ವೇದರಾಜ ಎನ್ ಕೆ
ಅಕ್ಟೋಬರ್ 21 ರಂದು ದೇಶದಲ್ಲಿ ಕೊವಿಡ್-19ರ ವಿರುದ್ಧ ಲಸಿಕೆ ನೀಡಿಕೆಯಲ್ಲಿ 100 ಕೋಟಿ ಡೋಸ್‍ಗಳ ಇನ್ನೊಂದು ಮೈಲಿಗಲ್ಲನ್ನು ದಾಟಿದುದರ ‘ಆಚರಣೆ’ಯನ್ನು ಜೋರಾಗಿಯೇ ನಡೆಸಲಾಯಿತು. ಅಂದು ದೇಶದ ಪ್ರಮುಖ ಇಂಗ್ಲಿಷ್ ದಿನಪತ್ರಿಕೆಗಳಲ್ಲಿ ಪ್ರಧಾನ ಮಂತ್ರಿಗಳ ಲೇಖನ ಪ್ರಕಟವಾದವು. ಅದರ ಶೀರ್ಷಿಕೆ- “ಆಪತ್ತಿಗೆ ಸ್ಪಂದನೆ ಸಾಧನೆಯೊಂದಿಗೆ”.
ಕೇವಲ 9 ತಿಂಗಳಲ್ಲಿಇಲ್ಲಿಗೆ ತಲುಪಿರುವುದು ಒಂದು ಸಾಧನೆ, ದೇಶದ ಸಾಮರ್ಥ್ಯದ ಪ್ರತಿಬಿಂಬ ಎಂದು ಪ್ರಧಾನಿಗಳು ಹೇಳಿದ್ದಾರೆ. ಆದರೆ ಈ ಬಗ್ಗೆ ಹಲವರಿಗೆ ಸಂದೇಹವಿದೆ.
“ಅರೆ ವ್ಹಾ,ನೂರು!… ಎಷ್ಟರಲ್ಲಿ? ಇನ್ನೂರ ಅರವತ್ತರಲ್ಲಿ ಅಲ್ಲವೇ?”
( ಶೇಖರ್ ಗುರೇರ, ಕಾರ್ಟೂನಿಸ್ಟ್ಸ್ ಕ್ಲಬ್ ಆಫ್ ಇಂಡಿಯ)
ವಾಸ್ತವವಾಗಿ ಇದು ಬಹಳ ಮೊದಲೇ ಆಗಬೇಕಿತ್ತು, ಅದು ಸಾಧ್ಯವೂ ಇತ್ತು,ದೇಶದ ಸಾಮರ್ಥ‍್ಯವನ್ನು ಸರಿಯಾಗಿ ಬಳಸಿಲ್ಲ ಎಂದು ಹಲವು ಪರಿಣಿತರು ಹೇಳುತ್ತಾರೆ.
ಸರಕಾರವೇ ಸುಪ್ರಿಂ ಕೋರ್ಟಿಗೆ ಕೊಟ್ಟಿರುವ ಆಶ್ವಾಸನೆಯ ಪ್ರಕಾರ ಎಲ್ಲ ವಯಸ್ಕರಿಗೆ ಡಿಸೆಂಬರ್ ಅಂತ್ಯದೊಳಗೆ ಎರಡೂ ಡೋಸ್ ಲಸಿಕೆಯನ್ನು ಹಾಕಿಸುವ ಗುರಿ ಹಾಕಿಕೊಳ್ಳಲಾಗಿತ್ತು. ದೇಶದ ವಯಸ್ಕ ಜನಸಂಖ್ಯೆ94.4 ಕೋಟ ಎನ್ನಲಾಗಿದೆ.ಅಂದರೆ ಇನ್ನು ಎರಡು ತಿಂಗಳಲ್ಲಿ 89 ಕೋಟಿ ಡೋಸುಗಳನ್ನು ಹಾಕಿಸಬೇಕು. ಅಂದರೆ ದಿನಕ್ಕೆ ಸುಮಾರು 1.5 ಕೋಟಿ ಡೋಸುಗಳು. ಆದರೆ ಈಗ ಅದು ದಿನಕ್ಕೆ 40ಲಕ್ಷದ ಸುತ್ತಮುತ್ತವೇ ಇದೆ. ಆದ್ದರಿಂದ ಗುರಿಯನ್ನೇ 100%ದಿಂದ 60%ಕ್ಕೆ ಇಳಿಸಲಾಗಿದೆ ಎಂದೂ ವರದಿಯಾಗಿದೆ. ಹೀಗೇಕೆ ಎಂಬ ವಿಮರ್ಶೆ ಕಾಣ ಬರುತ್ತಿಲ್ಲ.
ಮೂರನೇ ಅಲೆಯ ಭಯ ದೂರ ಸರಿದಂತೆ ಕಾಣುತ್ತದೆ. ಆದರೂ ಸರಕಾರದ ಪ್ರಚಾರದ ಅಲೆಯಂತೂ ಜೋರಾಗಿಯೇ ಇದೆ.
“ಮೂರನೇಯದ್ದೋ, ನಾಲ್ಕನೆಯದ್ದೋ, ನನಗೆ ಲೆಕ್ಕ ತಪ್ಪಿ ಹೋಗಿದೆ!”
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
ಈಗಲೂ(ಅಕ್ಟೋಬರ್ 26) ಲಸಿಕೆಯ ಅಂಕಿ-ಅಂಶಗಳು ಹೀಗಿವೆ:
ಎರಡೂ ಡೋಸ್ ಪಡೆದವರ ಪ್ರಮಾಣ: 22.8%
ಕನಿಷ್ಟ ಒಂದು ಡೋಸ್ ಪಡೆದವರ ಪ್ರಮಾಣ: 52.7%
ಅಂದರೆ ಇನ್ನೂ ಬಹಳ ದೂರ ಸಾಗಬೇಕಾಗಿದೆ.
ಆದ್ದರಿಂದ ಮಾಧ್ಯಮಗಳಲ್ಲಿ ಪ್ರಚಾರದ ಭರಾಟೆಯನ್ನು ನೋಡಿದ ಹಲವರಿಗೆ ನಿಜವಾಗಿ ಇದು ಲೆಕ್ಕಕ್ಕೆ ತಗೊಳ್ಳದ ‘ಮೈಲಿಗಲ್ಲು’ಗಳಿಂದ (ಅಂದರೆ ವಿಫಲತೆಗಳಿಂದ) ಗಮನ ತಿರುಗಿಸುವ ಪ್ರಯತ್ನವಿರಬಹುದೇ ಎಂಬ ಅನುಮಾನ.
ವಲಸೆ ಕಾರ್ಮಿಕರ ವಾಪಸಿ- ಋಣಾತ್ಮಕ ಜಿಡಿಪಿ ಬೆಳವಣಿಗ- ಆಕ್ಸಿಕನ್ ಕೊರತೆ- ಗಂಗೆಯಲ್ಲಿ ಹೆಣಗಳು, ನಿಧಾನಗತಿಯ ಲಸಿಕೆ ಅಭಿಯಾನ-ವಿಪರೀತ ತೆರಿಗೆಗಳು-ಅತಿ ಹೆಚ್ಚು ನಿರುದ್ಯೋಗ-ಶತಕೋಟಿ ಡೋಸು
“ಲೆಕ್ಕ ಕೊಡದ ಮೈಲಿಗಲ್ಲುಗಳು….”
(ಮಂಜುಲ್, ವೈಬ್ಸ್ ಆಫ್ ಇಂಡಿಯ)
***
ಇತ್ತ ಪೆಟ್ರೋಲ್, ಡೀಸೆಲ್ ಬೆಲೆಗಳು ಏರುತ್ತಲೇ ಇವೆ. ಜತೆಗೆ ಬೆಲೆಯೇರಿಕೆಗಳೂ.
(ಪಿ.ಮಹಮ್ಮದ್, ವಾರ್ತಾಭಾರತಿ)
ಆದರೆ ಈ ಬಗ್ಗೆ ಆಳುವವರಿಗೆ ಖೇದವೂ ಉಳಿದಿಲ್ಲ. ಅದನ್ನೂ ಸರಕಾರದ 100 ಕೋಟಿಯ ‘ಸಾಧನೆ’ಯೊಂದಿಗೆ ತಳುಕು ಹಾಕಲಾಗುತ್ತಿದೆ.
