ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳ ಬಿಡುಗಡೆ: ಕೇಂದ್ರ-ಗುಜರಾತ್ ಸರ್ಕಾರಕ್ಕೆ ನೋಟಿಸ್‌ ನೀಡಿದ ಸುಪ್ರೀ ಕೋರ್ಟ್‌

ನವದೆಹಲಿ: 2002ರಲ್ಲಿ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದವರ ಹತ್ಯೆ ಪ್ರಕರಣದ 11 ಮಂದಿ ಅಪರಾಧಿಗಳಿಗೆ ಸನ್ನಡತೆ ಆಧಾರವೆಂದು ಉಲ್ಲೇಖಿಸಿ ಕ್ಷಮಾದಾನ ನೀಡಿ ಜೈಲಿನಿಂದ ಬಿಡುಗಡೆ ಮಾಡಿರುವ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಗುಜರಾತ್‌ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದೆ.

ಎರಡು ವಾರಗಳೊಳಗೆ ಪ್ರತಿಕ್ರಿಯೆ ನೀಡಬೇಕೆಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಅಜಯ್ ರಾಸ್ಟೊಗಿ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ಎರಡು ವಾರಗಳ ನಂತರ ಪ್ರಕರಣದ ವಿಚಾರಣೆಯನ್ನು ಮತ್ತೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಅಪರಾಧ ಭಯಾನಕವಾಗಿದ್ದು, ಕ್ಷಮಾಪಣೆ ತಪ್ಪಿನಿಂದ ಕೂಡಿದೆ ಎಂದು ನ್ಯಾಯಮೂರ್ತಿ ರಾಸ್ಟೋಗಿ ಹೇಳಿದರು.

ಅಪರಾಧಿಗಳಿಗೆ ಕ್ಷಮಾದಾನ ಪ್ರಶ್ನಿಸಿ ಸಿಪಿಐ(ಎಂ) ಪಕ್ಷದ ಪಾಲಿಟ್‌ಬ್ಯೂರೋ ಸದಸ್ಯೆ ಹಾಗೂ ಮಾಜಿ ಸಂಸದೆ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲಾಲ್ ಮತ್ತು ಪ್ರೊ. ರೂಪ ರೇಖಾ ವರ್ಮಾ ಅವರು ಜಂಟಿ ಅರ್ಜಿಯ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಗರ್ಭಿಣಿ  ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಸುಮಾರು 14 ಜನರ ಹತ್ಯೆಯಾಗಿದೆ. ಆದಾಗ್ಯೂ, ಯಾವ ತತ್ವದ ಆಧಾರದ ಮೇಲೆ ಅಪರಾಧಿಗಳಿಗೆ ಕ್ಷಮಾಪಣೆ ನೀಡಲಾಗಿದೆ ಎಂದು ಪ್ರಶ್ನಿಸಿದರು.

2002ರಲ್ಲಿ ಗೋಧ್ರಾ ಹತ್ಯಾಕಾಂಡ ಸಮಯದಲ್ಲಿ ಗರ್ಭಿಣಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಗುಜರಾತಿನಲ್ಲಿ ಸಂಭವಿಸಿದ ಭೀಕರ ಗಲಭೆಯ ಸಮಯದಲ್ಲಿ ಹಿಂಸಾಚಾರದಿಂದ ತಪ್ಪಿಸಿಕೊಳ್ಳುತ್ತಿದ್ದಾಗ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅಪರಾಧಿಗಳು ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಸದಸ್ಯರನ್ನು ಸಹ ಕೊಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಎದುರಿಸಿದ್ದ 11 ಮಂದಿ ಅಪರಾಧಿಗಳನ್ನು ಸ್ವಾತಂತ್ರ್ಯ ದಿನದಂದು ಅದರಲ್ಲೂ ವಿಶೇಷವಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಪರಾಧಿಗಳ ಬಿಡುಗಡೆ ಮಾತ್ರವಲ್ಲದೇ, ಅವರಿಗೆ ಅಭಿನಂದಿಸಿದ್ದು ಕೂಡ ವ್ಯಾಪಕ ಅಕ್ರೋಶವನ್ನು ಹುಟ್ಟುಹಾಕಿದೆ.

ಇತ್ತೀಚೆಗೆ, 6,000 ಕ್ಕೂ ಹೆಚ್ಚು ನಾಗರಿಕರು ಸಂಘಟನೆಯ ಕಾರ್ಯಕರ್ತರು ಸೇರಿದಂತೆ ಅಪರಾಧಿಗಳು ಜೈಲಿನಿಂದ ಹೊರಬರುವ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದಾರೆ. 2009ರಲ್ಲಿ ಅತ್ಯಾಚಾರಿ ಅರೋಪಿಗಳಾದ 11 ಪುರುಷರಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರಲ್ಲಿ ಒಬ್ಬರಾದ ನಿವೃತ್ತ ನ್ಯಾಯಮೂರ್ತಿ ಉಮೇಶ್ ಸಾಲ್ವಿ ಸಹ ಕಾರ್ಯಕ್ರಮವೊಂದರಲ್ಲಿ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.

Donate Janashakthi Media

Leave a Reply

Your email address will not be published. Required fields are marked *