ತಿರುವನಂತಪುರಂ : ಕೇರಳ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಮಂಜೇಶ್ವರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಕೆ. ಸುಂದರ್ ಅವರಿಗೆ ನಾಮಪತ್ರ ಹಿಂತೆಗೆದುಕೊಳ್ಳಲು ಹಣ ಮತ್ತು ಸ್ಮಾರ್ಟ್‌ಫೋನ್ ನೀಡಲಾಗಿತ್ತು ಎಂದು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.
ನಾಮಪತ್ರ ಹಿಂತೆಗೆದುಕೊಳ್ಳಲು ನಾನು 15 ಲಕ್ಷ ರೂ. ಕೇಳಿದೆ. ಆದರೆ, ಅವರು 2.5 ಲಕ್ಷ ರೂ. ಮತ್ತು ಸ್ಮಾರ್ಟ್‌ಫೋನ್ ನೀಡಿದರು ಎಂದು ಸುಂದರ ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಂಜೇಶ್ವರದ ಎನ್‌ಡಿಎ ಅಭ್ಯರ್ಥಿ ಕೆ ಸುರೇಂದ್ರನ್ ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿ ಹಣ ನೀಡುವ ಕುರಿತು ಮಾತನಾಡಿದ್ರು. ನಂತರ ಸ್ಥಳೀಯ ಬಿಜೆಪಿ ಮುಖಂಡರು ಮನೆಯಲ್ಲಿ ನನಗೆ ಹಣ ಹಾಗೂ ಸ್ಮಾರ್ಟ್‌ಫೋನ್ ನೀಡಿದ್ರು. ಸುರೇಂದ್ರನ್ ಗೆದ್ದರೆ, ಅವರು ಮಂಗಳೂರಿನಲ್ಲಿ ವೈನ್ ಶಾಪ್ ನೀಡುವ ಭರವಸೆ ನೀಡಿದರು ಎಂದು ಸುಂದರ ಹೇಳಿದ್ರು. ಸುಂದರ ಅವರು ಮಂಜೇಶ್ವರ ಬಿಎಸ್ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ, ನಂತರ ಅದನ್ನು ಹಿಂತೆಗೆದುಕೊಂಡಿದ್ದರು. ನಾಮಪತ್ರ ಹಿಂತೆಗೆದುಕೊಳ್ಳುವಂತೆ ಬಿಜೆಪಿ ನಾಯಕರು ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ಸ್ವತಃ ಸುಂದರ ಅವರೇ ಬಹಿರಂಗಪಡಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಹಣ : ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಪರ ಸ್ಪರ್ಧೆಗೆ ಇಳಿಯುವಂತೆ ಜನಾಧಿಪತ್ಯ ರಾಷ್ಟೀಯ ಪಕ್ಷ(ಜೆಆರ್‌ಪಿ) ಅಧ್ಯಕ್ಷೆ ಸಿ.ಕೆ.ಜಾನುಗೆ 10 ಲಕ್ಷ ರೂ. ನೀಡಿರುವ ಆರೋಪ ಕೂಡ ಇದೇ ವೇಳೆ ಬೆಳಕಿಗೆ ಬಂದಿದೆ.
ವಯನಾಡ್‌ನ ಸುಲ್ತಾನ್ ಬತ್ತೇರಿ ಕ್ಷೇತ್ರದಿಂದ ಎನ್‌ಡಿಎ ಪರ ಜಾನು ಸ್ಪರ್ಧಿಸಿದರೆ 10 ಲಕ್ಷ ರೂ. ನೀಡುವುದಾಗಿ ಸುರೇಂದ್ರನ್ ಹಾಗೂ ಜೆಆರ್‌ಪಿ ಖಜಾಂಚಿ ಪ್ರಸೀಥಾ ನಡುವೆ ನಡೆದ ಸಂಭಾಷಣೆ ಎನ್ನಲಾದ ಆಡಿಯೊ ಕ್ಲಿಪ್ ಒಂದು ವೈರಲ್ ಆಗಿತ್ತು.
ಬಿಜೆಪಿ ಕಡೆ ತಿರುಗಿದ ದರೋಡೆ ಪ್ರಕರಣ : ಸುಮಾರು ಎರಡು ತಿಂಗಳುಗಳ ಹಿಂದೆ ತ್ರಿಶೂರು ಜಿಲ್ಲೆಯಲ್ಲಿ ನಡೆದಿದ್ದ ಕಾರಿನ ಅಪಹರಣ ಮತ್ತು ದರೋಡೆ ಪ್ರಕರಣದಲ್ಲಿ ಪೊಲೀಸರಿಂದ ಬಿಜೆಪಿಯ ಏಳು ಪದಾಧಿಕಾರಿಗಳ ವಿಚಾರಣೆಯು ಪಕ್ಷದ ವಿರುದ್ಧದ ಅಕ್ರಮ ಹಣ ವಹಿವಾಟು ಮತ್ತು ಚುನಾವಣಾ ದುರ್ವ್ಯವಹಾರಗಳ ಆರೋಪಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ.
