ಗೋಧ್ರಾ : ಅತ್ಯಾಚಾರ ಅಪರಾಧಿಗಳು ಮತ್ತು ಜೀವಾವಧಿ ಶಿಕ್ಷೆಗೆ ಒಳಗಾದವರ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಬಾರದು ಎಂದು ಕೇಂದ್ರ ಸರ್ಕಾರವು ಹೊರಡಿಸಿದ್ದ ಮಾರ್ಗಸೂಚಿಯನ್ನು ಗುಜರಾತ್ ಸರ್ಕಾರವು ಗಾಳಿಗೆ ತೂರಿದೆ.
ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಮತ್ತು ಅವರ ಕುಟುಂಬದ 7 ಮಂದಿಯ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಕೈದಿಗಳಿಗೆ ಗುಜರಾತ್ ಸರ್ಕಾರವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನದಂದು ಶಿಕ್ಷೆ ಅವಧಿ ಕಡಿತಗೊಳಿಸಿ, ಬಿಡುಗಡೆ ಮಾಡಿದೆ. ಗುಜರಾತ್ ಸರಕಾರದ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಘಟನೆಯ ಹಿನ್ನಲೆ : ಗುಜರಾತ್‌ನ ಗೋಧ್ರಾ ಗಲಭೆಯ ನಂತರ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಎಂಬವರ ಮೇಲೆ ಸಾಮೂಹಿಕ ಅತ್ಯಾಚಾರವಾಗಿತ್ತು. ಈ ಹಿಂಸಾಚಾರದಲ್ಲಿ ಇವರ ಕುಟುಂಬದ ಏಳು ಮಂದಿ ಸಾವನ್ನಪ್ಪಿದರು.
ಪ್ರಕರಣ ಸಂಬಂಧ ಜನವರಿ 21, 2008 ರಂದು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆರೋಪಿಗಳ ಮೇಲೆ ಬಿಲ್ಕಿಸ್ ಬಾನು ಅತ್ಯಾಚಾರ ಮತ್ತು ಅವರ ಕುಟುಂಬದ ಏಳು ಸದಸ್ಯರನ್ನು ಕೊಂದ ಆರೋಪ ಇತ್ತು. ನಂತರ ಬಾಂಬೆ ಹೈಕೋರ್ಟ್ ಈ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿತ್ತು.
ಜೀವಾವಧಿ ಶಿಕ್ಷೆಗೆ ಗುರಿಯಾದ ಈ ಎಲ್ಲ ಅಪರಾಧಿಗಳು 15 ವರ್ಷ ಸೆರೆವಾಸ ಅನುಭವಿಸಿದ್ದರು. ಈ ಬಳಿಕ , ಖೈದಿಯೊಬ್ಬ ತನ್ನನ್ನು ಶೀಘ್ರ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಈ ಬಗ್ಗೆ ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಗುಜರಾತ್ ಸರ್ಕಾರ ಪಂಚಮಹಲ್ ನ ಜಿಲ್ಲಾಧಿಕಾರಿ ಸುಜಲ್ ಮೇತ್ರಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತು. ಈ ಸಮಿತಿಯು ಈ ಎಲ್ಲ 11 ಆರೋಪಿಗಳಿಗೆ ಕ್ಷಮಾದಾನ ನೀಡಲು ಸರ್ವಾನುಮತದಿಂದ ನಿರ್ಧರಿಸಿ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳಿಸಿತ್ತು. ಈ ಸಂಬಂಧ ಎಲ್ಲರನ್ನೂ ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿತ್ತು.
ವ್ಯಾಪಕ ಆಕ್ರೋಶ : ಅಪರಾಧಿಗಳನ್ನು ಸ್ವಾಂತಂತ್ರ್ಯದ ದಿನವೇ ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ಕ್ರಮವನ್ನು ವಿರೋಧ ಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಖಂಡಿಸಿದ್ದಾರೆ.
ಅತ್ಯಾಚಾರ, ಕೊಲೆ, ಭ್ರಷ್ಟಾಚಾರದ ಶಿಕ್ಷೆಗೆ ಒಳಪಟ್ಟ ಖೈದಿಗಳಿಗೆ ಕ್ಷಾಮಾಭಿಕ್ಷೆ ಬೇಡಿದರೂ ಬಿಡುಗಡೆ ಮಾಡಬಾರದು ಎಂದು 2018 ರಲ್ಲಿ ಕೇಂದ್ರ ಸರಕಾರ ಆದೇಶ ಹೊರಡಿಸಿತ್ತು. ನಿಜ ಸ್ಥಿತಿ ಹೀಗಿರುವಾಗ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ, ಕೊಲೆಯ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಖೈದಿಗಳನ್ನು ಬಿಡುಗಡೆ ಮಾಡಿದ್ದು ಆತಂಕದ ವಿಚಾರ ಎಂದು ಮಹಿಳಾ ಸಂಘಟನೆಗಳು ಆರೋಪಿಸಿವೆ.
ಕೈದಿಗಳನ್ನು ಬಿಡುಗಡೆ ಮಾಡಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ‘ನಾರಿಶಕ್ತಿ’ಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಿದ ಕೆಲವೇ ಗಂಟೆಗಳಲ್ಲಿ ಗುಜರಾತ್ ಸರ್ಕಾರ ಈ ಕ್ರಮಕೈಗೊಂಡಿದೆ. ಇದು ಬಿಜೆಪಿಯ ಮನಃಸ್ಥಿತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಖೈದಿಗಳ ಬಿಡುಗಡೆಗೆ ಸಿಪಿಐಎಂ ಆಕ್ರೋಶ ವ್ಯಕ್ತಪಡಿಸಿದ್ದು, ಕೊಲೆಗಾರರು, ಅತ್ಯಾಚಾರಿಗಳು ಬಿಡುಗಡೆಯಾಗುತ್ತಾರೆ. ನ್ಯಾಯಕ್ಕಾಗಿ ಹೋರಾಡಿದ ತೀಸ್ತಾ ಸೆಟಲ್‌ವಾಡ್ ಅವರು ಜೈಲಿನಲ್ಲಿದ್ದಾರೆ. ಇದು ನವ ಭಾರತದ ನಿಜವಾದ ಮುಖ ಎಂದು ಖಾರವಾಗಿ ಟೀಕಿಸಿದೆ.
ಹಾಗಾಗಿ ಕೂಡಲೇ ಕೇಂದ್ರ ಸರಕಾರ, ಗುಜರಾತ್ ಸರಕಾರದ ತೀರ್ಮಾನವನ್ನು ರದ್ದು ಮಾಡಬೇಕು ಎಂದು ಜನಪರ ಸಂಘಟನೆಗಳು ಒತ್ತಾಯಿಸಿವೆ.