ನವದೆಹಲಿ: ಮಣಿಪುರ ಹಿಂಸಾಚಾರದ ಕುರಿತು ಬಿಜೆಪಿ ವಿರುದ್ಧ ಬುಧವಾರ ಲೋಕಸಭೆಯಲ್ಲಿ ಬಿರುಸಿನ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿಯ ರಾಜಕೀಯವು ಈಶಾನ್ಯ ರಾಜ್ಯದಲ್ಲಿ ಭಾರತ ಮಾತೆಯನ್ನು ಕೊಂದಿದ್ದು, ಪಕ್ಷದ ಸದಸ್ಯರನ್ನು “ದೇಶದ್ರೋಹಿಗಳು” ಎಂದು ಬಣ್ಣಿಸಿದ್ದಾರೆ. ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡದಿರುವ ಬಗ್ಗೆಯು ವಾಗ್ದಾಳಿ ನಡೆಸಿದ್ದು, ಮೋದಿ ಮಣಿಪುರವನ್ನು ಭಾರತದ ಭಾಗವೆಂದು ಪರಿಗಣಿಸುವುದಿಲ್ಲ ಎಂದು ಆರೋಪಿಸಿದ್ದಾರೆ.
“ನಾನು ಕೆಲವು ದಿನಗಳ ಹಿಂದೆ ಮಣಿಪುರಕ್ಕೆ ಹೋಗಿದ್ದೆ. ನಮ್ಮ ಪ್ರಧಾನಿ ಈ ವರೆಗೆ ಅಲ್ಲಿಗೆ ಹೋಗಿಲ್ಲ. ಮಣಿಪುರವನ್ನು ಅವರು ಭಾರತದ ಭಾಗವೆಂದು ಪರಿಗಣಿಸುವುದಿಲ್ಲ. ನಾನು ‘ಮಣಿಪುರ’ ಎಂಬ ಪದವನ್ನು ಬಳಸಿದ್ದೇನೆ, ಆದರೆ ಮಣಿಪುರ ಉಳಿದಿಲ್ಲ ಎಂಬುದು ವಾಸ್ತವ. ನೀವು ಮಣಿಪುರವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದೀರಿ; ನೀವು ಮಣಿಪುರವನ್ನು ಒಡೆದಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂಓದಿ: ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ಪುನಃಸ್ಥಾಪಿಸಿದ ಲೋಕಸಭೆ ಸಚಿವಾಲಯ
ಮಣಿಪುರಕ್ಕೆ ಭೇಟಿ ನೀಡಿ ಪರಿಹಾರ ಶಿಬಿರಗಳಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಭೇಟಿ ಮಾಡಿದ್ದೇನೆ, ಆದರೆ ಪ್ರಧಾನಿ ಭೇಟಿ ಮಾಡಿಲ್ಲ ಎಂದು ರಾಹುಲ್ ಹೇಳಿದ್ದಾರೆ. ರಾಹುಲ್ ಭಾಷಣದ ವೇಳೆ ಪ್ರಧಾನಿ ಮೋದಿ ಅವರು ಉಪಸ್ಥಿತರಿರಲಿಲ್ಲ.
“ಮಣಿಪುರ ಭೇಟಿಯ ವೇಳೆ ನಾನು ಒಬ್ಬ ಮಹಿಳೆಯನ್ನು ಮಾತನಾಡಿಸಿ, ‘ನಿಮಗೆ ಏನಾಯಿತು?’ ಎಂದಾಗ, ಅವರು, ‘ನನ್ನ ಚಿಕ್ಕ ಮಗ, ಒಬ್ಬನೇ ಮಗು, ನನ್ನ ಕಣ್ಣುಗಳ ಮುಂದೆ ಗುಂಡು ಹಾರಿಸಲಾಯಿತು. ನಾನು ಇಡೀ ರಾತ್ರಿ ನನ್ನ ಮಗುವಿನ ದೇಹದೊಂದಿಗೆ ಕಳೆದಿದ್ದೇನೆ. ನಂತರ ನನಗೆ ಭಯ ಪ್ರಾರಂಭವಾಗಿದ್ದು, ನನ್ನ ಮನೆಯಿಂದ ಹೊರಟೆ’ ಎಂದು ಹೇಳಿದ್ದರು. ನಾನು ಅವರೊಂದಿಗೆ ಏನನ್ನಾದರೂ ತಂದಿದ್ದೀರಾ ಎಂದು ಪ್ರಶ್ನಿಸಿದಾಗ, ಅವರು ಧರಿಸಿರುವ ಬಟ್ಟೆ ಮತ್ತು ಫೋಟೋವನ್ನು ಮಾತ್ರ ತಂದಿದ್ದೇನೆ ಎಂದು ಹೇಳಿದರು” ಎಂದು ರಾಹುಲ್ ಗಾಂಧಿ ತನ್ನ ಅನುಭವಗಳನ್ನು ವಿವರಿಸಿದ್ದಾರೆ.
