ಎಪ್ರಿಲ್-ಜುಲೈನ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಭಾರತವೂ ಸೇರಿದಂತೆ ದೇಶ ದೇಶಗಳಲ್ಲಿ ಬಿಲಿಯಾಧಿಪತಿಗಳ ಸಂಪತ್ತು ಹೆಚ್ಚಿದೆ, ಭಾರತದ ಬಿಲಿಯಾಧಿಪತಿಗಳ ಸಂಪತ್ತು ಶೇ.35ರಷ್ಟು ಏರಿಕೆಯಾಗಿ 423 ಶತಕೋಟಿ ಡಾಲರ್‌ಗೆ ತಲುಪಿದೆ. ಇದೇ ಅವಧಿಯಲ್ಲಿ, ಉತ್ಪಾದನೆ (ಜಿಡಿಪಿ) ಕಾಲು ಭಾಗದಷ್ಟು ಕುಗ್ಗಿದೆ. ಅದೇ ರೀತಿಯಲ್ಲಿ ಉದ್ಯೋಗಗಳೂ ಕುಸಿದಿವೆ. ಪರಸ್ಪರ ವಿರುದ್ಧವಾಗಿರುವ ಈ ಅಂಶಗಳು ಕೆಲವರು ಭಾವಿಸುವಂತೆ ವಿಪರ್ಯಾಸವಲ್ಲ, ಇವು ಬಂಡವಾಳಶಾಹಿಯ ಕಾರ್ಯವೈಖರಿಯ ಹೆಗ್ಗುರುತುಗಳಾಗಿವೆ.
ಸಂಪತ್ತಿನ ಹಂಚಿಕೆಯ ದತ್ತಾಂಶಗಳನ್ನು ವ್ಯಾಖ್ಯಾನಿಸುವುದು ಬಲು ಕಷ್ಟದ ಕೆಲಸ. ಏಕೆಂದರೆ, ಷೇರುಗಳ ಬೆಲೆಗಳ ಏರಿಳಿತಗಳು ಸಂಪತ್ತಿನ ಹಂಚಿಕೆಯ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ, ಷೇರು ಮಾರುಕಟ್ಟೆಯು ಏರಿದಾಗ ಶ್ರೀಮಂತರು ಹೆಚ್ಚು ಶ್ರೀಮಂತರಾಗಿ ಕಾಣುತ್ತಾರೆ ಮತ್ತು ಮಾರುಕಟ್ಟೆಯು ಕುಸಿದಾಗ ಅವರ ಶ್ರೀಮಂತಿಕೆಯೂ ಬೆಳಗಾಗುವುದರಲ್ಲಿ ಸಾಕಷ್ಟು ಕುಸಿದಿರುತ್ತದೆ. ಆದರೆ, ಶ್ರೀಮಂತರು ತಮ್ಮ ಸಂಪತ್ತಿನ ಒಂದು ಭಾಗವನ್ನು ಮಾತ್ರ ಷೇರುಗಳ ರೂಪದಲ್ಲೂ ಮತ್ತು ಉಳಿದ ಭಾಗವನ್ನು ಭೂಮಿ, ಬಂಗಾರ ಮುಂತಾದ ಸ್ಥಿರ ರೂಪದಲ್ಲೂ ಹೊಂದಿರುತ್ತಾರೆ. ಷೇರುಗಳ ರೂಪದ ಸಂಪತ್ತಿಗೆ ಕರಗಿ ಹೋಗುವ ಸಾಧ್ಯತೆ ಇದೆ.
ಸಂಪತ್ತಿನ ಹಂಚಿಕೆಯ ಬಗ್ಗೆ ಖಚಿತ ಅಭಿಪ್ರಾಯಗಳನ್ನು ಹೇಳಬಹುದಾದ ಕೆಲವು ಸಂದರ್ಭಗಳಿರುತ್ತವೆ. ಕೊರೊನಾ ಸಾಂಕ್ರಾಮಿಕದ ಅವಧಿಯು ಅಂತಹ ಒಂದು ಸಂದರ್ಭವಾಗಿದೆ. ಈ ಸಾಂಕ್ರಾಮಿಕದ ಕಾರಣದಿಂದಾಗಿ ಜಗತ್ತಿನಾದ್ಯಂತ ಕೋಟಿ ಕೋಟಿ ಮಂದಿ ದುಡಿಯುವವರು ಉದ್ಯೋಗ ಕಳೆದುಕೊಂಡು ಆದಾಯವಿಲ್ಲದೆ ನರಳುತ್ತಿದ್ದ ಸಮಯದಲ್ಲಿ, ವಿಶ್ವದ ಬಿಲಿಯನೇರ್‌ಗಳು (ನೂರು ಕೋಟಿಗೂ ಅಧಿಕ ಡಾಲರ್, ಅಂದರೆ ಸುಮಾರು 7500 ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿರುವವರು) ತಮ್ಮ ಸಂಪತ್ತನ್ನು ಅಪಾರವಾಗಿ ಹೆಚ್ಚಿಸಿಕೊಂಡರು ಎಂಬುದರಲ್ಲಿ ಸಂಶಯವಿಲ್ಲ. ಇದು ಜಗತ್ತಿನಲ್ಲಿ ಸಂಪತ್ತಿನ ಅಸಮಾನತೆಯನ್ನು ಖಂಡಿತವಾಗಿಯೂ ಹೆಚ್ಚಿಸಿದೆ.
