ಆರ್ಎಸ್ಎಸ್ ನಿಜವಾಗಿಯೂ ಸದ್ಗುಣಸಂಪನ್ನವಾಗಿದ್ದರೆ, ಅದುತನ್ನಹಣಕಾಸಿನ ಸಾರ್ವಜನಿಕ ಪರೀಕ್ಷಣೆಗೆ ಏಕೆ ಅಪಾರದರ್ಶಕವಾಗಿ ಉಳಿಯಬೇಕು? ಸಂಘದ ಬಳಿ ಅಗಾಧನಿಧಿಗಳು ಮತ್ತು ಅಪಾರ ಪ್ರಮಾಣದ ಭೂಮಿಇವೆ ಮತ್ತು ಅವುಗಳಲ್ಲಿ ಮಹಲುಗಳು ಮತ್ತು ಇತರ ಕಟ್ಟಡಗಳನ್ನು ನಿರ್ಮಿಸಿದೆ ಎಂಬುದು ಸಾರ್ವಜನಿಕವಾಗಿತಿಳಿದಿರುವಸಂಗತಿ. ಆರ್‌ಎಸ್‍ಎಸ್ ಮುಖ್ಯಸ್ಥರುಇವೆಲ್ಲ ಸಾರ್ವಜನಿಕ ಹಣಕಾಸು ಎಂಬುದನ್ನು ಮರೆಮಾಚಲು ಸಾಧ್ಯವಿಲ್ಲ. ಏಕೆಂದರೆ ಆರ್ಎಸ್ಎಸ್ ಒಂದು‘Body of Individuals’ (BOI-ವ್ಯಕ್ತಿಗಳಸಮೂಹ) ಎಂದು ಅವರೇ ಒಪ್ಪಿಕೊಂಡಿದ್ದಾರೆ. ಅಂತಹ ಸ್ವತ್ತುಗಳ ಬಗ್ಗೆ ಯಾವುದೇ ಪಾರದರ್ಶಕ ಸಾರ್ವಜನಿಕ ಮಾಹಿತಿಗಳನ್ನು ಕೊಡದಿರಲು ನೋಂದಣಿಯ ಅಂಶವನ್ನು ಏಕೆ ಮುಂದೊಡ್ಡಬೇಕು?ನೋಂದಣಿ ಇಲ್ಲದಿರುವುದು ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರಿಂದ ಎಂದು ಹೇಳಿಕೊಳ್ಳುವುದಂತೂ ಸತ್ಯದ ಅಣಕವಾಗಿದೆ, ಅದು ಅನುಸರಿಸಿಕೊಂಡು ಬಂದಿರುವ ನುಣುಚಿಕೆ ಮತ್ತು ವಂಚನೆಯ ಮುಂದುವರಿಕೆಯಾಗಿದೆ.
-ನೀಲೋತ್ಪಲ ಬಸು
ಆರ್‌ಎಸ್‌ಎಸ್ ಎಷ್ಟು ಸಾಚಾ ಎಂಬ ಬಗ್ಗೆ ದೇಶದಲ್ಲಿ ವಿವಾದ ಮತ್ತು ಚರ್ಚೆ ನಡೆಯುತ್ತಿದೆ. ಅದೊಂದು ನೋಂದಣಿಯಿಲ್ಲದ ಸಂಘಟನೆ ಎಂಬ ಸಂದರ್ಭದಲ್ಲಿ ಈ ಚರ್ಚೆ ಮುನ್ನೆಲೆಗೆ ಬಂದಿದೆ,. ವಿವಿಧ ಹಂತಗಳಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರಗಳ ಮಂತ್ರಿಗಳಿಗಂತೂ ಇದೊಂದು ಧರ್ಮದೂಷಣೆಯ ಪ್ರಶ್ನೆ ಎಂದು ಹೌಹಾರುತ್ತಾರೆ. ತಮ್ಮದು ಒಂದು ಅತ್ಯಂತ ನೀತಿವಂತ ಪಕ್ಷ ಎಂದು ಹೇಳಿಕೊಳ್ಳುವವರು ಇಂತಹ ಪ್ರಶ್ನೆಗಳನ್ನು ಹೇಗೆ ತಾನೇ ಸಹಿಸಬಲ್ಲರು? ಜರ್ಮನಿಯ ಮತ್ತು ಇಟಲಿಯ ಫ್ಯಾಸಿಸ್ಟರೊಂದಿಗೆ ಆರ್‌ಎಸ್‌ಎಸ್‌ನ ಸಂಬಂಧವು ಅದರ ಸಂಘಟನಾ ರಚನೆಯನ್ನು ರೂಪಿಸಿರುವಾಗ, ಅನಿವಾರ್ಯವಾಗಿಯೇ ಅವುಗಳ ಅಸಹಿಷ್ಣುತೆ ಮತ್ತು ದುರಹಂಕಾರದ ಛಾಪು ಇದ್ದೇ ಇರಬೇಕು.
