ಬಿಹಾರ | ಎನ್‌ಡಿಎ ಮೈತ್ರಿ ಸರ್ಕಾರದ ಸಿಎಂ ಆಗಿ ಭಾನುವಾರ ನಿತೀಶ್ ಕುಮಾರ್ ಪ್ರಮಾಣ ವಚನ – ವರದಿ

ಪಾಟ್ನಾ: ಜನವರಿ 28 ರಂದು ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದ್ದು, ಬಿಜೆಪಿಯ ಹಿರಿಯ ನಾಯಕ ಸುಶೀಲ್ ಮೋದಿ ಅವರು ನೂತನ ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಸುಶೀಲ್ ಮೋದಿ, “ಮುಚ್ಚಿದ ಬಾಗಿಲುಗಳು ತೆರೆಯಬಹುದು” ಎಂದು ಹೇಳಿದ್ದು, ರಾಜಕೀಯವನ್ನು “ಸಾಧ್ಯತೆಯ ಆಟ” ಎಂದು ಕರೆದ್ದಾರೆ. ಆದರೆ, ಈ ಕುರಿತು ಹೆಚ್ಚಿನ ಮಾತನಾಡಲು ನಿರಾಕರಿಸಿದ್ದಾರೆ. ಈ ಮಧ್ಯೆ, ಬಿಹಾರ ಸರ್ಕಾರದ ಮೈತ್ರಿ ಪಕ್ಷವಾದ ಆರ್‌ಜೆಡಿಯ ಅಧ್ಯಕ್ಷರು ರಾಜಕೀಯ ಬೆಳವಣಿಗೆಯ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಂದ ಸ್ಪಷ್ಟನೆ ಕೇಳಿದ್ದು, ಇಂದು ಸಂಜೆಯೊಳಗೆ ವಿವರ ನೀಡುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಜೆಡಿಎಸ್ – ಬಿಜೆಪಿ ಸೀಟು ಮಾತುಕತೆ | ಯಾವುದೆ ಕಾರಣಕ್ಕೂ ಮಂಡ್ಯ ಬಿಟ್ಟುಕೊಡಲ್ಲ ಎಂದ ಸುಮಲತಾ

ಬಿಹಾರದಲ್ಲಿ ಸರ್ಕಾರ ರಚನೆಗೆ ಸೂತ್ರವನ್ನು ಪ್ರಸ್ತಾಪಿಸುವಲ್ಲಿ ಯಾವುದೇ ಆತುರಪಡಬಾರದು ಎಂದು ಬಿಜೆಪಿಯ ಕೇಂದ್ರ ನಾಯಕತ್ವವು ಪಾಟ್ನಾ ಘಟಕಕ್ಕೆ ಆದೇಶವನ್ನು ರವಾನಿಸಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ನಾಳೆಯಿಂದ ಆರಂಭವಾಗಲಿರುವ ಎರಡು ದಿನಗಳ ಕಾರ್ಯಕಾರಿಣಿ ಸಭೆಯ ನಂತರ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈ ಸಭೆಯು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ನಡೆಯಲಿದ್ದು, ಅವರು ಶನಿವಾರ ಪಾಟ್ನಾಗೆ ಆಗಮಿಸುವ ನಿರೀಕ್ಷೆಯಿದೆ.

ನಿತೀಶ್ ಕುಮಾರ್ ಬಿಜೆಪಿ ನೇತೃತ್ವದ ಎನ್‌ಡಿಎಗೆ ಮರಳುವ ನಿರ್ಧಾರವನ್ನು ಮುಂದಿನ ಎರಡು ಮೂರು ದಿನಗಳಲ್ಲಿ ನಿರೀಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಹಿಂದಿನ ಜೆಡಿಯು-ಬಿಜೆಪಿ ಸರ್ಕಾರದ ಕ್ಯಾಬಿನೆಟ್ ಹಂಚಿಕೆಯನ್ನು ಪುನರಾವರ್ತಿಸಲಾಗುತ್ತದೆ ಎಂದು ಅದು ಹೇಳಿದೆ.

ಅದಾಗ್ಯೂ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷವು “ಇಂಡಿಯಾ ಒಕ್ಕೂಟದೊಂದಿಗೆ ದೃಢವಾಗಿ” ನಿಲ್ಲಲಿದೆ ಎಂದು ಶುಕ್ರವಾರ ಪ್ರತಿಪಾದಿಸಿದೆ. ಆದರೆ ಈ ಒಕ್ಕೂಟದ ಪಾಲುದಾರರು ಮತ್ತು ಸ್ಥಾನಗಳ ಹಂಚಿಕೆಯ ಬಗ್ಗೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಬಯಸಿದ್ದು, ಈ ಬಗ್ಗೆ ರಾಜ್ಯ ಜೆಡಿಯು ಅಧ್ಯಕ್ಷ ಉಮೇಶ್ ಸಿಂಗ್ ಕುಶ್ವಾಹ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ನೇತೃತ್ವದ ತಮ್ಮ ಪಕ್ಷವು ಬಿಜೆಪಿ ನೇತೃತ್ವದ ಎನ್‌ಡಿಎಗೆ ಮರಳಲು ಚಿಂತನೆ ನಡೆಸುತ್ತಿದೆ ಎಂಬ ವದಂತಿಗಳನ್ನು ಅವರು ತಳ್ಳಿಹಾಕಿದ್ದಾರೆ.