ಬೆಲೆಯೇರಿಕೆಗಳ ಬಗ್ಗೆ ಸರಳೀಕೃತ ಕಥನಗಳನ್ನು ಕೊಡಬೇಡಿ ಎಂದು ಪೆಟ್ರೋಲಿಯಂ ಮಂತ್ರಿಗಳು ಉಪದೇಶ ನೀಡಿದ್ದಾರೆ. ಲಸಿಕೀಕರಣಕ್ಕೆ ಮತ್ತು ಸಾಮಾಜಿಕ ಕಲ್ಯಾಣದ ಕೇಂದ್ರೀಯ ಸ್ಕೀಮುಗಳಿಗಾಗಿ ಪಟ್ರೋಲಿಯಂ ಉತ್ಪನ್ನಗಳ ಅಬಕಾರಿ ಸುಂಕ ಏರಿಕೆ ಎಂದು ಆಳುವವರು ಸಮರ್ಥಿಸಿಕೊಳ್ಳಲಾರಂಭಿಸಿದ್ದಾರೆ.
“ಪೆಟ್ರೋಲಿಗೆ 110ರೂ. ಆದರೇನಂತೆ-ಅದನ್ನು ನೋಡಿ”
“ನೂರು ಕೋಟಿ ಲಸಿಕೆಗಳು-ಮೈಲಿಗಲ್ಲು ಸಾಧನೆ”
(ಸುಭಾನಿ, ಡೆಕ್ಕನ್ ಕ್ರಾನಿಕಲ್)
ಆದರೆ ಲಸಿಕೀಕರಣಕ್ಕೆಂದೇ ಬಜೆಟಿನಲ್ಲಿ 35,000 ಕೋಟಿ ರೂ. ಮತ್ತು ವಿವಿಧ ಸಾಮಾಜಿಕ ಕಲ್ಯಾಣ ಸ್ಕೀಮುಗಳಿಗೆಂದೇ 4 ಲಕ್ಷ ಕೋಟಿ ರೂ.ಗಳಷ್ಟು ಮೊತ್ತವನ್ನು ಕೊಡಲಾಗಿದೆಯಲ್ಲಾ, ಅವೆಲ್ಲಾ ಎಲ್ಲಿ ಹೋಗಿವೆ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.
ಅದೇನೇ ಇರಲಿ, ಇದೊಂದು ಮೈಲಿಗಲ್ಲು ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಇದರ ಕೀರ್ತಿ ನಿಜವಾಗಿ ಭಾರತದ ಮೂಲೆ-ಮೂಲೆಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡಬೇಕಾದ ಆರೋಗ್ಯ ಕಾರ್ಯಕರ್ತರಿಗೆ ಸಲ್ಲಬೇಕಾಗಿದೆ ಎನ್ನುವುದರಲ್ಲೂ ಸಂದೇಹವಿಲ್ಲ.
ಒಂದು ಶತಕೋಟಿ ನಮನಗಳು!
(ಸತೀಶ ಆಚಾರ್ಯ, ಫೇಸ್ ಬುಕ್)
***
ಪ್ರಧಾನ ಮಂತ್ರಿಗಳು ತಮ್ಮ ಲೇಖನದಲ್ಲಿ ಹೇಳಿದಂತೆ 130 ಕೋಟಿ ಭಾರತೀಯರ ಐಕ್ಯ ಭಾಗವಹಿಸುವಿಕೆಯ ಮೂಲಕ ಇನ್ನಷ್ಟು ಮೈಲಿಗಲ್ಲುಗಳನ್ನು ದಾಟಿ ಹೋಗಬಹುದು. ಆದರೆ ಈ ಜನಗಳ ಚುನಾಯಿತ ಪ್ರತಿನಿಧಿಗಳೇ, ಅದರಲ್ಲೂ ಆಳುವ ಪಕ್ಷಕ್ಕೆ ಸೇರಿದವರೇ ಈ ಐಕ್ಯತೆಯನ್ನು ಗೋಜಲುಗೊಳಿಸ ಹೊರಟರೆ …?
ಸಾಂಕ್ರಾಮಿಕದ ವಿಷಾಣುವಿಗೆ ದ್ವೇಷದ ವಿಷಾಣುವಿನ ಈ ಉಪದೇಶವನ್ನು ನೋಡಿ:
“ಸಾರಿ, ತಮ್ಮಾ…ನೂರು ಕೋಟಿಗೂ ಹೆಚ್ಚು ಜನಗಳನ್ನು
ಒಡೆಯದೆ ಅವರೊಂದಿಗೆ ಚೆಲ್ಲಾಟ ಸಾಧ್ಯವಿಲ್ಲ ಕಣೋ”
(ಸಂದೀಪ ಅಧ್ವರ್ಯು, ಟೈಮ್ಸ್ ಆಫ್ ಇಂಡಿಯ)
***
ಇಂತಹ ಚೆಲ್ಲಾಟ ಕೇವಲ ಊಹೆಯಲ್ಲ, ಈ ವಾರವೇ ಒಂದಾದ ಮೇಲೊಂದರಂತೆ ಇದರ ಉದಾಹರಣೆಗಳು ಪ್ರಕಟಗೊಂಡಿವೆ.
