ಬೆಂಗಳೂರು: ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಪ್ರಾತಿನಿಧ್ಯ ಇಲ್ಲ ಎಂಬ ಕಾರಣಕ್ಕಾಗಿ ಮೋದಿ ಸರ್ಕಾರ ತಾರತಮ್ಯ ಎಸಗುತ್ತಿದೆ, ಇದು ಸರಿಯಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ಕೇಂದ್ರ ಸರ್ಕಾರದ ವಿರುದ್ಧ ನಡೆಸಿದ್ದಾರೆ. ದಕ್ಷಿಣ
ಸಾಮಾಜಿಕ ಜಾಲತಾಣ ಮೂಲಕ ಹರಿಹಾಯ್ದಿರುವ ದಿನೇಶ್ ಗುಂಡೂರಾವ್, ನಮ್ಮ ರಾಜ್ಯದ ಬಳಿಕ ಈಗ ತಮಿಳುನಾಡು ನೆರೆ ಪರಿಹಾರ ನೀಡುವಂತೆ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕೇಂದ್ರ ಸರ್ಕಾರ ಕೇವಲ ಕರ್ನಾಟಕ ಮಾತ್ರವಲ್ಲ, ದಕ್ಷಿಣದ ರಾಜ್ಯಗಳನ್ನು ಅಸಡ್ಡೆ ಹಾಗೂ ತಾತ್ಸಾರದಿಂದ ನೋಡುತ್ತಿರುವುದಕ್ಕೆ ಉತ್ತಮ ಉದಾಹರಣೆಯಿದಾಗಿದೆ. ಪ್ರಾಕೃತಿಕ ವಿಕೋಪದಿಂದ ಸಂಭವಿಸುವ ನಷ್ಟಕ್ಕೆ ಪರಿಹಾರ ನೀಡುವುದು ಕೇಂದ್ರದ ಕರ್ತವ್ಯ. ಎನ್‌ಡಿಆರ್‌ಎಫ್ ನಿಯಮಗಳ ಅನುಸಾರ ಕೇಂದ್ರ ನಷ್ಟ ಪೀಡಿತ ರಾಜ್ಯಗಳಿಗೆ ಪರಿಹಾರ ಒದಗಿಸಬೇಕು. ಆದರೆ ದಕ್ಷಿಣದ ರಾಜ್ಯಗಳ ಬಗ್ಗೆ ತಾರತಮ್ಯ ತೋರಿಸುತ್ತಿರುವ ಕೇಂದ್ರದ ನಡೆ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ ಎಂದರು.
ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳಿಂದ ಕೇವಲ ಆದಾಯ ಬಯಸಿದರೆ ಸಾಲದು. ನಾವು ಕೇಂದ್ರಕ್ಕೆ ಕೊಟ್ಟ ಆದಾಯಕ್ಕೆ ಪ್ರತಿಫಲವಾಗಿ ಅನುದಾನ ಕೇಳುವುದು ನಮ್ಮ ಹಕ್ಕು.ಅದೇ ರೀತಿ ಅನುದಾನ-ಪರಿಹಾರ ಕೊಡುವುದು ಕೂಡ ಕೇಂದ್ರ ಸರ್ಕಾರದ ಜವಬ್ಧಾರಿ. ರಾಜಕೀಯ ಕಾರಣಗಳಿಂದ ದಕ್ಷಿಣದ ರಾಜ್ಯಗಳನ್ನು ಕಡೆಗಣಿಸಿದರೆ ಅದರ ಪರಿಣಾಮವನ್ನು ಕೇಂದ್ರದ BJP ಸರ್ಕಾರ ಎದುರಿಸಲೇಬೇಕಾಗುತ್ತದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕೇಂದ್ರದ ವಿರುದ್ಧ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.