ಇಂಗ್ಲೆಂಡಿನ ‘ದಿ ಗಾರ್ಡಿಯನ್’ಪತ್ರಿಕೆಯು ಅಕ್ಟೋಬರ್ 07ರಂದು ಪ್ರಕಟಿಸಿರುವ ಯುಬಿಎಸ್ ಎಂಬ ಸ್ವಿಸ್ ಬ್ಯಾಂಕಿನ ಒಂದು ಸಮೀಕ್ಷಾ ವರದಿಯ ಪ್ರಕಾರ, ಈ ವರ್ಷದ ಏಪ್ರಿಲ್-ಜುಲೈ ಅವಧಿಯಲ್ಲಿ, ಕೊರೊನಾ ಸಾಂಕ್ರಾಮಿಕವು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಸಮಯದಲ್ಲಿ, ವಿಶ್ವದ ಬಿಲಿಯನೇರ್‌ಗಳ ಸಂಪತ್ತು ಶೇ.27.5ರಷ್ಟು ಏರಿಕೆಯಾಗಿದೆ. ಜುಲೈ ತಿಂಗಳ ಅಂತ್ಯದ ವೇಳೆಗೆ ಅವರ ಸಂಪತ್ತು 10.2 ಟ್ರಿಲಿಯನ್ ಡಾಲರ್‌ಗಳ ದಾಖಲೆಯ ಗರಿಷ್ಠ ಮಟ್ಟದಲ್ಲಿತ್ತು. ಈ ಹಿಂದೆ, 2017ರ ಅಂತ್ಯದಲ್ಲಿ. ವಿಶ್ವದ ಬಿಲಿಯನೇರ್‌ಗಳ ಸಂಪತ್ತಿನ ಗರಿಷ್ಠ ಪ್ರಮಾಣವು 8.9 ಟ್ರಿಲಿಯನ್ ಡಾಲರ್ ಮಟ್ಟದಲ್ಲಿತ್ತು. ಆಗ ಇದ್ದ ಬಿಲಿಯನೇರ್‌ಗಳ ಸಂಖ್ಯೆಯಲ್ಲಿ ತುಸುವೇ ಏರಿಕೆ (2158 ರಿಂದ 2189) ಕಂಡು ಬಂದರೂ ಸಹ, ಅವರ ಸಂಪತ್ತಿನಲ್ಲಿ ಅಗಾಧ ಪ್ರಮಾಣದ ಏರಿಕೆಯಾಗಿದೆ. ವಾಸ್ತವವಾಗಿ, 2017ರ ಅಂತ್ಯದಿಂದ 2020ರ ಜುಲೈ ಅಂತ್ಯದ ವರೆಗಿನ ಅವಧಿಯಲ್ಲಿ ಬಿಲಿಯನೇರ್‌ಗಳ ತಲಾ ಸಂಪತ್ತು ಶೇ.13ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಈ ಏರಿಕೆಯು ಎರಡು ಪರಸ್ಪರ ವಿರುದ್ಧ ಚಲನೆಗಳ ನಿವ್ವಳ ಫಲಿತಾಂಶವಾಗಿದೆ: ಏಪ್ರಿಲ್ 2020ರ ವರೆಗೆ ಕುಸಿತ ಮತ್ತು ನಂತರ ಜುಲೈ ಅಂತ್ಯದ ವರೆಗೆ ಶೇ. 27.5ರ ಮಟ್ಟದ ತೀವ್ರ ಏರಿಕೆ.
ಈ ಏರಿಕೆಯಲ್ಲಿ ಒಂದು ನಿರ್ದಿಷ್ಟ ಮಹತ್ವವಿದೆ. ಒಟ್ಟು ಜನಸಂಖ್ಯೆಯಲ್ಲಿ ಬಹುತೇಕರು ಯಾವುದೇ ಸಂಪತ್ತನ್ನು ಹೊಂದಿಲ್ಲ ಮತ್ತು ಒಂದು ವೇಳೆ ಅವರು ಅಲ್ಪ ಸ್ವಲ್ಪ ಆಸ್ತಿ (ಸಂಪತ್ತು)ಯನ್ನು ಹೊಂದಿದ್ದರೆ ಅದರ ಮೌಲ್ಯವು, ಷೇರು ಮಾರುಕಟ್ಟೆ ಬೆಲೆಗಳಂತಲ್ಲದೆ, ಸ್ಥಿರವಾಗಿರುತ್ತದೆ. ಆದರೆ, ಷೇರು ಬೆಲೆಗಳ ಹೆಚ್ಚಳಗಳು ಹೆಚ್ಚಳದ ಕಾರಣದಿಂದಾಗಿಯೇ ಸಮಾಜದಲ್ಲಿ ಸಂಪತ್ತಿನ ಅಸಮಾನತೆಯನ್ನು ಹೆಚ್ಚಿಸುತ್ತವೆ. ಅದೇ ರೀತಿಯಲ್ಲಿ, ಷೇರು ಬೆಲೆಗಳ ಇಳಿಕೆಯು ಸಂಪತ್ತಿನ ಅಸಮಾನತೆಯನ್ನು ತಗ್ಗಿಸುತ್ತದೆ. ಹಾಗಾಗಿ, ಸಂಪತ್ತಿನ ಅಸಮಾನತೆಗಳ ಬದಲಾವಣೆಯ ಪ್ರಮಾಣವು ಎಷ್ಟೆಂಬುದನ್ನು ನಿಖರವಾಗಿ ಅಳೆಯುವುದು ಕಷ್ಟದ ಕೆಲಸವೇ.
