ್ಮ ಅಸ್ತಿತ್ವಕ್ಕೆ ಅಗತ್ಯವಾದ ಕೋಮುಧ್ರುವೀಕರಣ ಗಟ್ಟಿಗೊಳಿಸಲು ಪ್ರಯತ್ನಿಸಿದವು. ದಕ್ಷಿಣ

ಕಳೆದ ವಿಧಾನಸಬಾ ಚುನಾವಣೆಯಲ್ಲಿ ಒಂದು ಬಾರಿ ಯುಡಿಎಫ್ ಇನ್ನೊಂದು ಬಾರಿ ಎಲ್.ಡಿ.ಎಫ್ ಎಂಬ ಹಿಂದಿನ ಸಂಪ್ರದಾಯವನ್ನು ಮುರಿದಿದ್ದ ಎಲ್.ಡಿ.ಎಫ್, ಲೋಕಸಭಾ ಚುನಾವಣೆಯಲ್ಲಿ ಯು.ಡಿ.ಎಫ್ ಗೆ ಆದ್ಯತೆಯ ಸಂಪ್ರದಾಯವನ್ನೂ ಮುರಿಯಲು ಪಣತೊಟ್ಟಿತ್ತು. ಕೇಂದ್ರದಲ್ಲಿ ಬಿಜೆಪಿ ಕೋಮುವಾದಿ ಸರಕಾರವನ್ನು ತಡೆಯಲು ಇಂಡಿಯಾ ಕೂಟದ ಭಾಗವಾಗಿರುವ ಎಡಪಕ್ಷಗಳು ಸಹ ಬದ್ಧವಾಗಿವೆ. ಆದರೆ ಕೇರಳದ ಹಿತಾಸಕ್ತಿ ಕಾಪಾಡುವಲ್ಲಿ ಮತ್ತು ಒಕ್ಕೂಟವಾದದ ಮೇಲೆ ದಾಳಿಯನ್ನು ಎದುರಿಸುವಲ್ಲಿ ಯು.ಡಿ.ಎಫ್ ಲೋಕಸಬಾ ಸದಸ್ಯರ ವೈಫಲ್ಯವನ್ನು ಬಯಲಿಗೆಳೆಯಿತು. ಇದಕ್ಕೆ ಕೇರಳಕ್ಕೆ ಅದರ ಪಾಲಿನ ತೆರಿಗೆ, ಅನುದಾನ ಕೊಡದಿರುವ ಬಗ್ಗೆ ದೆಹಲಿಯಲ್ಲಿ ಸಂಘಟಿಸಲಾದ ಪ್ರತಿಭಟನೆಯಲ್ಲಿ ಯು.ಡಿ.ಎಫ್ ಸಂಸದರು ಭಾಗವಹಿಸದಿರುವ ಉದಾಹರಣೆಯನ್ನು ಕೊಡಲಾಯಿತು. ಮುಖ್ಯಮಂತ್ರಿ ಪಿಣರಾಯಿಯನ್ನು ಇ.ಡಿ ಇನ್ನೂ ಏಕೆ ಬಂಧಿಸುತ್ತಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆಯ ಹಿನ್ನೆಲೆಯಲ್ಲಿ , ಕೇಂದ್ರೀಯ ಏಜೆನ್ಸಿಗಳ ಮೂಲಕ ಪ್ರಜಾಪ್ರಭುತ್ವ ದಮನದ ವಿರುದ್ಧ ಕಾಂಗ್ರೆಸ್ ನ ಪ್ರತಿರೋಧದ ಪ್ರಾಮಾಣಿಕತೆಯನ್ನು ಸಹ ಎಲ್.ಡಿ.ಎಫ್ ಪ್ರಶ್ನಿಸಿತು. ದಕ್ಷಿಣ