ವಿಧಾನಸಭಾ ಚುನಾವಣೆಗಳ ಪ್ರಚಾರ ಅಭಿಯಾನದ ಸಂದರ್ಭದಲ್ಲಿ ಎ.3ರಂದು ಕೋಝಿಕೋಡ್ನಿಂದ ಅಳಪ್ಪುಳಕ್ಕೆ ಹಣವನ್ನು ಸಾಗಿಸುತ್ತಿತ್ತು ಎನ್ನಲಾಗಿರುವ ಕಾರೊಂದನ್ನು ಏಳು ಜನರ ತಂಡವೊಂದು ಅಪಹರಿಸಿತ್ತು.
ಪ್ರಕರಣ ಏನು? : ಕೇರಳ ವಿಧಾನಸಭೆ ಚುನಾವಣೆಗೆ ಮೂರು ದಿನ ಮುನ್ನ ತ್ರಿಶೂರ್-ಕೊಚ್ಚಿ ಹೆದ್ದಾರಿಯಲ್ಲಿ ದರೋಡೆಯಾಗಿದೆ ಎಂದು ಕಾರ್‌ನ ಡ್ರೈವರ್ ಪ್ರಕರಣವನ್ನು ದಾಖಲಿಸಿದ್ದರು. ಈ ಹಣ ಉದ್ಯಮಿ, ಆರ್‌ಎಸ್‌ಎಸ್ ಕಾರ್ಯಕರ್ತ ಎಕೆ ಧರ್ಮರಾಜನ್ ಎಂಬವರಿಗೆ ಸೇರಿದ್ದು ಎಂದು ಪತ್ತೆಹಚ್ಚಿದರು. ಆದರೆ ದೂರಿನಲ್ಲಿ 25 ಲಕ್ಷ ದರೋಡೆಯಾಗಿದೆ ಎಂದು ತಿಳಿಸಲಾಗಿದ್ದು ದರೋಡೆಕೋರರನ್ನು ಪತ್ತೆಹಚ್ಚಿ ನಗದು ವಶಪಡಿಸಿಕೊಂಡಾಗ 3.5 ಕೋಟಿ ರೂಪಾಯಿ ದರೋಡೆಯಾಗಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ದೂರು ಹಾಗೂ ವಾಸ್ತವ ಘಟನೆಗೆ ವ್ಯತ್ಯಾಸವಿರುವುದು ಪೊಲೀಸರಿಗೆ ಅರಿವಾಗಿ ಬೇರೆಯದ್ದೇ ಅನುಮಾನ ಮೂಡಲು ಕಾರಣವಾಗಿತ್ತು. ನಂತರ ಈ ಹಣವನ್ನು ನಾನು ಬಿಜೆಪಿ ಮಾಜಿ ರಾಜ್ಯ ಯುವಮೋರ್ಚಾ ನಾಯಕ ಸುನಿಲ್ ನಾಯ್ಕ್ ಅವರಿಂದ ಪಡೆದುಕೊಂಡಿದ್ದೆ ಎಂದು ತಿಳಿಸಿದ್ದರು.
19 ಜನರ ಬಂಧನ : ಈ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈವರೆಗೆ 19 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಹೆಚ್ಚಿನವರು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದವರಾಗಿದ್ದು ಹವಾಲಾ ಹಣವನ್ನು ಲೂಟಿ ಮಾಡುವ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಮೂಲಗಳ ಮಾಹಿತಿಯ ಪ್ರಕಾರ ಉತ್ತರ ಕೇರಳದಿಂದ ಸೆಂಟ್ರಲ್ ಕೇರಳಕ್ಕೆ ಹಣ ವರ್ಗಾವಣೆಯ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಲಾಗಿತ್ತು. ಈ ಲೂಟಿ ನಾಟಕವನ್ನಾಡಲು ಈ ದರೋಡೆ ಗ್ಯಾಂಗ್‌ಅನ್ನು ನೇಮಕ ಮಾಡಲಾಗಿತ್ತು ಎಂದು ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ತ್ರಿಶೂರ್‌ನ ಮೂವರು ಬಿಜೆಪಿ ನಾಯಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಆರ್ ಹರಿ, ಕೇಂದ್ರ ಪ್ರಾದೇಶಿಕ ಕಾರ್ಯದರ್ಶಿ ಕಾಶಿನಾಥನ್ ಮತ್ತು ಜಿಲ್ಲಾ ಖಜಾಂಚಿ ಸುಜಯ್ ಸೇನನ್ ಶನಿವಾರ ವಿಚಾರಣೆಗೆ ಒಳಗಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಮೂವರು ಸಾಕಷ್ಟು ಮಾಹಿತಿ ನೀಡಿದ್ದು, ಇನ್ನಷ್ಟು ಬಿಜೆಪಿ ಮುಖಂಡರ ಹೆಸರುಗಳು ತಳುಕು ಹಾಕಿಕೊಂಡಿವೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.