ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಸಿಎಂ ಏಕನಾಥ್ ಶಿಂಧೆ ಬಣದ ಅಭ್ಯರ್ಥಿ ರಾಹುಲ್ ನಾರ್ವೇಕರ್ ಗೆಲುವು ಸಾಧಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯ ಇಂದಿನಿಂದ ಆರಂಭವಾದ ಎರಡು ದಿನಗಳ ವಿಶೇಷ ಅಧಿವೇಶನದಲ್ಲಿ ಸಭಾಧ್ಯಕ್ಷರ ಚುನಾವಣೆ ನಡೆದಿದ್ದು, ಬಿಜೆಪಿ ಅಭ್ಯರ್ಥಿ ರಾಹುಲ್ ನಾರ್ವೆಕರ್ ಆಯ್ಕೆ ಆಗಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇದೇ ಮೊದಲ ಬಾರಿಗೆ ಕೊಲಾಬಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿ ರಾಹುಲ್ ನರ್ವೆಕರ್ ಸಭಾಧ್ಯಕ್ಷರಾಗಿದ್ದಾರೆ. 2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮೊದಲು ಅವರು ಬಿಜೆಪಿ ಸೇರಿದರು. ಈ ಹಿಂದೆ ರಾಹುಲ್ ನಾರ್ವೆಕರ್ ಎನ್‌ಸಿಪಿ ಮತ್ತು ಶಿವಸೇನೆಯೊಂದಿಗೆ ಸಂಬಂಧ ಹೊಂದಿದ್ದರು.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುನಿರೀಕ್ಷಿತ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದು(ಜುಲೈ 03) ನಡೆಯಿತು. ಮುಖ್ಯಮಂತ್ರಿಯಾಗಿ ಏಕನಾಥ್ ಶಿಂದೆ ಮತ್ತು ಉಪಮುಖ್ಯಮಂತ್ರಿಯಾಗಿ ದೇವೇಂದ್ರ ಫಡಣವೀಸ್ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.
ಮಹಾ ವಿಕಾಸ್ ಅಘಾಡಿ ಸರ್ಕಾರವು ಪತನಗೊಂಡ ನಂತರ ನಂತರ ಇದೇ ಮೊದಲ ಬಾರಿಗೆ ಎಲ್ಲ ಪಕ್ಷಗಳ ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಸೇರಿದ್ದಾರೆ. ಬಿಜೆಪಿಯಿಂದ ರಾಹುಲ್ ನಾರ್ವೆಕರ್ ಮತ್ತು ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟವು ಉದ್ಧವ್ ಠಾಕ್ರೆ ಅವರ ಕಟ್ಟರ್ ಬೆಂಬಲಿಗ ರಾಜನ್ ಸಾಲ್ವಿ ಕಣದಲ್ಲಿದ್ದರು. ರಾಹುಲ್ ನರ್ವೆಕರ್ ಪರವಾಗಿ 164 ಮತ್ತು ವಿರುದ್ಧವಾಗಿ 107 ಮತಗಳು ಚಲಾವಣೆಯಾಗಿದ್ದವು. ಶಿವಸೇನೆಯು ಬಂಡಾಯ ಶಾಸಕರು ಸೇರಿದಂತೆ ತನ್ನ ಎಲ್ಲಾ ಶಾಸಕರಿಗೆ ವಿಪ್ ನೀಡಿತ್ತು. ಆದರೆ ಬಂಡಾಯ ಸೇನಾ ಶಾಸಕರು ವಿಪ್ ಮೀರಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಂಡಾಯ ಶಾಸಕರು ತಮ್ಮದೇ ನಿಜವಾದ ಶಿವಸೇನೆ ಎನ್ನುತ್ತಿದ್ದಾರೆ. ಮಹಾವಿಕಾಸ್ ಅಘಾಡಿ ಸರ್ಕಾರದ ಉಪ ಸಭಾಧ್ಯಕ್ಷ ನರಹರಿ ಝಿರ್ವಾಲ್ ಅವರು 16 ಬಂಡಾಯ ಶಾಸಕರ ವಿರುದ್ಧ ಅನರ್ಹತೆಯ ವಿಧಿವಿಧಾನಗಳನ್ನು ಆರಂಭಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಬಾಕಿಯಿದೆ. ಬಂಡಾಯ ಶಾಸಕರಿಗೆ ಪ್ರತಿಕ್ರಿಯಿಸಲು ಉಪಸಭಾಧ್ಯಕ್ಷರು ನೀಡಿದ್ದ 48 ಗಂಟೆಗಳ ಕಾಲಮಿತಿಯನ್ನು ಸುಪ್ರೀಂಕೋರ್ಟ್ ಜುಲೈ 12ರವರೆಗೆ ವಿಸ್ತರಿಸಿತ್ತು.
ಈ ಮೊದಲು 2019ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಮೈತ್ರಿ ಸರ್ಕಾರವು ಸ್ಥಾನ ಹಂಚಿಕೆ ಒಪ್ಪಂದಕ್ಕೆ ಅನುಗುಣವಾಗಿ ಕಾಂಗ್ರೆಸ್ನ ಶಾಸಕರಿಗೆ ಸಭಾಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿತ್ತು.