“ಬಿಟ್ಟಿ” ಭಾಗ್ಯ ಯಾಕೆ? ಉಚಿತ ಶಿಕ್ಷಣ, ಉಚಿತ ಆರೋಗ್ಯ ಕೊಡಬೇಕಿತ್ತು

     ರಾಜಾರಾಂ ತಲ್ಲೂರು

ಉಚಿತಗಳ ಚರ್ಚೆ ಕಳೆದ ಇಪ್ಪತ್ತು ದಿನಗಳಿಂದ ಭರ್ಜರಿಯಾಗಿ ನಡೆಯುತ್ತಿದೆ. ಒಂದು ಬದಿಯಲ್ಲಿ ಇಲ್ಲದವರಿಗೆಂದು ಕೊಟ್ಟ ಉಚಿತವನ್ನು, ಫ್ರೀ ಸಿಕ್ಕಿದರೆ ಬಿಡುವುದು ಯಾಕೆಂದು, ಅರೆಮನಸ್ಸಿನಿಂದ ಸ್ವೀಕರಿಸುತ್ತಲೇ, ಹೀಗೆಲ್ಲ ಉಚಿತ ಕೊಟ್ಟು ಸರ್ಕಾರವನ್ನು ದಿವಾಳಿ ಎಬ್ಬಿಸುವ ಬದಲು ಜನರಿಗೆ ಉಚಿತ ಶಿಕ್ಷಣ,ಉಚಿತ ಆರೋಗ್ಯ ವ್ಯವಸ್ಥೆ ಮಾಡಬೇಕು ಎನ್ನುವ ಬಹಳ “ಯೋಗ್ಯ” ಸಲಹೆಗಳನ್ನು ಒಂದುವರ್ಗದವರು ನೀಡುತ್ತಿರುವ ಕೆಲವು ವಿಡಿಯೊ ಕ್ಲಿಪ್ಪಿಂಗ್‌ಗಳನ್ನು (ಇದರಲ್ಲಿ ಹೆಚ್ಚಿನವು ಮಾಧ್ಯಮ ಪ್ರಾಯೋಜಿತ) ನೋಡಿದೆ.

ಬಹಳ ಸ್ವೀಕಾರಾರ್ಹವಾದ ಸಲಹೆ ಇದು : ಆದರೆ, ಈ ಪುಣ್ಯಾತ್ಮರುಗಳಲ್ಲಿ ಹೆಚ್ಚಿನವರಿಗೆ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳು/ಹೈಸ್ಕೂಲುಗಳು ಅವರವರ ಊರುಗಳಲ್ಲೇ ಕಾರ್ಯಾಚರಿಸುತ್ತಿರುವ ಬಗ್ಗೆ ಗೊತ್ತಿರುವಂತಿಲ್ಲ. ಹಾಗೆಯೇ ಅವರ ಊರಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳತ್ತವೂ ಅವರ ಕಣ್ಣು ಬಿದ್ದಂತಿಲ್ಲ. ಅವರೇನಿದ್ದರೂ ಕಾನ್ವೆಂಟ್, ಇಂಟರ್‌ನ್ಯಾಷನಲ್ ಶಾಲೆಗಳಲ್ಲಿ ಮಕ್ಕಳನ್ನು ಇಂಗ್ಲೀಷಿನಲ್ಲಿ ಓದಿಸಿ, ಆರೋಗ್ಯ ಕೆಟ್ಟರೆ ದಿ ಬೆಸ್ಟ್ ಆಸ್ಪತ್ರೆ ಚೈನ್ ಯಾವುದೆಂದು ಹುಡುಕಿಕೊಂಡು ಹೋಗುವವರು, ಭರ್ಜರಿ ಹೆಲ್ತ್ ಇನ್ಶೂರೆನ್ಸ್ ಕೂಡ ಮಾಡಿಟ್ಟಿದ್ದಾರೆ. ಹಾಗಾಗಿ ಅವರ ಚಿಂತೆ ಅವರಿಗೆ ಇಲ್ಲ. ಪಾಪ ಉಳಿದವರು ಕಷ್ಟಪಡುತ್ತಿದ್ದಾರೆ. ಅವರಿಗೆ ಸಿಗಲಿ ಎಂಬ ಪರೋಪಕಾರ ಚಿಂತನೆ.

