ನವದೆಹಲಿ: ಬಿಲ್ಕಿಸ್ ಬಾನೊ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿನ ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನ್ಯಾಯಪೀಠ ಪರಿಗಣಿಸಿದೆ.
2002ರ ಗುಜರಾತ್ ಗಲಭೆಯ ವೇಳೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೊ ಅರ್ಜಿಯನ್ನು ಸಲ್ಲಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠಕ್ಕೆ ಬಿಲ್ಕಿಸ್ ಬಾನೊ ಪರ ವಕೀಲೆ ಶೋಭಾ ಗುಪ್ತಾ ಈ ವಿಷಯವನ್ನು ಪ್ರಸ್ತಾಪಿಸಿ, ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರು ಈಗ ಸಂವಿಧಾನ ಪೀಠದ ಭಾಗವಾಗಿರುವುದರಿಂದ ಈ ವಿಷಯವನ್ನು ಆಲಿಸುವ ಸಾಧ್ಯತೆಗಳು ಕಡಿಮೆ ಎಂದಿದ್ದಾರೆ.
ಮರು ಪರಿಶೀಲನಾ ಅರ್ಜಿಯನ್ನು ಮೊದಲು ಆಲಿಸಬೇಕು ಮತ್ತು ಅದು ನ್ಯಾಯಮೂರ್ತಿ ರಸ್ತೋಗಿ ಅವರ ಮುಂದೆ ವಿಚಾರಣೆಗೆ ಬರಲಿ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಹೇಳಿದರು. ಈ ವಿಷಯವನ್ನು ತೆರೆದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದು ಗುಪ್ತಾ ಮನವಿ ಮಾಡಿದರು. ಇದನ್ನು ನ್ಯಾಯಾಲಯ ಮಾತ್ರ ನಿರ್ಧರಿಸಬಹುದು ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ.
ಬಿಲ್ಕಿಸ್ ಬಾನೊ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿನ ಅಪರಾಧಿಗಳ ಕ್ಷಮಾಪಣೆ ಬಗ್ಗೆ ನಿರ್ಧರಿಸಲು ಗುಜರಾತ್ ಸರ್ಕಾರಕ್ಕೆ ಅವಕಾಶ ನೀಡುವ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವೂ ಬಾನೊ ಅವರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.
1992ರ ಕ್ಷಮಾಪಣಾ ನೀತಿ ಅನ್ವಯ 11 ಅಪರಾಧಿಗಳ ಬಿಡುಗಡೆಯನ್ವಯ ಗುಜರಾತ್ ಸರ್ಕಾರ ಕಳೆದ ಆಗಸ್ಟ್ 15 ಸ್ವಾತಂತ್ರ್ಯ ದಿನದಂದು 11 ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡಿತು. ಕೇಂದ್ರ ಸರ್ಕಾರವು ಬಿಡುಗಡೆಯನ್ನು ತ್ವರಿತವಾಗಿ ಜಾರಿಗೊಳಿಸಿತು. ಒಂದು ವೇಳೆ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳ ಬಿಡುಗಡೆಯನ್ನು ನಿರ್ಬಂಧಿಸುವ 2014ರ ಹೊಸ ನೀತಿಯನ್ನು ಗುಜರಾತ್ ಸರ್ಕಾರ ಅನುಸರಿಸಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ.
ಈ ಕ್ರಮವು ರಾಷ್ಟ್ರವ್ಯಾಪಿ ಭಾರೀ ಆಕ್ರೋಶವನ್ನು ಹುಟ್ಟುಹಾಕಿತ್ತು. ಅದರಲ್ಲೂ ವಿಶೇಷವಾಗಿ ಅತ್ಯಾಚಾರಿಗಳು ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ವೇಳೆ ಹಿಂದೂ ಸಂಘಟನೆ ಸದಸ್ಯರು ಅವರನ್ನು ವೀರರಂತೆ ಹಾರ ಹಾಕಿ ಸ್ವಾಗತಿಸುತ್ತಿರುವ ಚಿತ್ರ ವೈರಲ್ ಆಗಿ ಅಪಾರ ಟೀಕೆಗಳು ಕೇಳಿಬಂದಿದ್ದವು.