ಲೋಕಸಭಾ ಚುನಾವಣೆ; 7 ರಾಜ್ಯಗಳಲ್ಲಿ ಬಿಜೆಪಿ, 5 ರಾಜ್ಯಗಳಲ್ಲಿ ಕಾಂಗ್ರೆಸ್‌ ಕ್ಲೀನ್‌ ಸ್ವೀಪ್‌

ಹೊಸದಿಲ್ಲಿ : ನಿನ್ನೆಯಷ್ಟೇ 18ನೇ ಲೋಕಸಭಾ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಮುಗಿದಿದ್ದು, ಇನ್ನು ಕೇಂದ್ರದಲ್ಲಿ ಯಾವ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಕೆರಳಿದೆ. ಈಗ ಎನ್‌ಡಿಎ ಮೈತ್ರಿಕೂಟಕ್ಕೆ ಸರಳ ಬಹುಮತವಿದ್ದರೂ, ಮೈತ್ರಿಪಕ್ಷಗಳ ನಿರ್ಧಾರ ನಿರ್ಣಾಯಕವಾಗಿದೆ.

ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 12 ಸೀಟ್ ಮತ್ತು ಆಂಧ್ರ ಪ್ರದೇಶದಲ್ಲಿ ತೆಲುಗುದೇಶಂ 16 ಸ್ಥಾನವನ್ನು ಮತ್ತು ಜನಸೇನಾ ಪಕ್ಷ ಎರಡು ಸ್ಥಾನವನ್ನು ಗೆದ್ದಿದೆ. ಒಟ್ಟಿನಲ್ಲಿ ಈ ಮೂರು ಪಕ್ಷಗಳು 30 ಸ್ಥಾನವನ್ನು ಗೆದ್ದಿವೆ. ಹಾಗಾಗಿ, ಈ ಮೂರು ಪಕ್ಷಗಳ ನಿರ್ಧಾರ ಪ್ರಮುಖವಾಗಲಿದೆ.

ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ತವರು ರಾಜ್ಯ ಗುಜರಾತ್ ನಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎನ್ನುವ ನಿರೀಕ್ಷೆಯಾಗಿತ್ತು. ಆದರೆ, 26 ಸ್ಥಾನಗಳ ಪೈಕಿ 25 ಸ್ಥಾನ ಗೆದ್ದು, ಕ್ಲೀನ್ ಸ್ವೀಪ್ ಸಾಧನೆ ಜಸ್ಟ್ ಮಿಸ್ ಮಾಡಿಕೊಂಡಿದೆ.

ಆದಾಗ್ಯೂ, ಬಿಜೆಪಿಯು ಏಳು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ್ತು ಕಾಂಗ್ರೆಸ್ ನಾಲ್ಕು ಕೇಂದ್ರಾಡಳಿತ ಪ್ರದೇಶ ಸೇರಿ ಐದು ಕಡೆ ಎಲ್ಲಾ ಸೀಟನ್ನು ಗೆದ್ದುಕೊಂಡಿದೆ. ಇದರಲ್ಲಿ ಬಹುತೇಕ ಕಡೆ ಒಂದೊಂದೇ ಲೋಕಸಭಾ ಸ್ಥಾನಗಳಿವೆ.

ಇದನ್ನು ಓದಿ : ಬಿಜೆಪಿಗೆ ಹಿನ್ನಡೆಯುಂಟು ಮಾಡಿರುವ ಜನರ ತೀರ್ಪು – ಲೋಕಸಭಾ ಚುನಾವಣಾ ಫಲಿತಾಂಶಗಳ ಬಗ್ಗೆ ಸಿಪಿಐ(ಎಂ)ಅಭಿನಂದನೆ

ಮಧ್ಯ ಪ್ರದೇಶ,ಹಿಮಾಚಲ ಪ್ರದೇಶ, ದೆಹಲಿ, ಉತ್ತರಾಖಂಡದಲ್ಲಿ ಕ್ಲೀನ್ ಸ್ವೀಪ್ ಆದ ಬಿಜೆಪಿ  

ಬಿಜೆಪಿಯು ಮಧ್ಯ ಪ್ರದೇಶದಲ್ಲಿ ಬಿಜೆಪಿ ಎಲ್ಲಾ 29 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ರಾಜ್‌ಘರ್‌ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ಇನ್ನೋರ್ವ ಮಾಜಿ ಸಿಎಂ ಕಮಲ್ ನಾಥ್ ಪುತ್ರ ನಕುಲ್ ಚಿಂದ್ವಾರದಲ್ಲಿ ಸೋತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಅವರು ವಿದಿಶಾದಲ್ಲಿ ಗೆದ್ದಿದ್ದಾರೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಗುಣಾ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ.

ಹಿಮಾಚಲ ಪ್ರದೇಶದ ನಾಲ್ಕೂ ಸ್ಥಾನವನ್ನು ಬಿಜೆಪಿ ಗೆದ್ದಿದೆ. ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಕಂಗನಾ ರಣಾವತ್ ಮತ್ತು ಹಮೀರ್‌ಪುರ್‌ ಕ್ಷೇತ್ರದಲ್ಲಿ ಅನುರಾಗ್ ಸಿಂಗ್ ಠಾಕೂರು ಗೆದ್ದಿದ್ದಾರೆ. ಕಾಂಗ್ರಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಆನಂದ್ ಸಿಂಗ್ ಭಾರೀ ಅಂತರದ ಸೋಲು ಕಂಡಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯ ಎಲ್ಲಾ 7 ಕ್ಷೇತ್ರಗಳಲ್ಲೂ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ, ಬಿಜೆಪಿ ಕಳೆದ ಬಾರಿಯೂ ಈ ಸಾಧನೆಯನ್ನು ಮಾಡಿತ್ತು. ಈಶಾನ್ಯ ದೆಹಲಿಯಲ್ಲಿ ಮನೋಜ್ ತಿವಾರಿ ಕಾಂಗ್ರೆಸ್ಸಿನ ಕನ್ಹಯ್ಯ ಕುಮಾರ್ ಅವರನ್ನು ಸೋಲಿಸಿದ್ದಾರೆ. ಇನ್ನು, ಸುಷ್ಮಾ ಸ್ವರಾಜ್ ಪುತ್ರಿ ಭಾನ್ಸುರಿ ಸ್ವರಾಜ್ ನವದೆಹಲಿ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಸೋಮನಾಥ್ ಬಾರ್ತಿಯವರನ್ನು ಸೋಲಿಸಿದ್ದಾರೆ.

ಉತ್ತರಾಖಂಡದ ಎಲ್ಲಾ ಐದು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಆಲ್ಮೋರದಲ್ಲಿ ಅಜಯ್ ಟಮ್ಟಾ, ನೈನಿತಾಲ್ ಕ್ಷೇತ್ರದಲ್ಲಿ ಅಜಯ್ ಭಟ್ ಗೆಲುವು ಸಾಧಿಸಿದ್ದಾರೆ. ಇನ್ನು, ಹರಿದ್ವಾರ ಲೋಕಸಭಾ ಕ್ಷೇತ್ರದಲ್ಲಿ ತ್ರಿವೇಂದ್ರ ಸಿಂಗ್ ರಾವತ್ ಗೆಲುವು ಕಂಡಿದ್ದಾರೆ.

ಇದನ್ನು ನೋಡಿ : ಚರ್ಚೆ| ಈ ಬಾರಿ ಮೋದಿ ಅಧಿಕಾರ ಕಳೆದುಕೊಳ್ಳುತ್ತಾರಾ? Janashakthi Media

Donate Janashakthi Media

Leave a Reply

Your email address will not be published. Required fields are marked *