ಮತ್ತೊಂದು ಶಿಬಿರದಲ್ಲಿ ಬೇರೊಂದು ಮಹಿಳೆಯೊಂದಿಗೆ ನಿಮಗೇನಾಯ್ತು ಎಂದು ಕೇಳಿದಾಗ, ಆ ಮಹಿಳೆ ನಡುಗಲು ಪ್ರಾರಂಭಿಸಿ ಮೂರ್ಛೆ ಹೋದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ಇವು ಕೇವಲ ಎರಡು ಉದಾಹರಣೆಗಳು. ಮಣಿಪುರದಲ್ಲಿ ಬಿಜೆಪಿ ಭಾರತವನ್ನು ಕೊಂದಿದೆ. ಬಿಜೆಪಿಯ ರಾಜಕೀಯ ಮಣಿಪುರವನ್ನು ಮಾತ್ರ ಕೊಂದಿಲ್ಲ, ಮಣಿಪುರದಲ್ಲಿರುವ ಭಾರತವನ್ನು ಕೊಂದಿದೆ. ಮಣಿಪುರದಲ್ಲಿ ಹಿಂದೂಸ್ತಾನವನ್ನು ಹತ್ಯೆ ಮಾಡಲಾಗಿದೆ … ಮಣಿಪುರದ ಜನರನ್ನು ಕೊಲ್ಲುವ ಮೂಲಕ ನೀವು ಭಾರತ ಮಾತೆಯನ್ನು ಕೊಂದಿದ್ದೀರಿ; ನೀವು ದೇಶಭಕ್ತರಲ್ಲ ದೇಶದ್ರೋಹಿಗಳು” ಎಂದು ರಾಹುಲ್ ಹೇಳಿದ್ದಾರೆ.
ಇದನ್ನೂಓದಿ: ಸೌಜನ್ಯ ಕುಟುಂಬದ ಮೇಲೆ ಹೆಗ್ಗಡೆ ಬೆಂಬಲಿಗರಿಂದ ಹಲ್ಲೆ – ಮಹಿಳಾ ಸಂಘಟನೆ ಖಂಡನೆ
ಅವರ ಟೀಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಅವರು “ಈಶಾನ್ಯದಲ್ಲಿ ದಂಗೆ ಮತ್ತು ಇತರ ಸಮಸ್ಯೆಗಳಿಗೆ ಜವಾಬ್ದಾರ ಕಾಂಗ್ರೆಸ್ ಆಗಿದ್ದು, ರಾಹುಲ್ ಗಾಂಧಿ ತಮ್ಮ ಟೀಕೆಗಳಿಗೆ ಕ್ಷಮೆಯಾಚಿಸಬೇಕು” ಎಂದು ಹೇಳಿದ್ದಾರೆ.
ತಮ್ಮ 30 ನಿಮಿಷಗಳ ಭಾಷಣದಲ್ಲಿ ಸರ್ಕಾರದ ವಿರುದ್ಧ ನಿರಂತರ ದಾಳಿ ಮುಂದುವರಿಸಿದ ರಾಹುಲ್, ಮಣಿಪುರದಲ್ಲಿ ಸೇನೆ ಶಾಂತಿ ತರಬಲ್ಲದು, ಆದರೆ ಸರ್ಕಾರ ಅದನ್ನು ನಿಯೋಜಿಸುತ್ತಿಲ್ಲ ಎಂದು ಆರೋಪಿಸಿದರು. ರಾವಣ ಇಬ್ಬರಿಗೆ ಮಾತ್ರ ಕಿವಿಗೊಟ್ಟಂತೆ ಮೋದಿ ಅವರು ಅಮಿತ್ ಶಾ ಮತ್ತು ಗೌತಮ್ ಅದಾನಿಯ ಮಾತನ್ನು ಕೇಳುತ್ತಾರೆ ಎಂದು ರಾಹುಲ್ ಆರೋಪಿಸಿದ್ದಾರೆ.
“ನೀವು ಭಾರತದ ಧ್ವನಿಯನ್ನು ಕೊಲೆ ಮಾಡಿದ್ದೀರಿ, ನೀವು ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಂದಿದ್ದೀರಿ… ನನ್ನ ತಾಯಿ ಇಲ್ಲಿ ಕುಳಿತಿದ್ದಾರೆ. ನನ್ನ ಮತ್ತೊಂದು ತಾಯಿ ಭಾರತ ಮಾತೆಯನ್ನು ನೀವು ಮಣಿಪುರದಲ್ಲಿ ಕೊಂದಿದ್ದೀರಿ” ಎಂದು ಸೋನಿಯಾ ಗಾಂಧಿಯನ್ನು ತೋರಿಸಿದ್ದಾರೆ. ನೀವು ಎಲ್ಲೆಂದರಲ್ಲಿ ಸೀಮೆಎಣ್ಣೆ ಎರಚಿದ್ದೀರಿ. ಮಣಿಪುರಕ್ಕೆ ಬೆಂಕಿ ಹಚ್ಚಿದ್ದೀರಿ. ನೀವು ಈಗ ಹರಿಯಾಣದಲ್ಲಿ ಅದೇ ಪ್ರಯತ್ನಿಸುತ್ತಿದ್ದೀರಿ ಎಂದು ಗುರುಗ್ರಾಮ್ ಮತ್ತು ನುಹ್‌ನಲ್ಲಿ ಇತ್ತೀಚಿನ ಕೋಮು ಘರ್ಷಣೆಗಳನ್ನು ರಾಹುಲ್ ಉಲ್ಲೇಖಿಸಿದ್ದಾರೆ.
ವಿಡಿಯೊ ನೋಡಿ: ಅಭಿನಯಕ್ಕಾಗಿ ಪೌರ ಕಾರ್ಮಿಕನಾದ ಬಾಲಕ – ಒಂದು ದಿನ ಅವರೊಂದಿಗೆ ಸುತ್ತಾಟ Janashakthi Media