ಸಿದ್ಧ ಉಡುಪುಗಳ ಒಂದು ಪ್ರಖ್ಯಾತ ಬ್ರಾಂಡ್ ಫೇಬಿಂಡಿಯ ತನ್ನ ದೀಪಾವಳಿ ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಹೊರಡಿಸಿದ ಜಾಹೀರಾತಿಗಾಗಿ ಅದರ ವಿರುದ್ಧ ನಮ್ಮದೇ ರಾಜ್ಯದ ಆಳುವ ಪಕ್ಷದ ಯುವ ಸಂಸದನ ನೇತೃತ್ವದಲ್ಲಿ ಬಹಿಷ್ಕಾರದ ಕೂಗು ಎದ್ದಿತು.
“ಫೇಬಿಂಡಿಯಾದ ಜಶ್ನ್-ಎ-ರಿವಾಝ್ ಭಾರತೀಯ ಪರಂಪರೆಗೆ ಗೌರವ ಸಲ್ಲಿಸುವ ಒಂದು ಸುಂದರ ಸಂಗ್ರಹ, ಇದರೊಂದಿಗೆ ಈ ಬಾರಿಯ ಹಬ್ಬದ ದಿನಗಳಲ್ಲಿ ನಿಮ್ಮಪಾರಂಪರಿಕ ಬೇರುಗಳನ್ನು ಮತ್ತೊಮ್ಮೆ ಗುರುತಿಸಿಕೊಳ್ಳಿ” ಎಂಬುದು ಈ ಜಾಹೀರಾತು
ಜಶ್ನ್-ಎ-ರಿವಾಝ್ ಎಂದರೆ ಉರ್ದುವಿನಲ್ಲಿ ಪರಂಪರೆಯ ಹಬ್ಬ. ಆದರೆ ಈ ಸಂಸದನ ಟ್ವೀಟ್ ಪ್ರಕಾರ “ ದೀಪಾವಳಿ ಜಶ್ನ್-ಎ-ರಿವಾಝ್ ಅಲ್ಲ. ಇದು ಹಿಂದೂ ಹಬ್ಬಗಳನ್ನು ಉದ್ದೇಶಪೂರ್ವಕವಾಗಿ ಅಬ್ರಹಾಮೀಕರಿಸುವ ಪ್ರಯತ್ನ ಜಾಹೀರಾತಿನಲ್ಲಿನ ಮಾಡೆಲುಗಳನ್ನು ಪಾರಂಪರಿಕ ವೇಷ ಭೂಷಣಗಳಲ್ಲಿ ಬಿಂಬಿಸಿಲ್ಲ”
ಇದಕ್ಕೆ ಈ ಸಂಸ್ಥೆ ಆರ್ಥಿಕ ಬೆಲೆ ತೆರಲೇಬೇಕು ಎಂದೂ ಈ ಚುನಾಯಿತ ಪ್ರತಿನಿಧಿ ತನ್ನ ಟ್ವೀಟಿನಲ್ಲಿ ಬೆದರಿಸಿದ್ದರಿಂದ ಫೇಬಿಂಡಿಯಾ ಈ ಜಾಹೀರಾತಿನ್ನು ಹಿಂತೆಗೆದುಕೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
“ನ್ಯೂಇಂಡಿಯ”
ಜಶ್ನ್-ಎ-ತಿಜಾರತ್ ( ವ್ಯಾಪಾರದ ಹಬ್ಬ)
( ಮಂಜುಲ್, ನ್ಯೂಸ್9)
***
ಈ ಜಾಹೀರಾತಿನಲ್ಲಿ ಉರ್ದು ಭಾಷೆಯ ಬಳಕೆ ಈ ಆಕ್ಷೇಪಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ. ಉರ್ದು ಭಾರತದ್ದೇ ಆದ ಒಂದು ಭಾಷೆ, ಯಾವುದೇ ಒಂದು ಧರ್ಮಕ್ಕೆ ಸೀಮಿತವಾದ ಭಾಷೆ ಅಲ್ಲಎಂಬುದನ್ನು ಸ್ವತಃ ಬಿಜೆಪಿಯ ಹಿರಿಯ ಮುಖಂಡರೂ ಆಗಿರುವ ದೇಶದ ಉಪರಾಷ್ಟ್ರಪತಿಗಳೇ ಹೇಳಿರುವುದನ್ನು ಒಬ್ಬ ಲೇಖಕರು( ಮೀನಾ ಆನಂದ್, ಇಂಡಿಯನ್ ಎಕ್ಸ್ ಪ್ರೆಸ್, ಅಕ್ಟೋಬರ್ 24) ನೆನಪಿಸಿದರೆ, ಈ ಸಾಂಸದ “ಹಿಂದೂ ಹಬ್ಬಗಳ ‘ಅಬ್ರಹಾಮೀಕರಣ’ವನ್ನು’ ಆಕ್ಷೇಪಿಸುವುದಾದರೆ, ಭಾರತಕ್ಕೆ ಬೇಕಾಗಿರುವುದು ವೇದಾಂತೀ ಮೆದುಳು ಮತ್ತು ಇಸ್ಲಾಮೀ ಶರೀರ ಎಂದು ಹೇಳಿರುವ ಸ್ವಾಮಿ ವಿವೇಕಾನಂದರನ್ನೂ ಆಕ್ಷೇಪಿಸಬೇಕಾಗುತ್ತದೆ ಎಂದು ಇನ್ನೊಬ್ಬ ಲೇಖಕರು (ಎಸ್.ಎನ್.ಸಾಹು, ನ್ಯೂಸ್ ಕ್ಲಿಕ್, ಅಕ್ಟೋಬರ್ 25) ನೆನಪಿಸಿದ್ದಾರೆ.
ಆದರೆ ಇವರಂತವರಿಗೆ ಬೇಕಾಗಿರುವುದು ನೈಜ ಕಾರಣಗಳಲ್ಲ, ‘ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ’ ನೆಪಗಳಷ್ಟೇ, ಎನ್ನುತ್ತಾರೆ ಈ ವ್ಯಂಗ್ಯ ಚಿತ್ರಕಾರರು.
“ನೀನೇನು ಮಾಡುತ್ತಿದ್ದೀಯಾ?” “ನನ್ನ ಧಾರ್ಮಿಕ ಭಾವನೆಗಳನ್ನು
ಘಾಸಿಗೊಳಿಸುವ ಏನನ್ನಾದರೂ ಹುಡುಕುತ್ತಿದ್ದೇನೆ”
( ಸ್ಯಾನಿಟರಿಪ್ಯಾನಲ್ಸ್, ಫೇಸ್ ಬುಕ್)
***
ಇದಾದ ನಂತರ ದಾಬುರ್ ಎಂಬ ಕಂಪನಿಯ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ಬಲವಂತ ಮಾಡಲಾಗಿದೆ. ಅಕ್ಟೋಬರ್ 24ರಂದು ಮಧ್ಯಪ್ರದೇಶದಲ್ಲಿ ಪ್ರಖ್ಯಾತ ಸಿನೆಮಾ ನಿರ್ದೇಶಕ ಪ್ರಕಾಶ ಝಾ ರವರ ವೆಬ್ ಸರಣಿ “ಆಶ್ರಮ’ದ ಸೆಟ್‍ನಲ್ಲಿ ಭಜರಂಗ ದಳದವರು ಎನ್ನಲಾದ ಮಂದಿ ದಾಂಧಲೆ ನಡೆಸಿ ಝಾ ಮುಖದ ಮೇಲೆ ಶಾಯಿ ಎರಚಿದ ಘಟನೆ ವರದಿಯಾಗಿದೆ. ಇವರಿಗೆ ಮಧ್ಯಪ್ರದೇಶದ ಗೃಹಮಂತ್ರಿ ಮತ್ತುಇನ್ನೊಬ್ಬರು ಬಿಜೆಪಿ ಸಂಸದರ ಬೆಂಬಲವಿದೆ ಎಂದೂ ಮಾಧ್ಯಮಗಳಲ್ಲಿ ವರದಿಯಾಗಿದೆ.
ಫಿಲ್ಮ್ ಸೆಂಸಾರ್ ಬೋರ್ಡ್ ಕಚೇರಿಯಲ್ಲಿ
“ಯಾವುದಾದರೂ ದೇಶಭಕ್ತ ಸಂಘಟನೆಯಿಂದ ಎನ್.ಒ.ಸಿ. ತಂದಿದ್ದೀರಾ?”
