ಮಂಡ್ಯ: ಬಿಜೆಪಿ ನಾಯಕರಿಗೆ ಏನು ಕೆಲಸವಿಲ್ಲ. ಹೀಗಾಗಿ ಉರೀಗೌಡ, ನಂಜೇಗೌಡರ ವಿಚಾರ ಇಟ್ಟುಕೊಂಡು ಆಟ ಆಡುತ್ತಿದ್ದಾರೆ. ಇಲ್ಲಿ ಹೊಲ ಉಳುಮೆ ಮಾಡುತ್ತಾ ಸಮಸ್ಯೆಗಳಿಂದ ಸಾಯುತ್ತಿರುವ ಬಡ ಬೋರೇಗೌಡನನ್ನು ನೋಡಿ. ಆಮೇಲೆ ಉರಿಗೌಡ, ನಂಜೇಗೌಡ ಎಂಬುವರು ಇದ್ದರೋ, ಇಲ್ಲವೋ ಎಂಬುದನ್ನು ಹುಡುಕೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ತಾಲ್ಲೂಕಿನ ವಿಸಿ ಫಾರ್ಮ್‌ನನ ಹೆಲಿಪ್ಯಾಡ್‌ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಸ್ತವತೆಯನ್ನು ನೋಡಬೇಕೊ? ಅಥವಾ ಕಾಲ್ಪನಿಕ ವಿಚಾರಗಳಿಗೆ ಪ್ರಾಶಸ್ತ್ಯ ಕೊಡಬೇಕೋ? ಯಾರು ಸಿನಿಮಾ ಮಾಡುತ್ತಾನೋ, ಅದು ಅವನಿಗೆ ಸೇರಿದ್ದು. ಎಲ್ಲ ಸಿನಿಮಾ ಕಥೆಗಳು ಏನು ಸತ್ಯವಲ್ಲ. ಕಾಲ್ಪನಿಕ ವಿಚಾರ ಇಟ್ಟುಕೊಂಡು ಮಾಡುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ಇದನ್ನೂ ಓದಿ : ಮತಕ್ಕಾಗಿ ಮಾನಕ್ಕೂ ಅಂಜದ ಬಿಜೆಪಿ, ಸುಳ್ಳಿನ ಮೂಲಕ ಚುನಾವಣೆ ಗೆಲ್ಲಲು ಹೊರಟಂತಿದೆ : ಹೆಚ್‌ಡಿಕೆ
ಉರಿಗೌಡ, ನಂಜೇಗೌಡರ ವಿಚಾರ ಚುನಾವಣೆಯಲ್ಲಿ ವರ್ಕೌಟ್ ಆಗಲ್ಲ :
ರಾಜ್ಯದಲ್ಲಿ ಆಲಿಕಲ್ಲು ಮಳೆ ಬಿದ್ದು ಜನ ಸಾಯುತ್ತಿದ್ದಾರೆ. ಆದರೆ, ಬಿಜೆಪಿ ನಾಯಕರು ಉರಿಗೌಡ, ನಂಜೇಗೌಡ ಕಥೆ ಕಟ್ಟುತ್ತಿದ್ದಾರೆ. ಬಿಜೆಪಿಯವರು ಮಂಡ್ಯದಲ್ಲಿ ಉರಿಗೌಡ, ನಂಜೇಗೌಡರ ಪ್ರತಿಮೆ ಇಲ್ಲದಿದ್ದರೆ ದೊಡ್ಡ ದೇವಸ್ಥಾನವನ್ನೇ ನಿರ್ಮಾಣ ಮಾಡಿಕೊಳ್ಳಲಿ. ಈ ಸಂಗತಿ ಚುನಾವಣೆಯಲ್ಲಿ ಯಾವುದೇ ವರ್ಕೌಟ್ ಆಗೋದಿಲ್ಲ ಎಂದು ಲೇವಡಿ ಮಾಡಿದರು.
ಈಗಿನ ಜನರ ಕಷ್ಟ ನೋಡದೆ, ಹಳೆ ಕಥೆ ಇಟ್ಟುಕೊಂಡು ಬಂದರೆ ಜನರು ಏಕೆ ಮತ ಹಾಕುತ್ತಾರೆ? ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ, ನಂಜೇಗೌಡ ಟಿಪ್ಪುವಿನ ಕುತ್ತಿಗೆ ಕೊಯ್ದರು, ಕತ್ತಿಯಿಂದ ಇರಿದರು ಎಂದು ಏನಾದರೂ ಬರೆಯಲಾಗಿದೆಯಾ? ಯುದ್ದ ಮಾಡಿ ತಲೆ ತೆಗೆದಿದ್ದರು ಎನ್ನುವ ದಾಖಲೆ ಇದೆಯಾ ಎಂದು ಪ್ರಶ್ನಿಸಿದರು.
