- 78 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮತದಾನ
ಪಟ್ನಾ: ಬಿಹಾರ ವಿಧಾನಸಭೆಯ ಮೂರನೇ ಮತ್ತು ಅಂತಿಮ ಹಂತದ ಮತದಾನ ಪ್ರಕ್ರಿಯೆ ಇಂದು (ಶನಿವಾರ) ಬೆಳಿಗ್ಗೆ ಆರಂಭವಾಗಿದೆ. 78 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮತದಾನವು ಬಿಹಾರ ಚುನಾವಣಾ ಫಲಿತಾಂಶದ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಎಲ್ಲ ಮತದಾರರು ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಆ ಮೂಲಕ ಹೊಸ ಮತದಾನದ ದಾಖಲೆಯನ್ನು ಬರೆಯಬೇಕೆಂದು ವಿನಂತಿಸುತ್ತೇನೆ. ಮಾಸ್ಕ್ ಧರಿಸುವುದು ಮತ್ತು ಅಂತರ ಕಾಪಾಡಿಕೊಳ್ಳುವುದು ಮರೆಯಬೇಡಿ’ ಎಂದು ಮನವಿ ಮಾಡಿದ್ದಾರೆ.
ಮತದಾನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಮನವಿ ಮಾಡಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ‘ಈ ಚುನಾವಣೆಯಲ್ಲಿ ಬಿಹಾರವು ತನ್ನ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಈಗಾಗಲೇ ದಣಿದಿದ್ದಾರೆ. ಅವರಿಗೆ ರಾಜ್ಯವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ’ ಎಂದು ತಿಳಿಸಿದ್ದಾರೆ.
ಈ ಚುನಾವಣೆಯಲ್ಲಿ ನಮಗೆ ಉತ್ತಮ ಫಲಿತಾಂಶ ಸಿಗಲಿದೆ ಎಂದು ಹೇಳಿರುವ ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್, ‘ನಿತೀಶ್ ಕುಮಾರ್ ಅವರು ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಾರರು ಎಂಬುದಂತೂ ಸ್ಪಷ್ಟವಾಗಿದೆ’ ಎಂದು ತಿಳಿಸಿದ್ದಾರೆ