ಇದನ್ನೂ ಓದಿ: 75 ನೇ ಗಣರಾಜ್ಯೋತ್ಸವ ಆಚರಿಸಿದ ಭಾರತ | ಮಹಿಳಾ ಮತ್ತು ಮಿಲಿಟರಿ ಶಕ್ತಿಯ ಭವ್ಯ ಪ್ರದರ್ಶನ!

“ಬಿಹಾರದ ಆಡಳಿತ ಮಹಾಘಟಬಂಧನ್‌ನಲ್ಲಿ ಎಲ್ಲವೂ ಚೆನ್ನಾಗಿದೆ ಮತ್ತು ಮಾಧ್ಯಮದ ಊಹಾಪೋಹಗಳು ಕೆಲವು ಅಜೆಂಡಾದಿಂದ ನಡೆಸಲ್ಪಡುತ್ತವೆ” ಎಂದು ಕುಶ್ವಾಹಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ನಿನ್ನೆ ಹಾಗೂ ಇಂದು ಸಿಎಂ ಅವರನ್ನು ಭೇಟಿ ಮಾಡಿದ್ದೇನೆ. ಇದು ಮಾಮೂಲಿ ವಿಷಯ. ಹರಿದಾಡುತ್ತಿರುವ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ಪಕ್ಷದ ಶಾಸಕರನ್ನು ಪಾಟ್ನಾಕ್ಕೆ ಧಾವಿಸಲು ಕೇಳಲಾಗಿದೆ ಎಂಬ ವದಂತಿಗಳನ್ನೂ ನಾವು ತಿರಸ್ಕರಿಸುತ್ತೇವೆ. ನಾವು ಇಂಡಿಯಾ ಒಕ್ಕೂಟದೊಂದಿಗೆ ದೃಢವಾಗಿ ಇದ್ದೇವೆ ಎಂದು ಅವರು ಹೇಳಿದ್ದಾರೆ.

“ನಮ್ಮ ಮೈತ್ರಿಕೂಟದ ಪಾಲುದಾರ ಕಾಂಗ್ರೆಸ್, ಇತರ ಪಕ್ಷಗಳ ಕಡೆಗೆ ತನ್ನ ನಿಲುವು ಮತ್ತು ಸ್ಥಾನಗಳ ಹಂಚಿಕೆಗೆ ಸಂಬಂಧಿಸಿದಂತೆ ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ನಮ್ಮ ನಾಯಕ ನಿತೀಶ್ ಕುಮಾರ್ ಬಹಳ ಹಿಂದಿನಿಂದಲೂ ಸೀಟು ಅಂತಿಮಗೊಳಿಸುವಿಕೆಯ ಅಗತ್ಯವನ್ನು ಒತ್ತಿಹೇಳುತ್ತಿದ್ದಾರೆ. ಸೀಟು ಹಂಚಿಕೆ ಒಪ್ಪಂದದ ಮೂಲಕ ನಾವು ಲೋಕಸಭೆ ಚುನಾವಣೆಯ ಮೇಲೆ ಕೇಂದ್ರೀಕರಿಸಬಹುದು” ಎಂದು ಕುಶ್ವಾಹಾ ಹೇಳಿದ್ದಾರೆ.

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಕುರಿತು ಕೇಳಿ ಪ್ರಶ್ನೆಗಳಿಗೆ ಉತ್ತರಿಸಿದ ಕುಶ್ವಾಹಾ ಅವರು “ರೋಹಿಣಿ ಆಚಾರ್ಯ ಆರ್‌ಜೆಡಿ ಪದಾಧಿಕಾರಿಯಲ್ಲದ ಕಾರಣ ನಾವು ಅದನ್ನು ಗಮನಿಸುವುದಿಲ್ಲ” ಎಂದು ಹೇಳಿದ್ದಾರೆ. ರೋಹಿಣಿ ಅವರು ನಿತೀಶ್ ಕುಮಾರ್ ವಿರುದ್ಧ ಕಟುವಾದ ಟೀಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದರು. ನಂತರ ಅವರು ಅದನ್ನು ಡಿಲೀಟ್ ಮಾಡಿದ್ದಾರೆ.

ವಿಡಿಯೊ ನೋಡಿ: ಗಣತಂತ್ರ 75 : ಎತ್ತ ಚಲಿಸುತ್ತಿದೆ ಭಾರತ – ಸಾಂವಿಧಾನಿಕ ಸಂಸ್ಥೆಗಳ ಪಾತ್ರ – ಡಾ. ಎಲ್ ಹನುಮಂತಯ್ಯ

Donate Janashakthi Media

Leave a Reply

Your email address will not be published. Required fields are marked *