ಪಾಟ್ನಾ: ಬಿಹಾರ ರಾಜ್ಯದ ಬಕ್ಸರ್ ಜಿಲ್ಲೆಯ ಗಂಗಾ ನದಿಯಲ್ಲಿ ಶಂಕಿತ ಕೋವಿಡ್ ಮೃತ ದೇಹಗಳು ತೇಲುತ್ತಿರುವುದು ಬೆಳಕಿ ಬಂದಿದೆ. ಮೃತದೇಹಗಳು ಕೊಳತೆ ನಾರುತ್ತಿರುವುದರಿಂದ ಸುತ್ತಲಿನ ಪ್ರದೇಶದಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ.
ಈ ಮೃತ ದೇಹಗಳು ನೆರೆಯ ಉತ್ತರ ಪ್ರದೇಶದಿಂದ ಕೊಚ್ಚಿಕೊಂಡು ಬರುತ್ತಿರಬಹುದು. ಮೃತ ದೇಹಗಳು ನಮ್ಮ ರಾಜ್ಯಕ್ಕೆ ಸೇರಿದವಲ್ಲ ಎಂದು ಬಕ್ಸಾರ್ ಜಿಲ್ಲಾ ಆಡಳಿತ ಸ್ಪಷ್ಟಪಡಿಸಿದೆ.
ಜಿಲ್ಲೆಯ ಮಹಾದೇವ್ ಘಾಟ್ ಬಳಿ ಸುಮಾರು 100 ಮೃತ ದೇಹಗಳು ಗಂಗಾನದಿ ನೀರಿನಲ್ಲಿ ತೇಲಾಡುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದ ವೀಡಿಯೊಗಳು, ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಚೌದಾಗೆ ಸೇರಿದ ಬಿಡಿಓ ಅಶೋಕ್ ಕುಮಾರ್ ಮಾತನಾಡಿ “ಮಹಾದೇವ್ ಘಾಟ್‌ನಲ್ಲಿ ಸುಮಾರು 40 ರಿಂದ 45 ಮೃತ ದೇಹಗಳು ಕೊಚ್ಚಿಕೊಂಡು ಬಂದಿವೆ. ಇವು ಬೇರೆ ಬೇರೆ ಪ್ರದೇಶಗಳಿಂದ ಬಂದವುಗಳಾಗಿವೆ. ಇವು ನಮ್ಮ ರಾಜ್ಯದ ಮೃತದೇಹಗಳಲ್ಲ, ಯಾಕೆಂದರೆ ಕೋವಿಡ್ ನಿಂದ ಇಲ್ಲಿ ಯಾರಾದರೂ ಮೃತಪಟ್ಟರೆ ಶವಗಳನ್ನು ದಹಿಸುವ ಸಂಪ್ರದಾಯವಿದೆ. ಇದಕ್ಕಾಗಿ ಕಾವಲುಗಾರನೊಬ್ಬನನ್ನು ನಿಯೋಜಿಸಿ ಸುಡುವ ಪ್ರಕ್ರಿಯೆ ನಡೆಸುತ್ತೇವೆ. ಮೃತ ದೇಹಗಳು ಉತ್ತರ ಪ್ರದೇಶದಿಂದ ತೇಲಿ ಬಂದಿವೆ. ನದಿಯಲ್ಲಿ ಮೃತ ದೇಹಗಳನ್ನು ತಡೆಯಲು ಯಾವುದೇ ಮಾರ್ಗವಿಲ್ಲದ ಕಾರಣ ಶವಗಳು ಇಲ್ಲಿಯವರೆಗೆ ಕೊಚ್ಚಿಕೊಂಡು ಬಂದಿವೆ ‘ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ನೂರಾರು ಕೋವಿಡ್ ಮೃತ ದೇಹಗಳನ್ನು ಸುಡಲಾಗುತ್ತಿದೆ ಎಂಬ ಟೀಕೆಗಳ ನಡುವೆ ಗಂಗಾ ನದಿಯಲ್ಲಿ ತೇಲುತ್ತಿರುವ ಮೃತ ದೇಹಗಳು ಉತ್ತರ ಪ್ರದೇಶಕ್ಕೆ ಸೇರಿವೆ ಎಂಬ ಬಿಹಾರ ಅಧಿಕಾರಿಗಳ ಹೇಳಿಕೆ ಮತ್ತಷ್ಟು ಟೀಕೆಗಳಿಗೆ ಗುರಿಯಾಗಿದೆ. ಎರಡು ಸರ್ಕಾರದ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿ: ತ್ರಿಪುರ: ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಮೇಲೆ ಹಲ್ಲೆ- ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡನೆ
ಯಮುನಾ ನದಿಯಲ್ಲೂ ಅದೇ ಕಥೆ : ಗಂಗಾನದಿಯಂತೆ ಯಮುನಾ ನದಿಯಲ್ಲೂ ಇದೇ ಕಥೆ ಮುಂದುವರೆದಿದೆ. ದಿನಕ್ಕೆ 10 ಕ್ಕೂ ಹೆಚ್ಚು ಶವಗಳು ತೇಲಿ ಬರುತ್ತಿವೆ. ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರ ನಡೆಸುವುದು ಕುಟುಂಬಸ್ಥರಿಗೆ, ಸರ್ಕಾರಗಳಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ಈ ನಡುವೆಯೇ ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಯಮುನಾ ನದಿಯ ದಡದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ಮೃತದೇಹಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲಾ ಕೇಂದ್ರವಾಗಿರುವ ಹಮೀರ್‌ಪುರದ ಬಳಿ ಹರಿಯುವ ಯಮುನಾ ನದಿಗೆ ಕೊರೊನಾ ಸೋಂಕಿತರ ಮೃತದೇಹವನ್ನು ಎಸೆಯಲಾಗಿದೆ. ನಿನ್ನೆ ಒಂದೇ ದಿನ ಸುಮಾರು 7 ಮೃತ ದೇಹಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಹಮೀರ್‌ಪುರದ ಎಸ್ಪಿ ಅನೂಪ್ ಕುಮಾರ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನದಿಯ ದಡದಲ್ಲಿ ಹಲವು ಮೃತದೇಹಗಳು ಪತ್ತೆಯಾಗಿರುವುದಾಗಿ ಹೇಳಿದ್ದಾರೆ.