ಅಗರ್ತಲಾ : ತ್ರಿಪುರಾದ ಬಿಜೆಪಿ ಆಡಳಿತ ಪಕ್ಷದ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ತಮ್ಮ ಸ್ಥಾನಕ್ಕೆ ಇಂದು (ಮೇ 14) ರಾಜೀನಾಮೆ ನೀಡುವ ಮೂಲಕ ಕೆಲವು ದಿನಗಳಿಂದ ಬಿಜೆಪಿಯೊಳಗಿದ್ದ ಆಂತರಿಕ ಕಲಹಕ್ಕೆ ತೆರೆ ಎಳೆದಿದ್ದಾರೆ.
ಅನಿರೀಕ್ಷಿತ ರಾಜಕೀಯ ವಿದ್ಯಮಾನದಲ್ಲಿ 50 ರ ಹರೆಯದ ನಾಯಕ ಬಿಪ್ಲಬ್ ಕುಮಾರ್ ದೇಬ್ ಕಳೆದ ಒಂದು ದಿನಗಳ ಹಿಂದಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ ಬಳಿಕ ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ದೆಹಲಿಯಿಂದ ಇಂದು ಬೆಳಗ್ಗೆ ಅಗರ್ತಲಾಗೆ ಮರಳಿದ್ದ ಬಿಪ್ಲವ್ ಕುಮಾರ್ ದೇಬ್ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರ ನೀಡಿದ್ದಾರೆ. ವಿಧಾನಸಭಾ ಚುನಾವಣೆಗೆ ಇನ್ನೊಂದೇ ವರ್ಷ ಬಾಕಿ ಉಳಿದಿರುವಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಭಾರೀ ಕುತೂಹಲ ಮೂಡಿದೆ.
2023 ರಲ್ಲಿ ತ್ರಿಪುರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿ ರಣತಂತ್ರ ರೂಪಿಸಿ ನಾಯಕತ್ವ ಬದಲಾವಣೆ ಮಾಡಿದೆ ಎನ್ನಲಾಗಿದೆ. ಇಂದೇ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂದು ತಿಳಿಯಲಿದ್ದು, ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ಮುಂದಿನ ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಭೂಪೇಂದರ್ ಯಾದವ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತವಡೆ ಅವರನ್ನು ಶಾಸಕಾಂಗ ಪಕ್ಷದ ಸಭೆಯ ವೀಕ್ಷಕರಾಗಿ ನೇಮಕ ಮಾಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಯೊಂದಕ್ಕೂ ಸಮಯದ ಚೌಕಟ್ಟು ಇದೆ, ನಾವು ಆ ಸಮಯದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಮುಖ್ಯಮಂತ್ರಿ ಅಥವಾ ಇನ್ನಾವುದೇ ಹುದ್ದೆಯಾಗಿರಲಿ ನನ್ನನ್ನು ಎಲ್ಲಿಗೆ ಕಳುಹಿಸಿದರೂ ಎಲ್ಲ ಕಡೆಗೂ ಹೊಂದಿಕೊಂಡು ಕೆಲಸ ಮಾಡುತ್ತೇನೆ ಎಂದು ಬಿಪ್ಲಬ್ ದೇಬ್ ಹೇಳಿದ್ದಾರೆ.
“ಬಿಪ್ಲಬ್ ದೇಬ್ ಯಾವ ಕಾರಣಕ್ಕಾಗಿ ರಾಜೀನಾಮೆ ನಮಗೆಲ್ಲರಿಗೂ ಆಶ್ಚರ್ಯ ಉಂಟುಮಾಡಿದೆ. ಆದರೆ ನಿಸ್ಸಂಶಯವಾಗಿ ಅವರು ಬಿಜೆಪಿ ಪಕ್ಷದ ನಾಯಕರೊಂದಿಗೆ ದೆಹಲಿಯಲ್ಲಿ ಚರ್ಚೆ ನಡೆಸಿ, ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಬಿಜೆಪಿ ಪಕ್ಷವು ಕೆಲವು ಯೋಜನೆಗಳನ್ನು ಹೊಂದಿರಬಹುದು. ಅದಕ್ಕಾಗಿಯೇ ಬಿಪ್ಲಬ್ ದೇಬ್ ರಾಜೀನಾಮೆ ನೀಡಿರಬಹುದು ಎಂದು ದೇಬ್ ಅವರ ಸಂಪುಟದ ಸಚಿವರೊಬ್ಬರು ಹೇಳಿದ್ದಾರೆ.