ಬಿಜೆಪಿ ಅಭಿವೃದ್ಧಿ ಮಾಡದೆಯೇ ಮತ ಕೇಳುತ್ತಿದ್ದಾರೆ-ಹಾಗಾದರೆ ಅಭಿವೃದ್ಧಿಗಳ ಪಟ್ಟಿ ನೀಡಲಿ: ಸಿದ್ದರಾಮಯ್ಯ

ಹುಬ್ಬಳ್ಳಿ: ಬಿಜೆಪಿ ಪಕ್ಷದವರು ಅಭಿವೃದ್ಧಿ ಮೇಲೆ ಮತ ನೀಡಿ ಅಂತಿದ್ದಾರೆ. ಅವರು ಮಾಡಿದ ಅಭಿವೃದ್ದಿಯ ಪಟ್ಟಿ ಮಾಡಿ ಹೇಳಲಿ. ದುಡ್ಡು ಖರ್ಚು ಮಾಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ನಾನು ಮುಖ್ಯಮಂತ್ರಿ ಆದ ಮೇಲೆ ಹಾವೇರಿಗೆ ಏನೇನು ಕೊಟ್ಟಿದ್ದೇನೆ ಅಂತಾ ಮನೋಹರ್ ತಹಶಿಲ್ದಾರರನ್ನ ಕೇಳಲಿ. ನಾನು 2400 ಕೋಟಿ ಕೊಟ್ಟಿದ್ದೇನೆ. ಬಸವರಾಜ ಬೊಮ್ಮಾಯಿ ಸುಳ್ಳು ಹೇಳಿ ಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಹೇಳಿದರು.

ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾನಗಲ್ ವಿಧಾನಸಭೆ ಕ್ಷೇತ್ರದ ನರೇಗಲ್‌ನಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈಗ ಚುನಾವಣೆ ವೇಳೆ ನಾವು ಮಿಷನ್ ಹಾನಗಲ್ ಮಾಡ್ತೀವಿ ಎಂದು ಹೇಳುತ್ತಿದ್ದಾರೆ, ಇಷ್ಟು ದಿನ ಏಕೆ ಹಾನಗಲ್ ಅವರಿಗೆ ಕಂಡಿರಲಿಲ್ಲ? ಬಡವರಿಗೆ ಒಂದು ಮನೆಯಾದ್ರೂ ಕೊಟ್ಟಿದ್ದಾರಾ ? ಅಭಿವೃದ್ಧಿ ಎಂದರೆ ಏನು ಗೊತ್ತಾ ? ಬರೀ ಹಣ ಖರ್ಚು ಮಾಡಿ ಚುನಾವಣೆ ಗೆಲ್ಲಲೊಂದೇ ಗೊತ್ತು ಅವರಿಗೆ ಎಂದು ಮಾರ್ಮಿಕವಾಗಿ ನುಡಿದರು.

“14ನೇ ಹಣಕಾಸು ಶಿಫಾರಸಿನ ಪ್ರಕಾರ ರಾಜ್ಯದ ತೆರಿಗೆ ಪಾಲು 38,000 ಕೋಟಿ ರೂಪಾಯಿ ಬರುತ್ತಿತ್ತು. ಈಗದು 20,000 ಕೋಟಿ ರೂಪಾಯಿಗೆ ಬಂದು ನಿಂತಿದೆ. ಕೇಂದ್ರದ ಸಹಾಯಧನ, ಜಿ.ಎಸ್.ಟಿ ಪರಿಹಾರದ ಹಣ ಇವೆಲ್ಲಾ ಕಡಿಮೆಯಾಗಿ ರಾಜ್ಯಕ್ಕೆ ಕನಿಷ್ಟ. 40,000 ಕೋಟಿ ನಷ್ಟವಾಗ್ತಿದೆ. ರಾಜ್ಯ ಬಿಜೆಪಿ ನಾಯಕರು ಇದರ ಬಗ್ಗೆ ಒಮ್ಮೆಯಾದರೂ ಬಾಯಿಬಿಟ್ಟು ಮಾತನಾಡಿದ್ದಾರಾ? ಮೋದಿ ಕಂಡರೆ ಭಯ ಅವರಿಗೆ” ಎಂದು ಸಿದ್ದರಾಮಯ್ಯ ಆರೋಪಿಸಿದರು.

ಇದನ್ನು ಓದಿ: ಪ್ರಧಾನಿಯವರೇ ಸಂಭ್ರಮಾಚರಣೆ ಆಮೇಲೆ, ಮೊದಲು ಎಲ್ಲರಿಗೂ 2 ಡೋಸ್ ಲಸಿಕೆ ಕೊಡಿ: ಸಿದ್ದರಾಮಯ್ಯ

ನನ್ನ ಅಧಿಕಾರಾವಧಿಯಲ್ಲಿ ಹಾನಗಲ್ ಕ್ಷೇತ್ರದ ಅಭಿವೃದ್ಧಿ ಅನುದಾನ ನೀಡಿದ್ದೆ. 2018 ರಲ್ಲಿ ಬಂದ ಪ್ರವಾಹದಿಂದಾಗಿ ಕಂಚಿನೆಗಳೂರು ಗ್ರಾಮದ ಒಡ್ಡು ಒಡೆದು ಕೆರೆಗೆ ಹೋಗಬೇಕಿದ್ದ ನೀರು ನದಿ ಸೇರುತ್ತಿದೆ. 3 ವರ್ಷ ಕಳೆದರೂ ಒಂದು ಒಡ್ಡು ಸರಿಪಡಿಸಲು ನಿಮ್ಮಿಂದ ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಹಾನಗಲ್ ಕ್ಷೇತ್ರಕ್ಕೆ ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂಬ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ. ನನ್ನ ಅಧಿಕಾರಾವಧಿಯಲ್ಲಿ ಎಷ್ಟು ಕೆಲಸ ಆಗಿದೆ ಎಂಬುದರ ಲೆಕ್ಕ ನಾನು ಕೊಡ್ತೀನಿ, ನಿಮ್ಮ ಸರ್ಕಾರ ಏನು ಮಾಡಿದೆ ಎಂಬುದರ ಲೆಕ್ಕ ನೀವು ಕೊಡಿ. ಜನರಿಗೆ ಸತ್ಯ ಗೊತ್ತಾಗಲಿ ಎಂದು ಮಾರ್ಮಿಕವಾಗಿ ನುಡಿದರು.

ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, “ಡಾ. ಚಿತ್ತರಂಜನ್ ಕಲಕೋಟಿಯವರು ಅಧ್ಯಕ್ಷರಾಗಿದ್ದ ವೇಳೆ ರೂ. 6 ಕೋಟಿ ಲಾಭದಲ್ಲಿದ್ದ ಸಂಗೂರು ಸಕ್ಕರೆ ಕಾರ್ಖಾನೆ, ಉದಾಸಿ ಮತ್ತು ಶಿವರಾಜ್ ಸಜ್ಜನರ ಆಡಳಿತ ಮಂಡಳಿಯ ಅಧಿಕಾರ ವಹಿಸಿಕೊಂಡ ನಂತರ ನಷ್ಟದ ಹಾದಿಗೆ ಹೋಗಿದ್ದು ಏಕೆ? ಎಂಬುದನ್ನು ಸಜ್ಜನರ ಹೇಳಲಿ. ಸಂಗೂರು ಸಕ್ಕರೆ ಕಾರ್ಖಾನೆ ದಿವಾಳಿ ಸಂಬಂಧ 1959ರ ಸಹಕಾರಿ ಕಾಯ್ದೆಯಡಿ ತನಿಖೆ ನಡೆದು, ಲೂಟಿ ಮಾಡಿದ 33 ಲಕ್ಷ ಹಣವನ್ನು ಮರುಪಾವತಿ ಮಾಡಬೇಕು ಎಂದು ಆದೇಶ ನೀಡಿರುವುದನ್ನು ಮರೆತುಬಿಟ್ಟರಾ ಶಿವರಾಜ್ ಸಜ್ಜನರ?” ಎಂದು ಪ್ರಶ್ನೆ ಮಾಡಿದರು.

ಬಿಜೆಪಿ ಪಕ್ಷದವರು ಹಣ ಹಂಚುತ್ತಿದ್ದಾರೆ ಎಂದು ಜನ ಹೇಳುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳ ಮೇಲೆ ಮತ ಕೇಳಲು ಕಳೆದ ಎರಡೂಕಾಲು ವರ್ಷಗಳಲ್ಲಿ ಯಾವ ಅಭಿವೃದ್ಧಿ ಕೆಲಸಗಳನ್ನು ಅವರು ಮಾಡಿಲ್ಲ. ಹೀಗಾಗಿ ಹಣ ಹಾಕಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಹಾನಗಲ್‌ ಕ್ಷೇತ್ರದ ಮತದಾರರು ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಜಾತಿ ಧರ್ಮಗಳನ್ನ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂಬ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ನಮ್ಮಗೆ ಅದು ಗೊತ್ತಿಲ್ಲ. ಬಿಜೆಪಿ ಪಕ್ಷದಲ್ಲಿ ಒಬ್ಬ ಮುಸ್ಲಿಂ ಶಾಸಕ, ಮಂತ್ರಿ ಇಲ್ಲ. ಇದು ಅನ್ಯ ಧರ್ಮದ ಬಗ್ಗೆ ದ್ವೇಷ ಮಾಡಿದಂತಲ್ಲವೆ? ನಮ್ಮ ಪಕ್ಷದಲ್ಲಿ ಎಲ್ಲಾ ಜಾತಿ, ಧರ್ಮಗಳ ಶಾಸಕರಿದ್ದಾರೆ. ಎಲ್ಲಾ ಜಾತಿ, ಧರ್ಮಗಳನ್ನು ಒಟ್ಟಿಗೆ ಕರೆದುಕೊಂಡ ಹೋಗುವುದೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಎಂದು ಹೇಳಿದರು.

ಸುಳ್ಳು ಭರವಸೆ ಕೊಡುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಸೋಲಿನ ಭಯದಿಂದ ಏನೇನೊ ಮಾತನಾಡಲು ಆರಂಭಿಸಿದ್ದಾರೆ. ಉಪಚುನಾವಣಾ ಪ್ರಚಾರಕ್ಕೆ ಯಡಿಯೂರಪ್ಪ ಬಂದ ನಂತರ ಸುನಾಮಿ ಅಲೆ ಏಳಲಿದೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಯಡಿಯೂರಪ್ಪ ಪ್ರಚಾರಕ್ಕೆ ಬಂದ ನಂತರ ಸುನಾಮಿ ಅಲೆ ಏಳುತ್ತದೆ ಅನ್ನುವುದಾದರೆ, ಬೊಮ್ಮಾಯಿ ಅವರ ಅಲೆ ಏನೂ ಇಲ್ಲ ಅಂದಂಗಾಯ್ತು. ಬಿಜೆಪಿಯವರು ಸುಳ್ಳು ಹೇಳಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Donate Janashakthi Media

Leave a Reply

Your email address will not be published. Required fields are marked *