ಪ್ರಕಾಶ್ ಕಾರಟ್
ಹೈದರಾಬಾದ್‌ನಲ್ಲಿ ಜುಲೈ 2 ಹಾಗೂ 3 ರಂದು ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ದೇಶದಲ್ಲಿ ಏಕ ಪಕ್ಷ ಸರ್ವಾಧಿಕಾರ ಸ್ಥಾಪಿಸುವ ಇಂಗಿತವನ್ನು ಸ್ಪಷ್ಟವಾಗಿ ಹೊರಹಾಕಿದ್ದಾರೆ. ಭಾರತದಲ್ಲಿ ಮುಂದಿನ 30 ರಿಂದ 40 ವರ್ಷ ಬಿಜೆಪಿಯ ಯುಗವಾಗಿರುತ್ತದೆ ಎಂದು ರಾಜಕೀಯ ಗೊತ್ತುವಳಿ ಮಂಡಿಸಿದ ಷಾ ಹೇಳಿದ್ದಾರೆ. ಥರ್ಡ್ ರೀಚ್‌ನಂತೆ ಮುಂದಿನ ಸಾವಿರ ವರ್ಷ ಬಿಜೆಪಿ ಆಡಳಿತವಿರುತ್ತದೆ ಎಂದು ಅವರು ಹೇಳದಿರುವುದು ದೊಡ್ಡ ಪುಣ್ಯ!
ಆದರೆ, ಭಾರತವನ್ನು ಏಕ-ಪಕ್ಷ ಹಿಂದೂತ್ವ ಸರ್ವಾಧಿಕಾರಿ ದೇಶವನ್ನಾಗಿ ಪರಿವರ್ತಿಸಲು ಮೂರು-ನಾಲ್ಕು ದಶಕಗಳ `ಬಿಜೆಪಿ ಯುಗ’ವೇ ಸಾಕಾಗುತ್ತದೆ. ಬಂಗಾಳ ಮತ್ತು ತೆಲಂಗಾಣದಲ್ಲಿ ಕುಟುಂಬ ಆಡಳಿತವನ್ನು ಬಿಜೆಪಿ ಅಂತ್ಯಗೊಳಿಸುವುದಾಗಿಯೂ ಆಂಧ್ರ ಪ್ರದೇಶ, ತಮಿಳುನಾಡು, ಒಡಿಶಾ ಮತ್ತು ಕೇರಳದಲ್ಲಿ ಅಧಿಕಾರಕ್ಕೆ ಬರುವುದಾಗಿಯೂ ಷಾ ಬೊಗಳೆ ಕೊಚ್ಚಿದ್ದಾರೆ. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಆಘಾಡಿಯ (ಎಂವಿಎ) ಸರಕಾರವನ್ನು ಉರುಳಿಸಿ ಬಿಜೆಪಿ-ನಿಯಂತ್ರಣದ ಸರಕಾರವನ್ನು ಪ್ರತಿಷ್ಠಾಪಿಸಿದ ಹುಮ್ಮಸ್ಸಿನಲ್ಲಿ ಅವರ ಈ ವಿಶ್ವಾಸಭರಿತ `ಆಪರೇಷನ್ ಕ್ಯಾಪ್ಚರ್’ (ಅಧಿಕಾರ ಗ್ರಹಣ) ಹೇಳಿಕೆ ಹೊರಬಿದ್ದಿರುವುದು ಸ್ಪಷ್ಟವಾಗಿದೆ. ಬಿಜೆಪಿಯೇತರ ಸರಕಾರಗಳನ್ನು ಅಸ್ಥಿರಗೊಳಿಸುವ ಪ್ರಕ್ರಿಯೆಯನ್ನು ಮಹಾರಾಷ್ಟ್ರದಲ್ಲಿ ಹೊಸ ಔನ್ನತ್ಯಕ್ಕೆ ಒಯ್ಯಲಾಗಿದೆ. ಅದು ಶಾಸಕರಿಗೆ ಲಂಚ ನೀಡಿಕೆ ಮತ್ತು ಕುದುರೆ ವ್ಯಾಪಾರಕ್ಕಷ್ಟೇ ಸೀಮಿತವಾಗಿಲ್ಲ. ಈ ಸಾಂಪ್ರದಾಯಿಕ ವಿಧಾನಗಳ ಜೊತೆಯಲ್ಲಿ, ಶಿವಸೇನೆ ಮತ್ತು ರಾಜ್ಯ ಸರಕಾರವನ್ನು ಒಡೆಯಲು ಪ್ರಭುತ್ವ ಮತ್ತು ಅದರ ಸಂಸ್ಥೆಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆ.
