ಪಾಟ್ನಾ: ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು ಅಕ್ಟೋಬರ್ 2ರ ಸೋಮವಾರದಂದು ಬಹುನಿರೀಕ್ಷಿತ ಜಾತಿ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಿದೆ. ರಾಜ್ಯದ ಜನಸಂಖ್ಯೆಯಲ್ಲಿ 36% ಅತ್ಯಂತ ಹಿಂದುಳಿದ ವರ್ಗ (ಇಬಿಸಿ) ಮತ್ತು 27.13% ಇತರ ಹಿಂದುಳಿದ ವರ್ಗ (OBC)ಗಳಿವೆ ಎಂದು ವರದಿ ಹೇಳಿದೆ. ರಾಜ್ಯದಲ್ಲಿ ಒಟ್ಟು 13.07 ಕೋಟಿ ಜನರಿದ್ದಾರೆ. ಆದರೆ ಸಮೀಕ್ಷೆಯು 12.70 ಕೋಟಿ ಜನರ ಡೇಟಾವನ್ನು ಸಂಗ್ರಹಿಸಿದೆ ಎಂದು ವರದಿಗಳು ಹೇಳಿವೆ. ಬಿಹಾರದ ಜಾತಿ ಸಮೀಕ್ಷೆಯೊಂದಿಗೆ ಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಗಬೇಕು ಮತ್ತು ಮೀಸಲಾಗಿ ಹೆಚ್ಚಾಗಬೇಕು ಎಂಬ ಚರ್ಚೆಗಳು ಕೂಡಾ ಮುನ್ನೆಲೆಗೆ ಬಂದಿವೆ. ಜೊತೆಗೆ ಬೇರೆ ರಾಜ್ಯಗಳಲ್ಲೂ ಬಿಹಾರ ಮಾದರಿಯ ಜಾರಿ ಸಮೀಕ್ಷೆ ನಡೆಸುವಂತೆ ಒತ್ತಡಗಳು ಸೃಷ್ಟಿಯಾಗಲಿವೆ ಎಂದು ಹೇಳಲಾಗುತ್ತಿವೆ.
ವರದಿಯನ್ನು ಅಭಿವೃದ್ಧಿ ಆಯುಕ್ತ ವಿವೇಕ್ ಸಿಂಗ್ ಬಿಡುಗಡೆ ಮಾಡಿದ್ದು, ವರದಿಯಲ್ಲಿ ರಾಜ್ಯದ ಜನಸಂಖ್ಯೆಯ ಧರ್ಮ ಆಧಾರಿತ ದತ್ತಾಂಶ ಕೂಡಾ ಬಿಡುಗಡೆ ಮಾಡಿದೆ. ರಾಜ್ಯದ ಜನಸಂಖ್ಯೆಲ್ಲಿ ಹಿಂದೂಗಳು 81.99% ರಷ್ಟಿದ್ದರೆ, ಮುಸ್ಲಿಂ ಜನಸಂಖ್ಯೆಯು 17.07% ರಷ್ಟಿದೆ. ಕ್ರಿಶ್ಚಿಯನ್, ಬೌದ್ಧರು, ಜೈನರು ಮತ್ತು ಸಿಖ್ಖರು ಕ್ರಮವಾಗಿ, 0.05%, 0.08%, 0.01 ಮತ್ತು 0.009% ದಷ್ಟಿದ್ದಾರೆ.
ಇದನ್ನೂ ಓದಿ: ಆಹಾರ ಕಳ್ಳತನ ಆರೋಪ: 13 ವರ್ಷದ ಆದಿವಾಸಿ ಬಾಲಕನ ಗುಂಪು ಹತ್ಯೆ ಮಾಡಿ ರಸ್ತೆಯಲ್ಲಿ ಎಸೆದ ದುಷ್ಕರ್ಮಿಗಳು
ಈ ಮಧ್ಯೆ, ಬಿಹಾರದ ಜನಸಂಖ್ಯೆಯ 14% ರಷ್ಟು ಯಾದವ(OBC ಎಂದು ವರ್ಗೀಕರಿಸಲಾಗಿದೆ)ರಿದ್ದು, ಪರಿಶಿಷ್ಟ ಜಾತಿಗಳಿಗೆ ಸೇರಿದ ಜನರ ಜನಸಂಖ್ಯೆಯು 19.65% ಇದೆ. ದಲಿತ ಸಮುದಾಯವಾದ ಮುಸಾಹರ್‌ಗಳು ಜನಸಂಖ್ಯೆಯ 3% ರಷ್ಟಿದ್ದರೆ, ಬ್ರಾಹ್ಮಣರು 3.65% ರಷ್ಟಿದ್ದಾರೆ.