ಆಗಸ್ಟ್ 15 ರಂದು ಕೆಂಪು ಕೋಟೆಯಿಂದ ಪ್ರಧಾನ ಮಂತ್ರಿ ಮೋದಿಯವರ ಭಾಷಣದಲ್ಲಿ ಆರ್‌ಎಸ್‌ಎಸ್ ಮತ್ತು ಅದರ ಭೂತಕಾಲದ ಬಗ್ಗೆ ಲಂಗುಲಾಮಿಲ್ಲದ ಪ್ರಶಂಸೆ ತುಂಬಿತ್ತು. ಒಬ್ಬ ಹಿಂದಿನ ಪ್ರಚಾರಕನ ಇಂತಹ ಹೊಗಳಿಕೆಯಲ್ಲಿ ಆಶ್ಚರ್ಯವೇನಿಲ್ಲ. ಆರ್‌ಎಸ್‌ಎಸ್ ರಾಷ್ಟ್ರಕ್ಕೆ ಸೇವೆ ಸಲ್ಲಿಸಿರುವ ಒಂದು ಸರಕಾರೇತರ ಸಂಘಟನೆ ಎಂದು ಅದಕ್ಕೆ ನ್ಯಾಯಬದ್ಧತೆ ಆವಾಹಿಸಲು ಅವರು ಕೆಂಪು ಕೋಟೆಯ ಪ್ರಾಚೀರಗಳನ್ನು ಬಳಸಿಕೊಂಡರು. ಆರ್‌ಎಸ್‍ಎಸ್, ಒಂದು ಸಂಸ್ಥೆಯಾಗಿ ಕಾನೂನು ಮತ್ತು ಸಂವಿಧಾನದ ಪ್ರಮಾಣಿತ ಕಾರ್ಯವಿಧಾನಗಳ ಪ್ರಕಾರ ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ತಾನೇ ಒಪ್ಪಿಕೊಳ್ಳುತ್ತಿದೆ ಎಂಬುದು ಒಂದು ವಿಚಿತ್ರ ಸಂಗತಿಯಾಗಿ ಕಾಣಿಸಬಹುದು. ಪ್ರಸ್ತುತ ಚರ್ಚೆಯಲ್ಲಿ ತನ್ನನ್ನು ‘ಬಾಡಿ ಆಫ್ ಪ್ರೈವೇಟ್ ಇಂಡಿವಿಜುವಲ್ಸ್ (ಖಾಸಗಿ ವ್ಯಕ್ತಿಗಳ ನಿಕಾಯ ಅಥವ ವ್ಯಕ್ತಿಗಳ ಸಮೂಹ) ಎಂದು ಗುರುತಿಸಲಾಗಿದೆ, ಅದಕ್ಕೆ ಯಾವುದೇ ನೋಂದಣಿ ಅಗತ್ಯವಿಲ್ಲ ಎಂದು ಹೇಳಿಕೊಂಡಿದೆ.