ಮಹಾರಾಷ್ಟ್ರದಲ್ಲಿ ಸರಕಾರ ಉರುಳಿಸುವ ಕಾರ್ಯಾಚರಣೆ ಒಂದೊಂದಾಗಿಯೇ ತೆರೆದುಕೊಳ್ಳುತ್ತಿರುವಂತೆ, ಶಿವಸೇನೆ ಶಾಸಕರನ್ನು ಅನರ್ಹಗೊಳಿಸದಿರುವ ಮೂಲಕ ಸುಪ್ರೀಂ ಕೋರ್ಟ್ ಅವರ ಪಕ್ಷಾಂತರಕ್ಕೆ ಅವಕಾಶ ಮಾಡಿಕೊಟ್ಟಿತು. ಅನರ್ಹಗೊಳಿಸಬಾರದೇಕೆ ಎಂದು ಕಾರಣ ಕೇಳಿ 16 ಶಾಸಕರಿಗೆ ಉಪ ಸ್ಪೀಕರ್ ನೀಡಿದ್ದ ನೋಟಿಸ್‌ಗೆ ಕೋರ್ಟ್ ತಡೆ ನೀಡಿತು. ಉತ್ತರ ನೀಡುವ ಅವಧಿಯನ್ನು ಸುಪ್ರೀಂ ಕೋರ್ಟ್ ಎರಡು ವಾರಕ್ಕಿಂತ ಹೆಚ್ಚು ಕಾಲ ವಿಸ್ತರಿಸಿತು. ಇದರಿಂದಾಗಿ ಇಡೀ ಪ್ರಕ್ರಿಯೆ ಪ್ರಯೋಜನವಿಲ್ಲದಂತಾಯಿತು. ಇದು ಪಕ್ಷಾಂತರ-ನಿಷೇಧ ಕಾನೂನಿನ ಉದ್ದೇಶಕ್ಕೇ ವಿರುದ್ಧವಾದುದಾಗಿದೆ. ಈ ಕಾಯಿದೆ ಪ್ರಕಾರ, ಅನರ್ಹತೆ ನಿರ್ಧಾರವು ಶಾಸನಸಭೆಯ ವ್ಯಾಪ್ತಿಗೆ ಬರುತ್ತದೆ. ಹಾಗೂ ನ್ಯಾಯಾಂಗದ ಪರಿಶೀಲನೆಯು ಈ ನಿರ್ಧಾರದ ಪ್ರಕ್ರಿಯೆ ಮುಗಿದ ನಂತರವಷ್ಟೇ ಆರಂಭವಾಗಬೇಕಾಗುತ್ತದೆ.
