ಬಾನ್‌ಪುರ್: ಕೊರ್ದಾ ಜಿಲ್ಲೆಯ ಬಾನ್‌ಪುರ್ ಬ್ಲಾಕ್ ಕಛೇರಿಯ ಮುಂದೆ ನೆರೆದಿದ್ದ ಜನರ ಮೇಲೆ ಚಿಲಿಕಾ ಶಾಸಕ ಪ್ರಶಾಂತ್ ಜಗದೇವ್ ತಮ್ಮ ವಾಹನವನ್ನು ಚಲಾಯಿಸಿದ ಪರಿಣಾಮ ಏಳು ಪೊಲೀಸ್ ಸಿಬ್ಬಂದಿ ಸೇರಿದಂತೆ ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ.
ಈ ವೇಳೆ ಓರ್ವ ಸಾವನ್ನಪ್ಪಿ, 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದರಿಂದ ಆಕ್ರೋಶಗೊಂಡ ಜನರು ಶಾಸಕರಿಗೆ ಥಳಿಸಿದ್ದಾರೆ. ಇದರ ಜೊತೆಗೆ ಶಾಸಕರು ಮದ್ಯಪಾನ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಗಾಯಾಳುಗಳ ಪೈಕಿ ಬನ್ಪುರ್ ಐಐಸಿ ಮತ್ತು ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಅವರನ್ನು ಭುವನೇಶ್ವರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ನಂತರ ಆಕ್ರೋಶಗೊಂಡ ಸ್ಥಳೀಯರು ಪ್ರಶಾಂತ್ ಜಗದೇಬ್ ಮೇಲೆ ಹಲ್ಲೆ ನಡೆಸಿದ್ದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ, ನಂತರ ಪೊಲೀಸರು ಭುವನೇಶ್ವರದ ಆಸ್ಪತ್ರೆಗೆ ಸ್ಥಳಾಂತರಿಸಿದರು. ಜನರ ಗುಂಪು ಬಿಜೆಡಿ ಶಾಸಕರ ವಾಹನಕ್ಕೂ ಹಾನಿ ಮಾಡಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಖೋರ್ಧಾ ಪೊಲೀಸ್ ವರಿಷ್ಠಾಧಿಕಾರಿ ಅಲೆಖ್ ಚಂದ್ರ ಪಾಹಿ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಶಾಸಕ ಜಗದೇವ್ ಪಂಚಾಯತ್ ಅಧ್ಯಕ್ಷರ ಚುನಾವಣೆಗಾಗಿ ಬಾನ್‌ಪುರ್ ಬ್ಲಾಕ್‌ಗೆ ತೆರಳುತ್ತಿದ್ದರು. ಬ್ಲಾಕ್ ಕಚೇರಿಯ ಮುಂದೆ ಸಾಕಷ್ಟು ಜನರು ನೆರೆದಿದ್ದರು. ಈ ವೇಳೆ ತಮ್ಮ ವಾಹನವನ್ನು ಜನರ ಮೇಲೆ ಹರಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಕರ್ತವ್ಯದಲ್ಲಿ ಒಬ್ಬ ಮಹಿಳಾ ಪೊಲೀಸ್, ಪತ್ರಕರ್ತರು ಹಾಗೂ ಸಾಮಾನ್ಯ ಜನರಿಗೆ ಗಾಯವಾಗಿದೆ. ಆಕ್ರೋಶಗೊಂಡ ಜನರು ಶಾಸಕರ ಮೇಲೆ ಹಲ್ಲೆ ಮಾಡಿದ್ದು, ಅವರ ವಾಹನವನ್ನು ಧ್ವಂಸಗೊಳಿಸಿದ್ದಾರೆ.
ಗೂಂಡಾಗಿರಿಯ ಕಾರಣಕ್ಕೆ ಶಾಸಕರು ಆಗಾಗ ಸುದ್ದಿಯಾಗುತ್ತಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಬಿಜೆಪಿ ಮುಖಂಡನ ಮೇಲೆ ಹಲ್ಲೆ ಮಾಡಿ ಬಿಜೆಡಿ ಪಕ್ಷದಿಂದ ಅಮಾನತುಗೊಂಡಿದ್ದರು.