ಬಿಜೆಪಿ ಸರಕಾರ ಎಂಎಸ್‍ಪಿ ಯಲ್ಲಿ ರೈತರಿಗೆ ಮೋಸ ಮಾಡುವುದನ್ನು ನಿಲ್ಲಿಸಬೇಕು : ಎಐಕೆಎಸ್

ನವದೆಹಲಿ: ಕೇಂದ್ರ ಸರಕಾರ 2023-24ರ ಸಾಲಿನ ಮುಂಗಾರು ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ(ಎಂಎಸ್‍ಪಿ)ಗಳನ್ನು ಪ್ರಕಟಿಸಿದೆ. ಇದು ಹಿಂದಿನ ವರ್ಷಗಳಿಗಿಂತ ಅತಿ ಹೆಚ್ಚಿನ ಏರಿಕೆಯಾಗಿದೆ ಎಂದು ಆಹಾರ ಮಂತ್ರಿಗಳು ಹೇಳಿದ್ದಾರೆ. ಆದರೆ ಈ ಎಂಎಸ್‍ಪಿ ನಿರ್ಧಾರದಲ್ಲಿ ರೈತರಿಗೆ ಅನ್ಯಾಯವಾಗಿದೆ, ಅವರ ನಿರೀಕ್ಷೆಯನ್ನು ಹುಸಿಗೊಳಿಸಿದೆ, ಅವರಿಗೆ ಭಾರೀ ನಷ್ಟಗಳನ್ನುಂಟು ಮಾಡಿದೆ ಎಂದು ಅಖಿಲ ಭಾರತ ಕಿಸಾನ್‍ ಸಭಾ(ಎಐಕೆಎಸ್) ಖಂಡಿಸಿದೆ.

ಪ್ರಧಾನ ಮಂತ್ರಿಗಳು ರೈತರ ಆದಾಯವನ್ನು ಇಮ್ಮಡಿಗೊಳಿಸಲಾಗುವುದು ಎಂದಿದ್ದರು. ಆದರೆ ಏರುತ್ತಿರುವ ಲಾಗುವಾಡುಗಳ ವೆಚ್ಚ, ಅದರ ಜತೆಗೆ ಎಂಎಸ್‍ಪಿಯಲ್ಲಿ ಅನ್ಯಾಯ ರೈತರ ಮೇಲೆ, ವಿಶೇಷವಾಗಿ ಸಣ್ಣ, ಅಂಚಿನಲ್ಲಿರುವ ಮತ್ತು ಮಧ್ಯಮ ರೈತರ ಮೇಲೆ ಸಾಲಹೊರೆಯನ್ನು ಹೇರಿದೆ. ಸ್ವಾಮಿನಾಥನ್‍ ಆಯೋಗದ ಶಿಫಾರಸಿನಂತೆ ಸಿ2+50% ಸೂತ್ರದಂತೆ ಎಂಎಸ್‍ಪಿ ಕೊಡಲಾಗುವುದು ಎಂಬ ಪ್ರಧಾನಿಗಳ ಆಶ್ವಾಸನೆ ಕೂಡ ಮತ್ತೆ ಹುಸಿಯಾಗಿದೆ, ಇದರಿಂದಾಗಿ ರೈತರು ಮಾಡಿದ ವೆಚ್ಚವನ್ನು ಕೂಡ ಭರಿಸಲಾರದೆ ಸಾಲಗ್ರಸ್ತರಾಗಬೇಕಾಗಿ ಬರುತ್ತಿದೆ ಎಂದು ಎಐಕೆಎಸ್‍ ಹೇಳಿದೆ.

ಸರಕಾರ ಪ್ರಕಟಿಸಿರುವ ಸರಾಸರಿ ವೆಚ್ಚದ ಆಧಾರದಲ್ಲಿ ಲೆಕ್ಕ ಹಾಕಿರುವ ವಿವಿಧ ಬೆಳೆಗಳ ಎಂಎಸ್‍ಪಿ ಗಳು ಸಿ2+50% ಸೂತ್ರದಿಂದ ಎಷ್ಟುದೂರದಲ್ಲಿದೆ ಎಂಬ ಒಂದು  ಪಟ್ಟಿಯನ್ನೇ ಅದು ಕೊಟ್ಟಿದೆ. ಉದಾ: ಭತ್ತಕ್ಕೆ ಸಿ2 ವೆಚ್ಚ ಕ್ವಿಂಟಾಲ್‍ಗೆ 1911ರೂ. ಸ್ವಾಮಿನಾಥನ್‍ ಆಯೋಗದ ಸೂತ್ರದ ಪ್ರಕಾರ ಎಂಎಸ್‍ಪಿ ರೂ. 2866.50 ಆಗಬೇಕಿತ್ತು. ಆದರೆ ಸರಕಾರ ಪ್ರಕಟಿಸಿರುವುದು  ರೂ. 2183. ಅಂದರೆ ಕ್ವಿಂಟಾಲ್‍ಗೆ ರೂ. 683.50 ನಷ್ಟ. ಸರಕಾರದ ಅಂದಾಜಿನ ಪ್ರಕಾರ ಭತ್ತದ ಉತ್ಪಾದಕತೆ ಹೆಕ್ಟೇರಿಗೆ 4 ಟನ್. ಇದರ ಪ್ರಕಾರ ಲೆಕ್ಕ ಹಾಕಿದರೆ ರೈತರಿಗೆ ಹೆಕ್ಟೇರಿಗೆ 27340ರೂ. ನಷ್ಟವಾಗುತ್ತದೆ.