ಒಂದೆಡೆ ಉನ್ನತ ನ್ಯಾಯಾಂಗವು ಈ ರೀತಿಯಲ್ಲಿ ನಡೆದುಕೊಂಡರೆ ಇನ್ನೊಂದೆಡೆ ರಾಜ್ಯಪಾಲರ ಪಾತ್ರವೂ ಹೆಚ್ಚು ನಿರ್ಲಜ್ಜವಾಗಿತ್ತು. ಎಂವಿಎ ಸರಕಾರದ ಸುಮಾರು 17 ತಿಂಗಳ ಅವಧಿಯಲ್ಲಿ ವಿಧಾನ ಸಭೆಯ ಸ್ಪೀಕರ್ ಆಯ್ಕೆಗೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವಕಾಶ ನೀಡಿರಲಿಲ್ಲ. ಕೆಲವು ನಿಯಮಗಳಿಗೆ ಸಂಬಂಧಿಸಿ ವ್ಯಾಜ್ಯ ನಡೆಯುತ್ತಿದೆ ಎಂಬ ನೆಪವೊಡ್ಡಿ ಸ್ಪೀಕರ್ ಆಯ್ಕೆಯನ್ನು ತಡೆ ಹಿಡಿಯಲಾಗಿತ್ತು. ಆದರೆ, ಬಿಜೆಪಿ ಹಾಗೂ ಬಂಡಾಯ ಶಿವಸೇನೆ ಸರಕಾರ ರಚನೆಯಾಗುತ್ತಿದ್ದಂತೆಯೇ ಎರಡೇ ದಿನದಲ್ಲಿ ಸ್ಪೀಕರ್ ಆಯ್ಕೆ ದಿನಾಂಕ ನಿಗದಿಪಡಿಸಲು ರಾಜ್ಯಪಾಲರಿಗೆ ಯಾವ ಅಡ್ಡಿಯೂ ಕಾಣಿಸಲಿಲ್ಲ. ಎಂವಿಎ ಸರಕಾರದ ಆಡಳಿತದುದ್ದಕ್ಕೂ ರಾಜ್ಯಪಾಲ ಕೋಶಿಯಾರಿ ಒಬ್ಬ ಸಾಂವಿಧಾನಿಕ ಪ್ರಮುಖನಿಗಿಂತ ಆರ್‌ಎಸ್‌ಎಸ್ ಕಾರ್ಯಕರ್ತನಂತೆ ಕೆಲಸ ಮಾಡಿದ್ದು ಸ್ಪಷ್ಟವಾಗಿದೆ.
ಕೇಂದ್ರೀಯ ಸಂಸ್ಥೆಗಳನ್ನು, ಅದರಲ್ಲೂ ವಿಶೇಷವಾಗಿ ಅನುಷ್ಠಾನ ನಿರ್ದೇಶನಾಲಯವನ್ನು (ಇ.ಡಿ.) ಎಂವಿಎ ಸರಕಾರದ ವಿರುದ್ಧ ಪ್ರಮುಖ ಅಸ್ತ್ರವನ್ನಾಗಿ ಬಳಸಲಾಯಿತು. ಅನೇಕ ಶಿವ ಸೇನೆ ಹಾಗೂ ಎನ್‌ಸಿಪಿ ನಾಯಕರ ತನಿಖೆ ನಡೆಸಿ ಸುಳ್ಳು ಆರೋಪಗಳಡಿ ಸಿಲುಕಿಸಲು ಇ.ಡಿ.ಯನ್ನು ನಿಯೋಜಿಸಲಾಯಿತು. ಎನ್‌ಸಿಪಿಯ ಇಬ್ಬರು ಸಚಿವರನ್ನು ಕರಾಳ ಹಣಕಾಸು ದುರ್ಬಳಕೆ ತಡೆ ಕಾನೂನು (ಪಿಎಂಎಲ್‌ಎ) ಅಡಿಯಲ್ಲಿ ಬಂಧಿಸಿ ಸೆರೆಮನೆಗೆ ತಳ್ಳಲಾಯಿತು. ಕೇಂದ್ರೀಯ ಸಂಸ್ಥೆಗಳ ಹಿಡಿತದಿಂದ ತಪ್ಪಿಸಿಕೊಳ್ಳಲು ಬಿಜೆಪಿಗೆ ಪಕ್ಷಾಂತರ ಮಾಡುವುದು ಅನಿವಾರ್ಯ ಎಂಬಂಥ ಪರಿಸ್ಥಿತಿಯನ್ನು ಸೃಷ್ಟಿಸಲಾಗುತ್ತಿದೆ.