ಇದ್ದನ್ನ ಓದಿ: ಏರಿದ ವಿದ್ಯುತ್ ಬಿಲ್ಲಿಗೆ ಯಾರನ್ನು ಹೊಣೆ ಮಾಡುತ್ತೀರಿ?

ಸರ್ಕಾರಿ ಬಸ್ಸುಗಳು ಉಚಿತವಾಗಿಯೇ ಇವರನ್ನೆಲ್ಲ ಒಮ್ಮೆ ಸೇರಿಸಿಕೊಂಡು, ಈ ಸರ್ಕಾರಿ ಸೌಲಭ್ಯಗಳಿಗೆ ಒಂದು ವಿಶೇಷ”ಪಿಕ್‌ನಿಕ್ ಟ್ರಿಪ್” ಕರೆದುಕೊಂಡು ಹೋಗಿಬರುವುದು ಉತ್ತಮ.

ಅಲ್ಲಿ ವ್ಯವಸ್ಥೆ ಸರಿ ಇಲ್ಲ ಅನ್ನಬಹುದು. ಜನ ಬರದೆ ಯಾವ ವ್ಯವಸ್ಥೆಯೂ ಸರಿ ಆಗುವುದಿಲ್ಲ. ಈಗಿರುವ ಈ ಸರ್ಕಾರಿ ವ್ಯವಸ್ಥೆಗಳಿಗೆ ಜನ ಹೋಗಿ ಸವಲತ್ತುಗಳನ್ನು ಕೇಳತೊಡಗಿದರೆ, ತನ್ನಿಂತಾನೆ ಅವೆಲ್ಲ ಸುಧಾರಿಸಲಿವೆ. ಸ್ವತಃ ನಾನು ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿ, ಸರ್ಕಾರಿ ಶಾಲೆಯಲ್ಲೇ ಪ್ರಾಥಮಿಕ ಶಿಕ್ಷಣ ಪಡೆದವನು. ಅಲ್ಲಿ ಆರೋಗ್ಯ- ಶಿಕ್ಷಣ ಗುಣಮಟ್ಟ ಎಷ್ಟು ಚೆನ್ನಾಗಿತ್ತೆಂದು ನಾನು ಬಲ್ಲೆ. ಆ ಬಳಿಕ ಕ್ರಮೇಣ ಕಾನ್ವೆಂಟು, ಇಂಗ್ಲೀಷು, ಟೈ, ಬೆನ್ನಿಗೇರಿಸುವ ಬ್ಯಾಗು ತಮ್ಮ ಮಕ್ಕಳಿಗೆ ಬೇಕೆಂಬ ಕನಸು ಕಾಣತೊಡಗಿದ ಮೇಲೆ ಕಳೆದ ನಲವತ್ತು ವರ್ಷಗಳಲ್ಲಿ ಪರಿಸ್ಥಿತಿ ಹೇಗೆಲ್ಲ ಬದಲಾಯಿತೆಂಬುದನ್ನೂ ನಾನು ಬಲ್ಲೆ.

ಅಂದಹಾಗೆ, ಈ ಆರೋಗ್ಯ/ಶಿಕ್ಷಣ “ಉಚಿತ” ಕೇಳುತ್ತಿರುವವರು, ಇರುವ ಸರ್ಕಾರಿ ಕನ್ನಡ ಶಾಲೆಗಳನ್ನು ಜನ ಇಲ್ಲ ಎಂಬ ಕಾರಣ ನೀಡಿ ಮುಚ್ಚುವ/ಖಾಸಗಿಗೆ ಪರಾಭಾರೆ ಮಾಡುವ ನೀತಿ ಇರುವವರ ಸಮರ್ಥಕರು! ಅವರು ನೇರವಾಗಿ ತೆರಿಗೆ ಕಟ್ಟಿ, “ಟ್ಯಾಕ್ಸ್ ಪೇಯರ್” ಅನ್ನಿಸಿಕೊಂಡು, ಪರೋಕ್ಷವಾಗಿ ಸಬ್ಸಿಡಿ ಪಡೆಯುವವರು. ಅವರಿಗೆ ನೇರ ಬಿಟ್ಟಿ ಭಾಗ್ಯ ಕಂಡರೆ ಸಿಡಿಮಿಡಿ

Donate Janashakthi Media

Leave a Reply

Your email address will not be published. Required fields are marked *