ಮುಂಬೈ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗಳ ಪತಿ ಹಾಗೂ ದಲಿತ ಚಿಂತಕ ಆನಂದ್ ತೇಲ್ತುಂಬ್ಡೆಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. 1 ಲಕ್ಷ ರೂ. ಶ್ಯೂರಿಟಿ ಮೇಲೆ ತೇಲ್ತುಂಬ್ಡೆ ಅವರಿಗೆ ಜಾಮೀನು ನೀಡಲಾಗಿದೆ.
ವಿಶೇಷ ಎನ್‌ಐಎ ನ್ಯಾಯಾಲಯ ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರ ವಿರುದ್ಧ ಆನಂದ್ ತೇಲ್ತುಂಬೆ ಕಳೆದ ವರ್ಷ ಹೈಕೋರ್ಟ್ ಮೊರೆ ಹೋಗಿದ್ದರು. ಇವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಜಸ್ಟೀಸ್ ಎ.ಎಸ್ ಗಡ್ಕರಿ ಮತ್ತು ಮಿಲಿಂಡ್ ಜಾಧವ್‌ರವರಿದ್ದ ವಿಭಾಗೀಯ ಪೀಠ ಜಾಮೀನು ಮಂಜೂರು ಮಾಡಿದೆ.
ಡಿಸೆಂಬರ್ 31, 2017ರಂದ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್ ಪ್ರಕರಣದ ಆರೋಪಿ ಆಗಿರುವ ಆನಂದ್ ತೇಲ್ತುಂಬೆ ಅವರು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ 2020ರ ಏಪ್ರಿಲ್ 14ರ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನದಂದು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಶರಣರಾಗಿದ್ದರು.
ಯುಎಪಿಎಯ ಸೆಕ್ಷನ್ 38 ಮತ್ತು 39 ಹೊರತುಪಡಿಸಿ ಸೆಕ್ಷನ್ 13, 16 ಮತ್ತು 18 ರ ಅಡಿಯಲ್ಲಿ ಅಪರಾಧಗಳನ್ನು ಮಾಡಲಾಗಿಲ್ಲ ಎಂದು ಗಮನಿಸಿದ ನ್ಯಾಯಾಲಯ ತಲಾ ಒಂದು ಲಕ್ಷ ರೂ.ಗಳ ಎರಡು ಶ್ಯೂರಿಟಿ ಪಿಆರ್ ಬಾಂಡ್ ಮೇಲೆ ಜಾಮೀನು ನೀಡಿದೆ. ಆದರೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲು ಎನ್‌ಐಎಗೆ ಒಂದು ವಾರ ಕಾಲಾವಕಾಶ ನೀಡಿರುವ ನ್ಯಾಯಾಲಯ ಈ ಜಾಮೀನಿನಗೆ ಒಂದು ವಾರಗಳ ತಡೆಯಾಜ್ಞೆ ಸಹ ನೀಡಿದೆ. ಹಾಗಾಗಿ ಒಂದು ವಾರಗಳ ಕಾಲ ತೇಲ್ತುಂಬ್ಡೆಯವರು ಬಿಡುಗಡೆಯಾಗುವುದಿಲ್ಲ ಎಂದು ತಿಳಿದು ಬಂದಿದೆ.