- ಆರ್ ಜೆ ಡಿ ನೇತೃತ್ವದ ಮಹಾಘಟಬಂಧನ್ನಿಂದ ಹೊರಬಂದು ಪ್ರತ್ಯೇಕ ಕೂಟ ರಚಿಸಿದ ಖುಷ್ವಾಹ
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಸರಿಯಾಗಿ ಒಂದು ತಿಂಗಳು ಬಾಕಿಯಿದೆ. ಈ ಸಂದರ್ಭದಲ್ಲಿ ಎನ್‌ಡಿಎ ಹಾಗೂ ಮಹಾಘಟಬಂಧನ್‌ಗೆ ಸೆಡ್ಡು ಹೊಡೆಯಲು ತೃತೀಯ ರಂಗ ರಚನೆಯಾಗಿದೆ. ಮಾಜಿ ಕೇಂದ್ರ ಸಚಿವ ಉಪೇಂದ್ರ ಖುಷ್ವಾಹ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ನಿಂದ ಹೊರಬಂದು ತೃತೀಯ ರಂಗ ರಚಿಸಿಕೊಂಡಿದ್ದಾರೆ.
ಖುಷ್ವಾಹ ನಡೆ ಎರಡು ಮೈತ್ರಿಕೂಟಗಳಿಗೆ ನುಂಗಲಾರದ ತುತ್ತಾಗಿದೆ. ತಮ್ಮ ನೇತೃತ್ವದ ರಾಷ್ಟ್ರೀಯ ಲೋಕ ಸಮತಾ ಪಕ್ಷ ಈ ಚುನಾವಣೆಯನ್ನು ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದ ಜೊತೆ ಎದುರಿಸುತ್ತೇವೆ ಎಂದು ಉಪೇಂದ್ರ ಖುಷ್ವಾಹ ಮಂಗಳವಾರ ಹೇಳಿದ್ದಾರೆ. ಎನ್‌ಡಿಎ ಹಾಗೂ ಮಹಾಘಟಬಂಧನ್ ಹೊರತಾದ ಆಯ್ಕೆಯಾಗಿರುವುದರಿಂದ ಅಲ್ಲಿ ಭಿನ್ನಾಭಿಪ್ರಾಯ ಹೊಂದಿರುವ ಪಕ್ಷಗಳು ತೃತೀಯ ರಂಗಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ.
ಮೂಲಗಳ ಪ್ರಕಾರ ಖುಷ್ವಾಹ ನಿತೀಶ್ ಕುಮಾರ್ ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಸೇರುವ ಯೋಜನೆಯನ್ನು ಹಾಕಿಕೊಂಡಿದ್ದರು. ಆದರೆ, ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದರೆ ತಾವೂ ಅಂದುಕೊಂಡಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತ ಖುಷ್ವಾಹ ತೃತೀಯ ರಂಗ ರಚಿಸಿಕೊಂಡಿದ್ದಾರೆ.
2015ರ ವಿಧಾನಸಭಾ ಚುನಾವಣೆಯಲ್ಲಿ ಖಷ್ವಾಹ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದರು. ಆದರೆ, ಆಗ ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ್ ಆರ್‌ಜೆಡಿ ಹಾಗೂ ಕಾಂಗ್ರೆಸ್ ಜೊತೆಗೂಡಿ ಗೆಲುವು ಸಾಧಿಸಿತ್ತು. ಕಳೆದ ವರ್ಷದ ಲೋಕಸಭಾ ಚುನಾವಣೆ ವೇಳೆಯಲ್ಲಿ ಬಿಜೆಪಿಯ ವರ್ತನೆಗೆ ಬೇಸತ್ತು ಎನ್‌ಡಿಎಯನ್ನು ತೊರೆದ ಖುಷ್ವಾಹ ಕಾಂಗ್ರೆಸ್-ಆರ್‌ಜೆಡಿ ನೇತೃತ್ವದ ಮೈತ್ರಿಕೂಟ ಸೇರಿದ್ದರು.
ಆದರೆ, ಮಹಾಘಟಬಂಧನ್‌ನಿಂದ ಎರಡು ಪ್ರಮುಖ ಪಕ್ಷಗಳು ಹೊರನಡೆದಿದ್ದವು. ಇತ್ತೀಚೆಗೆ ಜೀತನ್ ರಾಮ್ ಮಾಂಝಿ ಕೂಡ ಆರ್‌ಜೆಡಿ ನೇತೃತ್ವದ ಮೈತ್ರಿಯನ್ನು ತೊರೆದು ಎನ್‌ಡಿಎ ಸೇರಿದ್ದರು. ಈಗ ಎನ್‌ಡಿಎಯಲ್ಲಿ ಸೀಟು ಹಂಚಿಕೆ ವಿಚಾರವಾಗಿ ಎಲ್‌ಜೆಪಿ ಹಾಗೂ ಬಿಜೆಪಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಚಿರಾಗ್ ಪಾಸ್ವಾನ್ ಎನ್‌ಡಿಎ ತೊರೆದು ತೃತೀಯ ರಂಗ ಸೇರಿದರೂ ಅಚ್ಚರಿಯಿಲ್ಲ.
ಅಲ್ಲಿಗೆ ಎನ್‌ಡಿಎ, ಮಹಾಘಟಬಂಧನ್ ಮತ್ತು ತೃತೀಯ ರಂಗದ ಚುನಾವಣಾ ಕಣ ರಂಗೇರುವದಂತೂ ಖಂಡಿತ. ಅಕ್ಟೋಬರ್ 28, ನವೆಂಬರ್ 3 ಮತ್ತು ನವೆಂಬರ್ 7ರಂದು ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಬರಲಿದೆ.