ನವದೆಹಲಿ: ತನ್ನ ಮೇಲೆ ಅತ್ಯಾಚಾರ ಎಸಗಿದ 11 ಅಪರಾಧಿಗಳ ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್‌ನ ತೀರ್ಪಿನ ಬಗ್ಗೆ ಸಂತ್ರಸ್ಥೆ ಬಿಲ್ಕಿಸ್ ಬಾನೋ ಅವರು ಪ್ರತಿಕ್ರಿಯಿಸಿದ್ದು, “ಸುಪ್ರೀಂಕೋರ್ಟ್ ತೀರ್ಪು ಸಮಾಧಾನ ತಂದಿದ್ದು, ಈಗ ಮತ್ತೆ ಉಸಿರಾಡುವಂತಾಯಿತು” ಎಂದು ಹೇಳಿದ್ದಾರೆ. ತಮ್ಮ ವಕೀಲೆ ಶೋಭಾ ಗುಪ್ತಾ ಅವರ ಮೂಲಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ಇಂದು ನನಗೆ ನಿಜವಾಗಿಯೂ ಹೊಸ ವರ್ಷ” ಎಂದು ಸುಪ್ರೀಂ ಕೋರ್ಟ್ ತೀರ್ಪಿಗೆ ಧನ್ಯವಾದ ತಿಳಿಸಿದ್ದಾರೆ.
“ನಾನು ಸಮಾಧಾನದಿಂದ ಕಣ್ಣೀರು ಹಾಕಿದೆ. ಒಂದೂವರೆ ವರ್ಷದಲ್ಲಿ ನಾನು ಮೊದಲ ಬಾರಿಗೆ ನಗುತ್ತಿದ್ದೇನೆ. ನಾನು ನನ್ನ ಮಕ್ಕಳನ್ನು ತಬ್ಬಿಕೊಂಡಿದ್ದೇನೆ. ನನ್ನ ಎದೆಯಿಂದ ಪರ್ವತ ಗಾತ್ರದ ಕಲ್ಲು ಎತ್ತಿ ಆಚೆ ಇಟ್ಟಂತೆ ಭಾಸವಾಗುತ್ತಿದೆ. ನಾನು ಮತ್ತೆ ಉಸಿರಾಡುವಂತಾಯಿತು. ಇದು ನ್ಯಾಯ ಅನ್ನಿಸುತ್ತದೆ. ನನಗೆ, ನನ್ನ ಮಕ್ಕಳು ಮತ್ತು ಮಹಿಳೆಯರಿಗೆ ಎಲ್ಲೆಡೆ ಈ ಸಮರ್ಥನೆಯನ್ನು ನೀಡಿದ್ದಕ್ಕಾಗಿ ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ಗೆ ನಾನು ಧನ್ಯವಾದ ಸಲ್ಲಿಸುತ್ತಿದ್ದೇನೆ” ಎಂದು ಬಿಲ್ಕಿಸ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಸಲಹೆ ನೀಡಿ ಎಂದು ತಪ್ಪಾದ ಇಮೈಲ್ ನೀಡಿದ ಕೇಂದ್ರ ಸರ್ಕಾರ!
ಕಳೆದ 20 ವರ್ಷಗಳಿಂದ ತಮಗೆ ಬೆಂಬಲ ನೀಡಿದ್ದಕ್ಕಾಗಿ ಮತ್ತು ತಮ್ಮ ಪರವಾಗಿ ನಿಂತಿದ್ದಕ್ಕಾಗಿ ತನ್ನ ಕುಟುಂಬ, ಸ್ನೇಹಿತರು ಮತ್ತು ವಕೀಲರಿಗೆ ಬಿಲ್ಕೀಸ್ ಬಾನೋ ಅವರು ಧನ್ಯವಾದ ಅರ್ಪಿಸಿದ್ದಾರೆ. “ನಾನು ಮೊದಲೇ ಹೇಳಿದ್ದೇನೆ ಮತ್ತು ಇಂದು ಮತ್ತೆ ಹೇಳುತ್ತೇನೆ, ನನ್ನಂತಹ ಪ್ರಯಾಣಗಳನ್ನು ಎಂದಿಗೂ ಏಕಾಂಗಿಯಾಗಿ ಮಾಡಲಾಗುವುದಿಲ್ಲ. ನನ್ನ ಪಕ್ಕ ನನ್ನ ಪತಿ ಮತ್ತು ನನ್ನ ಮಕ್ಕಳು ಇದ್ದಾರೆ. ಅಂತಹ ದ್ವೇಷದ ಸಮಯದಲ್ಲಿ ನನಗೆ ತುಂಬಾ ಪ್ರೀತಿಯನ್ನು ನೀಡಿದ ನನ್ನ ಸ್ನೇಹಿತರನ್ನು ನಾನು ಹೊಂದಿದ್ದೇನೆ” ಎಂದು ಬಿಲ್ಕಿಸ್ ಹೇಳಿದ್ದಾರೆ.