ಸಂಪತ್ತಿನ ಅಸಮಾನತೆಗಳು ಏಪ್ರಿಲ್ ನಂತರದಲ್ಲಿ ಏರಿಕೆಯಾದ ಕತೆಯೇ ಬೇರೆ. ಯುಬಿಎಸ್ ವಕ್ತಾರರ ಪ್ರಕಾರ, 2020ರ ಏಪ್ರಿಲ್‌ಗೆ ಮೊದಲು ಷೇರು ಬೆಲೆಗಳು ಕುಸಿಯುತ್ತಿದ್ದಾಗ, ಬಿಲಿಯನೇರ್‌ಗಳು ಗಾಬರಿಯಲ್ಲಿ ತಮ್ಮ ಷೇರುಗಳನ್ನು ಮಾರಲಿಲ್ಲ ಮಾತ್ರವಲ್ಲ, ಬದಲಾಗಿ, ಗಾಬರಿ-ಮಾರಾಟದಲ್ಲಿ ತೊಡಗಿದ್ದ ಸಣ್ಣ ಸಣ್ಣ ಷೇರು ಹಿಡುವಳಿದಾರರಿಂದ ಷೇರುಗಳನ್ನು ಖರೀದಿಸಿದರು. ಪರಿಣಾಮವಾಗಿ, ಏಪ್ರಿಲ್ ನಂತರ ಷೇರು ಬೆಲೆಗಳು ಏರಿದಾಗ, ಈ ಬಿಲಿಯನೇರ್‌ಗಳು ಅಗಾಧ ಲಾಭಗಳಿಸಿದರು (ಬಂಡವಾಳ ವೃದ್ಧಿ). ಅವರು ಈ ಲಾಭಗಳಿಸಲು ಸಾಧ್ಯವಾದದ್ದು ಏಕೆಂದರೆ, ಸಣ್ಣ ಸಣ್ಣ ಷೇರು ಹಿಡುವಳಿದಾರರಿಗೆ ತಮ್ಮ ಷೇರುಗಳ ಬೆಲೆ ಕುಸಿಯುತ್ತಿದ್ದ ಸಮಯದಲ್ಲಿ ನಷ್ಟವನ್ನು ತಾಳಿಕೊಳ್ಳುವ ಸಾಮರ್ಥ್ಯವಿರಲಿಲ್ಲ. ಹೀಗಾಗಿ, ಈ ಸಾಂಕ್ರಾಮಿಕದ ಕಾಲದಲ್ಲಿ ಸಂಪತ್ತು ಕೆಲವೇ ಮಂದಿಯ ಕೈ ಸೇರಿತು – ಅದು ಕಡು ಬಡವರಿಂದ ಬಂದದ್ದಲ್ಲ, ಏಕೆಂದರೆ ಅವರ ಬಳಿ ಸಂಪತ್ತು ಇರಲೇ ಇಲ್ಲವಲ್ಲ. ಅದು ಬಂದದ್ದು, ಅಲ್ಪ ಸ್ವಲ್ಪ ಸಂಪತ್ತು ಹೊಂದಿದ್ದವರಿಂದ. ಷೇರುಗಳ ಬೆಲೆ ಏರಿಕೆಯಾದ ಕಾರಣದಿಂದ ಅವರ ಸಂಪತ್ತಿನ ಏರಿಕೆಯಾಗಲಿಲ್ಲ. ಅದೊಂದು ನಿರ್ದಿಷ್ಟ ಕ್ರಿಯೆಯ ಮೂಲಕ ಏರಿಕೆಯಾಯಿತು. ಈ ನಿರ್ದಿಷ್ಟ ಕ್ರಿಯೆಯನ್ನು ಮಾರ್ಕ್ಸ್, ಬಂಡವಾಳದ ಕೇಂದ್ರೀಕರಣ ಎಂದು ಕರೆದಿದ್ದರು.
ಸಾಮ್ರಾಜ್ಯಶಾಹಿಯ ಹಂತದಲ್ಲಿ ಬಂಡವಾಳಶಾಹಿಯ ಪ್ರತಿಯೊಂದು ಬಿಕ್ಕಟ್ಟೂ, ಅದು ಆರ್ಥಿಕ ಬಿಕ್ಕಟ್ಟೇ ಇರಲಿ ಅಥವಾ ರಾಜಕೀಯ ಬಿಕ್ಕಟ್ಟೇ ಇರಲಿ, ಬಂಡವಾಳವನ್ನು ಕೇಂದ್ರೀಕರಿಸುವ ಒಂದು ಸಂದರ್ಭವಾಗುತ್ತದೆ ಎಂದು ಲೆನಿನ್ ಹೇಳಿದ್ದರು. ಈಗ ನೋಡಿದರೆ, ಲೆನಿನ್ ಹೇಳಿದ್ದ ಆರ್ಥಿಕ, ರಾಜಕೀಯ ಬಿಕ್ಕಟ್ಟುಗಳ ಜೊತೆಗೆ ಆರೋಗ್ಯದ ಬಿಕ್ಕಟ್ಟನ್ನು, ಅಷ್ಟೇ ಏಕೆ, ಎಲ್ಲಾ ರೀತಿಯ ಬಿಕ್ಕಟ್ಟುಗಳನ್ನೂ ಸೇರಿಸಬೇಕಾಗುತ್ತದೆ.