(ಮನ್ಸೂರ್ ನಖ್ವಿ, ದೈನಿಕ್ ಭಾಸ್ಕರ್)
***
ಈ ದ್ವೇಷದಾಟ ಅದೇ ದಿನ ಭಾರತ-ಪಾಕಿಸ್ತಾನ ಕ್ರಿಕೆಟ್ ಮ್ಯಾಚಿನ ನಂತರ ಇನ್ನೂ ಆತಂಕಕಾರಿಯಾಗಿ ಪ್ರಕಟಗೊಂಡಿದೆ. ಈ ಮ್ಯಾಚಿನಲ್ಲಿ ಪಾಕಿಸ್ತಾನದ ಗೆಲುವು ಇಸ್ಲಾಮಿನ ಗೆಲುವು ಎಂದು ಪಾಕಿಸ್ತಾನದಲ್ಲಿ ಒಬ್ಬ ಮಂತ್ರಿ ಹೇಳಿದರೆ, ಭಾರತದಲ್ಲಿ ಸೋಲಿಗೆ ಕಾರಣ ಎಂದು ತಂಡದ ಯುವ ಆಟಗಾರ ಮಹಮ್ಮದ್ ಶಮಿಯವರನ್ನು ಟ್ರೋಲ್ ಮಾಡಲಾಗಿದೆ. ಹೌದು, ಹಲವರು ದುಖದಿಂದ ಹೇಳುವಂತೆ, ಈ ಮ್ಯಾಚಿನಲ್ಲಿ ಗೆದ್ದದ್ದು ಪಾಕಿಸ್ತಾನವೂ ಅಲ್ಲ, ಭಾರತವೂ ಅಲ್ಲ, ದ್ವೇಷದ್ದೇ ಕೈಮೇಲಾಯಿತು.
ಕ್ರೀಡೆಗಳಿಗೆ ಗಡಿಗಳಿಲ್ಲ, ಹಾಗೆಯೇ ರಕ್ತಕ್ರೀಡೆಗೂ!
(ಸಂದೀಪ ಅಧ್ವರ್ಯು, ಟೈಂಸ್ ಆಫ್ ಇಂಡಿಯ) ( ಮಂಜುಲ್, ನ್ಯೂಸ್ 9)
***
ಬಹುಶಃ ರವೀಂದ್ರನಾಥ ಟಾಗೋರ್ ರವರ ಪ್ರಾರ್ಥನೆಯನ್ನು ಹೀಗೆ ಪರಿಷ್ಕರಿಸಿ ಹೇಳಬೇಕಾಗಿ ಬಂದಿದೆ.
ಎಲ್ಲಿ “ಮೆರ್ರಿ ಜನ್ಮಾಷ್ಟಮಿ, ಕ್ರಿಸ್ಮಸ್ ಮುಬಾರಕ್
ಮತ್ತು ನಬೀ ಜಯಂತಿಯ ಶುಭಾಶಯಗಳು ಎಂದು
ನಿರ್ಭಯವಾಗಿ ಹೇಳಬಹುದೋ ಆ ಸ್ವತಂತ್ರ ಸಗ್ಗಕೆ …
(ಆರ್.ಪ್ರಸಾದ್, ಇಕನಾಮಿಕ್ ಟೈಮ್ಸ್)
ಮತ್ತುಈ ವ್ಯಂಗ್ಯಚಿತ್ರಕಾರರೊಂದಿಗೆ, ಈ ಹಬ್ಬದ ದಿನಗಳಲ್ಲಿ ನಮ್ಮ ಜಾತ್ಯತೀತ ಬಂಧವನ್ನು ಒಟ್ಟಾಗಿ ಬೆಸೆಯೋಣ, ಹರಿದುದನ್ನು ಹೊಲಿಯೋಣ ಎಂದೂ ಪ್ರಾರ್ಥಿಸಬೇಕಾಗಿದೆ,
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
***
ಕೊನೆಯದಾಗಿ, ‘ಮಡಿಲ ಮಾಧ್ಯಮ’(ಗೋದೀ ಮೀಡಿಯ)ದ ಇತ್ತೀಚಿನ ಪರಿಸ್ಥಿತಿಯಲ್ಲಿ ವ್ಯಂಗ್ಯಚಿತ್ರಕಾರ ಸತೀಶ ಆಚಾರ್ಯ ರವರು ಸೂಚಿಸಿರುವ ಸರಕಾರೀ ಪರಿಹಾರ ಯೋಜನೆ!