“ನನ್ನ ಪ್ರತಿ ಕಷ್ಟದ ತಿರುವಿನಲ್ಲಿ ನನ್ನ ಕೈಯನ್ನು ಅವರು ಹಿಡಿದಿದ್ದಾರೆ. ವಕೀಲ ಶೋಭಾ ಗುಪ್ತಾ ಅವರಂತಹ ಅಸಾಧಾರಣ ವಕೀಲರನ್ನು ನಾನು ಹೊಂದಿದ್ದು, ಅವರು 20 ವರ್ಷಗಳ ಕಾಲ ನನ್ನೊಂದಿಗೆ ಅಚಲವಾಗಿ ನಡೆದುಕೊಂಡಿದ್ದಾರೆ. ನ್ಯಾಯದ ಕಲ್ಪನೆಯಲ್ಲಿ ಭರವಸೆ ಕಳೆದುಕೊಳ್ಳಲು ಅವರು ನನಗೆ ಎಂದಿಗೂ ಅವಕಾಶ ನೀಡಲಿಲ್ಲ” ಎಂದು ಬಿಲ್ಕೀಸ್ ಬಾನೋ ಅವರು ಹೇಳಿದ್ದಾರೆ.
ದುಷ್ಕರ್ಮಿಗಳ ಬಿಡುಗಡೆ ತನ್ನನ್ನು ಭಾವನಾತ್ಮಕವಾಗಿ ಕುಗ್ಗಿಸಿತ್ತು ಎಂದು ಹೇಳಿದ ಅವರು, ಆದರೆ ನಂತರ ತನಗೆ ಸಿಕ್ಕ ಬೆಂಬಲ ಧೈರ್ಯವನ್ನು ಮರಳಿ ನೀಡಿತು ಎಂದು ಅವರು ಹೇಳಿದ್ದಾರೆ. “ಸಾವಿರಾರು ಜನರು PIL ಅರ್ಜಿಗಳ ಮೂಲಕ ಮತ್ತು ಬಹಿರಂಗ ಪತ್ರಗಳ ರೂಪದಲ್ಲಿ ನನ್ನನ್ನು ಬೆಂಬಲಿಸಲು ಮುಂದೆ ಬಂದರು” ಎಂದು ಅವರು ಹೇಳಿದ್ದಾರೆ.
2002 ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೋ ಮತ್ತು ಅವರ ಕುಟುಂಬದವರ ಹತ್ಯೆಯಲ್ಲಿ ಭಾಗಿಯಾಗಿದ್ದ 11 ಅಪರಾಧಿಗಳ ಶಿಕ್ಷೆಯನ್ನು ಮತ್ತು ಬಿಡುಗಡೆಯನ್ನು ಸುಪ್ರೀಂ ಕೋರ್ಟ್ ಜನವರಿ 8 ರಂದು ರದ್ದುಗೊಳಿಸಿತು. ಎಲ್ಲಾ 11 ಅತ್ಯಾಚಾರ ಅಪರಾಧಿಗಳು ಎರಡು ವಾರಗಳಲ್ಲಿ ಮತ್ತೆ ಜೈಲಿಗೆ ಶರಣಾಗುವಂತೆ ಕೋರ್ಟ್ ಸೂಚಿಸಿದೆ.
ವಿಡಿಯೊ ನೋಡಿ: ಕಲಾಸಕ್ತರ ಕಣ್ಮನ ತಣಿಸಿದ ಚಿತ್ರಸಂತೆ : ಹರಿದು ಬಂದ ಕಲಾ ಪ್ರೇಮಿಗಳ ಸಾಗರ Janashakthi Media