ಬೆಳಗಾವಿ: ಕುಂದಾನಗರಿಯಲ್ಲಿ ಪಾಲಿಕೆ ಚುನಾವಣಾ ಕಾವು ಜೋರಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಯ ಪ್ರಣಾಳಿಕೆಯಲ್ಲಿ ಭರ್ಜರಿ ಭರವಸೆಗಳನ್ನು ನೀಡಲಾಗುತ್ತಿದೆ. ಆದರೆ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿನ ಅಂಶಗಳು ಮತದಾರ ಪ್ರಭುವಿನ ಹುಬ್ಬೇರುವಂತೆ ಮಾಡಿವೆ.
ಹೌದು ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಒಂದು ಅಂಶ ಸಾಕಷ್ಟು ವಿವಾದಕ್ಕೆ ಕಾರಣ ಆಗಿದೆ. ‘ಸತ್ತರೆ ಉಚಿತವಾಗಿ ಶವ ಸಂಸ್ಕಾರಕ್ಕೆ ವ್ಯವಸ್ಥೆ’ ಮಾಡ್ತೀವಿ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿರುವ ಅಂಶ ಕಂಡು ಕುಂದಾನಗರಿಗರು ಬೆಚ್ಚಿಬಿದ್ದಿದ್ದಾರೆ. ಬಿಜೆಪಿ ಪ್ರಣಾಳಿಕೆ ಕಂಡು ಅವಕ್ಕಾದ ಕುಂದಾನಗರಿ ಜನ ಬಿಜೆಪಿ ಪಕ್ಷ ಜನರ ಸಾವನ್ನೇ ಬಯಸುತ್ತಿದೆಯಾ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಾನಗರ ಪಾಲಿಕೆ ಚುನಾವಣೆಯನ್ನು ಬಿಜೆಪಿಯು ಅಭಿವೃದ್ಧಿ ಮತ್ತು ಹಿಂದುತ್ವದ ಆಧಾರದ ಮೇಲೆ ಎದುರಿಸಲಿದೆ’ ಎಂದು ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ‘ನಾಡಿನ ಜನರು ಈ ಚುನಾವಣೆಯನ್ನು ಕುತೂಹಲದಿಂದ ಗಮನಿಸುತ್ತಿದ್ದಾರೆ. ಸ್ವಾಭಿಮಾನದಿಂದ ಬದುಕುತ್ತಿರುವ ಬೆಳಗಾವಿಗರು ಅತ್ಯಂತ ಬುದ್ಧಿವಂತರು. ಅಭಿವೃದ್ಧಿ ಮತ್ತು ಹಿಂದುತ್ವಕ್ಕೆ ಹೆಚ್ಚು ಆದ್ಯತೆ ನೀಡಿ ನಮ್ಮನ್ನು ಗೆಲ್ಲಿಸಲಿದ್ದಾರೆ’ ಎಂದು ತಿಳಿಸಿದ್ದಾರೆ. ಪ್ರತಿಬಾರಿ ಇಲ್ಲಿ ಚುನಾವಣೆ ಭಾಷೆ ಹೆಸರಲ್ಲಿ ನಡೆಯುತ್ತಿತ್ತು. ಈ ಬಾರಿ ಹಿಂದುತ್ವದ ಹೆಸರಿನಲಿ ನಡೆಯುತ್ತಿದೆ ಎಂಬ ಸದಿಯವರ ಹೇಳಿಕೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸದ್ದಾರೆ. ಭಾಷೆ ಹೆಸರಿನಲ್ಲಿ ಚುನಾವಣೆ ಆರಂಭಿಸಿದ್ದೆ ಬಿಜೆಪಿ. ಈಗ ಹಿಂದುತ್ವದ ಹೆಸರಿನಲ್ಲಿ ಚುನಾವಣೆ ನಡೆಸುತ್ತಿದೆ. ಬೆಳಗಾವಿಯ ಅಭಿವೃದ್ಧಿ, ಜನರ ನೆಮ್ಮದಿ ಬಿಜೆಪಿಗೆ ಬೇಕಿಲ್ಲ ಎಂಬುದನ್ನು ಇದು ತೋರಿಸುತ್ತದೆೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಪ್ರಣಾಳಿಕೆಯ ಪ್ರಮುಖ ಅಂಶಗಳು
- ಬಾಂಡ್‌ಗಳನ್ನು ನೀಡಿ ಖರೀದಿಸಿದ ಮನೆಗಳ ಸಕ್ರಮಕ್ಕೆ ಪ್ರಾಮಾಣಿಕ ಪ್ರಯತ್ನ.
- ಸ್ವಚ್ಛತೆಗೆ ಆದ್ಯತೆ, ಮನೆ ಮನೆಗಳಿಂದ ಕಸ ಸಂಗ್ರಹಿಸುವ ವ್ಯವಸ್ಥೆ ಜಾರಿ.
- ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ನಾಲೆಗಳಿಗೆ ಕಾಂಕ್ರೀಟ್.
- ತ್ಯಾಜ್ಯ ಮುಕ್ತ ನಗರ ನಿರ್ಮಾಣ.
- ಪ್ರವಾಸಿ ತಾಣಗಳು, ಉದ್ಯಾನಗಳು ಮತ್ತು ಕೆರೆ-ಕಟ್ಟೆಗಳ ಸೌಂದರ್ಯೀಕರಣಕ್ಕೆ ಒತ್ತು.
- ಮಲ್ಟಿಲೆವಲ್ ಕಾರ್ ಪಾರ್ಕಿಂಗ್ ವ್ಯವಸ್ಥೆ.
- ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ. ಹಾಸಿಗೆಗಳನ್ನು ಸಂಖ್ಯೆ ಹೆಚ್ಚಿಸುವುದು.
- ಉತ್ತಮ ಕ್ರೀಡಾಂಗಣಗಳ ನಿರ್ಮಾಣ.
- ಶವ ಸಂಸ್ಕಾರಕ್ಕೆ ಉಚಿತ ವ್ಯವಸ್ಥೆಗೆ ಕ್ರಮ.
- ಯೋಜನೆಗಳ ಲಾಭ ನೇರವಾಗಿ ಜನರಿಗೆ ತಲುಪುವಂತೆ ನೋಡಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ.