- ಮಹಾಘಟಬಂಧನ್‍ಕ್ಕೂ ಬಲ ತುಂಬಿದ ಎಡಪಕ್ಷಗಳು
- 29 ಕ್ಷೇತ್ರಗಳಲ್ಲಿ ಸ್ಪರ್ಧೆ, 16 ಕ್ಷೇತ್ರಗಳಲ್ಲಿ ಗೆಲುವು
ಪಟ್ನಾ: 2015ರ ಚುನಾವಣೆಯಲ್ಲಿ ನೀರಸ ಪ್ರದರ್ಶನ ನೀಡಿದ್ದ ಎಡಪಕ್ಷಗಳು ಈ ಬಾರಿಯ ಚುನಾವಣೆಯಲ್ಲಿ ಬಲವೃದ್ಧಿಸಿಕೊಂಡಿದ್ದಲ್ಲದೆ ಮಹಾಘಟಬಂದನ್‍ಗೂ ಬಲ ತುಂಬಿವೆ.
ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟದ ಭಾಗವಾಗಿ ಸಿಪಿಐ (ಎಂಎಲ್) 19, ಸಿಪಿಐ 6 ಹಾಗೂ ಸಿಪಿಎಂ 4 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದವು. ಮೂರೂ ಪಕ್ಷಗಳು ಬಲರಾಮ್‌ಪುರ, ವಿಭೂತಿಪುರ, ದರೌಲಿ, ಘೋಸಿ, ಮಾಂಝಿ ಸೇರಿದಂತೆ 16 ಕ್ಷೇತ್ರಗಳನ್ನು ತೆಕ್ಕೆಗೆ ಹಾಕಿಕೊಂಡಿವೆ. ಸಿಪಿಐ (ಎಂಎಲ್) 12 ಸ್ಥಾನಗಳನ್ನು ಗೆಲ್ಲುವ ಮೂಲಕ ಐದನೇ ದೊಡ್ಡಪಕ್ಷವಾಗಿ ಹೊರಹೊಮ್ಮಿದರೆ ಸಿಪಿಐ ಮತ್ತು ಸಿಪಿಎಂ ತಲಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.
ಒಂದು ಕಾಲದಲ್ಲಿ ಬಿಹಾರದಲ್ಲಿ ಪ್ರಮುಖ ರಾಜಕೀಯ ನೆಲೆ ಕಂಡುಕೊಂಡಿದ್ದ ಎಡಪಕ್ಷಗಳು ಕಳೆದೆರಡು ಚುನಾವಣೆಗಳಲ್ಲಿ ಅಂತಹ ಪ್ರದರ್ಶನ ನೀಡಿರಲಿಲ್ಲ. ಕಳೆದ ಬಾರಿ ಸಿಪಿಎಂ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿತ್ತು.
ಈ ಮೂರೂ ಪಕ್ಷಗಳಿಂದ ಮಹಾಘಟಬಂಧನದ ಬಲ ವೃದ್ಧಿಸಿದ್ದು, ಮೈತ್ರಿಕೂಟ ರಾಜ್ಯದಲ್ಲಿ ಹೆಚ್ಚು ವಿಸ್ತರಿಸಲು ನೆರವಾಗಿವೆ. ಎಡಪಕ್ಷಗಳು ಈ ಬಾರಿ ಗಮನಾರ್ಹ ಸಾಧನೆ ಮಾಡಲಿವೆ ಎಂದು ಮತಗಟ್ಟೆ ಸಮೀಕ್ಷೆಗಳೂ ಭವಿಷ್ಯ ನುಡಿದಿದ್ದವು. ಸಿಪಿಐ (ಎಂಎಲ್) ಸ್ಪರ್ಧಿಸಿರುವ 19 ಕ್ಷೇತ್ರಗಳ ಪೈಕಿ 12–16 ಸೀಟು ಗೆಲ್ಲುವುದಾಗಿ ಇಂಡಿಯಾ ಟುಡೆ–ಆ್ಯಕ್ಸಿಸ್ ಮತಗಟ್ಟೆ ಸಮೀಕ್ಷೆ ತಿಳಿಸಿತ್ತು.