ಇದಲ್ಲದೆ ಆಂಧ್ರಪ್ರದೇಶ, ಬಿಹಾರ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳು ಅಂದಾಜು ಮಾಡಿದ ಭತ್ತಬೆಳೆಯುವ ವೆಚ್ಚ ಸಿಎಸಿಪಿ(ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ) ಲೆಕ್ಕ ಹಾಕಿದ ವೆಚ್ಚಕ್ಕಿಂತ ಹೆಚ್ಚಿದೆ. ಉದಾ: ಕೇರಳದಲ್ಲಿ ಭತ್ತಕ್ಕೆ ಅಂದಾಜುಮಾಡಿದ ವೆಚ್ಚ ಕ್ವಿಂಟಾಲಿಗೆ 2847ರೂ,. ಮತ್ತು ಸಿಎಸಿಪಿ ಅಂದಾಜು 2338ರೂ. ಮತ್ತು ಪಂಜಾಬಿನಲ್ಲಿ ಅದು ಅನುಕ್ರಮವಾಗಿ 2089  ಮತ್ತು 1462. ಈ ವ್ಯತ್ಯಾಸ ಇತರ ಬೆಳೆಗಳ ವಿಷಯದಲ್ಲೂ ಕಂಡಿದೆ. ಉದಾ: ತೊಗರಿಗೆ ಕರ್ನಾಟಕದ ಅಂದಾಜು 9588ರೂ. ಆಗಿದ್ದರೆ ಸಿಎಸಿಪಿ ಅಂದಾಜು ಕ್ವಿಂಟಾಲಿಗೆ 5744ರೂ. ಮಾತ್ರ. ಅಂದರೆ ಪ್ರತಿ ಕ್ವಿಂಟಾಲಿನಲ್ಲಿ 3844ರೂ. ಕಡಿಮೆ.

ರೈತರಿಗೆ ಈಗ ಪ್ರಕಟಿಸಿರುವ ಎಂಎಸ್‍ಪಿ ಯಲ್ಲಿ ಸ್ವಾಮಿನಾಥನ್‍ ಆಯೋಗದ ಶಿಫಾರಸಿನ ಪ್ರಕಾರ ಆಗಿರುವ ನಷ್ಟದ ತಖ್ತೆ ಹೀಗಿದೆ.

ಬೆಳೆ                             ಸಿ2         ಸಿ2+50%           ಎಂಎಸ್‍ಪಿ      ನಷ್ಟ/ಕ್ವಿಂಟಲ್

ಭತ್ತ                               1911        2866.50                 2183               683.50

ಜೋಳ                        2833        4249.50                 3180              1069.50

ಸಜ್ಜೆ                            1811          2716.50                 2500              216.50

ಮುಸುಕಿನ ಜೋಳ     1797         2695.50               2090               605.50

ರಾಗಿ                            3328         4992                     3846             1146

ತೊಗರಿ                       5993         8989.50               7000              1989.50

ಹೆಸರು                       7218          10827                   8558              2269

ಉದ್ದು                       6239          9358.50               6950              2408.50

ನೆಲಗಡಲೆ                 5350          8025                    6377              1648

ಸೋಯಾಬೀನ್       4019          6028.50              4600             1428.50

ಸೂರ್ಯಕಾಂತಿ       5960           8940                   6760              2180

ಸಾಸಿವೆ                      7864          11,796                  8635              3161

ಹುಚ್ಚೆಳ್ಳು                 6793         10189.50              7734              2455.50

ಹತ್ತಿ                           5786         8679                     6620             2059