ಸುಳ್ಳಿನ ಕಂತೆ
ಆದಾಗ್ಯೂ, ನೋಂದಣಿಯ ವಿಷಯಉಳಿದೇಉಳಿಯುತ್ತದೆ. ಈ ಪ್ರಶ್ನೆಯನ್ನುಕುರಿತಂತೆ ಬಿಜೆಪಿ ನೇತೃತ್ವದ ಸರ್ಕಾರದ ಅಧಿಕಾರಿಗಳು ಏನೂ ಹೇಳಲಾರದ ಸ್ಥಿತಿಯಲ್ಲಿರವುದರಿಂದ, ಕೊನೆಗೆಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಅವರೇ ಪ್ರತಿಕ್ರಿಯಿಸಲೇ ಬೇಕಾಗಿಬಂತು. ನವೆಂಬರ್ 9 ರಂದು ಬೆಂಗಳೂರಿನಲ್ಲಿ ನಡೆದ “ಸಂಘದ 100 ವರ್ಷಗಳ ಪಯಣ:ಹೊಸದಿಗಂತಗಳು”ಎಂಬ ಕಾರ್ಯಕ್ರಮದಲ್ಲಿ ಮಾತನಾಡುತ್ತ ಅವರು, “ಸಂಘವು 1925 ರಲ್ಲಿ ಪ್ರಾರಂಭವಾಯಿತು ಎಂದು ನಿಮಗೆ ತಿಳಿದಿದೆಯೇ? ಆ ಸಮಯದಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಡುತ್ತಿದ್ದ ನಮ್ಮ ಸರಸಂಘ ಚಾಲಕರು (ಕೆ ಬಿ ಹೆಗ್ಡೆವಾರ್) ನಮ್ಮನ್ನು ಆ ಸರಕಾರದೊಂದಿಗೆ ನೋಂದಾಯಿಸಿಕೊಳ್ಳಬೇಕೆಂದು ನೀವು ನಿರೀಕ್ಷಿಸುತ್ತೀರಾ? ಸ್ವಾತಂತ್ರ್ಯದ ನಂತರ, ಭಾರತೀಯ ಕಾನೂನುಗಳು ನೋಂದಣಿಯನ್ನು ಕಡ್ಡಾಯಗೊಳಿಸಲಿಲ್ಲ.ನೋಂದಣಿ ಮಾಡದ ವ್ಯಕ್ತಿಗಳ ನಿಕಾಯಕ್ಕೂ ಕಾನೂನಾತ್ಮಕ ಸ್ಥಾನಮಾನವನ್ನು ನೀಡಲಾಗುತ್ತದೆ. ನಮ್ಮನ್ನು ವ್ಯಕ್ತಿಗಳ ನಿಕಾಯ ಎಂದು ವರ್ಗೀಕರಿಸಲಾಗಿದೆ. ನಾವು ಒಂದುಮಾನ್ಯತೆ ಪಡೆದ ಸಂಘಟನೆ” ಎಂದುಹೇಳಿದರು. ಭಾಗವತರು ಬಿಚ್ಚಿಟ್ಟ ಸುಳ್ಳಿನ ಕಂತೆಯಮೂಲಸತ್ವಇದು.
ಇದನ್ನೂ ಓದಿ: ಕನ್ನಡ ಸರ್ಕಾರಿ ಶಾಲೆ/ ಪದವಿ ಪೂರ್ವ ಕಾಲೇಜುಗಳನ್ನು ಮುಚ್ಚುತ್ತಿರುವುದನ್ನು ಖಂಡಿಸಿ ಎಸ್. ಎಫ್. ಐ ಪ್ರತಿಭಟನೆ
ಮೊದಲಿಗೆ, ಹೆಡ್ಗೆವಾರ್ ಕಾಂಗ್ರೆಸ್‌ನೊಂದಿಗೆ ಇದ್ದರು, ಆಮೂಲಕವಷ್ಟೇಸ್ವಾತಂತ್ರ್ಯ ಹೋರಾಟದ ಒಂದು ಭಾಗವಾಗಿದ್ದರು ಎಂಬುದೇನೋ ನಿಜ. ಆದರೆ ಆರ್‌ಎಸ್‌ಎಸ್ ಒಂದು “ವ್ಯಕ್ತಿಗಳ ನಿಕಾಯ” ಅಥವ ಸಮೂಹವಾಗಿ ಬ್ರಿಟಿಷ್ ಸರ್ಕಾರವನ್ನು ವಿರೋಧಿಸಲಿಲ್ಲ ಎಂಬುದು ಕೂಡ ಒಂದು ಸತ್ಯ ಸಂಗತಿ. ಈ ಸಂಘಟನೆಯ ಮೂಲಾಧಾರ ಹಿಂದೂರಾಷ್ಟ್ರ ರಚನೆಗೆ ಶ್ರಮಿಸುವುದಾಗಿತ್ತು ಮತ್ತು ಅದರ ಧ್ಯೇಯವಾಕ್ಯ “ಹಿಂದೂಗಳನ್ನು ಒಗ್ಗೂಡಿಸುವುದು’ ಮತ್ತು ‘ಹಿಂದೂತ್ವವನ್ನು ಮಿಲಿಟರೀಕರಿಸುವುದು’ ಆಗಿತ್ತು ಎಂದು ಸಂಘ ಪಂಥದ ಉನ್ನತ ಸಿದ್ಧಾಂತಿ ಗೋಲ್ವಾಲ್ಕರ್ ಅಧಿಕಾರಯುತವಾಗಿ ಒತ್ತಿ ಹೇಳಿದ್ದಾರೆ.
ಆರ್‌ಎಸ್ಎಸ್ ಕೂಡ ಬ್ರಿಟಿಷ್ ಸರಕಾರದ ವಿರುದ್ಧ ಜಾತಿ, ಮತ, ಧರ್ಮ ಮತ್ತು ಸಾಂಸ್ಕೃತಿಕ-ಭಾಷಾ ವೈವಿಧ್ಯತೆಗಳನ್ನು ಲೆಕ್ಕಿಸದಭಾರತೀಯ ಸ್ವಾತಂತ್ರ್ಯ ಹೋರಾಟದ ಸಂಯುಕ್ತ ಸ್ವರೂಪಕ್ಕೆ ತನ್ನ ವಿರೋಧವನ್ನು ಒತ್ತಿಹೇಳಿತ್ತು. ಆದ್ದರಿಂದ, ಈಗ ನೋಂದಣಿ ಇಲ್ಲದಿರುವುದು ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರಿಂದ ಎಂದು ಹೇಳಿಕೊಳ್ಳುವುದು ಸತ್ಯದ ಅಣಕವಾಗುತ್ತದೆ.
ಇತ್ತೀಚೆಗೆ, ಬಿಜೆಪಿ ನೇತೃತ್ವದ ಸರ್ಕಾರವು ದೇಶದಲ್ಲಿನ ಆರ್ಥಿಕ ಅಕ್ರಮಗಳನ್ನು ಮತ್ತು ಸಾರ್ವಜನಿಕ ಹಣಕಾಸಿಗೆ ನ್ಯಾಯಬದ್ಧವಾಗಿ ಬರಬೇಕಾದ ತೆರಿಗೆ ಆದಾಯವನ್ನು ಬೇರೆಡೆಗೆ ತಿರುಗಿಸುವುದನ್ನು ತಡೆದು ರಾಷ್ಟ್ರವನ್ನು ಶುದ್ಧೀಕರಿಸುವ ತನ್ನ ಪ್ರಯತ್ನದ ಬಗ್ಗೆ ತಾವು ಮಾತ್ರವೇ ಮಹಾನೀತಿವಂತರು ಎಂಬಂತಹ ಹೇಳಿಕೆಗಳನ್ನು ನೀಡುವ ಗೀಳನ್ನುತೋರಿಸುತ್ತಿದೆ. ಮೋದಿ ಸರ್ಕಾರವು ವಿಶೇಷವಾಗಿ ಜಾರಿ ನಿರ್ದೇಶನಾಲಯ (ಇಡಿ) ಕ್ಕೆ ಪ್ರಕರಣಗಳನ್ನು ದಾಖಲಿಸಲು ಮತ್ತು ಲವಲೇಶವೂ ಪುರಾವೆಗಳಿಲ್ಲದೆಯೂ ಜನರನ್ನು ಬಂಧಿಸಲು ವ್ಯಾಪಕವಾದ ಅಧಿಕಾರವನ್ನು ನೀಡುವ ಮೂಲಕ ‘ಅಕ್ರಮ ಹಣವರ್ಗಾವಣೆ ತಡೆ ಕಾಯ್ದೆ (PMLA)ಯನ್ನು ಒಂದು ಶಸ್ತ್ರವಾಗಿ ಪರಿವರ್ತಿಸಿದೆ. ಈ ನಿಬಂಧನೆಗಳನ್ನು ಪ್ರತಿಪಕ್ಷಗಳ ವಿರುದ್ಧ ಪಕ್ಷಪಾತೀ ಅಭಿಯಾನವನ್ನು ಹರಿಯಬಿಡಲು ಮತ್ತು ಅವರನ್ನು ತಮಗೆ ವಿಧೇಯರಾಗುವಂತೆ ಮಾಡಲು ಬಳಸಿರುವ ಸಾಲು-ಸಾಲುಪ್ರಕರಣಗಳಿವೆ ಮತ್ತು ಇದರಿಂದಾಗಿ ಇ.ಡಿ. ಮತ್ತು ಸರಕಾರವನ್ನು ಅವು ಸೇಡಿನ ಕ್ರಮವನ್ನು ಅನುಸರಿಸುತ್ತಿವೆ ಎಂದು ಸ್ವತಃ ನ್ಯಾಯಾಲಯಗಳೇ ಸಾರ್ವಜನಿಕವಾಗಿ ತರಾಟೆಗೆತಗೊಂಡಿರುವ ಪ್ರಕರಣಗಳೂ ಹಲವಾರು ಇವೆ.
ಅಪಾರದರ್ಶಕತೆಏಕೆ?
ಆದಾಗ್ಯೂ, ಈ ವಿಷಯದಲ್ಲಿಆರ್‍ಎಸ್ಎಸ್‍ಗೆ ಮಾತ್ರ ಬಹಳ ಅಕ್ಕರೆಯ ಮತ್ತು ಜಾಗರೂಕ ಉಪಚಾರವನ್ನು ಕಾದಿರಿಸಲಾಗಿದೆ. ಸಂಘದ ಬಳಿ ಅಗಾಧನಿಧಿಗಳು ಮತ್ತು ರಿಯಲ್ ಎಸ್ಟೇಟ್ ಇರುವ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಭಾಗವತ್ ಈ ಆರೋಪವನ್ನು ತಳ್ಳಿಹಾಕಿದರು, ಇವು ತನ್ನಸ್ವಯಂಸೇವಕರು ಮತ್ತು ಅಧಿಕಾರಿಗಳ ಸ್ವಯಂಪ್ರೇರಿತ ಕೊಡುಗೆಗಳು ಎಂದು ಹೇಳಿದರು. ಅವರು ಮರೆಮಾಚಲು ಪ್ರಯತ್ನಿಸುತ್ತಿರುವುದು ಇದು ಸಾರ್ವಜನಿಕ ಹಣವಾಗಿದೆ ಎಂಬುದನ್ನು. ಏಕೆಂದರೆ ಆರ್ಎಸ್ಎಸ್ ಒಂದು ಖಾಸಗಿ ವ್ಯಕ್ತಿಗಳ ನಿಕಾಯ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಇದು ಇನ್ನಷ್ಟು ನಿಜ, ಏಕೆಂದರೆ ಸಂಘವು ಅಪಾರ ಪ್ರಮಾಣದ ಭೂಮಿಯನ್ನು ಹೊಂದಿದೆ ಮತ್ತು ಅದರಲ್ಲಿ ಮಹಲುಗಳು ಮತ್ತು ಇತರ ಕಟ್ಟಡಗಳನ್ನು ನಿರ್ಮಿಸಿದೆ ಎಂಬುದು ಎಲ್ಲರಿಗೂ ಸಾರ್ವಜನಿಕವಾಗಿ ತಿಳಿದಿದೆ. ದುರದೃಷ್ಟವಶಾತ್, ಅದು ನೋಂದಣಿಯಾಗದಿರುವುದರಿಂದಾಗಿ, ಅಂತಹ ಸ್ವತ್ತುಗಳ ಬಗ್ಗೆ ಯಾವುದೇ ಪಾರದರ್ಶಕ ಸಾರ್ವಜನಿಕ ಮಾಹಿತಿಗಳನ್ನುಕೊಡುತ್ತಿಲ್ಲ. ಆರ್‌ಎಸ್‌ಎಸ್ ನಿಜವಾಗಿಯೂ ಸದ್ಗುಣಸಂಪನ್ನವಾಗಿದ್ದರೆ, ಅದು ಹಣಕಾಸಿನ ಸಾರ್ವಜನಿಕ ಪರೀಕ್ಷಣೆಗೆ ಏಕೆ ಅಪಾರದರ್ಶಕವಾಗಿ ಉಳಿಯಬೇಕು?

ಸದ್ಗುಣ ಸಂಪನ್ನ…ಸೆಲ್ಫಿ ?
-ಚಿತ್ರ ಕೃಪೆ: ಗೋಕುಲ್
ಇಲ್ಲಿ ಆರ್‌ಎಸ್‌ಎಸ್‌ನ ಸಿದ್ಧಾಂತ, ಕಾರ್ಯಚಟುವಟಿಕೆಗಳು ಮತ್ತು ಸಂಘಟನಾ ರಚನೆಯ ವಿಶಾಲ ಪ್ರಶ್ನೆಗೆ ಹೋಗಬೇಕಾಗಿಲ್ಲ. ಅದರ ಲೋಪಗಳು, ಕ್ರಿಯೆಗಳು ಮತ್ತು ಸುಳ್ಳು ದಾವೆಗಳ ಬೃಹತ್ ದಾಖಲೆಗಳಿವೆ. ಹಲವಾರು ವಿಷಯಗಳಲ್ಲಿ ಮತ್ತು ಕ್ಷೇತ್ರಗಳಲ್ಲಿ ಆರ್‍ಎಸ್‍ಎಸ್‍ನ ಮಧ್ಯಪ್ರವೇಶದ ಬಹಳಷ್ಟು ಮುಖ್ಯ ಅಂಶಗಳು ಭಾರತೀಯ ಸಂವಿಧಾನದ ಮೂಲಭೂತ ಆಶಯಗಳಿಗೆ ವಿರುದ್ಧವಾಗಿ ನಿಂತಿರುವುದು ಎಲ್ಲರ ಗಮನಕ್ಕೆ ಬಂದಿದೆ.. ಆರ್‌ಎಸ್‌ಎಸ್ ಭಾರತೀಯ ಸಂವಿಧಾನವನ್ನು ನಂಬುತ್ತದೆ ಮತ್ತು ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯಂತಹ ಎಲ್ಲಾ ಪ್ರಮುಖ ರಾಷ್ಟ್ರೀಯ ಲಾಂಛನಗಳನ್ನು ಮಾನ್ಯ ಮಾಡುತ್ತದೆ ಎಂದು ಭಾಗವತ್ ಒತ್ತಿ ಹೇಳಿರುವುದು ಅದು ಅನುಸರಿಸಿಕೊಂಡು ಬಂದಿರುವ ವಂಚನೆಗಳ ಪುನರಾವರ್ತನೆಯಾಗಿದೆ. ಅದು ಈ ಎಲ್ಲ ವಿಚಾರಗಳಲ್ಲಿ ತದ್ವಿರುದ್ಧವಾಗಿಯೇ ವರ್ತಿಸಿದೆ.