ಬಂಡವಾಳವು ಕೇಂದ್ರೀಕೃತವಾಗುವ ಒಂದು ಮಾಮೂಲಿ ವಿಧಾನವೆಂದರೆ, ಬಿಕ್ಕಟ್ಟಿನ ಕಾಲದಲ್ಲಿ ಸಣ್ಣ ಸಣ್ಣ ಬಂಡವಾಳಗಾರರ ವಿನಾಶ. ಕಿರು ಉತ್ಪಾದಕರ ವಿನಾಶವೂ ಆಗುತ್ತದೆ. ಆದರೆ, ಅವರ ವಿನಾಶವನ್ನು ಬಂಡವಾಳ ಕೇಂದ್ರೀಕರಣ ಎಂದು ಕರೆಯುವುದರ ಬದಲಾಗಿ ಬಂಡವಾಳದ ಆದಿಮ ಶೇಖರಣೆ ಎಂಬ ಪದವನ್ನು ಬಳಸಲಾಗಿದೆ. ಹಾಗಾಗಿ, ಸಣ್ಣ ಬಂಡವಾಳಗಾರ ವಿನಾಶದಿಂದಾಗಿ ಅವರಿಗೆ ಸಾಲ ಕೊಟ್ಟ ಸಣ್ಣ ಬ್ಯಾಂಕುಗಳು ಅಥವಾ ಸಾಲ ಸಂಸ್ಥೆಗಳು ಒಂದೊ ಮುಳುಗುತ್ತವೆ ಇಲ್ಲವೇ ದೊಡ್ಡ ಕಂಪನಿಗಳು ಅವುಗಳನ್ನು ವಶಪಡಿಸಿಕೊಳ್ಳುತ್ತವೆ ಮಾತ್ರವಲ್ಲ ಅವುಗಳ ಕಾರ್ಯಕ್ಷೇತ್ರವನ್ನೂ ಆಕ್ರಮಿಸುತ್ತವೆ.
ಬಂಡವಾಳವು ಕೇಂದ್ರೀಕೃತವಾಗುವ ಈ ವಿಧಾನದ ಜೊತೆಗೆ, ಬಂಡವಾಳಗಳ ಬೃಹತ್ ಒಗ್ಗೂಡುವಿಕೆಯೂ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಬೃಹತ್ ಸಂಖ್ಯೆಯ ಸಣ್ಣ ಸಣ್ಣ ಬಂಡವಾಳದ ಸಂಸ್ಥೆಗಳು ಒಂದುಗೂಡಲು ಬ್ಯಾಂಕುಗಳು ಅಥವಾ ಷೇರು ಮಾರುಕಟ್ಟೆಗಳು ನೆರವಾಗುತ್ತವೆ. ಇದು ಕೇಂದ್ರೀಕರಣ ಪ್ರಕ್ರಿಯೆಯ ಮತ್ತೊಂದು ಪ್ರಭಾವಶಾಲಿ ಕಾರ್ಯವಿಧಾನ.
- ಕಳೆದ ವಾರ ಯುಬಿಎಸ್ ಮತ್ತು ಪಿಡಬ್ಲ್ಯುಸಿ ಪ್ರಕಟಿಸಿದ ‘ಬಿಲಿಯನೇರ್ ಸೈಟ್ಸ್ ರಿಪೋರ್ಟ್ 2020’ ರ ಪ್ರಕಾರ ಭಾರತದ ಬಿಲಿಯನೇರ್ (ಡಾಲರ್ ಶತಕೋಟ್ಯಾಧಿಪತಿ)ಗಳ ಸಂಪತ್ತಿನಲ್ಲಿ ಕೋವಿಡ್ ಕಾಲದ ಎಪ್ರಿಲ್ ಮತ್ತು ಜುಲೈ ನಡುವೆ ಶೇಕಡ 35ರಷ್ಟು ಏರಿಕೆಯಾಗಿ ಅವರ ಒಟ್ಟು ಸಂಪತ್ತು 42 ಬಿಲಿಯನ್ ಡಾಲರ್‌ಗೇರಿದೆ.
- ಇದಕ್ಕೆ ಮೊದಲು, ಈ ತಿಂಗಳ ಆರಂಭದಲ್ಲಿ ಪೋರ್ಬ್ಸ್ ನ ಭಾರತೀಯ ಸೂಪರ್ ಶ್ರೀಮಂತರ 2020ರ ಪಟ್ಟಿ ಪ್ರಕಟವಾಗಿತ್ತು. ಅದರ ಪ್ರಕಾರ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ ಅಂಬಾನಿಯ ಸಂಪತ್ತಿನ ಪ್ರಮಾಣದಲ್ಲಿ 73ಶೇ. ಏರಿಕೆಯಾಗಿ 89 ಬಿಲಿಯ ಡಾಲರ್(ಅಂದರೆ ಸುಮಾರು 6.5 ಲಕ್ಷ ಕೋಟಿ ರೂ.) ಆಗಿದೆ.