ರಾಜ್ಯಪಾಲ, ಕೇಂದ್ರೀಯ ಸಂಸ್ಥೆಗಳು ಮತ್ತು ನ್ಯಾಯಾಂಗ -ಹೀಗೆ ಪ್ರಭುತ್ವದ ವಿವಿಧ ಅಂಗಗಳಿಂದ ಸಜ್ಜಿತರಾಗಿರುವುದರಿಂದಲೇ ಬಿಜೆಪಿಯ ಆಡಳಿತ ಕಸಿಯುವ ಕಾರ್ಯಾಚರಣೆಯಿಂದ ಯಾವ ರಾಜ್ಯವೂ ತಪ್ಪಿಸಿಕೊಳ್ಳಲಾಗದು ಎಂದು ಅಮಿತ್ ಷಾ ಘಂಟಾಘೋಷವಾಗಿ ಹೇಳಿದ್ದಾರೆ. ತಮಿಳುನಾಡು ಮತ್ತು ಕೇರಳದಂಥ ರಾಜ್ಯವನ್ನು ರಾಜಕೀಯ ಚಟುವಟಿಕೆಗಳಿಂದ ಗೆಲ್ಲಲಾಗದು ಎನ್ನುವುದು ಸ್ಪಷ್ಟವಾಗಿದೆ. ಹಾಗಾಗಿ, ಅವುಗಳನ್ನು ಪ್ರಭುತ್ವದ ಅಸ್ತ್ರಗಳ ಮೂಲಕವೇ ಗೆಲ್ಲಬಹುದು ಎನ್ನುವುದು ಅದಕ್ಕೆ ಗೊತ್ತಿದೆ. ಆ ಮೂಲಕ `ಒಂದು ದೇಶ, ಒಂದು ಪಕ್ಷ’ ಮಾಡಲು ಸಾಧ್ಯ ಎಂದು ಅದು ಭಾವಿಸಿದೆ. ಬಿಜೆಪಿ ಯುಗವೆಂದರೆ ಏನಿರುತ್ತದೆ ಎನ್ನುವುದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗಿಂತ ಕೆಲವು ದಿನಗಳ ಮೊದಲು ಅನಾವರಣಗೊಂಡ ವಿದ್ಯಮಾನಗಳು ಸ್ಪಷ್ಟಪಡಿಸುತ್ತವೆ. 2002ರ ಗುಜರಾತ್ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಕೋರಿ ಸುಪ್ರೀಂ ಕೋರ್ಟ್ಗೆ ಮೊರೆ ಹೋಗುವ ಕೆಚ್ಚು ತೋರಿದ್ದ ತೀಸ್ತಾ ಸೆಟಲ್‌ವಾಡ್ ಮತ್ತು ಆರ್.ಬಿ. ಶ್ರೀಕುಮಾರ್‌ರನ್ನು ಬಂಧಿಸಿ ಸರಳುಗಳ ಹಿಂದೆ ತಳ್ಳಿದ್ದು ಸರ್ವಾಧಿಕಾರದ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಪತ್ರಕರ್ತ ಮಹಮದ್ ಜುಬೇರ್ ಬಂಧನ ಹಾಗೂ ಸ್ವತಂತ್ರ ಪತ್ರಿಕೋದ್ಯಮ ಹಾಗೂ ಫ್ಯಾಕ್ಟ್ ಚೆಕ್ಕಿಂಗ್‌ಗಾಗಿ ಅವರು ನಡೆಸಿದ ಪ್ರಯತ್ನಗಳಿಗಾಗಿ ಅವರ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಿರುವುದು ಸ್ವತಂತ್ರ ಮಾಧ್ಯಮದ ಮೇಲೆ ದಾಳಿ ಮಾಡುವುದನ್ನು ಆಡಳಿತ ಮುಂದುವರಿಸಲಿದೆ ಎನ್ನುವುದರ ಸ್ಪಷ್ಟ ಸುಳಿವಾಗಿದೆ. ಬಿಜೆಪಿ ಯುಗದಲ್ಲಿ ಜೀ ಹುಜೂರ್ ಮಾಧ್ಯಮಕ್ಕೆ ಅವಕಾಶ ಇರುತ್ತದೆಯೇ ಹೊರತು ಭಿನ್ನಮತಕ್ಕೆ ಆಸ್ಪದವಿರುವುದಿಲ್ಲ.