‘ಅತ್ಯುತ್ತಮ ದಾಖಲೆ’ ?!
ಆರ್‌ಎಸ್‍ಎಸ್ ರಾಷ್ಟ್ರಸೇವೆಯ ಅತ್ಯುತ್ತಮ ದಾಖಲೆಯನ್ನು ಹೊಂದಿದೆ ಎಂದು ಸ್ವತಃ ಮೋದಿಯವರು ಕೆಂಪು ಕೋಟೆಯಿಂದ ಗುಡುಗಿದರು. ಆದರೆ ಅದು ಕೋಮು ಹಿಂಸಾಚಾರ ಮತ್ತು ದ್ವೇಷವನ್ನು ಉತ್ತೇಜಿಸಿದೆ ಎಂಬುದು ಆರ್‌ಎಸ್‌ಎಸ್ ಟೀಕಾಕಾರರು ಮಾತ್ರವೇ ಹೊರಿಸಿರುವ ಆರೋಪಗಳಲ್ಲ. ಕೋಮುವಾದಿ ಹಿಂಸಾಚಾರದ ಪ್ರಮುಖ ಪ್ರಕರಣಗಳ ತನಿಖೆ ನಡೆಸಿರುವ ಕನಿಷ್ಠ ಐದು ನ್ಯಾಯಾಂಗ ತನಿಖಾ ಆಯೋಗಗಳು – 1969 ರ ಅಹಮದಾಬಾದ್ ಗಲಭೆಗಳ ಕುರಿತಾದ ಜಗನ್ಮೋಹನ್ ರೆಡ್ಡಿ ವರದಿ, 1970 ರ ಭಿವಂಡಿ ಗಲಭೆಗಳ ಕುರಿತಾದ ಡಿ ಪಿ ಮೆಡನ್ ವರದಿ, 1971 ರ ತಲಶ್ಶೇರಿ ಗಲಭೆಗಳ ಕುರಿತಾದ ಜೋಸೆಫ್ ವಿಥಯಥಿಲ್ ವರದಿ, 1979ರ ಜಮಷೇದ್‍ಪುರ ಗಲಭೆಗಳ ಕುರಿತಾದ ಜಿತೇಂದ್ರ ನರೇನ್ ವರದಿ, 1982 ರ ಕನ್ಯಾಕುಮಾರಿ ಗಲಭೆಗಳ ಕುರಿತಾದ ಪಿ. ವೇಣುಗೋಪಾಲ್ ವರದಿ – ಇವೆಲ್ಲವೂ ಮುಸ್ಲಿಮರು ಮತ್ತು ಇತರ ನಾಗರಿಕರ ಜೀವ ಮತ್ತು ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿದ ಪ್ರಮುಖ ಕೋಮುವಾದಿ ಗಲಭೆಗಳಲ್ಲಿ ಆರ್‌ಎಸ್‌ಎಸ್‌ನ ಸಿದ್ಧಾಂತದೊಂದಿಗೆ ಬಲವಾದ ನಂಟು ಹೊಂದಿರುವ ಸಂಘಟನೆಗಳು ಮತ್ತು ಪಕ್ಷಗಳು ಪಾತ್ರ ವಹಿಸಿದವು ಎಂದು ದೋಷಾರೋಪಣೆ ಮಾಡಿವೆ. ಊಹಿಸಬಹುದಾದಂತೆ, ಇವುಗಳ ಯಾವುದೇ ವಸ್ತುನಿಷ್ಠ ವಿವರಣೆ ಇಲ್ಲ, ಅವರ ಪರಿಹಾರ ಕಾರ್ಯಗಳ ಪರಿಶೋಧನೆಯಂತೂ ಇಲ್ಲವೇ ಇಲ್ಲ.
