ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ನ ಬಿಜೆಪಿ ಅಭ್ಯರ್ಥಿ ಶೋಭಾ ಸುರೇಂದ್ರನ್ ವಿರುದ್ಧ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರಿಗೆ ಹಣ ಹಂಚಿದ ಆರೋಪದಡಿ ಚುನಾವಣಾ ಆಯೋಗವು (ಇಸಿ) ತನಿಖೆಯನ್ನು ಆರಂಭಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. ಮತದಾರ
ಆರೋಪವನ್ನು ತಿರಸ್ಕರಿಸಿರುವ ಸುರೇಂದ್ರನ್,ಇದು ತನ್ನ ವಿರುದ್ಧ ಪಿತೂರಿ ಎಂದು ಬಣ್ಣಿಸಿದ್ದಾರೆ. ಆಪಾದಿತ ಘಟನೆಯು ಬುಧವಾರ ವರದಿಯಾಗಿತ್ತು ಎಂದು ಕೇರಳದ ಮುಖ್ಯ ಚುನಾವಣಾಧಿಕಾರಿ ರತನ್ ಯು.ಕೇಳ್ಕರ್ ತಿಳಿಸಿದರು. ಮತದಾರ
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಗುರುವಾರ ಒಂದೇ ಹಂತದಲ್ಲಿ ನಡೆದಿದ್ದು, ಮೇ 4ರಂದು ಮತಎಣಿಕೆ ನಡೆಯಲಿದೆ.
ಇದನ್ನೂ ಓದಿ: ಏ. 10ರಂದು ಸರ್ಕಾರಿ ಶಾಲೆ ವಿಲೀನ ವಿರೋಧಿಸಿ ಬೃಹತ್ ಜನ ಸಮಾವೇಶ
ಪಾಲಕ್ಕಾಡ್ನ ಕನ್ನಾಡಿ ಪಂಚಾಯತ್ ವ್ಯಾಪ್ತಿಯ ತೆರುವಕ್ಕುರಿಷಿ ಎಂಬಲ್ಲಿ ವ್ಯಕ್ತಿಯೋರ್ವ ವೃದ್ಧ ಮಹಿಳೆಗೆ ಏನನ್ನೋ ನೀಡಿದ್ದನ್ನು ಮತ್ತು ನಂತರ ಇನ್ನೊಂದು ಗುಂಪು ಮಹಿಳೆಯ ಬಳಿ ತೆರಳಿ ಆಕೆಯ ಮುಷ್ಟಿಯನ್ನು ಬಿಚ್ಚಿಸಿದಾಗ 500 ರೂ.ನೋಟುಗಳ ಕಂತೆ ಇದ್ದಿದ್ದನ್ನು ಸಾಮಾಜಿಕ ಮಾಧ್ಯಮಗಳು ಮತ್ತು ಟಿವಿ ವಾಹಿನಿಗಳಲ್ಲಿ ಹರಿದಾಡುತ್ತಿರುವ ದೃಶ್ಯಾವಳಿಗಳು ತೋರಿಸಿವೆ.
ಸುರೇಂದ್ರನ್ ಅವರ ಪ್ರಚಾರ ತಂಡದ ವ್ಯಕ್ತಿಯೋರ್ವ ಮಹಿಳೆಗೆ ಹಣ ನೀಡಿದ್ದಾಗಿ ಆರೋಪಿಸಲಾಗಿದೆ. ಯಾವುದೇ ಹಣ ಸ್ವೀಕರಿಸಿದ್ದನ್ನು ಮಹಿಳೆ ನಿರಾಕರಿಸಿದ್ದರೂ, ಔಷಧಿಗಳನ್ನು ಖರೀದಿಸಲು ತಾನು 5,000 ರೂ.ಗಳನ್ನು ಕೇಳಿದ್ದನ್ನು ಒಪ್ಪಿಕೊಂಡಿದ್ದಾರೆ.
ಮಾಧ್ಯಮಗಳಲ್ಲಿ ವರದಿಗಳ ಬಳಿಕ ಜಿಲ್ಲಾ ಚುನಾವಣಾ ಇಲಾಖೆಯು ಅಧಿಕಾರಿಗಳ ತಂಡವನ್ನು ಸ್ಥಳಕ್ಕೆ ರವಾನಿಸಿ ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿರುವ ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡಿದೆ.
ಆಯೋಗವು ಈ ಬಗ್ಗೆ ತನಿಖೆಗೆ ಆದೇಶಿಸಿದ್ದು, ಜಿಲ್ಲಾಧಿಕಾರಿಗಳಿಂದ ವರದಿ ಸ್ವೀಕರಿಸಿದ ಬಳಿಕ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಕೇಳ್ಕರ್ ತಿಳಿಸಿದರು.
ಆರೋಪಗಳು ನಿರಾಧಾರವಾಗಿವೆ. ತಾನು ಹತ್ತನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು,ನಿಯಮಗಳು ತನಗೆ ಚೆನ್ನಾಗಿ ತಿಳಿದಿವೆ ಎಂದು ಹೇಳಿದ ಸುರೇಂದ್ರನ್,ಈ ಬಗ್ಗೆ ತಾನೂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ತಿಳಿಸಿದರು.
ಆಪಾದಿತ ಘಟನೆಯ ದೃಶ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ ಅವರು,ಇದು ಅಪರಾಧವಾಗಿದ್ದು,ಚುನಾವಣಾ ನಿಯಮಗಳ ಉಲ್ಲಂಘನೆಗಾಗಿ ಅಭ್ಯರ್ಥಿಯನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: ಎಲ್ಪಿಜಿ ಬಿಕ್ಕಟ್ಟು | ಗ್ಯಾಸ್ ಸಿಗದೆ ನಿಂತ ಆಟೋಗಳು; ದಿನವೂ ಕಿ.ಮೀ.ಗಟ್ಟಲೆ ಸಾಲು! Janashakthi Media