ಮುಸ್ಲಿಂ ಭಯೋತ್ಪಾದಕರಿಗೆ ಬಿಜೆಪಿ ಆಶ್ರಯ
ಹಿಂದೂತ್ವ ಸಂಘಟನೆಗಳು ಮುಸ್ಲಿಂ-ವಿರೋಧಿ ಭಾವನೆಗಳನ್ನು ಪ್ರಚೋದಿಸಿ ಸಮಾಜದಲ್ಲಿ ಕಾಯಂ ಆಗಿ ಒಡಕನ್ನು ಸೃಷ್ಟಿಸುತ್ತಿರುವಾಗಲೇ ಮುಸ್ಲಿಂ ಉಗ್ರಗಾಮಿಗಳನ್ನು ಬಿಜೆಪಿ ಪೋಷಿಸುತ್ತಿರುವ ಅನಿರೀಕ್ಷಿತ ವಿದ್ಯಮಾನ ಬಯಲಿಗೆ ಬಂದಿದೆ. ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್‌ನ ಹತ್ಯೆ ಮಾಡಿದ್ದ ಇಬ್ಬರ ಪೈಕಿ ಮಹಮದ್ ರಿಯಾಜ್ ಅಖ್ತಾರಿ ಎಂಬಾತ ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ಸದಸ್ಯ ಎಂಬುದು ತಿಳಿದು ಬಂದಿದೆ. ಜಮ್ಮುನಲ್ಲಿ ಬಂಧಿತನಾಗಿರುವ ಲಷ್ಕರ್ ಎ ತಯ್ಬಾದ ಕಮಾಂಡರ್ ತಾಲಿಬ್ ಹುಸೇನ್ ಷಾ, ಬಿಜೆಪಿಯ ಜಮ್ಮು ಘಟಕದ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥನಾಗಿದ್ದ ಎನ್ನುವುದೂ ತಿಳಿದು ಬಂದಿದೆ. ಬಿಜೆಪಿಯು ಎಲ್ಲ ಬಗೆಯ ಉಗ್ರಗಾಮಿಗಳಿಗೆ ಆಶ್ರಯ ತಾಣವಾಗುತ್ತಿದೆ ಎಂದು ಕಾಣುತ್ತಿದೆ. ಎರಡೂ ಕಡೆಯಿಂದ ಉಗ್ರಗಾಮಿ ಚಟುವಟಿಕೆಗಳು ಹೆಚ್ಚಿದಾಗ ಕೋಮು ಧ್ರುವೀಕರಣವನ್ನು ತಾರಕಕ್ಕೆ ಒಯ್ಯಬಹುದೆಂಬುದು ಬಿಜೆಪಿ ಲೆಕ್ಕಾಚಾರವಾಗಿದೆ. ಹಿಂದೂ ಹಿತಾಸಕ್ತಿಯ ರಕ್ಷಕ ಎಂದು ಹೆಮ್ಮೆ ಪಡುವ ಪಕ್ಷವೊಂದರಲ್ಲಿ ಮುಸ್ಲಿಂ ಉಗ್ರಗಾಮಿಗಳು-ಭಯೋತ್ಪಾದಕರು ಇರುವುದು ಎದುರುಬದಿರು ಕಡೆಯವರ ಒಗ್ಗಟ್ಟಿನಂತೆ ಕಾಣಿಸುತ್ತದೆ.
ಹೊಸ ಬಿಜೆಪಿ ಯುಗದ ಕೋಮುವಾದಿ ಸರ್ವಾಧಿಕಾರ ಕುರಿತ ಅಮಿತ್ ಷಾರ ಬಡಬಡಿಕೆಗಳು ಕೇವಲ ವಾಗಾಡಂಬರವಲ್ಲ ಎನ್ನುವುದನ್ನು ಸಾರ್ವಜನಿಕ ಸಭೆಯಲ್ಲಿ ಅವರ ಪಕ್ಷದ ಮುಖಂಡರು ಜನರಿಗೆ ನೀಡಿದ ಕರೆಗಳಿಂದ ಸಾಬೀತಾಗಿದೆ. ಹೈದರಾಬಾದ್ ಭಾಗ್ಯನಗರ ಆಗಬೇಕೆಂದು ಮೋದಿ ಹೇಳಿದ್ದಾರೆ. ಇದು ಒಂದು ನಗರದ ಹೆಸರು ಬದಲಾವಣೆ ವಿಚಾರ ಮಾತ್ರ ಎಂದು ಭಾವಿಸಬಾರದು. ಅದು ಹೊಸ ಹಿಂದುತ್ವ ಯುಗದ ಗುರುತಾಗಿದೆ.
ಅನು: ವಿಶ್ವ