ಚುನಾವಣೆ ಆದ ಬಳಿಕ ಪುಟಗೋಸಿ ಪಕ್ಷ ಯಾವುದೆಂದು ಜನರೇ ಹೇಳುತ್ತಾರೆ :
ಜೆಡಿಎಸ್ ಪುಟಗೋಸಿ ಪಕ್ಷ ಎಂದಿದ್ದ ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಚುನಾವಣೆ ಆದ ಬಳಿಕ ಯಾವುದು ಪುಟಗೋಸಿ ಪಕ್ಷವೆಂದು ಜನರೇ ಹೇಳುತ್ತಾರೆ. ಇವರೆಲ್ಲರನ್ನು ಜನರು ಎಲ್ಲಿಗೆ ಕಳುಹಿಸುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಅವರ ಪಕ್ಷದ ನಾಯಕನಿಗೆ ಸ್ಪರ್ಧೆ ಮಾಡುವುದಕ್ಕೆ ಕ್ಷೇತ್ರವೇ ಸಿಗುತ್ತಿಲ್ಲ. ಒಬ್ಬ ಶಾಸಕಾಂಗ ಪಕ್ಷದ ನಾಯಕನನ್ನು ಎಲ್ಲಿ ನಿಲ್ಲಿಸಬೇಕೆಂದು ಸ್ಪಷ್ಟತೆ ಸಿಕ್ಕಿಲ್ಲ. ಅಂತಹವರು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರೆ. ಮೊದಲು ಅವರ ಪುಟಗೋಸಿ ಹೇಗಿದೆ ಎಂದು ನೋಡಿಕೊಳ್ಳಲೆಂದು ತಿರುಗೇಟು ನೀಡಿದರು.
ಇದನ್ನೂ ಓದಿ : ಕಪೋಲ ಕಲ್ಪಿತ ಪಾತ್ರಗಳಾದ ‘ಉರಿಗೌಡ-ನಂಜೇಗೌಡ’ ಮಹಾದ್ವಾರ ತೆರವು
ಕಾಂಗ್ರೆಸ್ ಬಿ ಫಾರ್ಮ್ ಆಕಾಂಕ್ಷಿತರನ್ನು ಸೆಳೆಯುವುದಕ್ಕೆ ಜೆಡಿಎಸ್ ಆಯಸ್ಕಾಂತವಲ್ಲ:
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಘೋಷಣೆ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಪಕ್ಷ ಯಾವಾಗ ಪಟ್ಟಿ ಬಿಡುಗಡೆ ಮಾಡುತ್ತಾರೋ? ಹೇಗೆ ಮಾಡುತ್ತಾರೋ ಗೊತ್ತಿಲ್ಲ. ಅದಕ್ಕೂ ನನಗೆ ಸಂಬಂಧವಿಲ್ಲ. ಚುನಾವಣೆಯಲ್ಲಿ ಆಯಾಯ ಪಕ್ಷಗಳು ಹೋರಾಟ ಮಾಡಬೇಕು. ಯಾವಾಗ ಪಟ್ಟಿ ಬಿಡುಗಡೆ ಮಾಡಬೇಕು, ಘೋಷಣೆ ಮಾಡಬೇಕು ಎನ್ನುವ ಲೆಕ್ಕಾಚಾರ ಅವರೇ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್ ಬಿ ಫಾರ್ಮ್ ಆಕಾಂಕ್ಷಿತರನ್ನು ಸೆಳೆಯುವುದಕ್ಕೆ ಜೆಡಿಎಸ್ ಆಯಸ್ಕಾಂತವಲ್ಲ,” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂಓದಿ : ವ್ಯಾಪಕ ವಿರೋಧಕ್ಕೆ ಮಣಿದ ಮುನಿರತ್ನ : ಉರಿಗೌಡ-ನಂಜೇಗೌಡ ಚಿತ್ರ ನಿರ್ಮಾಣಕ್ಕೆ ಬ್ರೇಕ್
ತಿ ನರಸೀಪುರಕ್ಕರ ಆಗಮಿಸಿದ ಪಂಚರತ್ನ ಯಾತ್ರೆ!
ಪಂಚರತ್ನ ಯಾತ್ರೆ ಮೂಲಕ ತಿ ನರಸೀಪುರ ವಿಧಾನಸಭಾ ಕ್ಷೇತ್ರ ಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಅದ್ಧೂರಿಗೆ ಸ್ವಾಗತ ದೊರೆಯಿತು. ತಲಕಾಡು ಹೋಬಳಿಯ ಮಡವಾಡಿಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರನ್ನು ಶಾಸಕ ಅಶ್ವಿನ್ ಕುಮಾರ್ ಸೇರಿದಂತೆ ಜೆಡಿಎಸ್ ಮುಖಂಡರು ಪುಷ್ಪವೃಷ್ಟಿ ಸುರಿಸುವುದರ ಮೂಲಕ ಬರ ಮಾಡಿಕೊಂಡರು. ಬಳಿಕ ಶ್ರೀ ನಂಜುಡೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಯಾತ್ರೆಗೆ ಸಿದ್ಧವಾಗಿದ್ದ ಪಂಚರತ್ನ ರಥಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.
ಮೇದಿನಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಗೆ 50 ಕೆ.ಜಿಯ ಮೂಸಂಬಿ ಹಾರ ಹಾಕಿದರು. ನಂತರ ಕಾವೇರಿಪುರ ಗ್ರಾಮದಲ್ಲಿಗೆಡ್ಡೆಕೊಸು ಹಾರಹಾಕಿ ಸ್ವಾಗತ ಕೋರಿದರು. ಕಾವೇರಿಪುರದಲ್ಲಿಜೆಡಿಎಸ್ ಕಾರ್ಯಕರ್ತ ಕುಮಾರಸ್ವಾಮಿ ಬಳಿ ಕೇಕ್ ಕತ್ತರಿಸಿ ಸಿಹಿ ತಿನ್ನಿಸಿದರು. ತಲಕಾಡಿಗೆ ಆಗಮಿಸಿದ ಎಚ್.ಡಿ ಕುಮಾರಸ್ವಾಮಿ ಅವರಿಗೆ ಅನಾನಸ್ ಹಾರಹಾಕಿ ಘೋಷಣೆ ಕೂಗಿದರು.