ಸಿಎಎ, ಮತ್ತು ಕಲಮು 370 ರ ಕುರಿತು ಜಾಣಮೌನವನ್ನು ಟೀಕಿಸುತ್ತಾ, ಒಂದು ಕಡೆ ಮೃದು-ಹಿಂದುತ್ವ ಇನ್ನೊಂದು ಕಡ ಮುಸ್ಲಿಂ-ಕ್ರಿಶ್ಚಿಯನ್ ಕೋಮುಶಕ್ತಿಗಳ ಓಲೈಕೆ ಯ ಕಾಂಗ್ರೆಸ್ ನ ದುರ್ಬಲ ಸೆಕ್ಯುಲರ್ ಧೋರಣೆಗಳನ್ನು ತನ್ನ ಪ್ರಚಾರದ ಮೂಲಕ ಎಲ್.ಡಿ.ಎಫ್ ಬಯಲಿಗೆಳೆಯಿತು. ಆದರೆ ಎಲ್.ಡಿ.ಎಫ್ ನ ಈ ಧೋರಣೆಯಿಂದ ಪ್ರಭಾವಿತರಾಗುವ ಬದಲು, ಅದರ ಮತದಾರರ ಒಂದು ವಿಭಾಗ ಸೇರಿದಂತೆ ಸೆಕ್ಯುಲರ್ ಮತದಾರರ ಒಂದು ವಿಭಾಗ ಕೋಮು ಧ್ರುವೀಕರಣಕ್ಕೆ ಒಳಗಾದಂತೆ ಕಾಣುತ್ತದೆ. ಯು.ಡಿ.ಎಫ್ ನ ಅದರಲ್ಲೂ ಮುಸ್ಲಿಂ ಲೀಗಿನ ಚುನಾವಣಾ ಪ್ರಚಾರ ಕೋಮುಧ್ರವೀಕರಣದ್ದು ಆಗಿತ್ತು. ಕೋಮುಧ್ರುವೀಕರಣದ ಭರಾಟೆಯಲ್ಲಿ ರಾಜ್ಯಗಳ ಅಧಿಕಾರ, ಪ್ರಜಾಪ್ರಭುತ್ವದ ಹಕ್ಕುಗಳ ದಮನ ಗೌಣವಾಯಿತು. ಇದಲ್ಲದೆ ಕಾಂಗ್ರೆಸ್ ಒಳಗಿನ ಬಣ ಸಂಘರ್ಷ ಇದ್ದಲ್ಲಿ ಕೆಲವು ಕಡೆ ಒಳಒಪ್ಪಂದ ಮಾಡಿಕೊಂಡು ಒಂದು ಬಣ ಬಿಜೆಪಿ/ಎನ್.ಡಿ.ಎ ಗೆ ತಮ್ಮ ಮತ ವರ್ಗಾಯಿಸಿದೆಯೆಂದು ಹೇಳಲಾಗಿದೆ. ಬಿಜೆಪಿ ಗೆದ್ದ ತ್ರಿಶೂರ್ ನಲ್ಲಿ ಸಹ ಈ ರೀತಿಯ ಮತವರ್ಗಾವಣೆಯಾಗಿದೆ ಎಂದು ಕಾಂಗ್ರೆಸ್ ನಾಯಕರ ಪರಸ್ಪರ ದೂಷಣೆಯಲ್ಲಿ ಹೊರಬಂದಿದೆ. ಕಾಂಗ್ರೆಸ್ ನ ಕೆಲವು ನಾಯಕರು (ಎ.ಕೆ.ಆಂಟನಿ ಮಗ, ಕರುಣಾಕರನ್ ಮಗಳು) ಚುನಾವಣೆಯ ಮೊದಲು ಬಿಜೆಪಿ ಸೇರಿದ್ದರೆ, ಇನ್ನು ಕೆಲವರು ಫಲಿತಾಂಶಧ ನಂತರ ದ ಆಯ್ಕೆ ಇಟ್ಟುಕೊಂಡಿದ್ದು ಬಿಜೆಪಿ ಯ ಮತಪ್ರಮಾಣ ಹೆಚ್ಚಿಸಲು ಕಾರಣರಾಗಿದ್ದಾರೆ ಎನ್ನಲಾಗಿದೆ.

ಕೇಂದ್ರದಲ್ಲಿ ಬಿಜೆಪಿ ಕೋಮುವಾದಿ ಸರಕಾರವನ್ನು ತಡೆಯಲು ಕಾಂಗ್ರೆಸ್ ಬಲಪಡಿಸಬೇಕು ಎಂಬ ಸರಳ ತರ್ಕ, ಕೋಮು ಧ್ರುವೀಕರಣ ಮತ್ತು ಎಲ್.ಡಿ.ಎಫ್ ಸರಕಾರದ 3 ವರ್ಷಗಳ ಆಡಳಿತದ ವಿರುದ್ಧ ಸ್ವಲ್ಪ ಅತೃಪ್ತಿ, ಕೇರಳದ ಫಲಿತಾಂಶಕ್ಕೆ ಕಾರಣವಾಗಿರಬಹುದು. ದಕ್ಷಿಣ

ಇದನ್ನು ನೋಡಿ : ಚುನಾವಣಾ ಫಲಿತಾಂಶದ ನಂತರವೂ ಮುಸ್ಲಿಂರೇ ಟಾರ್ಗೆಟ್‌!? – ಮುನೀರ್ ಕಾಟಿಪಳ್ಳ ಜೊತೆ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *