ಬಿಸಿಯೂಟ ಸ್ಥಗಿತಕ್ಕೆ ಪರಿಹಾರ; ಪರಿಷ್ಕೃತ ಪ್ರಸ್ತಾವ ಸಲ್ಲಿಸಲು ಹೈಕೋರ್ಟ್ ಸೂಚನೆ

  • ಮಕ್ಕಳಿಗೆ ತೊಗರಿ ಬೇಳೆ, ಅಕ್ಕಿ ಅಥವಾ ಗೋಧಿಯ ಜತೆಗೆ ಅಡುಗೆ ತಯಾರಿ ವೆಚ್ಚ ನೀಡಲಾಗುವುದು: ಉಮಾಶಂಕರ್


ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತಗೊಂಡಿದ್ದ ಕಾರಣಕ್ಕೆ ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿಗಳ ಮಕ್ಕಳಿಗೆ ಪರಿಹಾರ ನೀಡುವ ಸಂಬಂಧ ಪರಿಷ್ಕೃತ ಪ್ರಸ್ತಾವ ಸಲ್ಲಿಸುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೋಮವಾರ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ, ಕೋವಿಡ್‌–19ಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆ ನಡೆಸಿತು. ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌, ‘ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತಗೊಂಡಿದ್ದ ಅವಧಿಗೆ ಸಂಬಂಧಿಸಿದಂತೆ ಮಕ್ಕಳಿಗೆ ಅಕ್ಕಿ ಅಥವಾ ಗೋಧಿಯ ಜತೆಗೆ ಅಡುಗೆ ತಯಾರಿಯ ವೆಚ್ಚದ ಬಾಬ್ತು, ತೊಗರಿ ಬೇಳೆಯನ್ನೂ ನೀಡಲಾಗುವುದು’ ಎಂದು ತಿಳಿಸಿದರು.

‘ಐದನೇ ತರಗತಿಯೊಳಗಿನ ಮಕ್ಕಳಿಗೆ ಪ್ರತಿ ತಿಂಗಳಿಗೆ 1.25 ಕೆ.ಜಿ. ತೊಗರಿ ಬೇಳೆ ಮತ್ತು ಆರರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ಪ್ರತಿ ತಿಂಗಳಿಗೆ 1 ಕೆ.ಜಿ. 875 ಗ್ರಾಂ. ತೊಗರಿ ಬೇಳೆ ವಿತರಿಸಲಾಗುವುದು’ ಎಂದು ಪ್ರಮಾಣಪತ್ರದಲ್ಲಿ ಮಾಹಿತಿ ನೀಡಿದರು.

‘ರಾಜ್ಯ ಸರ್ಕಾರವು ಬಿಸಿಯೂಟ ಸ್ಥಗಿತಗೊಂಡಿದ್ದ ಕಾರಣಕ್ಕಾಗಿ ಪರಿಹಾರ ನೀಡಲು ರೂಪಿಸಿರುವ ಯೋಜನೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ನಿಯಮಗಳು–2015ರ ನಿಯಮ 3ರ ಉಪ ನಿಯಮ 9 ಅನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಸರ್ಕಾರ ತನ್ನ ನಿರ್ಧಾರವನ್ನು ಪರಿಷ್ಕರಿಸಬೇಕು’ ಎಂದು ವಿಭಾಗೀಯ ಪೀಠ ನಿರ್ದೇಶನ ನೀಡಿತು.

ಯೋಜನೆ ಸ್ಥಗಿತಗೊಂಡಿದ್ದ ಅವಧಿಯಲ್ಲಿನ ಅಡುಗೆ ತಯಾರಿ ವೆಚ್ಚಕ್ಕೆ ಸೀಮಿತವಾಗಿ ಪರಿಹಾರ ಒದಗಿಸುವುದರಿಂದ ಆ ಅವಧಿಯಲ್ಲಿ ಉಂಟಾದ ಅಪೌಷ್ಟಿಕತೆಯ ಸಮಸ್ಯೆಗೆ ಉತ್ತರ ದೊರಕುವುದಿಲ್ಲ. ಮಕ್ಕಳಲ್ಲಿನ ಅಪೌಷ್ಟಿಕತೆ ಕುರಿತು ಅಧ್ಯಯನ ನಡೆದಿದೆಯೇ ಎಂಬುದನ್ನು ತಿಳಿಯಲು ನ್ಯಾಯಾಲಯ ಬಯಸುತ್ತದೆ ಎಂದು ಪೀಠ ಹೇಳಿತು.

ಕೋವಿಡ್‌–19 ಅವಧಿಯಲ್ಲಿ ಯೋಜನೆಯ ಅನುಷ್ಠಾನ ಆಗದೇ ಇರುವುದರಿಂದ ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ಅರ್ಜಿದಾರರ ಪರ ವಕೀಲರು ಅತಂಕ ವ್ಯಕ್ತಪಡಿಸಿದರು. ಮಕ್ಕಳಿಗೆ ಹಾಲು ಮತ್ತು ಮೊಟ್ಟೆ ವಿತರಣೆ ಬಿಸಿಯೂಟ ಯೋಜನೆ ವ್ಯಾಪ್ತಿಯಿಂದ ಹೊರಗಿವೆ ಎಂದು ಸರ್ಕಾರ ನ್ಯಾಯಾಲಯಕ್ಕೆ ಉತ್ತರಿಸಿತು. ಅರ್ಜಿಯ ವಿಚಾರಣೆಯನ್ನು ನವೆಂಬರ್‌ 30ಕ್ಕೆ ಮುಂದೂಡಿ ವಿಭಾಗೀಯ ಪೀಠ ಆದೇಶಿಸಿತು.

Donate Janashakthi Media

Leave a Reply

Your email address will not be published. Required fields are marked *