ಕೊನೆಯದಾಗಿ, ರಾಷ್ಟ್ರ ಮತ್ತು ರಾಷ್ಟ್ರೀಯತ್ವವನ್ನು ಕುರಿತಂತೆ ಸಾವರ್ಕರ್ ಹಾಕಿಕೊಟ್ಟ ಮತ್ತು ಅದನ್ನು ಯಾವುದೇ ವಿಮರ್ಶೆಯಿಲ್ಲದೆ ಸ್ವೀಕರಿಸಿ ಇನ್ನಷ್ಟು ಗಟ್ಟಿಗೊಳಿಸಿದ ಗೋಲ್ವಾಲ್ಕರ್ ನಿರೂಪಣೆಯು ಭಾರತವನ್ನು ಮಾತೃಭೂಮಿ, ಪಿತೃಭೂಮಿ ಮತ್ತು ಮುಖ್ಯವಾಗಿ ಪುಣ್ಯಭೂಮಿ ಎಂದು ಮಾನ್ಯ ಮಾಡುವವರನ್ನು ಮಾತ್ರವೇ ನಿಜವಾದ ಭಾರತೀಯರೆಂದು ಪರಿಗಣಿಸಬಹುದು ಎಂದು ವ್ಯಾಖ್ಯಾನಿಸುತ್ತದೆ. ಅಂದರೆ ತಮ್ಮ ಧಾರ್ಮಿಕ ನಂಬಿಕೆಗಳನ್ನು ಅನುಸರಿಸುವ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಅನುಭವಿಸುವ ಭಾರತದಲ್ಲಿನ ಎಲ್ಲಾ ನಂಬಿಕೆಗಳಿಗೆ ಸೇರಿದ ಜನರು ಭಾರತೀಯರಾಗಲು ಅರ್ಹರಲ್ಲ ಎಂಬುದು ಹಗಲಿನ ಬೆಳಕಿನಷ್ಟು ಸ್ಪಷ್ಟವಾಗಿದೆ! ಆರ್‌ಎಸ್‌ಎಸ್‌ನ ಆಧಾರಭೂತ ಪರಿಕಲ್ಪನೆಯೇ ಜಾತ್ಯತೀತ ಪ್ರಜಾಪ್ರಭುತ್ವ ಸಂವಿಧಾನ ಮತ್ತು ಗಣರಾಜ್ಯಕ್ಕೆ ವಿರುದ್ಧವಾಗಿದೆ. ಆದ್ದರಿಂದ, ಆರ್‌ಎಸ್‌ಎಸ್ ಒಂದು ಖಾಸಗಿ ವ್ಯಕ್ತಿಗಳ ನಿಕಾಯ ಮತ್ತು ಹಾಗೆಂದೇ ಗುರುತಿಸಲ್ಪಟ್ಟಿದೆ ಎಂಬುದೇ ನೋಂದಣಿಯ ವ್ಯಾಪ್ತಿಯಿಂದ ಹೊರಗೆ ಉಳಿಯಲು ಅದಕ್ಕೆ ಅರ್ಹತೆಯನ್ನು ನೀಡುತ್ತದೆ ಎಂದು ಹೇಳುವುದು ಸಾರ್ವಜನಿಕ ಬುದ್ಧಿಮತ್ತೆಗೆ ಮಾಡುವ ವಂಚನೆಯಾಗಿದೆ. ಆರ್‌ಎಸ್‌ಎಸ್ ತನ್ನ ವ್ಯವಹಾರಗಳನ್ನು ಸಾರ್ವಜನಿಕವಾಗಿ ಪ್ರಕಟಪಡಿಸಲು ಬಾಧ್ಯವಾಗಬೇಕು ಮತ್ತು ಅವನ್ನು ಪ್ರಾಮಾಣಿಕವಾಗಿ ಯಾವುದನ್ನೂ ಮುಚ್ಚಿಡದೆ ಮಾಡಬೇಕು.
ಕೃಪೆ: ‘ಪೀಪಲ್ಸ್ ಡೆಮಾಕ್ರಸಿ’
ಅನು: ವೇದರಾಜ
ಇದನ್ನೂ ನೋಡಿ: ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕೆಪಿಎಸ್ ವ್ಯವಸ್ಥೆ ಪರಿಹಾರವೋ? ಶಾಪವೋ? Janashakthi Media