ಎಲ್ಲ ಬೆಳೆಗಳ ಉತ್ಪಾದನಾ ವೆಚ್ಚದ ಸಿಎಸಿಪಿ ಅಂದಾಜು ರಾಜ್ಯಗಳ ಅಂದಾಜಿಗಿಂತ ಕಡಿಮೆ ಇರುವುದು, ಒಟ್ಟಾರೆಯಾಗಿ ವಾಸ್ತವಿಕ ವೆಚ್ಚಕ್ಕಿಂತ ಬಹಳ ಕಡಿಮೆ ಇರುವುದು ರೈತರಿಗೆ ಮೊದಲ ಮೋಸ. ಮತ್ತು ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡುವಾಗ ರಾಷ್ಟ್ರೀಯ ಸರಾಸರಿಯನ್ನು ಲೆಕ್ಕ ಹಾಕುವಾಗ ಆಗುವ ಮತ್ತಷ್ಟು  ಕಡಿತ ಎರಡನೇ ಮೋಸ. ಎಂಎಸ್‍ಪಿಗೆ ಸಿ2 ವೆಚ್ಚಗಳನ್ನು ತಗೊಳ್ಳದೆ ಅದಕ್ಕಿಂತ ಕಡಿಮೆ ಇರುವ ಎ2+ಎಫ್‍ಎಲ್‍ ವೆಚ್ಚಗಳನ್ನು ಪರಿಗಣಿಸಲಾಗುತ್ತದೆ. ಹೀಗೆ ನಿಗದಿ ಮಾಡುವ ಕನಿಷ್ಟ ಬೆಂಬಲ ಬೆಲೆ ಕೂಡ ಕಾಗದದ ಮೇಲೆಯೇ ಇರುತ್ತದೆ. ಏಕೆಂದರೆ ಹೆಚ್ಚಿನ ಬೆಳೆಗಳಿಗೆ ಖಚಿತ ಖರೀದಿ ವ್ಯವಸ್ಥೆ ಇಲ್ಲ. ಇದು ರೈತರಿಗಾಗುವ ಮೂರನೇ ಮೋಸ. ಇದಲ್ಲದೆ, ರಾಜ್ಯಗಳು ತಮ್ಮಲ್ಲಿ ಅಂದಾಜು ವೆಚ್ಚಗಳು ಹೆಚ್ಚಿದ್ದರೂ ಉತ್ಪಾದನಾ ಬೋನಸುಗಳನ್ನು ಅಥವ ಉತ್ತೇಜನೆಗಳನ್ನು ಕೊಡುವುದನ್ನು ಸಿಎಸಿಪಿ ಮತ್ತು ಬಿಜೆಪಿ ಸರಕಾರ ಇಷ್ಟಪಡುವುದಿಲ್ಲ. ಉದಾ: ಕೇರಳ ಸರಕಾರ ಭತ್ತಕ್ಕೆ ಕ್ವಿಂಟಾಲಿಗೆ 780ರೂ. ಹೆಚ್ಚುವರಿ ಬೆಲೆ ಕೊಡುತ್ತದೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮುಂಗಾರು ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಗಳನ್ನು ಪರಿಷ್ಕರಿಸಬೇಕು, ಅವನ್ನು ಸಿ2+50% ಸೂತ್ರದ ಪ್ರಕಾರ ಹೆಚ್ಚಿಸಬೇಕು ಮತ್ತು ಖಚಿತ ಖರೀದಿಯ ಭರವಸೆ ಕೊಡಬೇಕು ಎಂದು ಅಖಿಲ ಭಾರತ ಕಿಸಾನ್‍ ಸಭಾ ಆಗ್ರಹಿಸಿದೆ. ಕಲಮು 370ನ್ನು ರದ್ದು ಮಾಡಿದ ನಂತರ ಸಿಎಸ್‍ ದತ್ತಾಂಶಗಳ ಸಂಗ್ರಹದಲ್ಲಿ ಜಮ್ಮು -ಕಾಶ್ಮೀರವನ್ನು ಪರಿಗಣನೆಗೆ ತಗೊಳ್ಳುತ್ತಿಲ್ಲ. ಸರಕಾರ ಅದನ್ನು ಗಣನೆಗೆ ತಗೊಳ್ಳಬೇಕು, ಅಲ್ಲಿಯ ರೈತರಿಂದಲೂ ಕೃಷಿ ಉತ್ಪನ್ನಗಳನ್ನು ಖರೀದಿಸಬೇಕು ಎಂದೂ ಎಐಕೆಎಸ್‍ ಆಗ್ರಹಿಸಿದೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ರೈತರಿಗೆ ಬಗೆಯುತ್ತಿರುವ ಈ ವಿಶ್ವಾಸಘಾತದ ವಿರುದ್ಧ ಪ್ರತಿಭಟಿಸಲು ಎದ್ದು ನಿಲ್ಲಬೇಕು , ಮತ್ತು ಈ ಸರಕಾರದ ವಂಚಕ ದಾವೆಗಳನ್ನು ಬಯಲಿಗೆಳೆಯಬೇಕು ಎಂದು ಎಲ್ಲ ರೈತರಿಗೆ ಎಐಕೆಎಸ್ ಕರೆ ನೀಡಿದೆ. 

Donate Janashakthi Media

Leave a Reply

Your email address will not be published. Required fields are marked *