“ವರದಿಯು ಸಂಗ್ರಹಿಸಿದ ಮಾಹಿತಿಯ ಸಂಕಲನವಾಗಿದ್ದು, ಅದರ ಬಗ್ಗೆ ಯಾವುದೇ ವಿಶ್ಲೇಷಣೆ ಮಾಡಲಾಗಿಲ್ಲ” ಎಂದು ವಿವೇಕ್ ಸಿಂಗ್ ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಬಿಹಾರ ರಾಜ್ಯ ಸರ್ಕಾರವು ಈ ವರ್ಷ ಜನವರಿ 7 ರಂದು ಎರಡು ಹಂತದ ಜಾತಿ ಆಧಾರಿತ ಸಮೀಕ್ಷೆಯನ್ನು ಪ್ರಾರಂಭಿಸಿತ್ತು. ಜಾತಿ ವಿವರಗಳೊಂದಿಗೆ ಕುಟುಂಬದ ಆರ್ಥಿಕ ಸ್ಥಿತಿಯನ್ನೂ ಸಂಗ್ರಹಿಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಸಮೀಕ್ಷೆಯು ಬಿಹಾರದ 38 ಜಿಲ್ಲೆಗಳ 12.70 ಕೋಟಿ ಜನರ ಡೇಟಾವನ್ನು ಸಂಗ್ರಹಿಸಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಬಿಜೆಪಿ ಬೆಂಬಲಿಗರು ಹಂಚುತ್ತಿರುವ ಈ ಘಟನೆ ‘ಲವ್ ಜಿಹಾದ್’ ಅಲ್ಲ, ಯುಪಿಯದ್ದೂ ಅಲ್ಲ!
ಆಗಸ್ಟ್ 2023 ರಲ್ಲಿ ಸಮೀಕ್ಷೆಯ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಗಿತ್ತು. ಜನರು ತಮ್ಮ ಜಾತಿಯನ್ನು ಬಹಿರಂಗಪಡಿಸುವಂತೆ ಒತ್ತಾಯಿಸುವ ಮೂಲಕ ಜಾತಿ ಸಮೀಕ್ಷೆಯು ಜನರ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಲಾಗಿತ್ತು. ಈ ಆರೋಪವನ್ನು ತಳ್ಳಿ ಹಾಕಿದ ಸುಪ್ರೀಂಕೋರ್ಟ್, ಜಾತಿ ಸಮೀಕ್ಷೆಯ ಸಮಯದಲ್ಲಿ ಸಂಗ್ರಹಿಸಲಾದ ಡೇಟಾವನ್ನು ಅಪ್‌ಲೋಡ್ ಮಾಡುವುದನ್ನು ತಡೆಯಲು ನಿರಾಕರಿಸಿತು.
ಜಾತಿ ಸಮೀಕ್ಷೆಯ ಪ್ರಕಾರ ಒಬಿಸಿಗಳು (ಇತರ ಹಿಂದುಳಿದ ವರ್ಗಗಳು), ಇಬಿಸಿಗಳು (ಅತ್ಯಂತ ಹಿಂದುಳಿದ ವರ್ಗಗಳು) ಮತ್ತು ಪರಿಶಿಷ್ಟ ಜಾತಿಗಳು (ಎಸ್‌ಸಿ) ರಾಜ್ಯದ ಒಟ್ಟು ಜನಸಂಖ್ಯೆಯ ಸುಮಾರು 82% ರಷ್ಟಿದ್ದಾರೆ. ಅತ್ಯಂತ ಹಿಂದುಳಿದ ವರ್ಗಗಳು (36%) ಅತಿದೊಡ್ಡ ಸಾಮಾಜಿಕ ವಿಭಾಗವಾಗಿದ್ದು, ನಂತರದ ಸ್ಥಾನದಲ್ಲಿ ಇತರ ಹಿಂದುಳಿದ ವರ್ಗಗಳು 27.13% ಮತ್ತು SCಗಳು 19.65% ಗಳಿದ್ದಾರೆ.
ವಿಡಿಯೊ ನೋಡಿ: ಪೋಸ್ಟರ್ ಪ್ರದರ್ಶನದ ಮೂಲಕ ಗಾಂಧಿ ಜಯಂತಿ ಆಚರಿಸಿದ ಬೆಂಗಳೂರು ಮೆಟ್ರೋJanashakthi Media