- ಇದರಲ್ಲಿ ಅವರು ಪಿಎಂಕೇರ್ಸ್ ನಿಧಿಗೆ 500 ಕೋಟಿ ರೂ. ಮತ್ತು ಮಹಾರಾಷ್ಟ್ರ ಹಾಗೂ ಗುಜರಾತ್ ಮುಖ್ಯಮಂತ್ರಿಗಳ ನಿಧಿಗಳಿಗೆ ತಲಾ 5 ಕೋಟಿ ರೂ. ‘ಉದಾರ ದಾನ’ನೀಡಿದ್ದಾರೆ.
- ಇದಾದ ನಂತರ ಪ್ರಕಟವಾಗಿರುವ ಜಾಗತಿಕ ಹಸಿವಿನ ಸೂಚ್ಯಂಕ 2020 ರ ಪ್ರಕಾರ ಭಾರತದ ಸ್ಥಾನ 107 ದೇಶಗಳಲ್ಲಿ 94ನೇಯದು. ಅಂದರೆ ಅದು ‘ತೀವ್ರ’ಹಸಿವಿನ ವಿಧದಲ್ಲೇ ಇದೆ.
ಈ ಸಾಂಕ್ರಾಮಿಕದ ಕಾಲದಲ್ಲಿ ನಾವು ಕಂಡಿದ್ದೇನೆಂದರೆ, ಮೇಲೆ ತಿಳಿಸಿದ ಬಂಡವಾಳದ ಕೇಂದ್ರೀಕರಣ ಮತ್ತು ಬಂಡವಾಳಗಳ ಬೃಹತ್ ಒಗ್ಗೂಡುವಿಕೆ ಈ ಎರಡು ಪ್ರಕ್ರಿಯೆಗಳಿಗಿಂತ ಭಿನ್ನವಾದ ಮತ್ತೊಂದು ವಿಧಾನವೆಂದರೆ, ಷೇರು-ಬೆಲೆ ಕುಸಿತದ ಹೊಡೆತಗಳನ್ನು ಬಿಲಿಯನೇರ್‌ಗಳು ತಡೆದುಕೊಳ್ಳುವ ಸಾಮರ್ಥ್ಯ. ಆದರೆ, ಸಣ್ಣ ಸಣ್ಣ ಸಂಪತ್ತಿನ ಒಡೆಯರು ಅಸಮರ್ಥರಾಗಿರುತ್ತಾರೆ. ಬಿಲಿಯನೇರ್‌ಗಳ ಈ ಸಾಮರ್ಥ್ಯಕ್ಕೂ ಮತ್ತು ಬಂಡವಾಳಶಾಹಿ ಪುರಾಣಗಳು ಅವರು “ಧೈರ್ಯ” ಅಥವಾ “ತಾಕತ್ತು” ಅಥವಾ “ಉದ್ಯಮಶೀಲತೆ”ಗಳನ್ನು ಹೊಂದಿದ್ದಾರೆ ಎಂದು ಹೇಳುವುದಕ್ಕೂ ಸಂಬಂಧವೇ ಇಲ್ಲ. ಸರಳವಾಗಿ ಹೇಳುವುದಾದರೆ, ಬಿಲಿಯನೇರ್‌ಗಳ ಈ “ಸಾಮರ್ಥ್ಯ”ವು ಅವರ ಒಡೆತನದ ಸಂಸ್ಥೆಗಳ ದೊಡ್ಡ ಗಾತ್ರದ ಮೇಲೆ ನಿಂತಿದೆ.
ಬಿಲಿಯನೇರ್‌ಗಳ ಬೃಹತ್ ಗಾತ್ರದ ವಹಿವಾಟಿನ ಕಾರಣದಿಂದಾಗಿ ಅವರು ತಮ್ಮ ಸ್ಟಾಕ್-ಬೆಲೆ ಏರಿಳಿತಗಳನ್ನು ತಡೆದುಕೊಳ್ಳಬಹುದು. ಸಣ್ಣ ಸಣ್ಣ ಸಂಪತ್ತಿನ ಒಡೆಯರು ಅಸಮರ್ಥರಾಗಿರುವ ಕಾರಣದಿಂದಲೇ ಬಿಲಿಯನೇರ್‌ಗಳು ಬೃಹತ್ ಪ್ರಮಾಣದ ಲಾಭವನ್ನೂ ಮಾಡುತ್ತಾರೆ. ಸ್ಟಾಕ್-ಬೆಲೆ ಏರಿಳಿತಗಳನ್ನು ತಡೆದುಕೊಳ್ಳುವ ಅವರ ಸಾಮರ್ಥ್ಯವು ಅವರು ನಿಜಕ್ಕೂ “ರಿಸ್ಕ್-ತೆಗೆದುಕೊಳ್ಳುವವರು”ಆಗಿರದೆ, ನಿಖರವಾಗಿ ರಿಸ್ಕ್ ತೆಗೆದುಕೊಳ್ಳಲು ಹೆದರುವವರಾಗಿರುತ್ತಾರೆ.
ಬಿಲಿಯನೇರ್‌ಗಳು ರಿಸ್ಕ್ ತೆಗೆದುಕೊಳ್ಳದೆ ತಮ್ಮ ಸಂಪತ್ತನ್ನು “ರಕ್ಷಣೆ” ಮಾಡಿಕೊಳ್ಳುತ್ತಾರೆ. ತಮ್ಮ ಸಂಪತ್ತಿಗೆ ಒದಗಬಹುದಾದ ರಿಸ್ಕನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಅವರು ತಮ್ಮ ಹಣವನ್ನು ಬೇರೆ ಬೇರೆ ರೂಪದ ಹೂಡಿಕೆಗಳಲ್ಲಿ ತೊಡಗಿಸುತ್ತಾರೆ. ಅಂತಹ ವೈವಿಧ್ಯಮಯ ಹೂಡಿಕೆಗಳಲ್ಲಿ ಷೇರು ಮಾರುಕಟ್ಟೆಯು ಒಂದು ಮಾತ್ರ. ಒಂದು ಅಭೂತಪೂರ್ವ ಬಿಕ್ಕಟ್ಟಿನಿಂದ ಷೇರು ಬೆಲೆಗಳು ಅಸಾಧಾರಣ ಮಟ್ಟಕ್ಕೆ ಕುಸಿದಾಗ, ಅವರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವುದಿಲ್ಲ. ಆದರೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಸಣ್ಣ ಸಣ್ಣ ಸಂಪತ್ತಿನ ಒಡೆಯರು ಇಂತಹ ಬಿಕ್ಕಟ್ಟಿನಿಂದ ಹಠಾತ್ತಾಗಿ ಹತಾಶೆಗೊಳಗಾಗಿ ತಮ್ಮ ಷೇರುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರುತ್ತಾರೆ. ಬಿಲಿಯನೇರ್‌ಗಳು ಈ ಅವಕಾಶವನ್ನು ಬಳಸಿಕೊಂಡು ಅಗಾಧ ಲಾಭ ಗಳಿಸುತ್ತಾರೆ.
ಒಂದು ಉದಾಹರಣೆಯ ಮೂಲಕ ಈ ಅಂಶವನ್ನು ಸ್ಪಷ್ಟಪಡಿಸಬಹುದು. ಒಬ್ಬ ಸಣ್ಣ ಹೂಡಿಕೆದಾರನ ಬಳಿ 100 ರೂ ಗಳ ಸಂಪತ್ತು ಇದೆ ಎಂದುಕೊಳ್ಳೋಣ. ಅವನು ಅದನ್ನು ಹೆಚ್ಚು ಆದಾಯ ಕೊಡುವ ರೂಪದಲ್ಲಿ ಇಟ್ಟುಕೊಳ್ಳಲು ಬಯಸುತ್ತಾನೆ, ಅಂತಹ ಹೂಡಿಕೆಯಲ್ಲಿ ಅಸಲಿಗೇ ಅಪಾಯವಿದ್ದರೂ ಸಹ. ಇಂತಹ ಹೂಡಿಕೆಯೇ ಅವನ ಆದ್ಯತೆಯಾಗುತ್ತದೆ, ಏಕೆಂದರೆ, ಅವನು ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡುತ್ತಾನೆ ಎಂದಲ್ಲ, ಅವನಿಗೆ ಆದಾಯದ ಅವಶ್ಯಕತೆ ವಿಪರೀತವಾಗಿರುತ್ತದೆ. ಆದ್ದರಿಂದ ಅವನು ತನ್ನ ಎಲ್ಲ ಸಂಪತ್ತನ್ನೂ (100 ರೂ) ಷೇರುಗಳಲ್ಲಿ ಹೂಡಿಕೆ ಮಾಡುತ್ತಾನೆ. ಇದಕ್ಕೆ ವ್ಯತಿರಿಕ್ತವಾಗಿ ಒಬ್ಬ ಶ್ರೀಮಂತನ ಬಳಿ ಹತ್ತು ಲಕ್ಷ ರೂ ಗಳ ಸಂಪತ್ತು ಇದೆ ಎಂದುಕೊಳ್ಳೋಣ. ಅವನಿಗೆ ಈಗಾಗಲೇ ಸಾಕಷ್ಟು ಆದಾಯ ಬರುತ್ತಿದೆ. ಆದ್ದರಿಂದ, ಅವನು ತನ್ನ ಸಂಪತ್ತಿನ ಅರ್ಧ ಭಾಗವನ್ನು ಷೇರುಗಳಲ್ಲಿ ಹೂಡಿಕೆ ಮಾಡುತ್ತಾನೆ ಮತ್ತು ಉಳಿದ ಅರ್ಧ ಭಾಗವನ್ನು ಬ್ಯಾಂಕ್‌ನಲ್ಲಿ ಠೇವಣಿಯಾಗಿ ಹೂಡಿಕೆ ಮಾಡುತ್ತಾನೆ, ಬ್ಯಾಂಕ್ ಠೇವಣಿಯಿಂದ ಹೇಳಿಕೊಳ್ಳುವಂತಹ ವರಮಾನ ಬರದಿದ್ದರೂ ಸಹ. ಈಗ, ಷೇರು ಬೆಲೆಗಳು ಶೇ.10ರಷ್ಟು ಕುಸಿತವಾದರೆ, ಸಣ್ಣ ಹೂಡಿಕೆದಾರನಿಗೆ ತನ್ನ ಸಂಪತ್ತಿನಲ್ಲಿ ಶೇ.10ರಷ್ಟು ಖೋತಾ ಆಗುತ್ತದೆ. ಆದರೆ, ಶ್ರೀಮಂತನಿಗೆ ತನ್ನ ಸಂಪತ್ತಿನ ಕೇವಲ ಶೇ.5ರಷ್ಟು (ಅಂದರೆ, ತನ್ನ ಸಂಪತ್ತಿನ ಅರ್ಧ ಭಾಗದ 10% = 50,000) ನಷ್ಟವಾಗುತ್ತದೆ. ಈ ನಷ್ಟವನ್ನು ಶ್ರೀಮಂತನು ನುಂಗಿಕೊಳ್ಳಬಹುದು; ಸಣ್ಣ ಹೂಡಿಕೆದಾರ ನಷ್ಟವನ್ನು ನುಂಗಿಕೊಳ್ಳಲಾರ. ಹತಾಶೆಗೊಳಗಾದ ಸಣ್ಣ ಹೂಡಿಕೆದಾರನು ಇನ್ನು ಮುಂದೆ ಉಂಟಾಗಬಹುದಾದ ನಷ್ಟವನ್ನು ಕಡಿಮೆಮಾಡಿಕೊಳ್ಳುವ ಉದ್ದೇಶದಿಂದ ತನ್ನ ಷೇರುಗಳನ್ನು ಸಿಕ್ಕಷ್ಟು ಬೆಲೆಗೆ ಮಾರುತ್ತಾನೆ. ಅತಿ ಕಡಿಮೆ ಬೆಲೆಗೆ ದೊರಕುವ ಈ ಷೇರುಗಳನ್ನು ಶ್ರೀಮಂತನು ಕೊಳ್ಳುತ್ತಾನೆ ಮತ್ತು ಮಾರುಕಟ್ಟೆ ಹೆಚ್ಚು ಅನುಕೂಲಕರವಾಗುವವರೆಗೆ ಅವುಗಳನ್ನು ಹಿಡಿದಿಟ್ಟುಕೊಳ್ಳುತ್ತಾನೆ.
ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಷೇರು ಮಾರುಕಟ್ಟೆಯ ಏರಿಳಿತಗಳು ಸಾಮಾನ್ಯವೇ. ಆದರೆ, ಒಂದು ಬಿಕ್ಕಟ್ಟು ಯಾವುದೇ ಕಾರಣದಿಂದ ಉಂಟಾಗಿರಲಿ, ಆ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾರುಕಟ್ಟೆಯ ಕುಸಿತವು ತೀವ್ರವಾಗಿಯೇ ಇರುತ್ತದೆ. ಇಂತಹ ಸಂದರ್ಭಗಳಿಗಾಗಿಯೇ ಹದ್ದಿನಂತೆ ಕಾಯುತ್ತಿರುತ್ತಾರೆ ದೊಡ್ಡ ಹೂಡಿಕೆದಾರರು, ಸಣ್ಣ ಪುಟ್ಟ ಹೂಡಿಕೆದಾರರನ್ನು ನುಂಗಲು. ಬಿಕ್ಕಟ್ಟಿನ ಅವಧಿಯಲ್ಲಿ, ಹಗೆ ತೀರಿಸಿಕೊಳ್ಳುವ ರೀತಿಯಲ್ಲಿ ಬಂಡವಾಳವು ಕೇಂದ್ರೀಕೃತವಾಗುತ್ತದೆ.
ಸಣ್ಣ ಮೀನನ್ನು ದೊಡ್ಡ ಮೀನು ನುಂಗುವ ಹಾಗೆ, ಸಣ್ಣ ಪುಟ್ಟ ಸಂಪತ್ತನ್ನು ಹೊಂದಿರುವವರನ್ನು ನುಂಗುವ ಈ ಇಡೀ ಪ್ರಕ್ರಿಯೆಯು, ಕಿರು ಉತ್ಪಾದಕರನ್ನು ನುಂಗುವ ಬಂಡವಾಳದ ಆದಿಮ ಶೇಖರಣೆಯನ್ನು ನೆನಪಿಸುತ್ತದೆ. ಸಂಪತ್ತು ಹೊಂದಿದ ಬಲಾಢ್ಯರು ಸಣ್ಣ ಪುಟ್ಟ ಹೂಡಿಕೆದಾರರಿಂದ 100 ರೂ. ಬೆಲೆಯ ಷೇರುಗಳನ್ನು ಪ್ರಾಮಾಣಿಕವಾಗಿ 100 ರೂ.ಗಳಿಗೇ ಖರೀದಿಸಿದರೆ, ಅದರಿಂದ ಅವರಿಗೆ ನಿವ್ವಳ ಲಾಭವಿಲ್ಲ. ಇಂತಹ ಖರೀದಿಗೆ ಅವರು ಹಣ ಪಾವತಿಸಲು ತಮ್ಮ ಬಳಿ ಇರುವ ನಗದು ಹಣವನ್ನು ಬಳಸಿಕೊಳ್ಳಬೇಕು ಅಥವಾ ಬ್ಯಾಂಕ್ ಗಳಿಂದ ಸಾಲ ಪಡೆಯಬೇಕಾಗುತ್ತದೆ ಅಥವಾ ಅವರು ಹೊಂದಿರುವ ಒಂದು ಸ್ವತ್ತಿನ ಮಾರಾಟ ಮಾಡಬೇಕಾಗುತ್ತದೆ. ಯಾವುದನ್ನು ಆಯ್ಕೆ ಮಾಡಿಕೊಂಡರೂ, ಅವರು ಹೊಂದಿರುವ ಆಸ್ತಿಗಳ ಮೌಲ್ಯದಲ್ಲಿ ಹೆಚ್ಚಳವಾಗುವುದಿಲ್ಲ. ಆದರೆ, ಷೇರು ಬೆಲೆ ಕುಸಿತದಿಂದಾಗಿ 100 ಮೌಲ್ಯದ ಷೇರುಗಳನ್ನು ಕೇವಲ 50 ರೂ ಗಳಿಗೆ ಖರೀದಿಸಿದರೆ, ಮತ್ತು ಈ 50 ರೂ ಗಳನ್ನು ಒಂದು ಬ್ಯಾಂಕಿನಿAದ ಸಾಲ ಪಡೆದರೆ, ಷೇರು ಬೆಲೆಗಳು ತಮ್ಮ ನೈಜ ಮೌಲ್ಯಕ್ಕೆ ಚೇತರಿಕೆಯಾದಾಗ, ಶ್ರೀಮಂತರ ನಿವ್ವಳ ಆಸ್ತಿಯ ಮೌಲ್ಯವು (net worth) 50 ರೂ ಗಳಷ್ಟು ವಿಸ್ತರಣೆಯಾಗುತ್ತದೆ. ಹೋಲಿಕೆಯ ದೃಷ್ಟಿಯಲ್ಲಿ ಈ ಕ್ರಮವು ಬಂಡವಾಳದ ಆದಿಮ ಶೇಖರಣೆಗೆ ಸಮನಾಗಿದೆ.
ಸಾಂಕ್ರಾಮಿಕದ ಕಾಲದಲ್ಲಿ ಕೆಲವೇ ಮಂದಿಯ ಬಳಿ ಸೇರಿಕೊಳ್ಳುವ ಸಂಪತ್ತಿನ ದಟ್ಟಣೆಯು (wealth concentration) ಬಂಡವಾಳಶಾಹಿ ವ್ಯವಸ್ಥೆಗೆ ಹೊಂದಿಕೊಳ್ಳದ ಒಂದು ವಿದ್ಯಮಾನ ಎಂದು ಯುಬಿಎಸ್ ವಕ್ತಾರರು ಹೇಳಿದ್ದಾರೆ. ಅವರು ಇದಕ್ಕಿಂತ ಹೆಚ್ಚಿನ ಒಂದು ಅಪಚಾರವನ್ನು ಎಸಗುವುದು ಸಾಧ್ಯವಿಲ್ಲ. ಸಂಪತ್ತಿನ ದಟ್ಟಣೆಯ ಈ ವಿದ್ಯಮಾನವು ಬಂಡವಾಳಶಾಹಿಯ ತರ್ಕಕ್ಕೆ ಸಂಪೂರ್ಣವಾಗಿ ಅನುಗುಣವಾಗಿದೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬಿಕ್ಕಟ್ಟನ್ನುಂಟುಮಾಡುವ ಪ್ರತಿಯೊಂದು ಮಾನವ ದುರಂತವೂ ಈಗ ತಾನೇ ನಿರೂಪಿಸಿದ ವಿಧಾನದ ಮೂಲಕ ಸಂಪತ್ತಿನ ದಟ್ಟಣೆಯನ್ನು ಹೆಚ್ಚಿಸುವ ಒಂದು ಸಂದರ್ಭವಾಗಿ ಪರಿಣಮಿಸುತ್ತದೆ.
ಈ ಸ್ವಿಸ್ ಬ್ಯಾಂಕ್ ಮೂಲದ ಪ್ರಕಾರ, ಇದೇ ಅವಧಿಯಲ್ಲಿ, ಭಾರತವೂ ಸೇರಿದಂತೆ ದೇಶ ದೇಶಗಳಲ್ಲಿ ಸಂಪತ್ತಿನ ದಟ್ಟಣೆಯ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಭಾರತದ ಬಿಲಿಯನೇರ್‌ಗಳ ಸಂಪತ್ತು ಶೇ.35ರಷ್ಟು ಏರಿಕೆಯಾಗಿ 423 ಶತಕೋಟಿ ಡಾಲರ್‌ಗೆ ತಲುಪಿದೆ (ದಿ ವೈರ್, ಅಕ್ಟೋಬರ್ 16). ಈ ಅವಧಿಯಲ್ಲಿ, ಉತ್ಪಾದನೆ (ಜಿಡಿಪಿ) ಕಾಲು ಭಾಗದಷ್ಟು ಕುಗ್ಗಿದೆ. ಅದೇ ರೀತಿಯಲ್ಲಿ ಉದ್ಯೋಗಗಳೂ ಕುಸಿದಿವೆ. ಪರಸ್ಪರ ವಿರುದ್ಧವಾಗಿರುವ ಈ ಅಂಶಗಳು ಬಂಡವಾಳಶಾಹಿಯ ಕಾರ್ಯವೈಖರಿಯ ಹೆಗ್ಗುರುತುಗಳಾಗಿವೆ.
ಅನು: ಕೆ.ಎಂ.ನಾಗರಾಜ್