ಶಸ್ತ್ರಚಿಕಿತ್ಸೆ ವೇಳೆ ಕಿಡ್ನಿ ಕಳ್ಳತನ : ಆಸ್ಪತ್ರೆಯ ವೈದ್ಯ, ಮಾಲೀಕ ನಾಪತ್ತೆ!

ಮುಜಾಫರ್‌ಪುರ : ಬಿಹಾರದ ಮುಜಾಫರ್‌ಪುರದ ಮಹಿಳೆಯೊಬ್ಬಳು ತನ್ನ ಮೂತ್ರಪಿಂಡವನ್ನು ಅಕ್ರಮವಾಗಿ ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ಈ ಕಳ್ಳತನ ನಡೆಸಿದ ವೈದ್ಯನ ಅಂಗಗಳನ್ನು ತನಗೆ ಕಸಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

38 ವರ್ಷ ವಯಸ್ಸಿನ ಮಹಿಳೆ ಸುನೀತಾ ದೇವಿ ಸೆಪ್ಟೆಂಬರ್ 3ರಂದು ಮುಜಾಫರ್‌ಪುರ ಜಿಲ್ಲೆಯ ಬರಿಯಾರ್‌ಪುರ ಗ್ರಾಮದ ನರ್ಸಿಂಗ್‌ ಹೋಮ್‌ ಗೆ ಶಸ್ತ್ರಚಿಕಿತ್ಸೆ ಮೂಲಕ ಗರ್ಭಕೋಶ ತೆಗೆಸಲು ಹೋಗಿದ್ದರು. ಆಗ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ಕಿಡ್ನಿಯನ್ನೇ ತೆಗೆದುಹಾಕಲಾಗಿದೆ ಎಂಬುದಾಗಿ ಅವರು ಆರೋಪಿಸಿದ್ದಾರೆ.

ಶಸ್ತ್ರಚಿಕಿತ್ಸೆಯ ನಂತರ ಸುನೀತಾ ದೇವಿಯ ಆರೋಗ್ಯ ಸ್ಥಿತಿ ಹದಗೆಡುತ್ತಾ ಬಂದಿದೆ. ಆ ಬಳಿಕ ಆರೋಗ್ಯ ಪರೀಕ್ಷೆ ನಡೆಸಲಾಗಿ ಮೂತ್ರಪಿಂಡ ಇಲ್ಲದಿರುವ ವಿಷಯ ಬೆಳಕಿಗೆ ಬಂದಿದೆ. ನಂತರ ಅವರನ್ನು ಮುಜಾಫರ್‌ಪುರದ ಶ್ರೀ ಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (SKMCH) ರವಾನಿಸಿ ಚಿಕಿತ್ಸೆ ನೀಡಲಾಗಿದೆ.

ಇನ್ನು ಅವರನ್ನು ಪರೀಕ್ಷಿಸಿದ ವೈದ್ಯರು ಸುನೀತಾದೇವಿಯ ಮೂತ್ರಪಿಂಡಗಳು ಕಾಣೆಯಾಗಿವೆ. ಅದಿಲ್ಲದೇ ಅವರು ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸ್ವಾಭಾವಿಕವಾಗಿಯೇ ಅವರ ಕುಟುಂಬದವರು ಆತಂಕಗೊಂಡಿದ್ದಾರೆ. ಅಂದಿನಿಂದ, ಸುನೀತಾ ದೇವಿ ಎಸ್‌ಕೆಎಂಸಿಎಚ್‌ನಲ್ಲಿ ನಿಯಮಿತ ಡಯಾಲಿಸಿಸ್‌ ಮಾಡಿಸಿಕೊಂಡು ಬದುಕುತ್ತಿದ್ದಾರೆ. “ಎಸ್‌ಕೆಎಂಸಿಎಚ್‌ನ ವೈದ್ಯರು ಸುನೀತಾ ಅವರನ್ನು ಚಿಕಿತ್ಸೆಗಾಗಿ ಇಂದಿರಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಪಾಟ್ನಾಕ್ಕೆ ಕಳುಹಿಸಿದ್ದಾರೆ. ಅಲ್ಲಿ ಚಿಕಿತ್ಸೆ ನೀಡಿದ ನಂತರ ಆಕೆಯನ್ನು ಈ ಆಸ್ಪತ್ರೆಗೆ ವಾಪಸ್ ಕಳುಹಿಸಲಾಯಿತು. ಸುನಿತಾಗೆ ಕಿಡ್ನಿ ಇಲ್ಲದಿರುವುದರಿಂದ ಒಂದು ದಿನ ಡಯಾಲಿಸಿಸ್ ಮಾಡದಿದ್ದರೆ ಆಕೆ ಸಾವನ್ನಪ್ಪಬಹುದು ಎಂದು ಮುಜಾಫರ್‌ಪುರದ ಎಸ್‌ಕೆಎಂಸಿಎಚ್‌ನ ಸೂಪರಿಂಟೆಂಡೆಂಟ್ ಡಾ.ಬಿ.ಎಸ್.ಝಾ ಹೇಳಿದ್ದಾರೆ.

“ನನ್ನ ಎರಡೂ ಕಿಡ್ನಿಗಳನ್ನು ತೆಗೆದ ಆರೋಪಿ ವೈದ್ಯನನ್ನು ಕೂಡಲೇ ಬಂಧಿಸುವಂತೆ ಸರಕಾರಕ್ಕೆ ಮನವಿ ಮಾಡುತ್ತೇನೆ. ಆತನ ಕಿಡ್ನಿಯನ್ನು ನನಗೆ ಕಸಿ ಮಾಡಬೇಕು. ಆಗ ಮಾತ್ರ ನಾನು ಬದುಕುಳಿಯಬಹುದು” ಎಂದು ಸುನೀತಾದೇವಿ ಒತ್ತಾಯಿಸಿದ್ದಾರೆ.

ಆಸ್ಪತ್ರೆಯ ವೈದ್ಯ, ಮಾಲೀಕ ನಾಪತ್ತೆ: ಸುನೀತಾ ದೇವಿ ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ಸುಭಕಾಂತ್ ಕ್ಲಿನಿಕ್ ಮಾಲೀಕ ಪವನ್ ಕುಮಾರ್ ಮತ್ತು ಡಾ. ಆರ್ ಕೆ ಸಿಂಗ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ಘಟನೆ ಬೆಳಕಿಗೆ ಬಂದ ನಂತರ ಅವರು ತಲೆಮರೆಸಿಕೊಂಡಿದ್ದಾರೆ. ಇನ್ನು ಅವರ ಕ್ಲಿನಿಕ್ ಕೂಡ ನೋಂದಣಿಯಾಗಿಲ್ಲ. ವೈದ್ಯರ ಶೈಕ್ಷಣಿಕ ಅರ್ಹತೆಯೂ ನಕಲಿ ಎಂದು ತೋರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ, ದೇವಿ ಮೂರು ಮಕ್ಕಳ ತಾಯಿ. ಆಕೆಯ ಪತಿ ಜಮೀನಿಲ್ಲದ ಕೂಲಿ ಕಾರ್ಮಿಕನಾಗಿದ್ದು, ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ. ಇತ್ತ, ಐಜಿಐಎಂಎಸ್‌ನಲ್ಲಿ ಸುನೀತಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅವರ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ಐಜಿಐಎಂಎಸ್‌ನ ನೆಫ್ರಾಲಜಿ ಮತ್ತು ಕಿಡ್ನಿ ಕಸಿ ವಿಭಾಗದ ಮುಖ್ಯಸ್ಥ ಡಾಕ್ಟರ್ ಓಂ ಕುಮಾರ್ ಅವರು, ಸಂತ್ರಸ್ತೆಯ ಸ್ಥಿತಿಯ ಕುರಿತು ಮಾತನಾಡುತ್ತಾ “ಸುನೀತಾದೇವಿ ನಿಯಮಿತವಾಗಿ ಡಯಾಲಿಸಿಸ್‌ನಲ್ಲಿದ್ದಾರೆ. ಆಕೆಯ ಸ್ಥಿತಿ ಇನ್ನೂ ಗಂಭೀರವಾಗಿದೆ. ಅವಳು ಮೂತ್ರಪಿಂಡ ಕಸಿಗೆ ಒಳಗಾಗಬೇಕಾಗುತ್ತದೆ. ಆಗ ಪರಿಸ್ಥಿತಿ ಸುಧಾರಿಸುತ್ತದೆ. ಸದ್ಯ ಆಕೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ” ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *